ಬೆಂಗಳೂರು; ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ, ಕೃಷಿ ಯಾಂತ್ರಿಕತೆ ಅಭಿಯಾನ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಪ್ರಧಾನಮಂತ್ರಿ ಕೃಷಿ ಸಿಂಚಾಯ್ ಯೋಜನೆ, ಮಧ್ಯಾಹ್ನದ ಬಿಸಿಯೂಟ ಯೋಜನೆ, ಪೋಷಣ ಅಭಿಯಾನ, ಮಾತೃ ವಂದನಾ ಸೇರಿದಂತೆ ಹಲವು ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಹೆಚ್ಚು ಅನುದಾನ ಬಿಡುಗಡೆಯಾಗದ ಕಾರಣ ಅತ್ಯಂತ ಕಡಿಮೆ ಪ್ರಗತಿಯಾಗಿರುವುದು ಇದೀಗ ಬಹಿರಂಗವಾಗಿದೆ.
ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರ ಅಧ್ಯಕ್ಷತೆಯಲ್ಲಿ 2022ರ ಜುಲೈ 16ರಂದು ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳಡಿಯಲ್ಲಿ ಸಾಧಿಸಿರುವ ಪ್ರಗತಿ ಪರಿಶೀಲನಾ ಸಭೆಯಲ್ಲಿ 2022-23ನೇ ಸಾಲಿನ ಮೊದಲನೇ ತ್ರೈಮಾಸಿಕದ ಉತ್ಪಾದನಾ ಅನುದಾನದ ವೆಚ್ಚದ ಕುರಿತು ಚರ್ಚೆಯಾಗಿದೆ. ಬಜೆಟ್‌ನಲ್ಲಿ ಘೋಷಿತವಾದ ಹಲವು ಯೋಜನೆಗಳಿಗೆ ಆದೇಶ ಹೊರಡಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೆಮ್ಮೆಯಿಂದ ಬೀಗಿದ್ದರ ಬೆನ್ನಲ್ಲೇ ಮೊದಲನೇ ತ್ರೈಮಾಸಿಕದ ಉತ್ಪಾದನಾ ಅನುದಾನದ ವೆಚ್ಚದ ಕುರಿತಾದ ಮಾಹಿತಿಗಳು ಮುನ್ನೆಲೆಗೆ ಬಂದಿವೆ. ಸಭೆ ನಡವಳಿಗಳ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಮೊದಲನೇ ತ್ರೈಮಾಸಿಕದಲ್ಲಿ ಉತ್ಪಾದನಾ ಅನುದಾನದಲ್ಲಿ ಶೇ.10ಕ್ಕಿಂತ ಕಡಿಮೆ ಪ್ರಗತಿ ಸಾಧಿಸಿರುವ ಕೃಷಿ ಇಲಾಖೆಯೂ ಸೇರಿದಂತೆ ಹಲವು ಇಲಾಖೆಗಳ ಪಟ್ಟಿಯೂ ಬಿಡುಗಡೆಯಾಗಿದೆ.
‘2022-23ನೇ ಸಾಲಿನಲ್ಲಿ ಮೊದಲನೇ ತ್ರೈಮಾಸಿಕದಲ್ಲಿ ಉತ್ಪಾದನಾ ಅನುದಾನದಲ್ಲಿ ಶೇ. 10ಕ್ಕಿಂತ ಕಡಿಮೆ ಪ್ರಗತಿ ಸಾಧಿಸಿರುವ ಇಲಾಖೆಗಳ ಪೈಕಿ ಕೃಷಿ ಇಲಾಖೆಯಿಂದ ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಹೆಚ್ಚು ಅನುದಾನ ಬಿಡುಗಡೆಯಾಗಿಲ್ಲ. ಹೀಗಾಗಿ ಕಡಿಮೆ ಪ್ರಗತಿಯಾಗಿದೆ. ಮಾತೃವಂದನಾ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ,’ ಎಂದು ಇಲಾಖಾಧಿಕಾರಿಗಳು ವಿವರಿಸಿರುವುದು ನಡವಳಿಯಿಂದ ಗೊತ್ತಾಗಿದೆ.
ರಾಷ್ಟ್ರೀಯ ಆಹಾರ ಸುರಕ್ಷತೆ ಮಿಷನ್, ಇತರೆ ಬೆಳೆಗಳು ಮತ್ತು ಎಣ್ಣೆಕಾಳುಗಳ ಯೋಜನೆಗೆ 2022-23ರಲ್ಲಿ 167.00 ಕೋಟಿ ರು. ಅನುದಾನ ನಿಗದಿಯಾಗಿದ್ದರೂ ಮೊದಲನೇ ತ್ರೈಮಾಸಿಕದಲ್ಲಿ ನಯಾಪೈಸೆಯನ್ನೂ ಬಿಡುಗಡೆ ಮಾಡಿಲ್ಲ. ಅದೇ ರೀತಿ ಪ್ರಧಾನಮಂತ್ರಿ ಕೃಷಿ ಸಿಂಚಾಯ್ ಯೋಜನೆಗೆ 311.38 ಕೋಟಿ ರು, ಕೃಷಿ ಯಾಂತ್ರಿಕತೆ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ 2,000 ಕೋಟಿ ರು., ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಗೆ 33.33 ಕೋಟಿ ರು. ಅನುದಾನದ ಪೈಕಿ ಮೊದಲನೇ ತ್ರೈಮಾಸಿಕದಲ್ಲಿ ಬಿಡಿಗಾಸೂ ಬಂದಿಲ್ಲ ಎಂದು ಕೃಷಿ ಇಲಾಖೆಯು ಮಾಹಿತಿ ಒದಗಿಸಿರುವುದು ನಡವಳಿಯಿಂದ ತಿಳಿದು ಬಂದಿದೆ.
ಪ್ರಾಥಮಿಕ, ಪ್ರೌಢಶಿಕ್ಷಣ ಇಲಾಖೆಯಲ್ಲಿ ಅನುಷ್ಠಾನಗೊಳಿಸಿರುವ ಬಿಸಿಯೂಟ, ಸಮಗ್ರ ಶಿಕ್ಷಣದಡಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಯೋಜನೆಗಳಲ್ಲಿಯೂ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧಿಸಿಲ್ಲ. ಮಧ್ಯಾಹ್ನದ ಬಿಸಿಯೂಟ ಯೋಜನೆಗೆ 959.58 ಕೋಟಿ ರು. ಕೇಂದ್ರದ ಪಾಲಿನಲ್ಲಿ ಮೊದಲನೇ ತ್ರೈಮಾಸಿಕದಲ್ಲಿ ಬಿಡಿಗಾಸೂ ಬಂದಿಲ್ಲ.
ಅದೇ ರೀತಿ ಪ್ರಾಥಮಿಕ ಶಾಲೆಗಳ ಮೂಲಭೂತ ಸೌಕರ್ಯಗಳಿಗೆ 331.50 ಕೋಟಿ ರು. ಅನುದಾನದಲ್ಲಿಯೂ ನಯಾಪೈಸೆಯೂ ಬಿಡುಗಡೆಯಾಗಿಲ್ಲ. ಕರ್ನಾಟಕ ಪಬ್ಲಿಕ್ ಶಾಲೆಗಳ ಮೂಲಭೂತ ಸೌಕರ್ಯಗಳಿಗಾಗಿ 135.00 ಕೋಟಿ ರು. ಪೈಕಿ 33.75 ಕೋಟಿ ರು. ಬಿಡುಗಡೆಯಾಗಿದೆಯಾದರೂ ಮೊದಲನೇ ತ್ರೈಮಾಸಿದಲ್ಲಿ ಶೂನ್ಯ ವೆಚ್ಚವಾಗಿದೆ ಎಂಬುದು ನಡವಳಿಯಿಂದ ಗೊತ್ತಾಗಿದೆ.
ಮಾತೃ ವಂದನಾ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ. ಪೋಷಣ ಅಭಿಯಾನ (ರಾಷ್ಟ್ರೀಯ ಪೌಷ್ಠಿಕಾಂಶ ಅಭಿಯಾನ)ಕ್ಕೆ 2022-23ರ ಆಯವ್ಯಯದಲ್ಲಿ 51.00 ಕೋಟಿ ರು., ದೇವದಾಸಿಯರಿಗೆ ಮಾಸಾಶನಕ್ಕೆ 54.36 ಕೋಟಿ , ಅಂಗನವಾಡಿಗಳ ಕಟ್ಟಡಕ್ಕೆ 70.00 ಕೋಟಿ ರು. ಅನುದಾನ ಒದಗಿಸಿದ್ದರೂ ಮೊದಲನೇ ತ್ರೈಮಾಸಿಕದಲ್ಲಿ ಈ ಮೂರೂ ಕಾರ್ಯಕ್ರಮಗಳಿಗೆ ಬಿಡಿಗಾಸೂ ಬಂದಿಲ್ಲ ಎಂಬುದು ನಡವಳಿಯಲ್ಲಿ ಉಲ್ಲೇಖಿಸಲಾಗಿದೆ.
ಮಹಿಳಾ ಉದ್ಧೇಶಿತ ಕಾರ್ಯಕ್ರಮಗಳಡಿ (ಪ್ರವರ್ಗ-ಎ) ಉನ್ನತ ಶಿಕ್ಷಣ ಇಲಾಖೆಯಲ್ಲಿನ ವಿದ್ಯಾರ್ಥಿನಿಯರಿಗೆ ಪೂರ್ಣ ಶುಲ್ಕ ವಿನಾಯಿತಿ ಕಾರ್ಯಕ್ರಮಕ್ಕೆ ಒದಗಿಸಿರುವ 25.00 ಕೋಟಿ ರು., ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಮೂಲಕ ಮಹಿಳೆಯರಿಗೆ ಬಡ್ಡಿ ಸಹಾಯಧನಕ್ಕೆ ಒದಗಿಸಿರುವ 50.00 ಕೋಟಿ., ಭಾಗ್ಯಲಕ್ಷ್ಮಿ ಯೋಜನೆಗೆ ಒದಗಿಸಿರುವ 137.04 ಕೋಟಿ, ಸ್ಫೂರ್ತಿ ಯೋಜನೆಗೆ ಒದಗಿಸಿರುವ 12.50 ಕೋಟಿ, ಮಹಿಳಾ ಆಯೋಗ ಮತ್ತು ಮಹಿಳಾ ಕಲ್ಯಾಣ ಕಾರ್ಯಕ್ರಮಕ್ಕೆ ಒದಗಿಸಿರುವ 39.45 ಕೋಟಿ ರುಗ.ಳಿಗೆ ಪ್ರಗತಿ ಶೂನ್ಯವಾಗಿದೆ ಎಂದು ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ಒದಗಿಸಿದ್ದಾರೆ.
ನಬಾರ್ಡ್ ಯೋಜನೆಯಡಿ ಕಳೆದ ಐದಾರು ವರ್ಷಗಳಿಂದ ಕಿರು ಮತ್ತು ಸಣ್ಣ ಯೋಜನೆಗಳು ಪೂರ್ಣಗೊಂಡಿಲ್ಲ. ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಕಡ್ಡಾಯವಾಗಿ ಪರಿಶೀಲನೆ ನಡೆಸಬೇಕು. ಪ್ರಸಕ್ತ ಸಾಲಿನಲ್ಲಿ ಪ್ರತಿ ಶಾಸಕರಿಗೆ ನೀಡಿರುವ 2.00 ಕೋಟಿ ಅನುದಾನಕ್ಕೆ ಸಂಪೂರ್ಣವಾಗಿ ಕ್ರಿಯಾಯೋಜನೆ ನೀಡಿ ಅನುಮೋದನೆ ಪಡೆಯಬೇಕು ಎಂದೂ ಮುಖ್ಯ ಕಾರ್ಯದರ್ಶಿ ಸೂಚಿಸಿರುವುದು ಗೊತ್ತಾಗಿದೆ.