ಅಧೀನ ಕಾರ್ಯದರ್ಶಿ ವೃಂದದ ಜೇಷ್ಠತಾ ಪಟ್ಟಿಯಲ್ಲಿ ಗೋಲ್ಮಾಲ್‌; ಸರ್ಕಾರದಿಂದಲೇ ಸಮಾನತೆ ಹಕ್ಕಿಗೆ ಚ್ಯುತಿ?

ಬೆಂಗಳೂರು; ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೂಲ ವೃಂದದ ಅಧೀನ ಕಾರ್ಯದರ್ಶಿಗಳು ಜೇಷ್ಠತೆಯಲ್ಲಿ ಹಿರಿಯರಾಗಿದ್ದರೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಬಿಡುಗಡೆ ಮಾಡಿರುವ ಕರಡು ಜೇಷ್ಠತೆ ಪಟ್ಟಿಯಲ್ಲಿ ಹೈದರಾಬಾದ್‌ ಕರ್ನಾಟಕ ವೃಂದದ ಅಧೀನ ಕಾರ್ಯದರ್ಶಿಗಳಿಗಿಂತಲೂ ಕೆಳಗೆ ನೂಕಲ್ಪಟ್ಟಿದ್ದಾರೆ ಎಂಬ ಬಲವಾದ ಆರೋಪ ಕೇಳಿ ಬಂದಿದೆ. ಹೀಗಾಗಿ ಬಾಧಿತ ಅಧಿಕಾರಿಗಳು ಕರ್ನಾಟಕ ಆಡಳಿತ ನ್ಯಾಯಮಂಡಳಿ ಕದ ತಟ್ಟಲು ಮುಂದಾಗಿದ್ದಾರೆ.

 

ಅಧೀನ ಕಾರ್ಯದರ್ಶಿ ವೃಂದದಲ್ಲಿ ಮಾತ್ರ ಕ್ರೋಢೀಕೃತ ಜೇಷ್ಠತಾಪಟ್ಟಿ ಹೊರಡಿಸುತ್ತಿರುವ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯು ಉಳಿದ ಕೇಡರ್‌ಗಳಲ್ಲಿ ಕ್ರೋಢಿಕೃತ ಜೇಷ್ಠತಾ ಪಟ್ಟಿ ಹೊರಡಿಸದೇ ಇರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

 

2022ರ ಸಾಲಿನ ಸರ್ಕಾರದ ಅಧೀನ ಕಾರ್ಯದರ್ಶಿ ವೃಂದದ ಕ್ರೋಢೀಕೃತ ಕರಡು ಜೇಷ್ಠತಾ ಪಟ್ಟಿಯನ್ನು ಹೊರಡಿಸಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಸಂವಿಧಾನದ ಅನುಚ್ಛೇಧ 14 ಮತ್ತು 16ಕ್ಕೆ ವಿರುದ್ಧವಾಗಿದೆಯಲ್ಲದೆ ಇದು ಸಮಾನತೆಯ ಹಕ್ಕಿಗೆ ಚ್ಯುತಿ ತರಲಾಗಿದೆ ಎಂಬ ಬಲವಾದ ಆರೋಪಗಳೂ ಕೇಳಿ ಬಂದಿವೆ.

 

ಈ ಸಂಬಂಧ ಬಾಧಿತ ಅಧಿಕಾರಿಗಳು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ 2022ರ ಮಾರ್ಚ್‌ 19ರಂದು ಆಕ್ಷೇಪಣೆ ಸಹಿತಿ ದೂರು ಸಲ್ಲಿಸಿದ್ದಾರೆ ಎಂದು ಗೊತ್ತಾಗಿದೆ. ಈ ಸಂಬಂಧ ಮಾಹಿತಿಯು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್‌ ಅವರ ಗಮನದಲ್ಲಿದ್ದರೂ ಮೌನ ವಹಿಸಿದ್ದಾರೆ ಎಂದು ಗೊತ್ತಾಗಿದೆ.

 

ಮೂಲವೃಂದದ ಅಧೀನ ಕಾರ್ಯದರ್ಶಿಗಳಾಗಿರುವ ನಿರ್ಮಲ ಎಸ್‌ ಖಟವಾಕರ್‌, ವೆಂಕಟೇಶಯ್ಯ, ರಾಜಶೇಖರ್‌ ಕೆ ಎನ್‌, ವೀಣಾ ಎ ಜಿ, ಮಹಾದೇವ ಎಸ್‌, ಶ್ರೀರಾಮ ಕೆ, ಇಜಾಜ್‌ಪಾಷ, ಬಷೀರ್‌ ಅಹಮದ್‌ತುರ್ಕಿ, ರಂಗನಾಥ್‌ ಜಿ, ನಾಗರತ್ನ ವಿ ಪಾಟೀಲ್‌, ಎನ್‌ ತಿಪ್ಪೇಸ್ವಾಮಿ, ಕವಿತಾ ಎಲ್‌, ಮೊಹ್ಮದ್‌ ಇಬ್ರಾಹಿಂ, ಆದಿನಾರಾಯಣ, ಅಜಯ್‌ ಎಸ್‌ ಕೊರಡೆ, ಸಂಜಯ್‌ ಬಿ ಎಸ್‌ ಮತ್ತು ವೀರಭದ್ರ ಎಂಬುವರಿಗೆ ಅನ್ಯಾಯವಾಗಿದೆ ಎಂದು ತಿಳಿದು ಬಂದಿದೆ.

 

ಹೈದರಾಬಾದ್‌ ಕರ್ನಾಟಕ ವೃಂದದ ಮಲ್ಲಿಕಾರ್ಜುನ ರಾಮಚಂದ್ರಪ್ಪ, ಚೇತನಾ ಎಂ, ಸೋನಿಕ, ಚಂದ್ರಕಲಾ ಎಸ್‌ ಎನ್‌, ಬಾಲಪ್ಪ, ಶರಣಪ್ಪ ಎಂಬುವರು ಮೂಲವೃಂದದ ಅಧಿಕಾರಿಗಳಿಗಿಂತಲೂ ಕಿರಿಯರಾಗಿದ್ದರೂ ಸರ್ಕಾರದ ಅಧೀನ ಕಾರ್ಯದರ್ಶಿ ವೃಂದದ ಜೇಷ್ಠತೆಯಲ್ಲಿ ಹಿರಿಯರಾಗಲು ಹೇಗೆ ಸಾಧ್ಯ ಎಂದು ಮೂಲವೃಂದದ ಅಧಿಕಾರಿಗಳು ಆಕ್ಷೇಪಣೆಯಲ್ಲಿ ಪ್ರಶ್ನಿಸಿರುವುದು ಗೊತ್ತಾಗಿದೆ.

 

‘ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ (ಆಡಳಿತ ಕೋಶ) ಶಾಖೆಯು ಸಚಿವಾಲಯದ ವಿವಿಧ ವೃಂದಗಳ ಜೇಷ್ಠತೆ ಪಟ್ಟಿಗಳನ್ನು ಪ್ರತಿವರ್ಷ ಹೊರಡಿಸುತ್ತದೆ. ಆದರೆ ಸಚಿವಾಲಯದಲ್ಲಿ ಕಿರಿಯ ಸಹಾಯಕ ವೃಂದದಿಂದ ಅಧೀನ ಕಾರ್ಯದರ್ಶಿ ವೃಂದದವರೆಗೆ ಮುಂಬಡ್ತಿಯಲ್ಲಿ ಹೈದರಾಬಾದ್‌ ಕರ್ನಾಟಕ ಮೀಸಲಾತಿ ನೀಡಲಾಗಿದೆ. ಕೇವಲ ಅಧೀನ ಕಾರ್ಯದರ್ಶಿ ವೃಂದದಲ್ಲಿ ಮಾತ್ರ ಕ್ರೋಢೀಕೃತ ಜೇಷ್ಠತಾ ಪಟ್ಟಿಯನ್ನು ಹೊರಡಿಸುತ್ತಿರುವ ಇಲಾಖೆಯು ಉಳಿದ ಕೇಡರ್‌ಗಳಲ್ಲಿ ಕ್ರೋಢಿಕೃತ ಜೇಷ್ಠತೆ ಪಟ್ಟಿಯನ್ನೇಕೆ ಹೊರಡಿಸುತ್ತಿಲ್ಲ,’ ಎಂದು ಮೂಲವೃಂದ ಅಧಿಕಾರಿಗಳು ಪ್ರಶ್ನಿಸಿದ್ದಾರೆ.

 

ಅಧೀನ ಕಾರ್ಯದರ್ಶಿ ಮೂಲವೃಂದ ಮತ್ತು ಹೈ-ಲ ವೃಂದಕ್ಕೆ ಬಡ್ತಿ ನೀಡಲು 2021ರ ಸಾಲಿನಲ್ಲಿ ಪ್ರತ್ಯೇಕ ಮುಂಬಡ್ತಿ ಸಭೆ ನಡೆಸಲಾಗಿದೆ. ಸಚಿವಾಲಯದಲ್ಲಿ ಖಾಲಿ ಇದ್ದ ಅಧೀನ ಕಾರ್ಯದರ್ಶಿ ಮೂಲ ವೃಂದ ಮತ್ತು ಸ್ಥಳೀಯ ವೃಂದಕ್ಕೆ ಒಟ್ಟಿಗೆ ಮುಂಬಡ್ತಿ ಸಭೆ ನಡೆಸದೇ ಸ್ಥಳೀಯ ವೃಂದಕ್ಕೆ ಮಾತ್ರ ಬಡ್ತಿ ನೀಡುವ ಉದ್ದೇಶದಿಂದಲೇ ಸಭೆಯನ್ನು ನಡೆಸಲಾಗಿದೆ. ಅದರಂತೆ ಮೂಲವೃಂದದವರಿಗಿಂತಲೂ ಮುಂಚೆ 2021ರ ಜೂನ್‌ 25ರಂದು ಬಡ್ತಿ ನೀಡಲಾಗಿದೆ. ಇದರಿಂದಾಗಿ ಮೂಲವೃಂದದವರಿಗಿಂತಲೂ ಕಿರಿಯರಾದ ಹೈ-ಕ ವೃಂದದ ಅಧಿಕಾರಿಗಳು ಜೇಷ್ಠತೆ ಪಟ್ಟಿಯಲ್ಲಿ ಹಿರಿಯರಾಗಿದ್ದಾರೆ ಎಂದು ಎಂದು ತಿಳಿದು ಬಂದಿದೆ.

 

‘ಸಚಿವಾಲಯದಲ್ಲಿ ಖಾಲಿ ಇದ್ದ ಅಧೀನ ಕಾರ್ಯದರ್ಶಿ (ಹೈ ಕ) ವೃಂದದ ಹುದ್ದೆಗಳಿಗೆ 2021ರ ಜೂನ್‌ 25ರಂದು ಬಡ್ತಿ ನೀಡುವಾಗ ಸಚಿವಾಲಯದ ಅಧೀನ ಕಾರ್ಯದರ್ಶಿ ಮೂಲ ವೃಂದದಲ್ಲಿ ಖಾಲಿ ಇದ್ದ ಹುದ್ದೆಗಳ ಸಂಖ್ಯೆ ಎಷ್ಟು, ಆ ಹುದ್ದೆಗಳಿಗೆ ಬಡ್ತಿಯ್ನು ಸಕಾಲದಲ್ಲಿ ಏಕೆ ನೀಡಲಿಲ್ಲ, ಇದರಿಂದ ಮೂಲ ವೃಂದದವರಿಗೆ ಅನ್ಯಾಯಾ ಮಾಡಿದಂತಾಗುವುದಿಲ್ಲವೇ,’  ಎಂದು  ಬಾಧಿತ ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ಪ್ರತಿಕ್ರಿಯಿಸಿದರು.

 

ಸಮಾನತೆ ಹಕ್ಕಿಗೆ ಚ್ಯುತಿ

 

ಸಚಿವಾಲಯದಲ್ಲಿ ಖಾಲಿ ಇದ್ದ ಅಧೀನ ಕಾರ್ಯದರ್ಶಿ ಹುದ್ದೆಗಳಿಗೆ ಮೂಲ ಮತ್ತು ಸ್ಥಳೀಯ ವೃಂದದ ಶಾಖಾಧಿಕಾರಿಳಿಗೆ ಒಟ್ಟಿಗೇ ಬಡ್ತಿ ನೀಡಿದ್ದಲ್ಲಿ ಸೇವೆಯಲ್ಲಿ ಹಿರಿಯರಾಗಿರುವ ಮೂಲವೃಂದದವರಿಗೆ ಜೇಷ್ಠತೆಯಲ್ಲಿ ಅನ್ಯಾಯವಾಗುತ್ತಿರಲಿಲ್ಲ. ಇದರ ಬದಲಿಗೆ ಸೇವೆಯಲ್ಲಿ ಕಿರಿಯರಾದ ಹೈ ಕ ವೃಂದದ ಶಾಖಾಧಿಕಾರಿಗಳಿಗೆ ಮುಂಚಿತವಾಗಿಯೇ ಬಡ್ತಿ ನೀಡಿ ಅನ್ಯಾಯ ಎಸಗಲಾಗಿದೆ. ಇದು ಸಂವಿಧಾನದ 14 ಮತ್ತು 16ರಡಿ ಸಮಾನತೆಯ ಹಕ್ಕಿಗೆ ಚ್ಯುತಿ ತಂದಂತಾಗಿದೆ.

 

ಇನ್ನು, ಸಚಿವಾಲಯದಲ್ಲಿ ಖಾಲಿ ಇದ್ದ ಮೂಲವೃಂದದ ಅಧೀನ ಕಾರ್ಯದರ್ಶಿ ಹುದ್ದೆಗಳಿಗೆ ಬಡ್ತಿ ನೀಡಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ 2021ರ ಮಾರ್ಚ್‌ 31ರಂದೇ ಮನವಿ ಸಲ್ಲಿಸಲಾಗಿತ್ತು. ಆದರೆ ಮುಂಬಡ್ತಿ ಪ್ರಕ್ರಿಯೆಯನ್ನು ಪ್ರಾರಂಭಿಸದೇ ವಿಳಂಬ ಮಾಡಲಾಗಿತ್ತು. ಜೇಷ್ಠತೆಯಲ್ಲಿ ಅನ್ಯಾಯವಾಗಲು ಇದುಕೂಡ ಒಂದು ಕಾರಣ ಎಂದು ಹೇಳಲಾಗುತ್ತಿದೆ.

 

ಶಾಖಾಧಿಕಾರಿ ಮೂಲ ವೃಂದದ ಅಧಿಕಾರಿಗಳಿಗೆ 5 ವರ್ಷ ಸೇವಾವಧಿ ಪೂರ್ಣಗೊಂಡಿದ್ದರೆ ಹೈ-ಕ ವೃಂದಲ್ಲಿ 3 ವರ್ಷಗಳ ಸೇವಾವಧಿ ಮಾತ್ರ ಪೂರ್ಣಗೊಂಡಿದೆ. ಆದರೂ ಹೈ-ಕ ವೃಂದದ ಶಾಖಾಧಿಕಾರಿಗಳಿಗೆ ಅಧೀನ ಕಾರ್ಯದರ್ಶಿ ವೃಂದಕ್ಕೆ ಬಡ್ತಿ ನೀಡುವಾಗ ಶಾಖಾಧಿಕಾರಿ ವೃಂದದಲ್ಲಿ ಸಲ್ಲಿಸಿದ್ದ ಸೇವಾವಧಿ 3 ವರ್ಷವಾಗಿತ್ತು. 5 ವರ್ಷಗಳ ಸೇವಾವಧಿ ಪೂರ್ಣಗೊಂಡಿದ್ದವರಿಗೆ ಮುಂಬಡ್ತಿ ನೀಡಲು ಡಿಪಿಸಿ ಸಭೆಯನ್ನು ವಿಳಂಬವಾಗಿ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ಖಚಿತಪಡಿಸಿದ್ದಾರೆ.

 

ಸಚಿವಾಲಯದಲ್ಲಿ ಸಂವಿಧಾನದ ವಿಧಿ 371 (ಜೆ) ಅಡಿ ಕಿರಿಯ ಸಹಾಯಕ ಹುದ್ದೆಯಿಂದ ಅಧೀನ ಕಾರ್ಯದರ್ಶಿ ವೃಂದದವರರೆಗೆ ಮಾತ್ರ ಹೈ ಕ ವೃಂದದಲ್ಲಿ ಬಡ್ತಿಯಲ್ಲಿ ಮೀಸಲಾತಿಗೆ ಅವಕಾಶವಿದೆ. ಮೂಲವೃಂದ ಮತ್ತು ಸ್ಥಳೀಯ ವೃಂದದ ಅಧೀನ ಕಾರ್ಯದರ್ಶಿಗಳಿಗೆ ಉಪ ಕಾರ್ಯದರ್ಶಿ ವೃಂದಕ್ಕೆ ಮುಂಬಡ್ತಿಯನ್ನು ಯಾವ ರೀತಿ ನೀಡಬೇಕು, ಯಾವ ಜೇಷ್ಠತಾಪಟ್ಟಿ ಆಧಾರದ ಮೇಲೆ ನೀಡಬೇಕು ಎಂಬ ಬಗ್ಗೆ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯಿಂದ ಯಾವುದೇ ಆದೇಶಗಳನ್ನು ಹೊರಡಿಸಿಲ್ಲ ಎಂದು ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts