ರಾಜ್ಯದ 974 ಗ್ರಾಮಗಳಲ್ಲಿ ಸ್ಮಶಾನ ಸೌಲಭ್ಯಗಳೇ ಇಲ್ಲ; ಗ್ರಾಮ ವಾಸ್ತವ್ಯದ ಬಳಿಕವೂ ಬದಲಾಗದ ಪರಿಸ್ಥಿತಿ

ಬೆಂಗಳೂರು; ರಾಜ್ಯದ 31 ಜಿಲ್ಲೆಗಳಲ್ಲಿನ 21, 388 ಗ್ರಾಮಗಳ ಪೈಕಿ ಇನ್ನೂ  974 ಗ್ರಾಮಗಳಲ್ಲಿ ಸ್ಮಶಾನ ಸೌಲಭ್ಯಗಳೇ ಇಲ್ಲ!

 

‘ಸ್ಮಶಾನ ಇಲ್ಲದ ಗ್ರಾಮಗಳಿಗೆ ಆರು ತಿಂಗಳಲ್ಲಿ ಅಗತ್ಯ ಜಮೀನು ಒದಗಿಸುವಂತೆ 2019ರಲ್ಲಿ ಆದೇಶವನ್ನು ಸರ್ಕಾರವು ಪಾಲಿಸದೇ ಇದ್ದದ್ದಕ್ಕೆ ಹೈಕೋರ್ಟ್ ‘ಸ್ಮಶಾನಕ್ಕೆ ಜಾಗ ಇಲ್ಲದ ಕಡೆ ಹೆಣಗಳನ್ನು ರಸ್ತೆಯಲ್ಲಿ ಹಾಕಬೇಕಾ’ ಎಂದು ರಾಜ್ಯ ಸರ್ಕಾರವನ್ನು ಹೈಕೋರ್ಟ್‌ ತಿಂಗಳ ಹಿಂದೆಯಷ್ಟೇ ಖಾರವಾಗಿ ಪ್ರಶ್ನಿಸಿತ್ತು. ಇದರ ಬೆನ್ನಲ್ಲೇ 974 ಗ್ರಾಮಗಳಲ್ಲಿ ಸ್ಮಶಾನ ಸೌಲಭ್ಯಗಳಿಲ್ಲ ಎಂಬ ಅಂಕಿ ಅಂಶಗಳು ಬಹಿರಂಗವಾಗಿವೆ. ಅಲ್ಲದೆ ಕಂದಾಯ ಸಚಿವ ಆರ್‌ ಅಶೋಕ್‌ ಅವರು ಗ್ರಾಮ ವಾಸ್ತವ್ಯ ಹೂಡಿದ ಬಳಿಕವೂ ರಾಜ್ಯದಲ್ಲಿ ಸ್ಮಶಾನ ಸೌಲಭ್ಯಗಳು ಇನ್ನೂ ದೊರೆತಿಲ್ಲ.

 

ಬೆಂಗಳೂರು ನಿವಾಸಿ ಮಹಮ್ಮದ್ ಇಕ್ಬಾಲ್ ಸಲ್ಲಿಸಿರುವ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್‌ಗೆ ಸರ್ಕಾರವು ಈ ಅಂಕಿ ಅಂಶಗಳನ್ನು ಒದಗಿಸಿರುವುದು ತಿಳಿದು ಬಂದಿದೆ.

 

ಸಕ್ಕರೆ ಕಾರ್ಖಾನೆಗಳು ಅತಿ ಹೆಚ್ಚು ಇರುವ ಬೆಳಗಾವಿ ಜಿಲ್ಲೆಯಲ್ಲಿ 307 ಗ್ರಾಮಗಳು ಮತ್ತು ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರ ತವರು ಜಿಲ್ಲೆ ಶಿವಮೊಗ್ಗ ಜಿಲ್ಲೆಯಲ್ಲಿ 313 ಗ್ರಾಮಗಳಲ್ಲಿ ಸ್ಮಶಾನ ಸೌಲಭ್ಯಗಳಿಲ್ಲ. 31 ಜಿಲ್ಲೆಗಳ ಪೈಕಿ ಬೆಳಗಾವಿ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ಗ್ರಾಮಗಳಲ್ಲಿ ಸ್ಮಶಾನ ಸೌಲಭ್ಯ ಇಲ್ಲದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ಕಂದಾಯ ಇಲಾಖೆಯು ಸಿದ್ಧಪಡಿಸಿರುವ ಪಟ್ಟಿ

 

ಧಾರವಾಡದಲ್ಲಿ 76, ಗದಗ್‌ನಲ್ಲಿ 67, ಚಾಮರಾಜನಗರ 24, ಚಿಕ್ಕಮಗಳೂರು 29, ಹಾಸನ 37, ಮಂಡ್ಯ 38, ಮೈಸೂರು 51, ಕೊಪ್ಪಳ 08, ಕೋಲಾರ 12, ರಾಮನಗರ 12, ಬೆಳಗಾವಿ 307, ಶಿವಮೊಗ್ಗ ಜಿಲ್ಲೆಯಲ್ಲಿ 313 ಗ್ರಾಮಗಳಲ್ಲಿ ಸ್ಮಶಾನ ಸೌಲಭ್ಯ ಇಲ್ಲ.

 

ರಾಜ್ಯದಲ್ಲಿ ಶವ ಸಂಸ್ಕಾರಕ್ಕೆ ಸ್ಮಶಾನ ಜಾಗ ಇಲ್ಲದ ಗ್ರಾಮಗಳು ಮತ್ತು ಪಟ್ಟಣ ಪ್ರದೇಶಗಳಿಗೆ ಜಮೀನು ಒದಗಿಸುವಂತೆ ನೀಡಿದ ಆದೇಶ ಪಾಲಿಸದ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಚಾಟಿ ಬೀಸುತ್ತಲೇ ಇದೆ. ಆದರೆ ಅಧಿಕಾರಿಗಳು ಹಾಗೂ ಸರ್ಕಾರವು ನ್ಯಾಯಾಲಯದ ಆದೇಶವನ್ನು ಗೌರವಿಸುತ್ತಿಲ್ಲ.

 

ಈ ಬಗ್ಗೆ ಬೆಂಗಳೂರಿನ ಮಹಮ್ಮದ್‌ ಇಕ್ಬಾಲ್‌ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಬಿ.ವೀರಪ್ಪ ಮತ್ತು ನ್ಯಾಯಮೂರ್ತಿ ಕೆ.ಎಸ್‌. ಹೇಮಲೇಖಾ ಅವರ ನೇತೃತ್ವದ ವಿಭಾಗೀಯ ಪೀಠ ತೀವ್ರ ಬೇಸರ ವ್ಯಕ್ತಪಡಿಸಿತ್ತು.

 

‘ನ್ಯಾಯಾಲಯ ಯಾವುದೇ ಅಧಿಕಾರಿ ಅಥವಾ ಸರ್ಕಾರದ ವಿರುದ್ಧವಿಲ್ಲ. ಕೋರ್ಟ್‌ ಆದೇಶ ಉಲ್ಲಂಘಿಸಿದರೆ ಸಹಿಸಲಾಗದು. ಸ್ಮಶಾನಕ್ಕೆ ಜಾಗ ಒದಗಿಸಲು ಆರು ತಿಂಗಳು ಸಾಕಾಗುವುದಿಲ್ಲ ಎನ್ನುವುದಾರೆ ಆದೇಶ ಪ್ರಕಟವಾದ ದಿನವೇ ಹೆಚ್ಚಿನ ಸಮಯವನ್ನು ಸರ್ಕಾರ ಕೋರಬಹುದಿತ್ತು. ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾದ ನಂತರ ಸಬೂಬು ಹೇಳಿ ಸಮಯ ಕೇಳಿದರೆ ಒಪ್ಪಲಾಗದು. ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ನ್ಯಾಯಮೂರ್ತಿ ವೀರಪ್ಪ ಅವರು, ಎಚ್ಚರಿಸಿದ್ದರು.

 

‘ಕೋರ್ಟ್ ಆದೇಶ ಪಾಲನೆಯ ವಸ್ತುಸ್ಥಿತಿ ವರದಿ ಸಲ್ಲಿಸಲು ಕಾಲಾವಕಾಶ ಬೇಕು’ ಎಂದು ಸರ್ಕಾರ ಕೋರಿತ್ತು. ಇದಕ್ಕೆ ವ್ಯಗ್ರವಾಗಿದ್ದ ನ್ಯಾಯಪೀಠ, ‘ವಸ್ತುಸ್ಥಿತಿ ವರದಿ ಸಲ್ಲಿಸಲು ಇದೇನು ನಾಪತ್ತೆ ಪ್ರಕರಣವೇ, ಒಳ್ಳೆಯ ಕೆಲಸ ಮಾಡಿದರೆ ಜನ ಮೆಚ್ಚಿ ವೋಟು ಹಾಕುತ್ತಾರೆ. ಕಡೇ ಪಕ್ಷ ಇದೊ ಒಂದು ವೋಟು ಗಿಟ್ಟಿಸುವ ಕಾರ್ಯಕ್ರಮ ಎಂದು ಸರ್ಕಾರ ಪರಿಗಣಿಸಬೇಕಿತ್ತು ’ ಎಂದು ಸರ್ಕಾರವನ್ನು ಕುಟುಕಿತ್ತು.

 

‘ನೀವು (ಸರ್ಕಾರ) ಭಂಡರಾದರೆ ನಾವು (ಕೋರ್ಟ್) ಜಗಭಂಡರು. ಕೋರ್ಟ್ ಆದೇಶ ಪಾಲನೆ ಮಾಡುವ ತನಕ ನಿಮ್ಮನ್ನು ಬಿಡುವುದಿಲ್ಲ. ಸ್ಮಶಾನಕ್ಕೆ ಜಾಗ ಇಲ್ಲದ ಗ್ರಾಮ ಮತ್ತು ಪಟ್ಟಣಗಳಿಗೆ ಅಗತ್ಯ ಜಮೀನು ಒದಗಿಸುವ ಸಂಬಂಧ ಕೋರ್ಟ್ ಆದೇಶವನ್ನು 15 ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಪಾಲನೆ ಮಾಡದೇ ಹೋದರೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ಹೊರಿಸಿ ಜೈಲಿಗೆ ಕಳಿಸಲಾಗುವುದು’ ಎಂದು ನ್ಯಾಯಪೀಠ ಕಠಿಣ ಎಚ್ಚರಿಕೆ ನೀಡಿರುವುದನ್ನು ಸ್ಮರಿಸಬಹುದು.

 

‘ಸ್ಮಶಾನ ಇಲ್ಲದ ಗ್ರಾಮಗಳಿಗೆ ಆರು ತಿಂಗಳಲ್ಲಿ ಅಗತ್ಯ ಜಮೀನು ಒದಗಿಸುವಂತೆ 2019ರಲ್ಲಿ ಹೈಕೋರ್ಟ್ ಆದೇಶಿಸಿತ್ತು. ಮೂರು ವರ್ಷವಾದರೂ ಈ ಆದೇಶವನ್ನು ಪಾಲಿಸಿಲ್ಲ’ ಎಂದು ಅರ್ಜಿದಾರರು ಈ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿದ್ದಾರೆ.

Your generous support will help us remain independent and work without fear.

Latest News

Related Posts