ಕೋವಿಡ್‌ ಲಸಿಕೆ ವಾಣಿಜ್ಯೀಕರಣ; ದೇವಿಶೆಟ್ಟಿ ವಿರುದ್ಧ ಸ್ವ- ಹಿತಾಸಕ್ತಿ ಸಂಘರ್ಷ ಆರೋಪ

ಬೆಂಗಳೂರು; 2.2 ಲಕ್ಷ ಪ್ರಮಾಣದಲ್ಲಿ ಕೋವಿಡ್‌ ಲಸಿಕೆಗಳನ್ನು ದಾಸ್ತಾನು ಮಾಡಿಕೊಂಡಿರುವ ನಾರಾಯಣ ಆಸ್ಪತ್ರೆಯ ಮುಖ್ಯಸ್ಥರೂ ಮತ್ತು ಕೋವಿಡ್‌ 3ನೇ ಅಲೆ ತಡೆಗಟ್ಟಲು ಕರ್ನಾಟಕ ಸರ್ಕಾರವು ರಚಿಸಿರುವ ಉನ್ನತ ತಜ್ಞರ ಸಮಿತಿಯ ಅಧ್ಯಕ್ಷರಾಗಿರುವ ಡಾ ದೇವಿಶೆಟ್ಟಿ ಅವರೀಗ ಸ್ವ-ಹಿತಾಸಕ್ತಿ ಸಂಘರ್ಷ ಆರೋಪಕ್ಕೆ ಗುರಿಯಾಗಿದ್ದಾರೆ.

ತಜ್ಞರ ಸಮಿತಿಗೆ ರಾಜ್ಯ ಸರ್ಕಾರವು ಡಾ ದೇವಿಶೆಟ್ಟಿ ಅವರನ್ನು ಮುಖ್ಯಸ್ಥರನ್ನಾಗಿಸಿದ್ದು ಹಲವು ಆಕ್ಷೇಪಗಳು ವ್ಯಕ್ತವಾಗಿರುವ ಮಧ್ಯೆಯೇ 2.02 ಲಕ್ಷ ಡೋಸ್‌ ಲಸಿಕೆಗಳನ್ನು ಖರೀದಿಸಿ ದಾಸ್ತಾನು ಮಾಡಿಕೊಂಡಿರುವ ಸಂಬಂಧ ಹಿತಾಸಕ್ತಿ ಸಂಘರ್ಷ ಆರೋಪಕ್ಕೆ ಗುರಿಯಾಗಿರುವುದು ಇದೀಗ ಮುನ್ನೆಲೆಗೆ ಬಂದಿದೆ.

ಈ ಸಂಬಂಧ ವಕೀಲರು, ಆಸ್ಪತ್ರೆಗಳನ್ನು ನಡೆಸುತ್ತಿರುವ ವೈದ್ಯರು ಸೇರಿದಂತೆ ಹಲವರು ಟ್ವಿಟರ್‌ನಲ್ಲಿ ಎತ್ತಿರುವ ಆಕ್ಷೇಪಗಳು ಮಹತ್ವ ಪಡೆದುಕೊಂಡಿವೆ. ಜನಸಾಮಾನ್ಯರಿಗೆ ದೊರೆಯದ ಲಸಿಕೆಗಳು ಕಾರ್ಪೋರೇಟ್‌ ಮತ್ತು ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ  ದಾಸ್ತಾನು ಆಗಿರುವುದಕ್ಕೆ ಬಹುತೇಕರು ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಶೇಷವಾಗಿ ಕರ್ನಾಟಕದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕಾಣಿಸಿಕೊಂಡಿರುವ ಲಸಿಕೆಗಳ ಕೊರತೆಯು ಜನಸಾಮಾನ್ಯರು ಲಸಿಕೆ ಪಡೆಯುವುದರಿಂದ ವಂಚಿತರನ್ನಾಗಿಸಿದೆ. ಇದೇ ಹೊತ್ತಿನಲ್ಲಿಯೇ ಕೋವಿಡ್‌ 3ನೇ ಅಲೆ ತಡೆಗಟ್ಟಲು ರಚನೆಯಾಗಿರುವ ತಜ್ಞರ ಸಮಿತಿಯ ಅಧ್ಯಕ್ಷರೂ ಆಗಿರುವ ಡಾ ದೇವಿಶೆಟ್ಟಿ ಒಡೆತನದಲ್ಲಿರುವ ನಾರಾಯಣ ಸಮೂಹದ ಆಸ್ಪತ್ರೆಯು 2.02 ಲಕ್ಷ ಡೋಸ್‌ಗಳನ್ನು ದಾಸ್ತಾನು ಮಾಡಿಟ್ಟುಕೊಂಡಿರುವುದು ಸ್ವ-ಹಿತಾಸಕ್ತಿ ಸಂಘರ್ಷವಲ್ಲವೇ ಎಂದು ಖ್ಯಾತ ವಕೀಲ ಕೆಬಿಕೆ ಸ್ವಾಮಿ ಅವರು ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.

ಸಾಂಕ್ರಾಮಿಕ ರೋಗವನ್ನು ಎದುರಿಸಲು ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿಯೂ ಚಿಕ್ಕ ಚಿಕ್ಕ ಖಾಸಗಿ ಆಸ್ಪತ್ರೆಗಳು ಸಹ ಆಯಾ ವ್ಯಾಪ್ತಿಯಲ್ಲಿ ಕೋವಿಡ್‌ ಬಾಧಿತರನ್ನು ಶುಶ್ರೂಷೆ ಮಾಡುತ್ತಿವೆ. ಈ ಯಾವ ಆಸ್ಪತ್ರೆಗಳಿಗೆ ಲಭಿಸದ ತಡೆಮದ್ದು, ದೊಡ್ಡ ಆಸ್ಪತ್ರೆಯಾಗಿರುವ ನಾರಾಯಣ ಆಸ್ಪತ್ರೆಯ ಮುಖ್ಯಸ್ಥರಿಗೆ ಲಭಿಸುತ್ತಿರುವುದೇ ನೇರ ಹಿತಾಸಕ್ತಿ ಸಂಘರ್ಷ ಎಂಬ ಆರೋಪಕ್ಕೆ ಹಲವರು ಪುಷ್ಠಿ ಒದಗಿಸಿದ್ದಾರೆ.

ಡಾ ದೇವಿಶೆಟ್ಟಿ ಅವರು ತಜ್ಞರ ಸಮಿತಿ ಮುಖ್ಯಸ್ಥರಾಗಿರುವ ಕಾರಣ ಅವರ ಸಲಹೆ ಮತ್ತು ಸೂಚನೆಗಳನ್ನು ರಾಜ್ಯ ಸರ್ಕಾರವು ಪಡೆಯುತ್ತದೆ. ಅದೇ ರೀತಿ ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರ ನೇರ ಒಡನಾಟದಲ್ಲಿರುತ್ತಾರೆ. ಅಲ್ಲದೆ ಸಮಿತಿಯ ಅಧ್ಯಕ್ಷರಾಗಿರುವ ಅವರು ಸ್ವಂತಕ್ಕೆ ಆಸ್ಪತ್ರೆಯನ್ನೂ ನಡೆಸುತ್ತಿದ್ದಾರೆ. ಅವರದ್ದು ಮೂಲತಃ ಹೃದಯ ಸಂಬಂಧಿತ ಆಸ್ಪತ್ರೆಯಾದರೂ ಇವರಿಗೆ 2.02 ಲಕ್ಷ ಡೋಸ್‌ ಲಸಿಕೆಗಳು ಲಭಿಸಿರುವುದು ಕೂಡ ಹಿತಾಸಕ್ತಿ ಸಂಘರ್ಷ ಇದರಲ್ಲಿ ಅಡಗಿದೆ ಎಂದೂ ಕೆಲವರು ವಾದವನ್ನು ಮುಂದೊಡ್ಡಿದ್ದಾರೆ.

‘ಕೇಂದ್ರ ಸರ್ಕಾರವು 150 ರು.ಗೆ ಲಸಿಕೆ ಖರೀದಿಸಿದರೆ ರಾಜ್ಯಗಳು 400 ರು. ಗೆ ಖರೀದಿಸುತ್ತವೆ. ಖಾಸಗಿ ಅಸಪತ್ರೆಗಳು 600 ರು.ಗೆ ಖರೀದಿ ಮಾಡಿ 900 ರು.ನಿಂದ 1,250 ರು.ವರೆಗೆ ಹಣ ಪಡೆದು ಲಸಿಕೆ ನೀಡುತ್ತಿವೆ. ವಿಶ್ವದ ಯಾವುದೇ ದೇಶಗಳಲ್ಲೂ ಇಷ್ಟು ದುಬಾರಿ ಹಣ ಪಡೆದು ತಡೆಮದ್ದನ್ನು ನೀಡುತ್ತಿಲ್ಲ. ಯಾವುದೇ ದೇಶದ ಬೆಲೆಯನ್ನು ಭಾರತದ ಖಾಸಗಿ ಆಸ್ಪತ್ರೆಗಳ ದರಕ್ಕೆ ಹೋಲಿಸಿ ನೋಡಿ ಸಾಕು, ಸತ್ಯ ತಿಳಿದು ಬರುತ್ತದೆ. ಮೋದಿ ಹೊಗಳುತ್ತಲೇ ತಜ್ಞರ ಸಮಿತಿಗೆ ಅಧ್ಯಕ್ಷರಾಗುವುದು ಮತ್ತು ಈ ಮೂಲಕ ಅನಾಯಾಸವಾಗಿ ತನ್ನದೇ ಒಡೆತನದ ಆಸ್ಪತ್ರೆಗೆ ಲಸಿಕೆಗಳನ್ನು ಖರೀದಿಸುವ ಈ ಎಲ್ಲಾ ಪ್ರಕ್ರಿಯೆಯು ಒಂದೊಕ್ಕೊಂದು ಪೂರಕವಾಗಿರುವುದರಿಂದ ಇದು ನೇರ ಹಿತಾಸಕ್ತಿ ಸಂಘರ್ಷ ಮಾತ್ರವಲ್ಲದೇ ಭ್ರಷ್ಟಾಚಾರದ ಸೌಮ್ಯ ಮುಖ,’ ಎಂದು ಹಲವರು ವ್ಯಾಖ್ಯಾನಿಸಿದ್ದಾರೆ.

ಇನ್ನು ಬೆಂಗಳೂರಿನ ಜಿಗಣಿಯಲ್ಲಿ ಸಣ್ಣ ಪ್ರಮಾಣದ ಆಸ್ಪತ್ರೆಯನ್ನು ನಡೆಸುತ್ತಿರುವ ಡಾ ಜಗದೀಶ್‌ ಹಿರೇಮಠ್‌ ಎಂಬುವರು ಕಾರ್ಪೋರೇಟ್‌ ಆಸ್ಪತ್ರೆಗಳಿಗಷ್ಟೇ ಲಸಿಕೆ ಲಭಿಸುತ್ತಿರುವುದಕ್ಕೆ ಆಕ್ಷೇಪಗಳನ್ನೂ ಎತ್ತಿದ್ದಾರೆ. ‘ ನಾನು ಕಳೆದ ಏಪ್ರಿಲ್‌ 1ರಿಂದಲೂ ಲಸಿಕೆಗಳಿಗಾಗಿ ಅಕ್ಷರಶಃ ಭಿಕ್ಷೆ ಬೇಡಿದ್ದೇನೆ. ಆದರೆ ಕೇವಲ ಕಾರ್ಪೋರೇಟ್‌ ಆಸ್ಪತ್ರೆಗಳು ಮಾತ್ರ ಲಸಿಕೆಗಳನ್ನು ಖರೀದಿಸಿವೆ. ಇದಕ್ಕೆ ಸರ್ಕಾರವೂ ಬೆಂಬಲಿಸಿದೆ,’ ಎಂದು ಟ್ವೀಟ್‌ ಮಾಡಿದ್ದಾರೆ.

ಅದೇ ರೀತಿ ನವನೀತ್‌ ಗೌಡ ಎಂಬುವರು ‘ ಮೇ ತಿಂಗಳಲ್ಲಿ ಪ್ರೊಡಕ್ಷನ್‌ ಆದ ಶೇ.50ರಷ್ಟು ಲಸಿಕೆಯನ್ನು ಪ್ರೈವೈಟ್‌ ಆಸ್ಪತ್ರೆಗಳು ದಾಸ್ತಾನು ಮಾಡಿಕೊಂಡಿವೆ. ಮತ್ತು ಮೆಟ್ರೋ ನಗರಗಳಲ್ಲಿ ಶೇ.80ರಷ್ಟು ಲಸಿಕೆ ಪ್ರೈವೈಟ್‌ ಆಸ್ಪತ್ರೆಗಳ ಬಳಿ ಇದೆ. ಬಡವರಿಗೆ ಬದುಕುಳಿಯುವ ಹಕ್ಕು ಇಲ್ಲವೇ, ಖಾಸಗಿಯಾಗಿ ಮಾರಲು ಲಸಿಕೆಯೇನು ಐಷಾರಾಮಿ ವಸ್ತುನಾ? ಎಂದು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.

ಕೋವಿಡ್‌ ಲಸಿಕೆಗಳನ್ನು ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡಲು ಉತ್ಪಾದಕ ಕಂಪನಿಗಳಿಗೆ ಅವಕಾಶ ಮಾಡಿಕೊಟ್ಟ ಮರುಗಳಿಗೆಯಲ್ಲಿಯೇ ಫೋರ್ಟಿಸ್‌ ಸೇರಿದಂತೆ ಕಾರ್ಪೋರೇಟ್‌ ಆಸ್ಪತ್ರೆಗಳು ಶೇ.50ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆಗಳನ್ನು ಖರೀದಿಸಿ ದಾಸ್ತಾನು ಮಾಡಿಟ್ಟುಕೊಂಡಿವೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ ದೈನಿಕವು ವರದಿ ಮಾಡಿತ್ತು.

ಇಂಡಿಯನ್‌ ಎಕ್ಸ್‌ಪ್ರೆಸ್‌ ದೈನಿಕ ವರದಿ ಪ್ರಕಾರ ದೇಶದ 9 ಕಾರ್ಪೋರೇಟ್‌ ಆಿಸ್ಪತ್ರೆಗಳು ಮೇ ತಿಂಗಳಲ್ಲಿ 1.20 ಕೋಟಿ ಡೋಸ್‌ ಲಸಿಕೆಗಳನ್ನು ಖರೀದಿಸಿ ದಾಸ್ತಾನು ಮಾಡಿವೆ. ಇದಲ್ಲದೆ ನಗರ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿರುವ 300ಕ್ಕೂ ಹೆಚ್ಚು ಆಸ್ಪತ್ರೆಗಳು ಕೋವಿಡ್‌ ಲಸಿಕೆಗಳನ್ನು ದಾಸ್ತಾನು ಮಾಡಿಕೊಂಡಿತ್ತು ಎಂದು ವರದಿಯಿಂದ ತಿಳಿದು ಬಂದಿತ್ತು.

ಮೇ ತಿಂಗಳಲ್ಲಿ ಒಟ್ಟು ಉತ್ಪಾದನೆಯಾಗಿದ್ದ 7.94 ಕೋಟಿ ಪ್ರಮಾಣದ ಡೋಸ್‌ಗಳ ಪೈಕಿ 1.20 ಕೋಟಿಯಷ್ಟು ಡೋಸ್‌ಗಳು ಖಾಸಗಿ ಆಸ್ಪತ್ರೆಗಳು ಖರೀದಿಸಿದ್ದವು. ಇದು ಶೇ.15.6ರಷ್ಟಿದೆ. ಅಲ್ಲದೆ ಈ ಆಸ್ಪತ್ರೆಗಳು 22 ಲಕ್ಷ ಡೋಸ್‌ಗಳನ್ನು ಬಳಕೆ ಮಾಡಿವೆ. ಇದು ಶೇ.18ರಷ್ಟಿದೆ. ಇದೇ ಹೊತ್ತಿನಲ್ಲಿ ರಾಜ್ಯಗಳು ಕೇವಲ ಶೇ.33.5 ರಷ್ಟು ಎಂದರೆ ಕೇವಲ 2.66 ಕೋಟಿಯಷ್ಟು ಮತ್ತು ಕೇಂದ್ರ ಸರ್ಕಾರವು ಶೇ.50.9ರಷ್ಟು ಎಂದರೆ 4.03 ಕೋಟಿಯಷ್ಟು ಖರೀದಿಸಿತ್ತು.

ಬೆಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಅಪೋಲೋ ಸಮೂಹವು 2.90 ಲಕ್ಷ ಪ್ರಮಾಣದ ಕೋವಿಶೀಲ್ಡ್‌ ಡೋಸ್‌ಗಳನ್ನು ಖರೀದಿಸಿತ್ತು. ದೆಹಲಿಯಲ್ಲಿ ಮ್ಯಾಕ್ಸ್‌ ಹೆಲ್ತ್‌ ಕೇರ್‌ ಸಮೂಹವು 2.90 ಲಕ್ಷ ಕೋವಿಶೀಲ್ಡ್‌ ಡೋಸ್‌ಗಳನ್ನು ದಾಸ್ತಾನು ಮಾಡಿತ್ತು.

ಬೆಂಗಳೂರು ಹೊರತುಪಡಿಸಿ ದೇಶದ ಹಲವೆಡೆ ಇರುವ ಅಪೋಲೋ ಸಮೂಹದ ಆಸ್ಪತ್ರೆಗಳು 16.14 ಲಕ್ಷ ಡೋಸ್‌ಗಳನ್ನು ಖರೀದಿಸಿದ್ದವು. ಅದೇ ರೀತಿ ಮ್ಯಾಕ್ಸ್‌ ಹೆಲ್ತ್‌ಕೇರ್‌ ಸಮೂಹ (ಒಟ್ಟು 6 ಆಸ್ಪತ್ರೆಗಳು) 12.97 ಲಕ್ಷ ಡೋಸ್‌, ರಿಲೆಯನ್ಸ್‌ ಫೌಂಡೇಷನ್‌ ನಡೆಸುವ ಎಚ್‌ ಎನ್‌ ಆಸ್ಪತ್ರೆ ಟ್ರಸ್ಟ್‌ 9.89 ಲಕ್ಷ ಡೋಸ್‌, ಮೆಡಿಕಾ ಆಸ್ಪತ್ರೆಗಳು 6.26 ಲಕ್ಷ ಡೋಸ್‌, ಫೋರ್ಟೀಸ್‌ ಹೆಲ್ತ್‌ಕೇರ್‌ (8 ಆಸ್ಪತ್ರೆಗಳು) 4.48 ಲಕ್ಷ ಡೋಸ್‌, ಗೋದ್ರೆಜ್‌ 3.35 ಲಕ್ಷ ಡೋಸ್‌, ಮಣಿಪಾಲ್‌ ಹೆಲ್ತ್‌ ಗ್ರೂಪ್‌ 3.24 ಲಕ್ಷ ಡೋಸ್‌, ನಾರಾಯಣ ಹೃದಯಾಲಯ 2.02 ಲಕ್ಷ ಡೋಸ್‌, ಟೆಕ್ನೋ ಇಂಡಿಯಾ ಡಾಮಾ 2 ಲಕ್ಷ ಡೋಸ್‌ ಲಸಿಕೆಗಳನ್ನು ಖರೀದಿಸಿದ್ದವು.

ಬೆಂಗಳೂರು, ಕೋಲ್ಕತ್ತಾ, ಮುಂಬೈ ಮೆಟ್ರೋಪಾಲಿಟಿನ್‌ ಪ್ರದೇಶ, ಹೈದರಾಬಾದ್‌ನಲ್ಲಿ ಶೇ.80ರಷ್ಟು ಪ್ರಮಾಣದಲ್ಲಿ ಲಸಿಕೆಗಳನ್ನು ಕಾರ್ಪೋರೇಟ್‌ ಆಸ್ಪತ್ರೆಗಳು ಮೇ ತಿಂಗಳಲ್ಲಿ ದಾಸ್ತಾನು ಮಾಡಿದ್ದವು ಎಂದು ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿತ್ತು.

ಕೋವಿಡ್ ಲಸಿಕೆಗಳನ್ನು ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ವಾಣಿಜ್ಯೀಕರಣಕ್ಕೆ ಅನುವು ಮಾಡಿಕೊಟ್ಟಿದ್ದ ಕೇಂ ದ್ರ ಸರ್ಕಾರವು ತೀವ್ರ ಟೀಕೆಗೆ ಗುರಿಯಾಗಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts