ಪಿಡಬ್ಲ್ಯೂಡಿ ಹೊರತುಪಡಿಸಿ ಸಚಿವಾಲಯದ ಕಚೇರಿಗಳಲ್ಲಿ ಅಳವಡಿಕೆಯಾಗದ ಸಿಸಿಟಿವಿ!

photo credit;indiatoday

ಬೆಂಗಳೂರು; ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ ಲೋಕೋಪಯೋಗಿ ಇಲಾಖೆ ಹೊರತುಪಡಿಸಿದರೇ ಉಳಿದ ಇಲಾಖೆಗಳ ಕಚೇರಿಯಲ್ಲಿ ಇದುವರೆಗೂ ಸಿಸಿಟಿವಿಗಳನ್ನು ಅಳವಡಿಸಿಲ್ಲ!

 

ಸಾರ್ವಜನಿಕರು ಅನುಮತಿ ಇಲ್ಲದೆ ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳ ಕಚೇರಿಗಳಲ್ಲಿ ಫೋಟೊ ತೆಗೆಯುವುದು ಮತ್ತು ವಿಡಿಯೊ ಚಿತ್ರೀಕರಿಸುವುದನ್ನು ನಿಷೇಧಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಶುಕ್ರವಾರ ಆದೇಶ ಹೊರಡಿಸಿರುವ ಬೆನ್ನಲ್ಲೇ ಸಚಿವಾಲಯದ ಕಚೇರಿಗಳಲ್ಲಿ ಸಿಸಿಟಿವಿ ಅಳವಡಿಸದಿರುವುದು ಮುನ್ನೆಲೆಗೆ ಬಂದಿದೆ.

 

ಪಾರದರ್ಶಕವಾದ ಮತ್ತು ಜನಸ್ನೇಹಿ ಆಡಳಿತ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿಕೆ ನೀಡಿದ್ದರು. ಆದರೀಗ ಸಾರ್ವಜನಿಕರು ಸರ್ಕಾರಿ ಕಚೇರಿಗಳಲ್ಲಿ ಮೊಬೈಲ್‌ ಮತ್ತು ವಿಡಿಯೋ ಮಾಡುವುದನ್ನು ನಿಷೇಧಿಸಿ ಹೊರಡಿಸಿರುವ ಆದೇಶದಿಂದಾಗಿ ಸಾರ್ವಜನಿಕರ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

 

ಸರ್ಕಾರದ ಎಲ್ಲಾ ಕಚೇರಿಗಳಲ್ಲಿ ಮತ್ತು ಶಾಲಾ ಕಾಲೇಜುಗಳಲ್ಲಿ ಸಿಸಿಟಿವಿ ಕ್ಯಾಮರ ಮತ್ತು ಇ-ಹಾಜರಾತಿ ಅಳವಡಿಸುವ ಕುರಿತು ವಿಧಾನಸಭೆ ಸದಸ್ಯ ಕುಮಾರ ಬಂಗಾರಪ್ಪ ಅವರು ವರ್ಷದ ಹಿಂದೆ ನಿಯಮ 73ರ ಅಡಿಯಲ್ಲಿ ಕೇಳಿದ್ದ ಪ್ರಶ್ನೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು 2022ರ ಮೇ 30ರಂದು ಅನಧಿಕೃತ ಟಿಪ್ಪಣಿ ಹೊರಡಿಸಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

15ನೇ ವಿಧಾನಸಭೆಯ 11ನೇ ಅಧಿವೇಶನದಲ್ಲಿ ಕುಮಾರ ಬಂಗಾರಪ್ಪ ಅವರು ನಿಯಮ 73ರ ಅಡಿಯಲ್ಲಿ ಗಮನಸೆಳೆಯುವ ಸೂಚನೆ ಮಂಡಿಸಿದ್ದರು. ಇದಕ್ಕೆ 2021ರ ಡಿಸೆಂಬರ್‌ 21ರಂದು ಸದನದಲ್ಲಿ ಸರ್ಕಾರವು ಉತ್ತರಿಸಬೇಕಿತ್ತು. ಆದರೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಮುನೀಶ್‌ ಮೌದ್ಗಿಲ್‌ ಅವರು ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಅವರಿಂದ ಕಾಲಾವಕಾಶ ಕೋರಿದ್ದರು.

 

‘ಸರ್ಕಾರದ ಎಲ್ಲಾ ಕಚೇರಿಗಳಲ್ಲಿ ಸಿಸಿಟಿವಿ ಹಾಗೂ ಇ-ಹಾಜರಾತಿ ಅಳವಡಿಸುವ ಸಂಬಂಧ ಎಲ್ಲಾ ಇಲಾಖೆಗಳಿಂದ ಮಾಹಿತಿ ಸಂಗ್ರಹಿಸಬೇಕು ಎಂದು 2021ರ ಡಿಸೆಂಬರ್‌ 31ರಂದು ಪತ್ರ ಬರೆದಿದ್ದರು. ಈ ಪತ್ರದ ಪ್ರತಿಯೂ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ಕಾಲಾವಕಾಶ ನೀಡಿದ್ದರೂ ಸರ್ಕಾರ ಇದುವರೆಗೂ ಸರ್ಕಾರದ ಎಲ್ಲಾ ಕಚೇರಿಗಳಲ್ಲಿ ಸಿಸಿಟಿವಿ ಅಳವಡಿಕೆ ಕುರಿತಂತೆ ಪೂರ್ಣ ಉತ್ತರವನ್ನು ನೀಡಿಲ್ಲ. ಇನ್ನೂ ಇಲಾಖೆಗಳಿಂದ ಮಾಹಿತಿ ಸಂಗ್ರಹಣೆಯಲ್ಲಿಯೇ ಕಾಲಹರಣ ಮಾಡುತ್ತಿದೆ ಎಂದು ತಿಳಿದು ಬಂದಿದೆ. ಈ ಮಧ್ಯೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ(ಇ-ಆಡಳಿತ)ಯು 2022ರ ಮೇ 30ರಂದು ಅನಧಿಕೃತ ಟಿಪ್ಪಣಿ ಹೊರಡಿಸಿತ್ತು.

 

ಅನಧಿಕೃತ ಟಿಪ್ಪಣಿಯಲ್ಲೇನಿದೆ?

 

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಕರ್ನಾಟಕ ಸರ್ಕಾರದ ಸಚಿವಾಲಯಕ್ಕೆ ಸಂಬಂಧಪಟ್ಟಂತೆ ಮಾತ್ರ ಇ-ಹಾಜರಾತಿಗಾಗಿ ಯಂತ್ರೋಪಕರಣಗಳನ್ನು ಅಳವಡಿಸುವ ಜವಾಬ್ದಾರಿ ಹೊಂದಿರುತ್ತದೆ. ಉಳಿದ ಎಲ್ಲಾ ಸರ್ಕಾರಿ ಇಲಾಖೆಗಳಿಗೆ ಸಂಬಂಧಪಟ್ಟಂತೆ ಆಯಾ ಇಲಾಖೆಗಳೇ ಕ್ರಮ ವಹಿಸಬೇಕಾಗಿರುತ್ತದೆ. ಕರ್ನಾಟಕ ಸರ್ಕಾರದ ಸಚಿವಾಲಯ ಮತ್ತು ವಿಧಾನಮಂಡಲ ಸಚಿವಾಲಯಕ್ಕೆ ಸಂಬಂಧಪಟ್ಟಂತೆ ವಿಧಾನಸೌಧ, ವಿಕಾಸಸೌಧ, ಬಹುಮಹಡಿಗಳ ಕಟ್ಟಡ, ಜನಸ್ಪಂದನಾ ಕೋಶ, ಮಾಹಿತಿ ಸೌಧಗಳಿಗೆ 60 ಬಯೋ ಮೆಟ್ರಿಕ್‌ ಯಂತ್ರ ಮತ್ತು 4 ಐಆರ್‌ಐಎಸ್‌ ಯಂತ್ರಗಳನ್ನು ಒದಗಿಸಲಾಗಿದೆ.

 

 

ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ ಸಿಸಿಟಿವಿಗಳನ್ನು ಲೋಕೋಪಯೋಗಿ ಇಲಾಖೆಯು ಅಳವಡಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ. ಆದರೂ ಸಿಸಿಟಿವಿ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ( ಕಾರ್ಯಕಾರಿ)ಯಿಂದ ಮಾಹಿತಿ ಪಡೆಯಬೇಕು. ಸಚಿವಾಲಯ ಹೊರತುಪಡಿಸಿ ಇತರೆ ಯಾವುದೇ ಸರ್ಕಾರಿ ಇಲಾಖೆಗಳಿಗೆ ಬಯೋಮೆಟ್ರಿಕ್‌ ಯಂತ್ರಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಒದಗಿಸಿಲ್ಲ ಎಂದು ಅನಧಿಕೃತ ಟಿಪ್ಪಣಿಯಲ್ಲಿ ಹೇಳಲಾಗಿದೆ.

 

‘ಸಾರ್ವಜನಿಕರು ಸರ್ಕಾರಿ ಕಚೇರಿಗಳನ್ನು ಪ್ರವೇಶಿಸಿ ಅನಧಿಕೃತವಾಗಿ ಫೋಟೊ ತೆಗೆದು, ವಿಡಿಯೊ ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದರಿಂದ ಸರ್ಕಾರಿ ನೌಕರರ ಕರ್ತವ್ಯ ನಿರ್ವಹಣೆಗೆ ತೊಂದರೆ ಆಗುತ್ತಿದೆ. ಆದ್ದರಿಂದ ಸರ್ಕಾರಿ ಕಚೇರಿಗಳಲ್ಲಿ ಅನಧಿಕೃತವಾಗಿ ಫೋಟೊ ತೆಗೆಯುವುದು ಮತ್ತು ವಿಡಿಯೊ ಚಿತ್ರೀಕರಿಸುವುದನ್ನು ನಿಷೇಧ ಮಾಡಬೇಕು’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ಸಲ್ಲಿಸಿದ್ದ ಮನವಿ ಮೇರೆಗೆ ಸರ್ಕಾರಿ ಕಚೇರಿಗಳಲ್ಲಿ ಅನಧಿಕೃತವಾಗಿ ಫೋಟೋ ತೆಗೆಯುವುದು ಮತ್ತು ವಿಡಿಯೋ ಚಿತ್ರೀಕರಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿರುವುದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts