ಜೆಡಿಎಸ್‌ ಅಭ್ಯರ್ಥಿ ಸೋಲಿಸುವ ಭರದಲ್ಲಿ ಬಿಜೆಪಿ ಗೆಲುವಿಗೆ ದಾರಿಮಾಡಿದ ಕಾಂಗ್ರೆಸ್‌; ತಂತ್ರಗಾರಿಕೆಯಲ್ಲೇ ವಿಫಲ

photo credit; deccanhealad

ಬೆಂಗಳೂರು; ರಾಜ್ಯಸಭೆ ಚುನಾವಣೆಯಲ್ಲಿ ಮೂರನೇ ಅಭ್ಯರ್ಥಿಗಳ ನಡುವೆ ನಡೆದಿದ್ದ ಪೈಪೋಟಿ ಇದೀಗ ಕೊನೆ ತಿರುವಿಗೆ ಬಂದು ನಿಂತಿದೆ. ಚುನಾವಣೆ ಅಖಾಡಕ್ಕಿಳಿದಿರುವ ಬಿಜೆಪಿಯ ಲೆಹರ್‌ಸಿಂಗ್‌ ಮತ್ತು ಜೆಡಿಎಸ್‌ನ ಕುಪೇಂದ್ರ ರೆಡ್ಡಿ ಇಬ್ಬರೂ ತಮ್ಮ ಶಕ್ತ್ಯಾನುಸಾರ ಮತಬೇಟೆಗೆ ಇಳಿದಿದ್ದಾರೆ. ಅಲ್ಲದೆ ತಂತ್ರಗಾರಿಕೆಯನ್ನು ರೂಪಿಸುವುದರಲ್ಲಿಯೇ ವಿಫಲವಾದಂತಿರುವ ಕಾಂಗ್ರೆಸ್‌, ರಾಜ್ಯಸಭೆಯಲ್ಲಿ ಬಿಜೆಪಿ ಸಂಖ್ಯಾಬಲವನ್ನೂ ವೃದ್ಧಿಸಲಿಕ್ಕೆ ನೇರ ಕಾರಣವಾಗಲಿದೆ.

 

ಅಲ್ಪಸಂಖ್ಯಾತರ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಜೆಡಿಎಸ್‌ಗೆ ತಿರುಗೇಟು ಕೊಡುವ ತಂತ್ರಗಾರಿಕೆ ರೂಪಿಸಿರುವ ಕಾಂಗ್ರೆಸ್‌ ಇದೀಗ ನೇರವಾಗಿ ಬಿಜೆಪಿಯ ಲೆಹರ್‌ ಸಿಂಗ್‌ ರ ಗೆಲುವಿಗೆ ದಾರಿಮಾಡಿಕೊಡುವ ಸಾಧ್ಯತೆಗಳೇ ಹೆಚ್ಚಾಗಿವೆ. ಕುಪೇಂದ್ರ ರೆಡ್ಡಿ ನಾಮಪತ್ರ ಸಲ್ಲಿಸುವ ಮುನ್ನ ಜೆಡಿಎಸ್‌ನ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಅವರು ‘ಮುಸ್ಲಿಂ ಅಭ್ಯರ್ಥಿಯನ್ನು ಸೋಲಿಸಲೆಂದೇ ಕಣಕ್ಕಿಳಿಸಲಾಗಿದೆ,’ ಎಂದು ಕಾಂಗ್ರೆಸ್‌ಗೆ ತಿರುಗೇಟು ನೀಡಿರುವ ಮಾತುಗಳು ಒಂದು ಆಯಾಮವನ್ನ ಸೂಚಿಸುತ್ತದೆ. ಆದರೆ ನಿಜವಾದ ಅರ್ಥದಲ್ಲಿ ಬಿಜೆಪಿಗೆ ಹೆಚ್ಚುವರಿಯಾಗಿ ಗೆಲುವನ್ನು ತಂದುಕೊಟ್ಟಂತಾಗುತ್ತದೆ.

 

ಜೆಡಿಎಸ್‌ನ್ನು ಸೋಲಿಸಲು ಹೋಗಿ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ದಾರಿಮಾಡುವಂತಹ ವಿಫಲ ತಂತ್ರಗಾರಿಕೆಯನ್ನು ರೂಪಿಸಿದ್ದು ಯಾರು ಎಂಬುದು ಕಾಂಗ್ರೆಸ್‌ ವಲಯದಲ್ಲೀಗ ಬಿರುಸಿನ ಚರ್ಚಗಳು ನಡೆಯಲಾರಂಭಿಸಿವೆ. ಕಾಂಗ್ರೆಸ್‌ನಿಂದ ಅಲ್ಪಸಂಖ್ಯಾತ ಸಮುದಾಯದ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ತೀರ್ಮಾನ ಅಥವಾ ತಂತ್ರಗಾರಿಕೆ ರೂಪಿಸಿದ್ದು ಅಖಿಲ ಭಾರತ ಕಾಂಗ್ರೆಸ್‌ನಲ್ಲಿಯೋ ಅಥವಾ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ ಡಿ ಕೆ ಶಿವಕುಮಾರ್‌ ಅಥವಾ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರೋ  ಎಂಬುದು ಕೂಡ ಚರ್ಚೆಗೆ ಗ್ರಾಸವಾಗಿದೆ.

 

ಒಂದೊಮ್ಮೆ ಬಿಜೆಪಿಯನ್ನು ಸೋಲಿಸುವ ಒಂದೇ ಗುರಿಯಾಗಿದ್ದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸ್ವತಂತ್ರ ಅಭ್ಯರ್ಥಿಯನ್ನು ಕಣಕ್ಕಿಳಿಸಬಹುದಿತ್ತು. ಈ ಲೆಕ್ಕಾಚಾರವನ್ನು ಮಾಡಿದ್ದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲುವಿನ ದಾರಿಯನ್ನು ತುಳಿಯದಂತೆ ಮಾಡಬಹುದಿತ್ತು. ಆದರೆ ಈ ಎರಡೂ ಪಕ್ಷಗಳ ಅದರಲ್ಲೂ ತುಂಬಾ ಮುಖ್ಯವಾಗಿ ಕಾಂಗ್ರೆಸ್‌ನ ವಿಫಲ ತಂತ್ರಗಾರಿಕೆ ಮತ್ತು ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದರಿಂದಾಗಿ ಜೆಡಿಎಸ್‌ ಕೂಡ ಮುಖಭಂಗಕ್ಕೊಳಗಾಗಲಿದೆ. ಇದೆಲ್ಲದರ ನೇರ ಪರಿಣಾಮ ಅಲ್ಪಸಂಖ್ಯಾತ ಅಭ್ಯರ್ಥಿ ಮೇಲೆ ಬೀರಲಿದೆ.

 

ಮತ ಲೆಕ್ಕಾಚಾರ ಹೀಗಿದೆ

 

ಮತ ಲೆಕ್ಕಾಚಾರದ ಪ್ರಕಾರ ಕಾಂಗ್ರೆಸ್‌ ಬಳಿ 69 ಶಾಸಕರ ಸಂಖ್ಯಾಬಲವಿದೆ. ಇದರಲ್ಲಿ ಮೊದಲ ಅಭ್ಯರ್ಥಿ ಗೆಲುವಿಗೆ 45 ಮತಗಳು ನೆರವಾದರೆ ಉಳಿದ 24 ಮೊದಲ ಪ್ರಾಶಸ್ತ್ಯ ಮತ್ತು ಎರಡನೇ ಪ್ರಾಶಸ್ತ್ಯವೂ ಮತಗಳು ಮನ್ಸೂರ್‌ಖಾನ್‌ಗೆ ಅವರ ಮತಬುಟ್ಟಿಗೆ ಬೀಳಲಿದೆ ಎಂದಿಟ್ಟುಕೊಂಡರೂ ಸೋಲು ಕಟ್ಟಿಟ್ಟ ಬುತ್ತಿ.

 

ಬಿಜೆಪಿ ಬಳಿ 122 ಶಾಸಕರ ಸಂಖ್ಯಾಬಲವಿದೆ. ಬಿಜೆಪಿಯ ಇಬ್ಬರೂ ಅಭ್ಯರ್ಥಿಗಳಿಗೆ ತಲಾ 45ರಂತೆ ಒಟ್ಟು 90 ಮತಗಳು ಲಭಿಸಿದರೆ ಇನ್ನುಳಿದ 32 ಮತಗಳು ಮೊದಲ ಪ್ರಾಶಸ್ತ್ಯದಲ್ಲಿಯೇ ಮೂರನೇ ಅಭ್ಯರ್ಥಿಯಾಗಿರುವ ಲೆಹರ್‌ಸಿಂಗ್‌ ಮತ ಖಜಾನೆ ಸೇರಲಿವೆ. ಎರಡನೇ ಪ್ರಾಶಸ್ತ್ಯದಲ್ಲಿಯೂ 90 ಮತಗಳು ಸಿಗಲಿದೆ. ಜೆಡಿಎಸ್‌ನ ಒಟ್ಟು ಶಾಸಕರ ಪೈಕಿ ಈಗಾಗಲೇ ಬಂಡಾಯದ ಬಾವುಟ ಹಾರಿಸಿರುವ ನಾಲ್ಕರಿಂದ ಐವರು ಶಾಸಕರು ಮತದಾನದಿಂದ ಹೊರಗುಳಿದರೆ ಅಥವಾ ಅಡ್ಡ ಮತದಾನ ಮಾಡಿದರೆ ಬಿಜೆಪಿಗೆ  ಇನ್ನೂ   ಹೆಚ್ಚು ಅನುಕೂಲವಾಗಲಿದೆ. ಅದೇ ರೀತಿ ಎರಡನೇ ಪ್ರಾಶಸ್ತ್ಯದ ಮತವೂ ಸೇರಿಕೊಳ್ಳುವುದರಿಂದ ಬಿಜೆಪಿಗೆ ಗೆಲುವು ಸುಲಭದ ತುತ್ತಾಗಲಿದೆ.

 

ಇನ್ನು ಜೆಡಿಎಸ್‌ ಬಳಿ 32 ಶಾಸಕರ ಸಂಖ್ಯಾಬಲವಿದೆ. ಇದರಲ್ಲಿ ನಾಲ್ಕರಿಂದ ಐದು ಶಾಸಕರೇನಾದರೂ ಕೈಕೊಟ್ಟರೇ ಸಂಖ್ಯಾಬಲ 27ಕ್ಕೆ ಇಳಿಯಲಿದೆ. ಅಲ್ಲದೆ ಅವರ ಬಳಿಯೂ ಹೆಚ್ಚುವರಿ ಮತಗಳೂ ಇಲ್ಲ. ಹೀಗಾಗಿ ಮೊದಲ ಪ್ರಾಶಸ್ತ್ಯದಲ್ಲಿಯೇ ಜೆಡಿಎಸ್‌ಗೆ ತೀವ್ರ ಹಿನ್ನಡೆಯಾಗುವ ಸೂಚನೆಗಳು ಗೋಚರಿಸಿವೆ. ಹೀಗಾಗಿ ಎರಡನೇ ಪ್ರಾಶಸ್ತ್ಯದ ಮಾತೇ ಇಲ್ಲಿ ಉದ್ಭವಿಸುವುದಿಲ್ಲ.

 

ಹಾಗೆಯೇ ಬಿಜೆಪಿ ಮೂರನೇ ಅಭ್ಯರ್ಥಿ ಮತ್ತು ಕಾಂಗ್ರೆಸ್‌ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಹೋಗಿದ್ದರೆ ಜೆಡಿಎಸ್‌ ಅಭ್ಯರ್ಥಿ ಗೆಲುವು ಸುಲಭವಾಗುತ್ತಿತ್ತು. ಆದರೀಗ ಬಿಜೆಪಿ ತನ್ನ ಮೂರನೇ ಅಭ್ಯರ್ಥಿ ಮತ್ತು ಕಾಂಗ್ರೆಸ್‌ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದರಿಂದ ಜೆಡಿಎಸ್‌ ಗೆಲುವು ಅಸಾಧ್ಯದ ಮಾತಷ್ಟೇ ಅಲ್ಲದೇ ಹೀನಾಯವಾಗಿ ಸೋಲಲಿದೆ ಎಂಬುದು ಈ ಲೆಕ್ಕಾಚಾರದಿಂದಲೇ ಗೊತ್ತಾಗುತ್ತದೆ.

SUPPORT THE FILE

Latest News

Related Posts