ಲಸಿಕೆ ಕೊರತೆಗೆ ಕಾರಣ ಬಹಿರಂಗ; ಕೇಂದ್ರದ ಪಾಲು ಭರಿಸಿ 28 ಕೋಟಿ ಹೊರೆ?

ಬೆಂಗಳೂರು; ಲಸಿಕಾಕರಣ ಅಭಿಯಾನದ ಭಾಗವಾಗಿ ಕೇಂದ್ರ ಸರ್ಕಾರವು ತನ್ನ ಬದ್ಧತೆಯನ್ನು ಪೂರ್ಣಗೊಳಿಸಿರಲಿಲ್ಲ. ಅಲ್ಲದೆ ಕೇಂದ್ರ ಸರ್ಕಾರದ ಪಾಲನ್ನು ರಾಜ್ಯ ಸರ್ಕಾರವೇ ಭರಿಸಿತ್ತು. ರಾಜ್ಯದಲ್ಲಿ ಉದ್ಭವವಾಗಿರುವ ಲಸಿಕೆ ಹಾಹಾಕಾರಕ್ಕೆ ಇದೇ ಮೂಲ ಕಾರಣ ಎಂಬ ಹೊಸ ಅಂಶ ಇದೀಗ ಬಹಿರಂಗಗೊಂಡಿದೆ.

ರಾಜ್ಯದಲ್ಲೂ ಲಸಿಕಾಕರಣ ಅಭಿಯಾನವನ್ನು ಯಶಸ್ವಿಗೊಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಮೇ 20ರ ಪೂರ್ವದಲ್ಲಿಯೇ ಕೋವಿಶೀಲ್ಡ್‌ ಮತ್ತು ಕೊವಾಕ್ಸಿನ್‌ ಸೇರಿ ಸರಿಸುಮಾರು 8.94 ಲಕ್ಷ ಲಸಿಕೆಗಳನ್ನು ಖರೀದಿಸಿತ್ತು. ಕೇಂದ್ರ ಸರ್ಕಾರವು ಈ ಮೊದಲು ಮೊದಲ ಡೋಸ್‌ಗಳನ್ನು ಸರಬರಾಜು ಮಾಡಿತ್ತಾದರೂ ಎರಡನೇ ಡೋಸ್‌ನ್ನು ರಾಜ್ಯಕ್ಕೆ ನೀಡದ ಕಾರಣ ಕೇಂದ್ರ ಸರ್ಕಾರದ  ವರ್ಚಸ್ಸು ಕಾಪಾಡಲು ಹೋಗಿ ರಾಜ್ಯ ಸರ್ಕಾರವು ಅಂದಾಜು 28 ಕೋಟಿ ರು. ಹೊರೆಯನ್ನು ಮೈಮೇಲೆ ಎಳೆದುಕೊಂಡಿದೆ.

ಮೇ 20ಕ್ಕಿಂತ ಪೂರ್ವದಲ್ಲಿ ರಾಜ್ಯ ಸರ್ಕಾರವು 22.50 ಕೋಟಿ ರು. ವೆಚ್ಚದಲ್ಲಿ ಕೋವಿಶೀಲ್ಡ್‌ ಮತ್ತು 6 ಕೋಟಿ ಕೋಟಿ ವೆಚ್ಚದಲ್ಲಿ ಕೊವಾಕ್ಸಿನ್‌ ಲಸಿಕೆಯನ್ನು ಖರೀದಿಸಿತ್ತು. ಮೇ 20ರ ಪೂರ್ವದಲ್ಲಿ ರಾಜ್ಯಕ್ಕೆ 7.50 ಲಕ್ಷ ಕೋವಿಶೀಲ್ಡ್‌ ಮತ್ತು 1,44,170 ಕೊವಾಕ್ಸಿನ್‌ ಲಸಿಕೆಯನ್ನು ಖರೀದಿಸಿತ್ತು.

8.94 ಲಕ್ಷ ಲಸಿಕೆಗಳನ್ನು ರಾಜ್ಯ ಸರ್ಕಾರವು ಬಳಸಲು ಮುಂದಾಗಿತ್ತು. ಆದರೆ 45 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಸರ್ಕಾರವು 2ನೇ ಡೋಸ್‌ನ್ನು ಸರಬರಾಜು ಮಾಡಿರಲಿಲ್ಲ. ಹೀಗಾಗಿ 8.94 ಲಕ್ಷ ಲಸಿಕೆಗಳನ್ನು 45 ವರ್ಷ ಮೇಲ್ಪಟ್ಟವರಿಗೆ 2ನೇ ಡೋಸ್‌ಗೆ ಬಳಸಿಕೊಂಡಿತು. ಇದನ್ನು ರಾಜ್ಯ ಸರ್ಕಾರವು ಮುಚ್ಚಿಟ್ಟಿತು. ಲಸಿಕೆ ಹಾಹಾಕಾರಕ್ಕೆ ಇದೇ ಮೂಲ ಕಾರಣ ಎಂದು ಸರ್ಕಾರದ ಉನ್ನತ ಮೂಲಗಳು ‘ದಿ ಫೈಲ್‌’ಗೆ ತಿಳಿಸಿವೆ.

ಮೇ 20ರ ಪೂರ್ವದಲ್ಲಿ 45 ವರ್ಷ ಮೇಲ್ಪಟ್ಟವರಿಗೆ 70-80ರಿಂದ ಲಕ್ಷ ಡೋಸ್‌ಗಳನ್ನು ಮೊದಲ ಹಂತದಲ್ಲಿ ಹಾಕಲಾಗಿತ್ತು. ಇದೇ ಪ್ರಮಾಣದಲ್ಲಿ 2ನೇ ಡೋಸ್‌ಗೂ ನೀಡಬೇಕಿತ್ತು. ಆದರೆ ತನ್ನ 2ನೇ ಡೋಸ್‌ ಪಾಲನ್ನು ನೀಡಬೇಕಿದ್ದ ಬದ್ಧತೆಯಿಂದ ಕೇಂದ್ರ ಸರ್ಕಾರವು ಹಿಂದೆ ಸರಿದಿತ್ತು. ಇದನ್ನು ಮುಚ್ಚಿಡಲು ರಾಜ್ಯ ಬಿಜೆಪಿ ಸರ್ಕಾರವು ಲಸಿಕೆಗಳನ್ನು ಪಡೆಯಲು ಆರಂಭದಲ್ಲಿ ಯಾರೂ ಮುಂದೆ ಬಾರದ ಕಾರಣ ಅವೆಲ್ಲವೂ ವ್ಯರ್ಥವಾಯಿತು ಎಂದು ಸುಳ್ಳು ಹೇಳಿತ್ತು ಎಂದು ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮದ ಹಿರಿಯ ಅಧಿಕಾರಿಯೊಬ್ಬರು ‘ದಿ ಫೈಲ್‌’ನೊಂದಿಗೆ ಮಾಹಿತಿ ಹಂಚಿಕೊಂಡರು.

ಕೇಂದ್ರ ಸರ್ಕಾರದ ಪಾಲನ್ನು ಭರಿಸಿರುವ ರಾಜ್ಯ ಸರ್ಕಾರಕ್ಕೆ 28 ಕೋಟಿ ರು.ಗಳನ್ನು ನೀಡಬೇಕು ಇಲ್ಲವೇ ಇದೇ ವೆಚ್ಚದಲ್ಲಿ ಲಸಿಕೆಗಳನ್ನು ಒದಗಿಸಬೇಕು. ಇಲ್ಲವಾದಲ್ಲಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಇದರ ಹೊರೆ ಬೀಳಲಿದೆ ಎಂದು ಹೇಳಲಾಗುತ್ತಿದೆ.

ಮೇ 25ರ ಅಂತ್ಯಕ್ಕೆ ಕೇಂದ್ರ ಸರ್ಕಾರವು ಶೇ.66ರಷ್ಟು ಡೋಸ್‌ಗಳನ್ನು 10 ರಾಜ್ಯಗಳಿಗೆ ಒದಗಿಸಿದೆ. ಈ ಪೈಕಿ ಕರ್ನಾಟಕಕ್ಕೆ ಶೇ.6.17ರಷ್ಟು ಅಂದರೆ 1,20,88,649 ಡೋಸ್‌ಗಳನ್ನು ಹಂಚಿಕೆ ಮಾಡಿದೆ. ಗುಜರಾತ್‌ಗೆ ಶೇ. 7.91 ಪ್ರಮಾಣದಲ್ಲಿ ಒಟ್ಟು1,55,15,181 ಡೋಸ್‌ ನೀಡಿದೆ. ಉತ್ತರ ಪ್ರದೇಶಕ್ಕೆ ಶೇ.8.29ರಷ್ಟು ಅಂದರೆ ಒಟ್ಟು 1,62,55,150, ಆಂಧ್ರಪ್ರದೇಶಕ್ಕೆ 79,15,178, ಕೇರಳಕ್ಕೆ 86,47,923, ಬಿಹಾರಕ್ಕೆ 96,79,108, ಮಧ್ಯ ಪ್ರದೇಶಕ್ಕೆ 99,50,799, ಪಶ್ಚಿಮ ಬಂಗಾಳಕ್ಕೆ 1,31,43,523, ರಾಜಸ್ಥಾನಕ್ಕೆ 1,60,33,767, ಮಹಾರಾಷ್ಟ್ರಕ್ಕೆ 2,07,60193 ಡೋಸ್‌ಗಳನ್ನು ನೀಡಿದೆ.

ಮೊದಲ ಹಂತದ ಲಸಿಕೆ ಕಾರ್ಯಕ್ರಮದಲ್ಲಿ ಆರೋಗ್ಯ ಸೇವಾ ಸಿಬ್ಬಂದಿ ಮತ್ತು ಕೋವಿಡ್‌ ಮುಂಚೂಣಿ ಕಾರ್ಯಕರ್ತರಿಗಷ್ಟೇ ಲಸಿಕೆ ನೀಡಲಾಗಿತ್ತು. ಈ ಅವಧಿಯಲ್ಲಿ ಪ್ರತಿದಿನ ಅತ್ಯಂತ ಕಡಿಮೆ ಡೋಸ್‌ ಲಸಿಕೆ ನೀಡಿತ್ತಾದರೂ ಆನಂತರ ಪ್ರತಿದಿನ ನೀಡಲಾದ ಲಸಿಕೆಯ ಡೋಸ್‌ಗಳ ಸಂಖ್ಯೆ ಏರಿಕೆಯಾಗಿತ್ತು. ಆದರೆ, ಲಸಿಕೆಯ ಕೊರತೆ ಕಾಡಿದ ಕಾರಣ ಏಪ್ರಿಲ್‌ನ ನಂತರ ಪ್ರತಿದಿನ ನೀಡಲಾಗುತ್ತಿರುವ ಲಸಿಕೆಯ ಡೋಸ್‌ಗಳ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದ್ದನ್ನು ಸ್ಮರಿಸಬಹುದು.

ದೇಶಕ್ಕೆ ಪೂರೈಕೆ ಮಾಡಿರುವುದಕ್ಕಿಂತ ಹೆಚ್ಚಿನ ಲಸಿಕೆಯನ್ನು ವಿದೇಶಗಳಿಗೆ ರಫ್ತು ಮಾಡಲಾಗಿದೆ. ಇದರಿಂದಲೇ ದೇಶದಲ್ಲಿ ಲಸಿಕೆ ಕೊರತೆ ಉಂಟಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು.

‘ಇದು ನಿಜಕ್ಕೂ ಆಘಾತಕಾರಿ. ಒಕ್ಕೂಟ ಸರ್ಕಾರ ಮತ್ತು ಅದರ ಪರವಾಗಿರುವ ಪ್ರೊಪಗಂಡ ಐಟಿಸೆಲ್ ಗಳು ಹಬ್ಬಿಸುವ ಸುಳ್ಳಿನ ಸರಮಾಲೆಗಳಿಗೆ ಇದು ಸಾಕ್ಷಿ. ಲಸಿಕೆ ಹಾಕಿಸಿಕೊಳ್ಳಲು ಜನರು ಮುಂದೆ ಬಾರದ ಕಾರಣ ವಿದೇಶಕ್ಕೆ ರಫ್ತು ಮಾಡಲಾಯಿತು ಎಂದೇ ಇವರೆಲ್ಲ ಹೇಳಿಕೊಂಡು ಬರುತ್ತಿದ್ದಾರೆ. ಆದರೆ ಮೊದಲನೇ ಡೋಸ್ ಪಡೆದವರಿಗೆ ಎರಡನೇ ಡೋಸ್ ಲಸಿಕೆಗಳನ್ನು ಕಳಿಸಲು ಒಕ್ಕೂಟ ಸರ್ಕಾರಕ್ಕೆ ಯಾರು ಅಡ್ಡಿಯಾಗಿದ್ದರು? ಕರ್ನಾಟಕದಲ್ಲಿ 45 ವರ್ಷ ಮೀರಿದ್ದ 70ಲಕ್ಷಕ್ಕೂ ಹೆಚ್ಚು ಜನರು ಲಸಿಕೆ ಪಡೆದಿದ್ದರು. ಅವರಿಗೆ ಎರಡನೇ ಡೋಸ್ ಕೊಡುವುದೂ ಸಹ ಮೋದಿ ಸರ್ಕಾರದ ಉತ್ತರದಾಯಿತ್ವವಾಗಿತ್ತು. ಯಾಕೆಂದರೆ ಮೇ.1ರವರೆಗೆ ನೇರವಾಗಿ ಲಸಿಕೆ ಖರೀದಿಸುವ ಹಕ್ಕನ್ನು ರಾಜ್ಯ ಸರ್ಕಾರಗಳಿಗೆ ನೀಡಿಯೇ ಇರಲಿಲ್ಲ, ಪ್ರತಿಯೊಂದನ್ನು ಒಕ್ಕೂಟ ಸರ್ಕಾರವೇ ನಿರ್ವಹಿಸುತ್ತಿತ್ತು,’ ಎನ್ನುತ್ತಾರೆ ಕರ್ನಾಟಕ ರಕ್ಷಣಾ ವೇದಿಕೆಯ ಸಾಮಾಜಿಕ ಜಾಲತಾಣದ ಮುಖ್ಯಸ್ಥರಾದ ದಿನೇಶ್‌ಕುಮಾರ್‌.

‘ಭಾರತವು ತನ್ನ ಸ್ವಂತಕ್ಕೆ ಬಳಸಿದ ಡೋಸ್‌ಗಳಿಗಿಂತ ಹೆಚ್ಚಿನ ಡೋಸ್‌ಗಳನ್ನು ವಿದೇಶಕ್ಕೆ ರಫ್ತು ಮಾಡಿದೆ’ ಎಂದು 2021ರ ಮಾರ್ಚ್‌ 27ರಂದು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ರಾಯಭಾರಿ ಕೆ.ನಾಗರಾಜು ನಾಯ್ಡು ಹೇಳಿಕೆ ನೀಡಿದ್ದರು. ಆ ಅವಧಿಯಲ್ಲಿ ದೇಶದ ಎಲ್ಲಾ ರಾಜ್ಯಗಳಿಗೆ ಎಷ್ಟು ಡೋಸ್ ಲಸಿಕೆ ಪೂರೈಕೆ ಮಾಡಲಾಗಿತ್ತು ಎಂಬುದರ ನಿಖರ ಮಾಹಿತಿ ಲಭ್ಯವಿಲ್ಲವಾದರೂ ದೇಶದಾದ್ಯಂತ ಜನರಿಗೆ 5.5 ಕೋಟಿ ಡೋಸ್‌ ಲಸಿಕೆ ನೀಡಿತ್ತು.

ಈ ಎರಡೂ ಕಂಪನಿಗಳು ಈವರೆಗೆ ತಯಾರಿಸಿದ ಒಟ್ಟು ಲಸಿಕೆಯ ಡೋಸ್‌ಗಳಲ್ಲಿ, ಮೇ 18ರವರೆಗೆ 20 ಕೋಟಿ ಡೋಸ್‌ ಅನ್ನು ಮಾತ್ರ ರಾಜ್ಯ ಸರ್ಕಾರಗಳಿಗೆ ಪೂರೈಕೆ ಮಾಡಿತ್ತು. ಜನವರಿ 22ರಿಂದ ಮೇ 19ರವರೆಗೆ ವಿದೇಶಗಳಿಗೆ 6.63 ಕೋಟಿ ಡೋಸ್‌ ಸರಬರಾಜು ಮಾಡಿತ್ತು. ಮಾರ್ಚ್ 27ರ ನಂತರ 19.6 ಲಕ್ಷ ಡೋಸ್‌ಗಳನ್ನು ಮಾತ್ರ ವಿದೇಶಗಳಿಗೆ ರಫ್ತು ಮಾಡಲಾಗಿತ್ತು. ವಿದೇಶಗಳಿಗೆ ಪೂರೈಕೆ ಮಾಡಿರುವ 6.63 ಕೋಟಿ ಡೋಸ್‌ನಲ್ಲಿ 19.6 ಲಕ್ಷ ಡೋಸ್‌ಗಳನ್ನು ತೆಗೆದರೆ, 6.40 ಕೋಟಿ ಡೋಸ್‌ಗಳನ್ನು ಮಾತ್ರ ಮಾರ್ಚ್ 27ರವರೆಗೆ ರಫ್ತು ಮಾಡಲಾಗಿದೆ ಎಂಬ ಮಾಹಿತಿಯು ಚರ್ಚೆಗೆ ಗ್ರಾಸವಾಗಿತ್ತು.

ಈ ಮೊದಲೇ ಮೊದಲ ಡೋಸ್ ಹಾಕಿಸಿಕೊಂಡವರಿಗೆ ಒಕ್ಕೂಟ ಸರ್ಕಾರ ಎರಡನೇ ಡೋಸ್ ಸರಬರಾಜು ಮಾಡದೆ ತನ್ನ‌ ಹೊಣೆಗಾರಿಕೆಯಿಂದ ನುಣುಚಿಕೊಂಡ ಪರಿಣಾಮ, ರಾಜ್ಯ ಸರ್ಕಾರ ತಾನು ಖರೀದಿಸಿದ ಲಸಿಕೆಯನ್ನು ಅನಿವಾರ್ಯವಾಗಿ ಎರಡನೇ ಡೋಸೇಜ್ ಗಾಗಿ ಬಳಸಿಕೊಂಡಿದೆ. ಇದು‌ ಹೇಗಿದೆಯೆಂದರೆ ಮೋದಿ ಸರ್ಕಾರದ ಮಾನ ಮುಚ್ಚಲು ರಾಜ್ಯ ಸರ್ಕಾರವೇ ಕಳಂಕ‌ ಹೊತ್ತುಕೊಂಡಿದೆ. ಜತೆಗೆ ಹಣವನ್ನೂ ಕಳೆದುಕೊಂಡಿದೆ. ರಾಜ್ಯದಲ್ಲಿ ಬೇರೆ ಪಕ್ಷದ ಸರ್ಕಾರ ಇದ್ದಿದ್ದರೆ ಒಕ್ಕೂಟ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಇಳಿಯುತ್ತಿತ್ತು, ಕಾನೂನು ಹೋರಾಟಕ್ಕೆ ಮುಂದಾಗುತ್ತಿತ್ತು. ಆದರೆ ರಾಜ್ಯದಲ್ಲಿ ಇರುವುದು ಹೈಕಮಾಂಡ್ ಗುಲಾಮಗಿರಿ. ಇವರು ಬಾಯಿ ತೆರೆಯುವುದಿಲ್ಲ.

ದಿನೇಶ್‌ಕುಮಾರ್‌ ಎಸ್‌ ಸಿ, ಮುಖ್ಯಸ್ಥರು

ಕರವೇ ಸಾಮಾಜಿಕ ಜಾಲತಾಣ

ಮೇ 1ರಿಂದ ಮೇ 18ರವರೆಗೆ ಕೇವಲ 2.9 ಕೋಟಿ ಡೋಸ್‌ ಲಸಿಕೆ ನೀಡಲಾಗಿತ್ತು. ಮೇ ಅಂತ್ಯದವರೆಗೆ ನೀಡಲು ಇನ್ನು 1.2 ಕೋಟಿ ಡೋಸ್‌ ಲಸಿಕೆ ಮಾತ್ರವೇ ಉಳಿದಿದೆ ಎಂದು ಗೊತ್ತಾಗಿದೆ. ಅಂದರೆ ಮೇ ಅಂತ್ಯದ ವೇಳೆಗೆ 4 ಕೋಟಿ ಡೋಸ್‌ಗಳನ್ನಷ್ಟೇ ನೀಡಲು ಸಾಧ್ಯ. ಪ್ರತಿ ತಿಂಗಳು ಕೇವಲ 4 ಕೋಟಿ ಡೋಸ್‌ ಲಸಿಕೆ ನೀಡಿದಲ್ಲಿ ದೇಶದ ಶೇ 98ರಷ್ಟು ಜನರಿಗೆ ಲಸಿಕೆ ನೀಡಲು ಇನ್ನೂ 60 ತಿಂಗಳು ಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ.

SUPPORT THE FILE

Latest News

Related Posts