ಬೆಂಗಳೂರು; ಕೋವಿಡ್ 2ನೇ ಅಲೆಯಲ್ಲಿ ತೀವ್ರವಾಗಿದ್ದ ಹೊತ್ತಿನಲ್ಲೇ ಕಳೆದ 7 ತಿಂಗಳಲ್ಲಿ ಹೃದಯಾಘಾತ, ಆಕಸ್ಮಿಕ ಅಪಘಾತ ಸೇರಿದಂತೆ ಇನ್ನಿತರೆ ಕಾರಣಗಳಿಂದ ರಾಜ್ಯದಲ್ಲಿ 4.26 ಲಕ್ಷ ಮಂದಿ ಸಾವಿಗೀಡಾಗಿದ್ದಾರೆ.
2021ರ ಜೂನ್‌ನಲ್ಲಿಯೇ ಅತಿ ಹೆಚ್ಚು ಎಂದರೆ 99,665 ಮಂದಿ ಸಾವಿಗೀಡಾಗಿದ್ದಾರೆ. ಉಳಿದಂತೆ ಜನವರಿಯಲ್ಲಿ 50,319, ಫೆಬ್ರುವರಿಯಲ್ಲಿ 45,884, ಮಾರ್ಚ್‌ನಲ್ಲಿ 49,987, ಏಪ್ರಿಲ್‌ನಲ್ಲಿ 42,337, ಮೇನಲ್ಲಿ 77,221, ಜುಲೈನಲ್ಲಿ 65,530 ಮಂದಿ ಸಾವಿಗೀಡಾಗಿರುವುದು ಅಂಕಿ ಅಂಶದಿಂದ ತಿಳಿದು ಬಂದಿದೆ. ರಾಜ್ಯ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯು ಈ ಕುರಿತು ಅಂಕಿ ಅಂಶಗಳ ದಾಖಲೆಯನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಸಲ್ಲಿಸಿದೆ. ಇದರ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯ ದಾಖಲೆಯನ್ನಾಧರಿಸಿ ಪ್ರಜಾವಾಣಿ ಪತ್ರಿಕೆಯೂ ವರದಿ ಮಾಡಿದೆ. ಈ ವರದಿಯಲ್ಲಿ 2021ರ ಜುಲೈವರೆಗೆ 65,530 ಮಂದಿ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿದೆ. ಆದರೆ 2021ರ ಜನವರಿಯಿಂದ ಜುಲೈ ಅಂತ್ಯದವರೆಗೆ ಒಟ್ಟು 4.26 ಲಕ್ಷ ಮಂದಿ ಸಾವಿಗೀಡಾಗಿರುವುದು ದಾಖಲೆಯಿಂದ ತಿಳಿದು ಬಂದಿದೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ ಕಳೆದ 7 ತಿಂಗಳಲ್ಲಿ ಒಟ್ಟು 70,528 ಮಂದಿ ಸಾವಿಗೀಡಾಗಿದ್ದಾರೆ. ಈ ಪೈಕಿ ಮೇ ಮತ್ತು ಜೂನ್ ತಿಂಗಳಲ್ಲಿ ಒಟ್ಟು 33,270 ಮಂದಿ ಸಾವಿಗೀಡಾಗಿದ್ದಾರೆ. ಕೋವಿಡ್ ಬುಲೆಟಿನ್ ಪ್ರಕಾರ ಮೇ 31ರ ಅಂತ್ಯಕ್ಕೆ ಒಟ್ಟು 13,346 ಮಂದಿ, ಜೂನ್ ಅಂತ್ಯಕ್ಕೆ 15,626 ಮಂದಿ ಸೇರಿದಂತೆ ಒಟ್ಟು 28,927 ಮಂದಿ ಕೋವಿಡ್‌ನಿಂದ ಸಾವನ್ನಪ್ಪಿದ್ದರು. 2018ರ ಜನವರಿಯಿಂದ 2020 ಡಿಸೆಂಬರ್‌ವರೆಗೆ ಒಟ್ಟು 15,43,903 ಮತ್ತು 2018ರಿಂದ 2021ರ ಜುಲೈ ಅಂತ್ಯಕ್ಕೆ 19,70,846 ಮಂದಿ ಸಾವಿಗೀಡಾಗಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಕಳೆದ 7 ತಿಂಗಳಲ್ಲಿ 35,395, ಮೈಸೂರು ಜಿಲ್ಲೆಯಲ್ಲಿ 23,854, ತುಮಕೂರಿನಲ್ಲಿ 21,489 ವಿಜಯಪುರದಲ್ಲಿ 15,884, ಮಂಡ್ಯದಲ್ಲಿ 13,016, ದಾವಣಗೆರೆಯಲ್ಲಿ 13,337, ಬಾಗಲಕೋಟೆಯಲ್ಲಿ 13,126, ಶಿವಮೊಗ್ಗದಲ್ಲಿ 12,601, ಚಿತ್ರದುರ್ಗದಲ್ಲಿ 11,991, ಚಾಮರಾಜನಗರದಲ್ಲಿ 8,308, ಚಿಕ್ಕಬಳ್ಳಾಪುರದಲ್ಲಿ 8,036 ಮಂದಿ ಸಾವಿಗೀಡಾಗಿರುವುದು ಅಂಕಿ ಅಂಶದಿಂದ ತಿಳಿದು ಬಂದಿದೆ.
ಕೋವಿಡ್ ಕಾರಣದಿಂದಾಗಿ ರಾಜ್ಯದಲ್ಲಿ ಜಾರಿಗೊಳಿಸಿದ್ದ ಲಾಕ್‌ಡೌನ್, ವಾರಾಂತ್ಯ ಕರ್ಫ್ಯೂದಿಂದಾಗಿ ವಾಹನ ಸಂಚಾರ ಸ್ತಬ್ಧಗೊಂಡಿತ್ತು. ಹೀಗಾಗಿ ಸಹಜವಾಗಿ ಅಪಘಾತಗಳ ಸಂಖ್ಯೆಯೂ ಕನಿಷ್ಠ ಮಟ್ಟಕ್ಕಿಳಿದಿತ್ತು. ಮೇ ಮತ್ತು ಜೂನ್ ತಿಂಗಳಲ್ಲಿ ಕೋವಿಡ್‌ನಿಂದ ಸಾವಿಗೀಡಾಗಿದ್ದವರ ಸಂಖ್ಯೆಯೂ ಅಧಿಕವಾಗಿತ್ತು. ಈ ಅಂಶವನ್ನು ಪರಿಗಣಿಸಿದರೆ ಕಳೆದ 7 ತಿಂಗಳಲ್ಲಿ ಸಾವಿಗೀಡಾಗಿರುವ 4,26,943 ಮಂದಿ ಪೈಕಿ ಅರ್ಧದಷ್ಟು ಮಂದಿ ಕೋವಿಡ್‌ನಿಂದಲೇ ಸಾವಿಗೀಡಾಗಿದ್ದಾರೆ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ. ಇದರ ಪ್ರಕಾರ ಕಳೆದ 7 ತಿಂಗಳಲ್ಲಿ ಸಾವಿಗೀಡಾಗಿರುವ 4.26 ಲಕ್ಷ ಮಂದಿಯಲ್ಲಿ ಅರ್ಧದಷ್ಟು ಎಂದರೆ 2.13 ಲಕ್ಷ ಮಂದಿ ಕೋವಿಡ್‌ನಿಂದ ಸಾವಿಗೀಡಾಗಿರುಬಹುದು ಎಂದು ಹೇಳಲಾಗುತ್ತಿದೆ.
ಕೋವಿಡ್ ಪೂರ್ವದಲ್ಲಿ ತಿಂಗಳಿಗೆ ಸರಾಸರಿ ಸಾವಿನ ಸಂಖ್ಯೆ ಅಂದಾಜು 40,000 ಇತ್ತು. ಕಳೆದ 2 ವರ್ಷದಲ್ಲಿ ಸರಾಸರಿ ಸಾವಿನ ಸಂಖ್ಯೆ 70,000ಕ್ಕೆ ಏರಿದೆ. ಅಂದರೆ ಕೋವಿಡ್ ಪೂರ್ವಕ್ಕೂ ಮತ್ತು ಕೋವಿಡ್ ವರ್ಷದಲ್ಲಿ ಸಂಭವಿಸಿರುವ ಸಾವಿನ ಸಂಖ್ಯೆಯು 30,000ದಷ್ಟು ಹೆಚ್ಚಳವಾಗಿದೆ. ಈ ಮೂವತ್ತು ಸಾವಿರ ಮಂದಿ ಕೋವಿಡ್‌ನಿಂದಲೇ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಜ್ಯದಲ್ಲಿ ಕೋವಿಡ್ ಮೊದಲ ಮತ್ತು ಎರಡನೇ ಅಲೆಯಲ್ಲಿ ಆಯುಷ್ಮಾನ್ ಭಾರತ್ (ಎಬಿ) ಯೋಜನೆಯಡಿ ಕ್ಲೈಮ್ ಮಾಡಿರುವ 2,34,247 ಪ್ರಕರಣಗಳ ಪೈಕಿ ಕೇವಲ 14,371 ಮಂದಿಯಷ್ಟೇ ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ಹೇಳಿತ್ತು. ಒಟ್ಟು ಕ್ಲೈಮ್‌ಗಳ ಪೈಕಿ ಸಾವಿನ ಪ್ರಮಾಣ ಶೇಕಡವಾರು 6ರಷ್ಟಿತ್ತು. ಅದೇ ರೀತಿ ಕೋವಿಡ್ ಬುಲೆಟಿನ್‌ನಲ್ಲಿ (2021ರ ಆಗಸ್ಟ್ 2) ನಮೂದಿಸಿರುವ ಅಂಕಿ ಸಂಖ್ಯೆಗೂ ಡೆತ್ ಆಡಿಟ್‌ನಲ್ಲಿ ಒದಗಿಸಿರುವ ಸಾವಿನ ಸಂಖ್ಯೆ ನಡುವೆ 1,471ಯಷ್ಟೇ ವ್ಯತ್ಯಾಸವಿತ್ತು.
ಡೆತ್ ಆಡಿಟ್ ಸಲ್ಲಿಕೆ; 2.34 ಲಕ್ಷ ಮಂದಿಯಲ್ಲಿ 14,371 ಮಾತ್ರ ಕೋವಿಡ್ ಸಾವು
ಕೋವಿಡ್ ಮೊದಲ ಅಲೆ (2020ರ ಜುಲೈನಿಂದ 2021ರ ಜುಲೈವರೆಗೆ)ಯಲ್ಲಿ ಆಯುಷ್ಮಾನ್ ಭಾರತ್ ಯೋಜನೆಯಡಿ ಒಟ್ಟು 1,32,409 ಕ್ಲೈಮ್ ಮಾಡಲಾಗಿದ್ದರೆ ಈ ಪೈಕಿ 5,220 ಮಾತ್ರ (ಶೇ.4ರಷ್ಟು) ಮತ್ತು ಕೋವಿಡ್ ಎರಡನೇ ಅಲೆಯಲ್ಲಿ ವರದಿ ಸಲ್ಲಿಸಿರುವ ದಿನಾಂಕದವರೆಗೆ (2021ರ ಆಗಸ್ಟ್ 17) 1,01,938 ಕ್ಲೈಮ್‌ಗಳ ಪೈಕಿ 9,151 ಸೇರಿದಂತೆ ಒಟ್ಟು 14,371 ಮಂದಿ ಮಾತ್ರ ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ ಎಂದು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮಾಹಿತಿ ಒದಗಿಸಿರುವುದು ವರದಿಯಿಂದ ಗೊತ್ತಾಗಿತ್ತು.
ಕೋವಿಡ್ ಸಾವಿನ ಬಗ್ಗೆ ನಿಖರವಾದ ಮಾಹಿತಿ (ಡೆತ್ ಆಡಿಟ್) ಪ್ರಕಾರ 2021ರ ಜುಲೈ 31ಕ್ಕೆ ಅಂತ್ಯಕ್ಕೆ ರಾಜ್ಯದಲ್ಲಿ ಒಟ್ಟು 35,141 ಸಾವು ಸಂಭವಿಸಿದೆ. ಅಲ್ಲದೇ ಇದೇ ವರದಿಯಲ್ಲಿ 2021ರ ಆಗಸ್ಟ್ 2ರ ಅಂತ್ಯಕ್ಕೆ ಒಟ್ಟು ಕೋವಿಡ್ ಬುಲೆಟಿನ್ ಪ್ರಕಾರ ಸಾವುಗಳ ಸಂಖ್ಯೆ 36,612 ಎಂದು ನಮೂದಿಸಿದೆ. ಇವೆರಡರ ಮಧ್ಯೆ 1,471 ವ್ಯತ್ಯಾಸವಿರುವುದು ವರದಿಯಿಂದ ತಿಳಿದು ಬಂದಿತ್ತು.
ಡೆತ್ ಆಡಿಟ್‌ನಲ್ಲಿ ನಮೂದಿಸಿರುವ ಕೋವಿಡ್ ಬುಲೆಟಿನ್ ಪ್ರಕಾರ ಬೆಂಗಳೂರು ನಗರ ಜಿಲ್ಲೆಯಲ್ಲಿ 2021ರ ಆಗಸ್ಟ್ 2ರ ಅಂತ್ಯಕ್ಕೆ 15,885 ಸಾವಿನ ಸಂಖ್ಯೆ ಇದ್ದರೆ 2021ರ ಜುಲೈ 31ರ ಅಂತ್ಯದ ಡೆತ್ ಆಡಿಟ್ ಪ್ರಕಾರ 15,809 ಮಂದಿ ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ ಎಂದು ಇಲಾಖೆಯು ದಾಖಲಿಸಿತ್ತು.
ಅದೇ ರೀತಿ ಡೆತ್ ಆಡಿಟ್ ಪ್ರಕಾರ ಮೈಸೂರಿನಲ್ಲಿ 2,078, ದಕ್ಷಿಣ ಕನ್ನಡದಲ್ಲಿ 1,341, ಹಾಸನದಲ್ಲಿ 1,127, ತುಮಕೂರಿನಲ್ಲಿ 1,072, ಧಾರವಾಡದಲ್ಲಿ 1,262, ಶಿವಮೊಗ್ಗದಲ್ಲಿ 1,041 ಮಂದಿ ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ. ಇನ್ನುಳಿದ ಜಿಲ್ಲೆಗಳಲ್ಲಿ ಕೋವಿಡ್ ಸಾವಿನ ಸಂಖ್ಯೆ ಮೂರಂಕಿ ದಾಟಿರಲಿಲ್ಲ.