ಮಹಿಳಾ ಸಬಲೀಕರಣದ ಅನುದಾನ; ಜಾಹೀರಾತು, ಕೋವಿಡ್‌ ಬಾಬ್ತುಗೆ ವೆಚ್ಚ

ಬೆಂಗಳೂರು; ಹಾಲುಣಿಸುವ ಮಾತೆಯರಿಗಾಗಿ ಮತ್ತು ಗರ್ಭಿಣಿಯರ ಆರೋಗ್ಯ ಸುಧಾರಣೆ ಗುರಿ ಹೊಂದಿರುವ ಮಾತೃಶ್ರೀ ಯೋಜನೆಗೆ ಅನುದಾನ ಮೊತ್ತವನ್ನು 450 ಕೋಟಿ ರು.ಗೆ ಹೆಚ್ಚಿಸಿದ್ದರೂ ಕೇವಲ ಶೇ.16.64ರಷ್ಟು ಅಂದರೆ 78.24 ಕೋಟಿ ಮಾತ್ರ ವೆಚ್ಚ ಮಾಡಲಾಗಿತ್ತು. ಮಹಿಳಾ ಆಯವ್ಯಯದಲ್ಲಿ ಹಂಚಿಕೆ ಮಾಡಿದ್ದ ಹಣವನ್ನು ಮಹಿಳೆಯರ ಸಬಲೀಕರಣಕ್ಕಾಗಿ ವೆಚ್ಚ ಮಾಡದೆಯೇ ಜಾಹೀರಾತು, ಕೋವಿಡ್‌ ಬಾಬ್ತುಗಳಿಗಾಗಿ ವೆಚ್ಚ ಮಾಡಲಾಗಿತ್ತು ಎಂಬುದನ್ನು ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ ವರದಿಯು ಹೊರಗೆಡವಿದೆ.

ಶಿಕ್ಷಣ ಮತ್ತು ಆರೋಗ್ಯ ವಿಭಾಗಗಳಲ್ಲಿ ಕಳೆದ 5 ವರ್ಷಗಳಿಂದ ಮಹಿಳೆಯರಿಗಾಗಿಯೇ ಮೀಸಲಿದ್ದ ನಿರ್ದಿಷ್ಟ ಯೋಜನೆಗಳಡಿಯಲ್ಲಿ ಹಂಚಿಕೆಯನ್ನೂ ಹೆಚ್ಚಿಸಿರಲಿಲ್ಲ ಎಂಬ ಅಂಶವನ್ನು ಮುನ್ನೆಲೆಗೆ ತಂದಿರುವ ಸಿಎಜಿ ವರದಿಯು ಮಹಿಳೆಯರ ಅಗತ್ಯಗಳನ್ನು ಪೂರೈಸುವ ಹಾಗೂ ಒಳ್ಳೆಯ ವಾತಾವರಣ ಕಲ್ಪಿಸುವ ಉದ್ದೇಶ ಹೊಂದಲು ಇಲಾಖೆಯು ತನ್ನ ಕಾರ್ಯನೀತಿ ಮತ್ತು ಯೋಜನೆಗಳ ಕಡೆ ಗಮನ ಹರಿಸಿರಲಿಲ್ಲ. ಆಡಳಿತಾತ್ಮಕ ವೆಚ್ಚವನ್ನೂ ಸೇರಿದಂತೆ ಒಟ್ಟು ವೆಚ್ಚವನ್ನು ತೋರಿಸಿ ಹಾದಿ ತಪ್ಪಿಸಲಾಗಿದೆ ಎಂಬುದನ್ನೂ ಬಹಿರಂಗಗೊಳಿಸಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಅವರ ವಿರುದ್ಧ ಮೊಟ್ಟೆ ಖರೀದಿಯಲ್ಲಿನ ಅಕ್ರಮದ ಆರೋಪ ಕೇಳಿ ಬಂದಿದ್ದರ ಬೆನ್ನಲ್ಲೇ ಮಹಿಳಾ ಉದ್ದೇಶಿತ ಆಯವ್ಯಯದ ಬಂಡವಾಳವೂ ಹೊರಬಿದ್ದಿದೆ.

ಸಬಲ ಯೋಜನೆಯಡಿ (ಅಪ್ರಾಪ್ತ ಬಾಲಕಿಯರ ಸಬಲೀಕರಣಕ್ಕಾಗಿರುವ ಯೋಜನೆ) 2018-19ರಲ್ಲಿ 4.23 ಕೋಟಿ ರು. ಹಂಚಿಕೆಯಾಗಿತ್ತು. 2019-20ರಲ್ಲಿ ಈ ಮೊತ್ತವನ್ನು 9.00 ಕೋಟಿ ರು.ಗೇರಿಸಿದ್ದರೂ ಪ್ರಸಕ್ತ ಸಾಲಿನಲ್ಲಿ ಕೇವಲ 0.76 ಕೋಟಿ ರು. ಮಾತ್ರ ವೆಚ್ಚವಾಗಿತ್ತು.

ಅದೇ ರೀತಿ ಹಾಲುಣಿಸುವ ಮಾತೆಯರಿಗಾಗಿ ಮತ್ತು ಗರ್ಭಿಣಿಯರ ಆರೋಗ್ಯ ಸುಧಾರಣೆ ಗುರಿ ಹೊಂದಿರುವ ಮಾತೃ ಶ್ರೀ ಯೋಜನೆಗೆ 2018-19ರಲ್ಲಿ 350 ಕೋಟಿ ರು.ಗಳಿಂದ 2019-20ರಲ್ಲಿ 450 ಕೋಟಿ ರು ಗೇರಿಸಿದ್ದರೂ 2019-20ರಲ್ಲಿ ಕೇವಲ 78.24 ಕೋಟಿ ರು. ಮಾತ್ರ ವೆಚ್ಚ ಮಾಡಲಾಗಿತ್ತು ಎಂದು ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕಳೆದ ಸಾಲಿಗೆ ಹೋಲಿಸಿದರೆ 2019-20ರಲ್ಲಿ ಮಹಿಳೆಯರಿಗಾಗಿ ಮೀಸಲಾದ ಯೋಜನೆಗಳ ಆಯವ್ಯಯ ಹಂಚಿಕೆಗಳಲ್ಲಿ ಇಳಿಕೆಯಾಗಿದೆ. ಅದರಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಹೊಸ ಪಿಂಚಣಿ ಯೋಜನೆ, ಸುರಕ್ಷಾ ಯೋಜನೆ, ಉಜ್ವಲ, ಕೆಎಸ್‌ಎಫ್‌ಸಿ, ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ, ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಗೆ ಆಯವ್ಯಯದಲ್ಲಿ ಹಂಚಿಕೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ.

ಅಂಗನವಾಡಿ ಕಾರ್ಯಕರ್ತೆಯರಿಗೆ ಹೊಸ ಪಿಂಚಣಿ ಯೋಜನೆಗೆ 2018-19ರಲ್ಲಿ 15.12 ಕೋಟಿ ರು. ಹಂಚಿಕೆ ಮಾಡಿದ್ದರೆ 2019-20ರಲ್ಲಿ 10 ಕೋಟಿ ರು. (ಶೇ.34ರಷ್ಟು ಇಳಿಕೆ) ಹಂಚಿಕೆ ಮಾಡಲಾಗಿದೆ. ಅದೇ ರೀತಿ ಸುರಕ್ಷಾ ಯೋಜನೆಗೆ 2018-19ರಲ್ಲಿ 0.50 ಕೋಟಿ ರು. ಇದ್ದರೆ 2019-20ರಲ್ಲಿ 0.01 ಕೋಟಿ (ಶೇ.98ರಷ್ಟು ಇಳಿಕೆ), ಉಜ್ವಲ ಯೋಜನೆಗೆ 2018-19ರಲ್ಲಿ 3.78 ಕೋಟಿ ರು ಇದ್ದರೆ 2019-20ರಲ್ಲಿ 1.00 ಕೋಟಿ (ಶೆ.74ರಷ್ಟು ಇಳಿಕೆ), ಕೆಎಸ್‌ಎಫ್‌ಸಿ ಮೂಲಕ ಮಹಿಳೆಯರಿಗೆ ಬಡ್ಡಿ ಸಹಾಯಧನಕ್ಕೆ 2018-19ರಲ್ಲಿ 32.94 ಕೋಟಿ ರು ಇದ್ದರೆ 2019-20ರಲ್ಲಿ 10 ಕೋಟಿ ರು. (ಶೇ.70ರಷ್ಟು ಇಳಿಕೆ), ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿಗಾಗಿ 2018-19ರಲ್ಲಿ 10 ಕೋಟಿ ಇದ್ದರೆ 2019-20ರಲ್ಲಿ 1 ಕೋಟಿ ಮಾತ್ರ ಹಂಚಿಕೆ (ಶೇ.90ರಷ್ಟು ಇಳಿಕೆ) ಮಾಡಲಾಗಿತ್ತು. ಅದೇ ರೀತಿ ಪ್ರಧಾನಮಂತ್ರಿ ಮಾತೃವಂದನಾ ಯೋಜನೆಗೆ 2018-19ರಲ್ಲಿ 100 ಕೋಟಿ ರು. ಇದ್ದರೆ 2019-20ರಲ್ಲಿ ಕೇವಲ 10 ಕೋಟಿ ರು. ಮಾತ್ರ ಹಂಚಿಕೆ ಶೇ.90ರಷ್ಟು ಇಳಿಕೆ)ಯಾಗಿತ್ತು ಎಂಬುದು ಸಿಎಜಿ ವರದಿಯಿಂದ ತಿಳಿದು ಬಂದಿದೆ.

‘ಮಹಿಳಾ ಉದ್ದೇಶಿತ ಆಯವ್ಯಯದ ಮುಂದುವರೆದ ವಿಶ್ಲೇಷಣೆಯಲ್ಲಿ ತಿಳಿದು ಬಂದ ಅಂಶವೆಂದರೆ ಅಧಕ ಹಂಚಿಕೆಯು ಯಾವಾಗಲೂ ಮಹಿಳೆಯರಿಗಾಗಿ ಮಾಡಲಾದ ಅಧಿಕ ವೆಚ್ಚವನ್ನು ಖಾತರಿಪಡಿಸುವುದಿಲ್ಲ,’ ಎಂದು ಸಿಎಜಿ ವರದಿಯು ವಿಶ್ಲೇಷಿಸಿದೆ.

ಇನ್ನು ಸಾಮಾಜಿಕ ಸೇವೆಎಗಳಡಿಯಲ್ಲಿ ಎ ವರ್ಗದ ಯೋಜನೆಗಳಿಗೆ ಹಂಚಿಕೆಯಾದ ಮೊತ್ತವು ಒಟ್ಟು ಹಂಚಿಕೆಯ ಶೇ.99ಕ್ಕಿಂತ ಅಧಿಕವಾಗಿತ್ತು. ಆರ್ಥಿಕ ಸೇವೆಗಳಡಿ ಇದು ಶೇಕಡ ಒಂದಕ್ಕಿಂತ ಕಡಿಮೆ ಇತ್ತು. ಇದು ಮಹಿಳೆಯರ ಸ್ವಾವಲಂಬನೆ ಮತ್ತು ಸ್ವಾಯತ್ತತೆಗೆ ಮಹತ್ವದ ಯೋಜನೆಗಳಾದ ತರಬೇತಿ ಮತ್ತು ಕೌಶಲ್ಯಾಭಿವೃರ್ದದಿ, ಸಾಲ, ಮೂಲಸೌಕರ್ಯ ಮತ್ತು ಮಾರ್ಕೆಟಿಂಗ್‌ಗೆ ಸಾಕಷ್ಟು ಗಮನಹರಿಸಿರಲಿಲ್ಲ ಎಂದು ಸಿಎಜಿ ವರದಿ ಹೇಳಿದೆ.

ಖಾಸಗಿ ಕೈಗಾರಿಕೆಗಳು, ಕಂಪನಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಉದ್ಯೋಗ ಅವಕಾಶ ಹಾಗೂ ಸಾಮಾಜಿಕ ನ್ಯಾಯ ಕಲ್ಪಿಸುವ ಸಲುವಾಗಿ ಜಾರಿಗೊಳಿಸಿದ್ದ ಆಶಾದೀಪ ಯೋಜನೆಗೆ 2017-18 ಮತ್ತು 2018-19ರಲ್ಲಿ ಕ್ರಮವಾಗಿ40 ಕೋಟಿ ಹಾಗೂ 3.25 ಕೋಟಿ ರು.ಗಳನ್ನು ಬಿಡುಗಡೆ ಮಾಡಲಾಗಿತ್ತು. ಈ ಪೈಕಿ 2018-19ರಲ್ಲಿ ಕೇವಲ 0.10 ಕೋಟಿ ವಾಸ್ತವಿಕ ವೆಚ್ಚವನ್ನು ಭರಿಸಲಾಗಿದೆ. ಈ ವೆಚ್ಚವನ್ನುಮಾಹಿತಿ, ಶಿಕ್ಷಣ ಮತ್ತು ಸಂಪರ್ಕ ಚಟುವಟಿಕೆಗೆ ಬಳಸಲಾಗಿದೆ. ಆದರೆ ಮಹಿಳಾ ಉದ್ದೇಶಿತ ಆಯ್ಯವಯದಲ್ಲಿ ಸಂಪೂರ್ಣ ಬಿಡುಗಡೆಯನ್ನು ವೆಚ್ಚವಾದಂತೆ ತೋರಿಸಲಾಗಿದೆ ಎಂದು ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದೇ ಯೋಜನೆಗೆ 2019-20ರಲ್ಲಿ 4.33 ಕೋಟಿ ರು. ಬಿಡುಗಡೆ ಮಾಡಿದ್ದು, ವಾಸ್ತವಿಕವಾಗಿ 15.21 ಕೋಟಿ ರು. ವೆಚ್ಚ ಭರಿಸಲಾಗಿದೆ. ಹೀಗೆ ಒಟ್ಟು 47.48 ಕೋಟಿ ಈ ಯೋಜನೆಗೆ ಬಿಡುಗಡೆ ಮಾಡಿದ್ದು ವಾಸ್ತವ ವೆಚ್ಚ 15.31 ಕೋಟಿಗಳಾಗಿದೆ ಎಂದು ಸಿಎಜಿ ವರದಿ ವಿವರಿಸಿದೆ.

ಕೌಶಲ್ಯಾಭಿವೃದ್ಧಿಗೆ ಸಾಂಸ್ಥಿಕ ಯಾಂತ್ರೀಕರಣವನ್ನು ಬಲಪಡಿಸುವುದು ಮತ್ತು ದೇಶದ ಯುವ ಜನಾಂಗಕ್ಕೆ ಗುಣಮಟ್ಟದ ಪ್ರವೇಶಾವಕಾಶ ಹಾಗೂ ಮಾರುಕಟ್ಟೆ ತರಬೇತಿ ಬಲಪಡಿಸಲು 2018ರಲ್ಲಿ ಆರಂಭಿಸಿದ್ದ ಸಂಕಲ್ಪ ಯೋಜನೆಗೆ 2019-20ರಲ್ಲಿ ಮಹಿಳಾ ಉದ್ದೇಶಿತ ಆಯವ್ಯಯದ ಬಿ ವರ್ಗದಲ್ಲಿ ಪರಿಚಯಿಸಿದ್ದರೂ ಇದಕ್ಕೆ ನಯಾಪೈಸೆಯನ್ನೂ ಬಿಡುಗಡೆ ಮಾಡಿರಲಿಲ್ಲ.

ಮಹಿಳೆಯರ ಸಬಲೀಕರಣಕ್ಕಾಗಿ ರೂಪಿಸಿದ್ದ ಯೋಜನೆಗಳಿಗೆ ಹಂಚಿಕೆ ಮಾಡಿದ್ದ ಹಣವನ್ನು ಆಡಳಿತಾತ್ಮಕ ವೆಚ್ಚ, ವೇತನ ವೆಚ್ಚ, ಜಾಹೀರಾತು, ಕೋವಿಡ್‌ 19ರ ಬಾಬ್ತುಗಳಿಗೆ ಖರ್ಚು ಮಾಡಲಾಗಿತ್ತು. ಶೇ.11ರಷ್ಟು ಯೋಜನೆಗಳು ಮಾತ್ರ ಮಹಿಳೆಯರ ಪರವಾದ ಯೋಜನೆಗಳಾಗಿದ್ದರೆ ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆ, ಕೌಶಲ್ಯ ಅಭಿವೃದ್ಧಿ ಪರಿಷತ್‌ ಮಾತ್ರ ಮಹಿಳೆಯರಿಗೆ ಸೌಲಭ್ಯವನ್ನು ತಲುಪಿಸಿವೆ ಎಂದು ವರದಿ ವಿವರಿಸಿದೆ.

‘ಲಿಂಗಾಧಾರಿತ ಅಂತರಗಳಲ್ಲಿ, ಆರೋಗ್ಯ, ಸಾಕ್ಷರತಾ ಪ್ರಮಾಣ ಮತ್ತು ಮಹಿಳೆಯರ ಸಮಗ್ರ ಸಾಮಾಜಿಕ, ಆರ್ಥಿಕ ಸ್ಥಿತಿ ಆಧರಿಸಿ ರಾಜ್ಯ ಸರ್ಕಾರವು ಆಯವ್ಯಯ ಹಂಚಿಕೆಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಮಹಿಳೆಯರ ಸಮಗ್ರ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಬೇಕು. ಮಹಿಳಾ ಉದ್ದೇಶಿತ ಆಯವ್ಯಯದ ದಾಖಲೆಗಳಲ್ಲಿ ಮಹಿಳೆ ಮತ್ತು ಹೆಣ್ಣು ಮಕ್ಕಳಿಗಾಗಿ ವಿವಿಧ ಇಲಾಖೆಗಳ ಆಯವ್ಯಯದಲ್ಲಿ ಹಂಚಿಕೆಗಳ ಪ್ರಮಾಣವನ್ನು ಗುರುತಿಸುವುದರಲ್ಲಿ ಮಾತ್ರ ಸೀಮಿತವಾಗಿತ್ತು. ಮಹಿಳಾ ಉದ್ಧೇಶಿತ ಆಯವ್ಯಯ ತಯಾರಿಕೆಯಲ್ಲಿ ಸತತವಾಗಿ ಅಸಮರ್ಪಕತೆಗಳಿವೆ. ಈ ಆಯವ್ಯಯವನ್ನು ಕಾರ್ಯನೀತಿ ರೂಪಿಸುವ ಸಾಧನವನ್ನಾಗಿ ಮಾಡಲು ಸರಿಪಡಿಸುವ ಅಗತ್ಯವಿದೆ,’ ಎಂದು ಸಿಎಜಿ ವರದಿ ಅಭಿಪ್ರಾಯಪಟ್ಟಿದೆ.

SUPPORT THE FILE

Latest News

Related Posts