ನಿರ್ದೇಶಕ ಸೇರಿ 20 ಅಧಿಕಾರಿ, ನೌಕರರು ದೋಷಮುಕ್ತ; ಸಿಎಜಿ ವರದಿ ಕಡೆಗಣಿಸಿದರೇ ಸುರೇಶ್‌ಕುಮಾರ್‌?

ಬೆಂಗಳೂರು; ಇ-ಆಡಳಿತ ಇಲಾಖೆಯೊಂದಿಗೆ ಸಮಾಲೋಚಿಸದೆಯೇ ಕಂಪ್ಯೂಟರ್‌ ಸೇರಿದಂತೆ ಇನ್ನಿತರೆ ಎಲೆಕ್ಟ್ರಾನಿಕ್‌ ಸಾಧನಗಳನ್ನು ಖರೀದಿಸಿಯೂ ಬಳಕೆ ಮಾಡದೇ ದಾಸ್ತಾನಿನಲ್ಲಿ ಕೂಡಿಟ್ಟು 82.34 ಲಕ್ಷ ರು. ನಿಷ್ಫಲ ವೆಚ್ಚದ ಪ್ರಕರಣವನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯು ಮುಕ್ತಾಯಗೊಳಿಸಿದೆ.

ಅಲ್ಲದೆ ಪ್ರಕರಣದಲ್ಲಿ ಆರೋಪಕ್ಕೆ ಗುರಿಯಾಗಿದ್ದ ಸರ್ಕಾರಿ ಮುದ್ರಣ, ಲೇಖನ ಸಾಮಗ್ರಿ ಕಾರ್ಯಾಲಯದ ಕಾರಣರಾದ ಐಎಎಸ್‌ ಅಧಿಕಾರಿ ರವಿಶಂಕರ್‌ (ಈಗ ನಿವೃತ್ತರು) ಸೇರಿದಂತೆ ಒಟ್ಟು 20 ಅಧಿಕಾರಿ, ನೌಕರರ ವಿರುದ್ಧ ಕ್ರಮ ಕೈಗೊಳ್ಳದೆಯೇ ಇಲಾಖೆಯು ಅವರೆಲ್ಲರನ್ನೂ ದೋಷಮುಕ್ತಗೊಳಿಸಿ ಆದೇಶ ಹೊರಡಿಸಿದೆ. ಆರೋಪಿಗಳನ್ನು ದೋಷಮುಕ್ತಗೊಳಿಸಲು ಸಚಿವ ಎಸ್‌ ಸುರೇಶ್‌ಕುಮಾರ್‌ ಅವರು ಅನುಮೋದಿಸಿದ್ದಾರೆ ಎಂದು ತಿಳಿದು ಬಂದಿದೆ.

ಸರ್ಕಾರಕ್ಕೆ ನಷ್ಟವುಂಟಾಗಿದ್ದ ಈ ಪ್ರಕರಣದಲ್ಲಿ ಐಎಎಸ್‌ ಅಧಿಕಾರಿ ರವಿಶಂಕರ್‌(ನಿವೃತ್ತ ನಿರ್ದೇಶಕ), ಸಹಾಯಕ ನಿರ್ದೇಶಕ ಬಿ ಎನ್‌ ಟಿ ಗೌಡ ಸೇರಿದಂತೆ ಒಟ್ಟು 20 ಅಧಿಕಾರಿ ನೌಕರರ ವಿರುದ್ಧ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯು ರಚಿಸಿದ್ದ ತ್ರಿಸದಸ್ಯ ಸಮಿತಿಯು ತನಿಖೆ ನಡೆಸಿತ್ತು. ಹೆಚ್ಚಿನ ಪ್ರಮಾಣದಲ್ಲಿ ಸಾಮಗ್ರಿಗಳನ್ನು ಖರೀದಿಸಿ ಸರ್ಕಾರಕ್ಕೆ ನಷ್ಟವುಂಟು ಮಾಡಿದ್ದ ಅಧಿಕಾರಿ, ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು  ತಿಳಿಸಿದ್ದ ಇಲಾಖೆಯು, ಇದೀಗ ಇದ್ದಕ್ಕಿದ್ದಂತೆ ಎಲ್ಲಾ ಆರೋಪಿತ ಅಧಿಕಾರಿಗಳನ್ನು ದೋಷಮುಕ್ತಗೊಳಿಸಿ ಆದೇಶ ಹೊರಡಿಸಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

ವಿಶೇಷವೆಂದರೆ ಪ್ರಧಾನಮಹಾಲೇಖಪಾಲರು (ಸಿಎಜಿ ವರದಿ ಕಂಡಿಕೆ ಸಂಖ್ಯೆ 3.6) 2016ರಲ್ಲಿ ಈ ಪ್ರಕರಣವನ್ನು ಹೊರಗೆಡವಿದ್ದರು. ಆ ನಂತರ ಪ್ರಕರಣವನ್ನು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯು ಕೈಗೆತ್ತಿಕೊಂಡಿತ್ತು. ಮತ್ತೊಂದು ವಿಶೇಷ ಸಂಗತಿ ಎಂದರೆ ಪ್ರಕರಣದ ಕುರಿತು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯು 2021ರ ಏಪ್ರಿಲ್‌ 6ರಂದು ನಡೆದ ಸಭೆಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯು ಹಾಜರಾಗಿ ಮಾಹಿತಿ ನೀಡುವ ಮುನ್ನವೇ ನಿರ್ದೇಶಕರು ಸೇರಿದಂತೆ ಇತರೆ ಆರೋಪಿಗಳನ್ನು 2021ರ ಏಪ್ರಿಲ್‌ 5ರಂದೇ ದೋಷಮುಕ್ತಗೊಳಿಸಿ ಆದೇಶ ಹೊರಡಿಸಲಾಗಿದೆ. ಈ ಆದೇಶದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಪ್ರಕರಣದ ಕುರಿತು ಇಲಾಖೆಯು ನಡೆಸಿದ್ದ ಪ್ರಾಥಮಿಕ ತನಿಖೆ ವರದಿಯನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಸಲ್ಲಿಸದೆಯೇ ಆರೋಪಿಗಳನ್ನು ಇಲಾಖೆ ಹಂತದಲ್ಲಿಯೇ ದೋಷಮುಕ್ತಗೊಳಿಸಿರುವುದಕ್ಕೆ ಲೆಕ್ಕಪತ್ರ ಸಮಿತಿಯು ಗಂಭೀರವಾಗಿ ಪರಿಗಣಿಸಿದೆ. ಏಪ್ರಿಲ್‌ 6ರಂದು ನಡೆದ ಸಭೆಯಲ್ಲಿ ಸಮಿತಿಯ ಬಹುತೇಕ ಸದಸ್ಯರು ಇಲಾಖೆಯ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರಲ್ಲದೆ ಆರೋಪಿಗಳನ್ನು ದೋಷಮುಕ್ತಗೊಳಿಸಿರುವ ಇಲಾಖೆಯ ಕ್ರಮವನ್ನು ಒಪ್ಪದಿರಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

ಪ್ರಕರಣದ ಹಿನ್ನೆಲೆ

ಸರ್ಕಾರಿ ಕೇಂದ್ರ ಮುದ್ರಣಾಲಯವು ವಿವಿಧ ಕಚೇರಿಗಳ ಅಗತ್ಯತೆಗಳನ್ನು ನಿರ್ದಿಷ್ಟವಾಗಿ ತಿಳಿದುಕೊಳ್ಳದೆಯೇ ಪ್ರಿಂಟರ್‌, ಕಾಟ್ರಿಡ್ಜ್‌, ಟೋನರ್‌ ಮತ್ತು ಎಲೆಕ್ಟ್ರಾನಿಕ್‌ ವಸ್ತುಗಳ ಖರೀದಿಗಾಗಿ 2008ರಲ್ಲಿ ಟೆಂಡರ್‌ ಕರೆದಿತ್ತು. ಆ ನಂತರ 2009ರಲ್ಲಿ 61.74 ಲಕ್ಷ ಮೊತ್ತದ ಖರೀದಿ ಆದೇಶಗಳನ್ನು ನೀಡಿತ್ತು. ಇದಾದ ನಂತರ 2009ರ ಜೂನ್‌ನಲ್ಲಿ ದರಗುತ್ತಿಗೆ ಆಧಾರದ ಮೇಲೆ ಆಯ್ಕೆ ಮಾಡಲಾದ ಸರಬರಾಜುದಾರರಿಂದ ಖರೀದಿ ಮಾಡಿತ್ತು. ಈ ರೀತಿ 2008-09ರಿಂದ 2012-13ರ ಮಧ್ಯೆ ಒಟ್ಟು 144.29 ಲಕ್ಷ ಮೌಲ್ಯದ ವಸ್ತುಗಳನ್ನು ಮುದ್ರಣಾಲಯವು ಖರೀದಿಸಿತ್ತು.

ಸಿಎಜಿ ವರದಿಯಲ್ಲೇನಿತ್ತು?

ಪ್ರಕರಣದ ಕುರಿತು ಮುದ್ರಣಾಲಯದ ದಾಖಲೆಗಳನ್ನು ಪರಿಶೀಲಿಸಿದ್ದ ಸಿಎಜಿಯು ಬಳಕೆದಾರರ ಅವಶ್ಯಕತೆಗಳನ್ನು ತಿಳಿದುಕೊಳ್ಳದೆಯೇ ಮತ್ತು ಇ-ಆಡಳಿತ ಇಲಾಖೆಯೊಂದಿಗೆ ಸಮಾಲೋಚಿಸದೆಯೇ ಕಂಪ್ಯೂಟರ್‌ ಸೇರಿದಂತೆ ಎಲೆಕ್ಟ್ರಾನಿಕ್‌ ಸಾಧನಗಳನ್ನು ಖರೀದಿಸಿತ್ತು. ಆದರೆ ಅವುಗಳನ್ನು ಬಳಕೆ ಮಾಡಿರಲಿಲ್ಲ. ಮುದ್ರಣಾಲಯದ ಕ್ರಮವು ಅಧಿಕ ದಾಸ್ತಾನನ್ನು ಖರೀದಿಸಿ ಶೇಖರಿಸಿಡಲಾಗಿತ್ತು. ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಬಳಕೆ ಮಾಡದ ಕಾರಣ ದಾಸ್ತಾನಿನ ಮೇಲೆ ಭರಿಸಿದ್ದ 82.44 ಲಕ್ಷ ವೆಚ್ಚವು ನಿಷ್ಫಲವಾಗಿತ್ತು ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿತ್ತು.

‘ಸರ್ಕಾರದ ಕಚೇರಿಗಳಿಗೆ ಅಗತ್ಯವಿರುವ ಸಾಮಗ್ರಿಗಳ ಬೇಡಿಎಕಗಳನ್ನು ಪೂರೈಸುವ ಸಂದರ್ಭದಲ್ಲಿ ಆಡಳಿತಾತ್ಮಕ/ತಾಂತ್ರಿಕ ಪರಿಣಾಮಗಳು ತಲೆದೋರಿರುತ್ತವೆ. ಖರೀದಿ ನಿಯಮ, ಕೆಎಫ್‌ಸಿ, ಕೆಟಿಪಿಪಿ ಕಾಯ್ದೆ ಮತ್ತು ಮುದ್ರಣ ಮ್ಯಾನುಯಲ್‌ ನಿಯಮಗಳನ್ನು ಪಾಲಿಸದ ಕಾರಣ 82.34 ಲಕ್ಷ ಮೊತ್ತದ ಕಾಟ್ರಿಡ್ಜ್‌ಗಳು ಉಳಿಕೆಯಾಗಿ ಆರ್ಥಿಕ ನಷ್ಟವಾಗಿದೆ,’ ಎಂದು ಕಾರಣವನ್ನು ಮುಂದೊಡ್ಡಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯು ಎಲ್ಲಾ ಆರೋಪಿ ಅಧಿಕಾರಿ, ಸಿಬ್ಬಂದಿಯನ್ನು ದೋಷಮುಕ್ತಗೊಳಿಸಿರುವುದು ಆದೇಶದಿಂದ ಗೊತ್ತಾಗಿದೆ.

ಇಲಾಖೆಯು ತನಿಖಾ ವರದಿಯನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಸಲ್ಲಿಸದೆಯೇ ಏಕಾಏಕೀ ಆರೋಪಿಗಳನ್ನು ದೋಷಮುಕ್ತಗೊಳಿಸಿರುವುದು ಸಿಎಜಿ ವರದಿಯನ್ನು ಕಡೆಗಣಿಸಿದಂತಾಗಿದೆ.

SUPPORT THE FILE

Latest News

Related Posts