7,537 ಎಕರೆಯಲ್ಲಿ ಕೈಗಾರಿಕೆ ಸ್ಥಾಪಿಸದ ಮಿತ್ತಲ್‌,ಗಾಲ್ವಾ;ನೋಟೀಸ್‌ ನೀಡಿ ಕೈತೊಳೆದುಕೊಂಡ ಸರ್ಕಾರ

ಬೆಂಗಳೂರು; ಜಾಗತಿಕ ಉಕ್ಕು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಆರ್ಸೆಲರ್ ಮಿತ್ತಲ್ ಮತ್ತು ಉತ್ತಮ್‌ ಗಾಲ್ವಾ ಫೆರೋಸ್‌ ಲಿಮಿಟೆಡ್‌ ಕಂಪನಿಗೆ 7,537 ಎಕರೆ ಜಮೀನು ಹಂಚಿಕೆ ಮಾಡಿ 10 ವರ್ಷ ಕಳೆದರೂ ಯೋಜನೆ ಅನುಷ್ಠಾನಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಎರಡೂ ಕಂಪನಿಗೆ ಭೂ ಸ್ವಾಧೀನ ಸಂಬಂಧ ಭೂ ಬೆಲೆ ನಿಗದಿಯಲ್ಲಿ ನಡೆದಿದೆ ಎನ್ನಲಾಗಿರುವ 4 ಸಾವಿರ ಕೋಟಿ ರೂ. ಮೊತ್ತದ ಭಾರೀ ಹಗರಣವನ್ನು ತನಿಖೆಗೂ ಒಳಪಡಿಸಿಲ್ಲ.

ಬಳ್ಳಾರಿಯ ಸಂಡೂರು ತಾಲೂಕಿನ ಕುಡಿತಿನಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಆರ್ಸೆಲರ್‌ ಮಿತ್ತಲ್‌ ಇಂಡಿಯಾ ಲಿಮಿಟೆಡ್‌ಗೆ 2,659.75 ಎಕರೆ, ಉತ್ತಮ್‌ ಗಾಲ್ವಾ ಫೆರೋಸ್‌ ಲಿಮಿಟೆಡ್‌ಗೆ 4,877.81 ಎಕರೆ ಜಮೀನನ್ನು ಕೈಗಾರಿಕೆ ನಿರ್ಮಾಣ ಉದ್ಧೇಶಕ್ಕೆ ಜಮೀನು ಹಂಚಿಕೆ ಮಾಡಿತ್ತು. ಹಂಚಿಕೆಯಾಗಿ 8 ವರ್ಷದ ಬಳಿಕ ಆರ್ಸೆಲರ್‌ ಮಿತ್ತಲ್‌ ಕಂಪನಿಯು 2018ರಲ್ಲಿ ಗುತ್ತಿಗೆ ಕರಾರು ಪತ್ರ ಮಾಡಿಕೊಂಡಿದ್ದರೆ, ಉತ್ತಮ್‌ ಗಾಲ್ವಾ ಫೆರೋಸ್‌ ಲಿಮಿಟೆಡ್‌ 2017ರಲ್ಲಿ ಗುತ್ತಿಗೆ ಕರಾರು ಪ್ರಕ್ರಿಯೆ ಪೂರ್ಣಗೊಳಿಸಿದೆ. ಈ ಪ್ರಕ್ರಿಯೆ ನಡೆದು 2 ವರ್ಷಗಳಾದರೂ ಯೋಜನೆಯನ್ನು ಅನುಷ್ಠಾನಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ.

ಸಾವಿರಾರು ಎಕರೆ ಜಮೀನಿನಲ್ಲಿ ಉದ್ದೇಶಿತ ಯೋಜನೆಯನ್ನು ಅನುಷ್ಠಾನಗೊಳಿಸಲು ಯಾವುದೇ ಕ್ರಮ ಕೈಗೊಳ್ಳದ ಕಾರಣ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಈ ಎರಡೂ ಕಂಪನಿಗಳಿಗೆ 2020ರ ನವೆಂಬರ್‌ 27ರಂದು ತಿಳಿವಳಿಕೆ ನೋಟೀಸ್‌ ಜಾರಿಗೊಳಿಸಿರುವುದು ತಿಳಿದು ಬಂದಿದೆ. ಈ ಕುರಿತು ಸಚಿವ ಜಗದೀಶ್‌ ಶೆಟ್ಟರ್‌ ಅವರು ವಿಧಾನಸಭೆಯಲ್ಲಿ ಲಿಖಿತ ಉತ್ತರ ಒದಗಿಸಿದ್ದಾರೆ. ಸಂಡೂರಿನ ಶಾಸಕ ಈ ತುಕಾರಾಮ್‌ ಅವರು ಚುಕ್ಕೆ ಗುರುತಿಲ್ಲದ ಪ್ರಶ್ನೆ ಕೇಳಿದ್ದರು.

50,000 ಕೋಟಿ ರೂ ಮೊತ್ತದೊಂದಿಗೆ ಎಸ್ಸಾರ್ ಕಂಪೆನಿಯನ್ನು ಸ್ವಾಧೀನಪಡಿಸಿಕೊಂಡಿರುವ ಜಾಗತಿಕ ದೈತ್ಯ ಉಕ್ಕಿನ ಕಂಪನಿ ಆರ್ಸೆಲರ್ ಮಿತ್ತಲ್, ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ಉಕ್ಕು ಯೋಜನೆಗಳನ್ನು ವಿಸ್ತರಿಸಲು ಯೋಜಿಸಿದೆ. ಆದರೆ ಕರ್ನಾಟಕದಲ್ಲಿ ಉದ್ಧೇಶಿತ ಕೈಗಾರಿಕೆಯನ್ನು ಈವರೆವಿಗೂ ಸ್ಥಾಪಿಸಲು ಯಾವುದೇ ಕ್ರಮಕೈಗೊಂಡಿಲ್ಲ.

2010ರಲ್ಲಿ ನಡೆದಿದ್ದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ (ಜಿಮ್) ವೇಳೆ, ಬಳ್ಳಾರಿಯಲ್ಲಿ 30 ಸಾವಿರ ಕೋಟಿ ರೂ. ಬಂಡವಾಳ ಹೂಡಿ, 6 ಮಿಲಿಯನ್ ಟನ್ ಕಬ್ಬಿಣ ಉತ್ಪಾದಿಸುವ ಕೈಗಾರಿಕೆ ಸ್ಥಾಪನೆಗೆ ಆರ್ಸೆಲರ್ ಮಿತ್ತಲ್ ಇಂಡಿಯಾ ಲಿಮಿಟೆಡ್ ಕಂಪನಿ ಒಪ್ಪಂದ ಮಾಡಿಕೊಂಡಿತ್ತು. ಆದರೆ, ನಂತರ ಕೆಲವು ಕಾರಣಗಳನ್ನು ಮುಂದಿಟ್ಟಿದ್ದ ಈ ಕಂಪನಿ, ಸೋಲಾರ್ ಪ್ಲಾಂಟ್ ಸ್ಥಾಪನೆಗೆ ಅವಕಾಶ ನೀಡುವಂತೆ ರಾಜ್ಯ ಸರಕಾರಕ್ಕೆ ಕೋರಿತ್ತು. ಕಬ್ಬಿಣ ಉತ್ಪಾದಿಸುವ ಕೈಗಾರಿಕೆ ಸ್ಥಾಪನೆ ಉದ್ದೇಶದಿಂದ ಈ ಕಂಪನಿ ಇದ್ದಕ್ಕಿದ್ದಂತೆ ಹಿಂದಕ್ಕೆ ಸರಿದಿತ್ತು.

ಆದರೆ ಸೋಲಾರ್‌ ಪವರ್‌ ಘಟಕವನ್ನೂ ಸ್ಥಾಪಿಸದ ಮಿತ್ತಲ್‌ ಕಂಪನಿಯ ಧೋರಣೆಯಿಂದ 10 ಸಾವಿರ ಜನರ ಉದ್ಯೋಗದ ಕನಸು ಕಮರಿ ಹೋಗಿತ್ತು. ಆರ್ಸೆಲರ್‌ ಮಿತ್ತಲ್‌ ಉಕ್ಕಿನ ಕಾರ್ಖಾನೆಗೆ ವಶಪಡಿಸಿಕೊಂಡ ಜಮೀನಿನಲ್ಲಿ ಉಕ್ಕಿನ ಕಾರ್ಖಾನೆ ಸ್ಥಾಪನೆಯಾಗದೇ, ಈ ಜಮೀನುಗಳಲ್ಲಿ ಸೌರವಿದ್ಯುತ್‌ ಘಟಕ ಸ್ಥಾಪನೆ ಮಾಡಲು ಮಿತ್ತಲ್‌ ಸಂಸ್ಥೆ ಸರ್ಕಾರದೊಡನೆ ನಡೆಸಿದ್ದ ಮಾತುಕತೆಗೆ ಭೂ ಸಂತ್ರಸ್ತರ ವಿರೋಧವಿತ್ತು.

2010ರ ಸಮಾವೇಶದಲ್ಲಿ 36 ಸಾವಿರ ಕೋಟಿ ರೂ. ಬಂಡವಾಳ ಹೂಡುವುದಾಗಿ ಘೋಷಿಸಿದ್ದ ರೆಡ್ಡಿ ಸೋದರರ ಒಡೆತನದ ಬ್ರಾಹ್ಮಿಣಿ ಇಂಡಸ್ಟ್ರೀಸ್ ಕರ್ನಾಟಕ ಲಿಮಿಟೆಡ್ ಕಂಪನಿಯು ಹಂಚಿಕೆ ಮಾಡಿಸಿಕೊಂಡಿದ್ದ ಜಮೀನನ್ನು ಉತ್ತಮ್‌ ಗಾಲ್ವಾ ಫೆರೋಸ್‌ ಲಿಮಿಟೆಡ್‌ಗೆ ಅಕ್ರಮವಾಗಿ ಮಾರಾಟ ಮಾಡಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಆ ಕಂಪನಿಯು ಕೂಡ ಕಾರ್ಖಾನೆ ಸ್ಥಾಪನೆ ಸಂಬಂಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಶೆಟ್ಟರ್‌ ಅವರು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.

6 ಮಿಲಿಯನ್ ಟನ್ ಕಬ್ಬಿಣ ಉತ್ಪಾದನೆ ಗುರಿ ಮತ್ತು 25 ಸಾವಿರ ಜನರಿಗೆ ಉದ್ಯೋಗ ನೀಡಲು ಒಪ್ಪಂದ ಮಾಡಿಕೊಂಡಿದ್ದ ಬ್ರಹ್ಮಿಣಿ ಇಂಡಸ್ಟ್ರೀಸ್‌ ಕೈಗಾರಿಕೆಯನ್ನೇ ಆರಂಭಿಸದೆಯೇ ಉತ್ತಮ್ ಗಾಲ್ವಾ ಕಂಪನಿಗೆ ಭೂಮಿಯನ್ನು ಮಾರಾಟ ಮಾಡಿತ್ತು.

ಭೂಸ್ವಾಧೀನ ಕಾಯ್ದೆ-2013ರ ಅನ್ವಯ ಒಂದು ಜಮೀನನ್ನು ವಶಪಡಿಸಿಕೊಂಡ ಐದು ವರ್ಷಗಳಲ್ಲಿ ಉದ್ದೇಶಿತ ಕಾರ್ಖಾನೆ ಸ್ಥಾಪಿಸದೇ ಹೋದಲ್ಲಿ ಅಂತಹ ಜಮೀನನ್ನು ಸಂತ್ರಸ್ತರಿಗೆ ಮರಳಿಸಬೇಕೆಂಬ ನಿಯಮವಿದೆ. ಈಗಾಗಲೇ ಬ್ರಹ್ಮಿಣಿ ಮೂಲಕ ಜಮೀನು ವರ್ಗಾವಣೆ ಮಾಡಿಸಿಕೊಂಡಿರುವ ಉತ್ತಮ್‌ ಗಾಲ್ವಾ ಹಾಗೂ ಆರ್ಸೆಲರ್‌ ಮಿತ್ತಲ್‌ ಕಂಪನಿಗಳಿಗೆ ಜಮೀನು ವಶಪಡಿಸಿಕೊಂಡು 10 ವರ್ಷಗಳಿಗೂ ಅಧಿಕ ಸಮಯ ಮುಗಿದಿದೆ.

ಈವರೆವಿಗೂ ಜಮೀನುಗಳಲ್ಲಿ ಕಾರ್ಖಾನೆ ಸ್ಥಾಪನೆಯಾಗುವ ಲಕ್ಷಣ ಕಂಡುಬರುತ್ತಿಲ್ಲ.
ಜಮೀನು ವಶಪಡಿಸಿಕೊಂಡಿರುವ ಕೆಐಎಡಿಬಿಯು ಜಮೀನುಗಳನ್ನು ತನ್ನ ವಶದಲ್ಲಿಯೇ ಇರಿಸಿಕೊಳ್ಳಲು ಇಚ್ಛಿಸಿದರೆ ಅಂತಹ ಸಂತ್ರಸ್ತ ಕುಟುಂಬಗಳಿಗೆ ನ್ಯಾಯಾಲಯ ನಿಗದಿಪಡಿಸಿದ ಹೆಚ್ಚುವರಿ ಮೊತ್ತವನ್ನು ಸರ್ಕಾರ ನೀಡಬೇಕು. ಒಂದು ವೇಳೆ ವಶಪಡಿಸಿಕೊಂಡ ಜಮೀನುಗಳಲ್ಲಿ ಕಾರ್ಖಾನೆ ಸ್ಥಾಪಿಸಲು ಯಾವುದೇ ಸಂಸ್ಥೆ ಮುಂದಾದರೆ, ಅಲ್ಲಿ ಉದ್ಯಮ ಸ್ಥಾಪನೆಯಾಗಿ, ಸಂತ್ರಸ್ತರ ಕುಟುಂಬಗಳ ಸದಸ್ಯರಿಗೆ ಉದ್ಯೋಗ ದೊರೆಯುವವರೆಗೂ ಮಾಸಿಕ 20 ಸಾವಿರ ರೂ. ಗಳ ನಿರುದ್ಯೋಗ ಭತ್ಯೆ ನೀಡಬೇಕು. ಆದರೆ ಸರ್ಕಾರ ಈವರೆವಿಗೂ ಈ ಬಗ್ಗೆಯೂ ಕ್ರಮ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ.

ಉಕ್ಕು ಕೈಗಾರಿಕೆಗಳ ಸ್ಥಾಪನೆ ಹಾಗೂ ಭೂ ಸಂತ್ರಸ್ತರಿಗೆ ಮತ್ತು ಸ್ಥಳೀಯರಿಗೆ ಉದ್ಯೋಗ ಕಲ್ಪಿಸಲು ಮಿತ್ತಲ್‌, ಬ್ರಹ್ಮಿಣಿ ಕಂಪನಿಗಳಿಗೆ ಕುಡಿತಿನಿ, ಹರಗಿನಡೋಣಿ, ವೇಣಿವೀರಾಪುರ, ಕೊಳಗಲ್ಲು ಗ್ರಾಮಗಳ 10,500 ಎಕರೆ ಜಮೀನು ನೀಡಿದ ಭೂ ಮಾಲೀಕರಿಗೆ ನ್ಯಾಯಯುತವಾದ ಪರಿಹಾರ ನೀಡಿರಲಿಲ್ಲ. ಜನಪ್ರತಿನಿಧಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಕಂಪನಿಗಳೊಂದಿಗೆ ಶಾಮೀಲಾಗಿ ಭೂ ಬೆಲೆ ನಿಗದಿ ನಿಯಮಾವಳಿಗಳನ್ನು ಗಾಳಿಗೆ ತೂರಲಾಗಿತ್ತು ಎಂಬ ಬಲವಾದ ಆರೋಪಗಳಿವೆ.

ಬ್ರಹ್ಮಿಣಿ ಕಂಪನಿ ಸ್ಥಾಪಿಸಲು ಎಕರೆಗೆ 5ರಿಂದ 8 ಲಕ್ಷ ರು.ನಂತೆ ನಿಗದಿಪಡಿಸಿದ್ದರೆ ಮಿತ್ತಲ್‌ ಕಂಪನಿಗೆ ಎಕರೆಗೆ 8ರಿಂದ 12 ಲಕ್ಷ ರು.ವರೆಗೂ ನಿಗದಿಪಡಿಸಿ ಭೂಮಾಲೀಕರನ್ನು ವಂಚಿಸಲಾಗಿತ್ತು. ಒಂದೇ ಕೈಗಾರಿಕೆಗೆ ರಾಜ್ಯದಲ್ಲಿ ಮೊದಲ ಬಾರಿಗೆ 3 ರೀತಿಯ ದರ ನಿಗದಿಪಡಿಸಿ ಭೂಮಾಲೀಕರನ್ನು ವಂಚಿಸಲಾಗಿತ್ತು.

the fil favicon

SUPPORT THE FILE

Latest News

Related Posts