ಡಿಸಿಸಿ ಬ್ಯಾಂಕ್ ಗಳಲ್ಲಿ ಕೋಟಿ ಕೋಟಿ ಹಗರಣ: ರೈತರ ಸಾಲ ವಿತರಣೆಗಿಲ್ಲ ಹಣ!

ಬೆಂಗಳೂರು; ರಾಜ್ಯದ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ (ಡಿಸಿಸಿ)ಗಳಲ್ಲಿನ ಹಣ ದುರುಪಯೋಗ ಸೇರಿದಂತೆ ಇನ್ನಿತರ ಆರ್ಥಿಕ ಅಶಿಸ್ತು, ಸಾಲಮನ್ನಾ ಯೋಜನೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆಯಲ್ಲದೆ ಠೇವಣಿದಾರರು ಮತ್ತು ಸಣ್ಣ, ಮಧ್ಯಮ ರೈತರನ್ನು ಹೈರಾಣಾಗಿಸಿದೆ. ನಿರ್ದೇಶಕ ಮಂಡಳಿ ಮತ್ತು ಅಧಿಕಾರಿ ವರ್ಗದ ವಿಪರೀತ ಭ್ರಷ್ಟಾಚಾರ, ಸಾಲ ವಿತರಣೆಯಲ್ಲಿ ಆಗಿರುವ ಅವ್ಯವಹಾರ ಮತ್ತು  ಬಹುಕೋಟಿ ರುಪಾಯಿ ಹಗರಣಗಳಿಂದಾಗಿ ರೈತರಿಗೆ ಸಾಲ ವಿತರಣೆ ಆಗುತ್ತಿಲ್ಲ.

ಅಷ್ಟೇ ಏಕೆ, ನಗದು ರೂಪದಲ್ಲಿ ರೈತರಿಗೆ ಸಾಲದ ಮೊತ್ತವನ್ನು ಪಡೆಯಲು ಬ್ಯಾಂಕ್‌ನಲ್ಲಿ ನಗದು ಕೂಡ ಇಲ್ಲವಾಗಿದೆ. ಅಂಕೆಯಿಲ್ಲದಂತೆ ನಡೆದಿರುವ ಕೋಟ್ಯಂತರ ರುಪಾಯಿ ದುರುಪಯೋಗದಿಂದಾಗಿ ರಿಯಾಯಿತಿ ದರದಲ್ಲಿ ಪುನರ್ಧನ ನೆರವನ್ನೂ ನಬಾರ್ಡ್‌ ಸ್ಥಗಿತಗೊಳಿಸಿದೆ. ಕೋಟ್ಯಂತರ ರುಪಾಯಿ ಮೊತ್ತದಲ್ಲಿ ಪಡೆದಿರುವ ಸಾಲಕ್ಕೆ ಹೊಂದಾಣಿಕೆ ಮಾಡಿಕೊಂಡಿರುವುದರಿಂದ ಆರ್ಥಿಕ ಸಂಪನ್ಮೂಲ ಕೊರತೆ ಅನುಭವಿಸುತ್ತಿರುವ ಡಿಸಿಸಿ ಬ್ಯಾಂಕ್‌ಗಳು, ಚೇತರಿಸಿಕೊಳ್ಳಲಾಗದಂತಹ ಆರ್ಥಿಕ ಬಿಕ್ಕಟ್ಟುಗಳಲ್ಲಿ ಮುಳುಗಿ ಹೋಗಿವೆ.

ಪ್ರಮುಖವಾಗಿ ಕಲಬುರಗಿ, ಯಾದಗಿರಿ, ಶಿವಮೊಗ್ಗ, ರಾಯಚೂರು ಮತ್ತು ಬೆಂಗಳೂರು ಡಿಸಿಸಿ ಬ್ಯಾಂಕ್‌ಗಳು ಸದ್ಯ ಎದುರಿಸುತ್ತಿರುವ ಆರ್ಥಿಕ ಸಮಸ್ಯೆ ಹೇಗಿದೆಯೆಂದರೆ ರೈತ ಸದಸ್ಯರುಗಳಿಗೆ ಸಾಲ ವಿತರಣೆ ಮಾಡಲು ಅಶಕ್ತವಾಗಿವೆ. ಹೀಗಾಗಿ 2018ರ ಸಾಲ ಮನ್ನಾ ಯೋಜನೆಯಿಂದ ಸಾವಿರಾರು ಸಂಖ್ಯೆಯ ರೈತರು ವಂಚಿತರಾಗಿದ್ದಾರೆ. ಅಲ್ಲದೆ 2019-20 ಮತ್ತು 2020-21ನೇ ಸಾಲಿನಲ್ಲಿ ವಂಚಿತರಾಗಿರುವ ರೈತರ ಸಂಖ್ಯೆ ದುಪ್ಪಟ್ಟುಗೊಂಡಿದೆ. ಈ ಬ್ಯಾಂಕ್‌ಗಳ ಅರ್ಥಿಕ ಅಶಿಸ್ತಿನಿಂದಾಗಿಯೇ ರೈತರಿಗೆ ಅಲ್ಪಾವಧಿ ಬೆಳೆ ಸಾಲ ನೀಡುವಲ್ಲಿಯೂ ವಿಫಲವಾಗಿರುವುದು ಸಹಕಾರ ಸಂಘಗಳ ನಿಬಂಧಕರ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭಾ ನಡವಳಿಗಳಿಂದ ತಿಳಿದು ಬಂದಿದೆ.

ಕಲಬುರಗಿ ಮತ್ತು ಯಾದಗಿರಿ ಡಿಸಿಸಿ ಬ್ಯಾಂಕ್‌ 2017-18ನೇ ಸಾಲಿನ ಸರ್ಕಾರದ ಸಾಲಮನ್ನಾ ಯೋಜನೆಯಡಿ 302.05 ಕೋಟಿ ರು.ಬಿಡುಗಡೆಯಾಗಿದೆಯಾದರೂ ಇದರ ಬಾಕಿ ಮೊತ್ತವೇ 332.30 ಕೋಟಿ ರು. ಇದೆ. ಹೀಗಾಗಿ 50,000 ರು.ಗಳ ಸಾಲ ಮನ್ನಾ ಮೊತ್ತವನ್ನೂ 1,30,090 ರೈತರ ಖಾತೆಗಳಿಗೆ ಜಮಾ ಮಾಡಿಲ್ಲ. ಅದೇ ರೀತಿ 1.00 ಲಕ್ಷ ರು. ಸಾಲಮನ್ನಾ ಯೋಜನೆಯಲ್ಲಿಯೂ 66,518 ಫಲಾನುಭವಿಗಳಿಗೆ ಮರು ಪಾವತಿಸಬೇಕಿರುವ ಮೊತ್ತವೇ 175.63 ಕೋಟಿ ರು. ಇದೆ.

ಈ ಪೈಕಿ 11,775 ಫಲಾನುಭವಿಗಳಿಗೆ 3574.41 ಲಕ್ಷ ರು.ಬೇಕು. 54,743 ಫಲಾನುಭವಿಗಳಿಗೆ ಬಿಡುಗಡೆ ಮಾಡಲು 13988.94 ಲಕ್ಷ ರು.ಬಾಕಿ ಇದೆ. ಸಾಲ ಮನ್ನಾ ಮೊತ್ತವನ್ನು ಮರುಸಾಲ ಹಂಚಿಕೆ ಮಾಡಿ ಉಳಿತಾಯ ಖಾತೆಗೆ ಜಮಾ ಮಾಡಿ ಪುಸ್ತಕ ಹೊಂದಾಣಿಕೆ ಮಾಡಿದೆ. ಹೀಗಾಗಿ ರೈತರು ನಗದು ರೂಪದಲ್ಲಿ ಸಾಲದ ಮೊತ್ತವನ್ನು ಪಡೆಯಲು ಬ್ಯಾಂಕ್‌ನಲ್ಲಿ ನಗದು ಇಲ್ಲ!.

ಏಕೆಂದರೆ ಸಾಲಮನ್ನಾಕ್ಕೆಂದು ಬಿಡುಗಡೆ ಮಾಡಿದ್ದ ಹಣದ ಪೈಕಿ ಅಪೆಕ್ಸ್‌ ಬ್ಯಾಂಕ್‌ನಿಂದ ಅಲ್ಪಾವಧಿ ಮತ್ತು ಮಧ್ಯಮಾವಧಿ ಸಾಲದ ಕಂತುಗಳ ರೂಪದಲ್ಲಿ ಪಡೆದಿದ್ದ 149.78 ಕೋಟಿ ರು.ಸಾಲಕ್ಕೆ ಹೊಂದಾಣಿಕೆ ಮಾಡಿಕೊಳ್ಳಲಾಗಿತ್ತು. ಹೀಗಾಗಿ ಬ್ಯಾಂಕ್‌ಗೆ ಆರ್ಥಿಕ ಸಂಪನ್ಮೂಲದ ಕೊರತೆ ಎದುರಾಗಿದೆ. ಬ್ಯಾಂಕ್‌ ಅನುಭವಿಸುತ್ತಿರುವ ಆರ್ಥಿಕ ಬಿಕ್ಕಟ್ಟಿನಿಂದಾಗಿ 2018ರ ಸಾಲ ಮನ್ನಾ ಯೋಜನೆಯಿಂದಲೂ ಈ ಭಾಗದ ರೈತರು ವಂಚಿತರಾಗಿರುವುದು ಸಭೆ ನಡವಳಿಯಿಂದ ಗೊತ್ತಾಗಿದೆ.

2011-12, 2012-13,2013-14,2014-15ನೇ ಸಾಲಿನವರೆಗೆ ಪೈಪ್‌ಲೈನ್‌, ಪಂಪ್‌ಸೆಟ್‌, ಟ್ರಾಕ್ಟರ್‌ ಖರೀದಿ ಹಾಗೂ ದ್ರಾಕ್ಷಿ ಬೆಳೆಯಲು ಮಧ್ಯಮಾವಧಿ ಸಾಲಗಳನ್ನು ಕೇವಲ ಕೊಟೇಷನ್‌ ಪಡೆದು ಬಿಡುಗಡೆ ಮಾಡಲಾಗಿದೆ. ಅಲ್ಲದೆ ಈ ಸಾಲವೂ ಕಟಬಾಕಿಯಾಗಿರುವ ಕಾರಣ ಶೇ.3ರ ಬಡ್ಡಿ ಸಾಲವು ಮಂಜೂರಾದ ಉದ್ದೇಶಗಳಿಗೆ ಸದ್ಬಳಕೆ ಆಗಿಲ್ಲ. 2011-12ನೇ ಸಾಲಿನಲ್ಲಿ ಬೆಳೆ ಸಾಲ ಪಡೆದ ಫಲಾನುಭವಿಗಳಿಗೆ 25,000 ರು.ಸಾಲ ಮನ್ನಾ ಆಗಿದೆಯಾದರೂ ಪ್ರಾಥಮಿಕ ಸಹಕಾರ ಕೇಂದ್ರ ಬ್ಯಾಂಕ್‌ಗಳು ಮರುಪಾವತಿಗೆ ಬಿಲ್‌ಗಳನ್ನು ಸಲ್ಲಿಸಿದರೂ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿರಲಿಲ್ಲ. ಹೀಗಾಗಿ ಪುನರ್ಧನ ಪಡೆಯದೆ ಬ್ಯಾಂಕಿನಲ್ಲಿಟ್ಟುಕೊಂಡು 1,186 ರೈತರಿಗೆ ಅನ್ಯಾಯವಾದಂತಾಗಿದೆ.

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ 2016-17 ಹಾಗೂ 2017-18ನೇ ಸಾಲಿನ ಅವಧಿಯಲ್ಲಿ ಚಿಂಚೋಳಿ ಶಾಖೆಯಲ್ಲಿ ಐನೋಳಿ, ಪೋಲಕಹಳ್ಳಿ, ಶಾದಿಪುರ, ಚೆಂಗಟಾ, ಚಂದನಕೇರಾ, ಗಡಿಕೇಶ್ವರ ಹಾಗೂ ಗರಗಪಳ್ಳಿಯ ಪ್ರಾಥಮಿಕ ಕೇಂದ್ರ ಸಹಕಾರ ಬ್ಯಾಂಕ್‌ಗಳಿಗೆ ಸಂಬಂಧಿಸಿದಂತೆ ಅಲ್ಪಾವಧಿ ಬೆಳೆ ಸಾಲ ಮನ್ನಾ ಮಾಡಿರುವ ರೈತ ಕುಟುಂಬಗಳ ಕೋಟ್ಯಂತರ ಹಣ ಪಡೆದು ದುರುಪಯೋಗವಾಗಿರುವುದು ಸಭೆ ನಡವಳಿಯಿಂದ ತಿಳಿದು ಬಂದಿದೆ.

ಬೆಂಗಳೂರು ಡಿಸಿಸಿ ಬ್ಯಾಂಕ್‌ನ ರೇಷ್ಮೆ ವಿನಿಮಯ ಶಾಖೆಯಲ್ಲಿಯೂ ಹಣ ದುರುಪಯೋಗವಾಗಿದೆ. 2009-10ನೇ ಸಾಲಿನಿಂದ 2014-15ನೇ ಸಾಲಿನವರೆಗೆ ಅಲ್ಪಾವಧಿ ಕಿಸಾನ್‌ ಕ್ರೆಡಿಟ್‌ ಸಾಲಗಳನ್ನು ನವೀಕರಿಸುವಾಗ ಬ್ಯಾಂಕ್‌ನ ಶಾಖಾ ಹಂತದಲ್ಲೇ 11.48 ಕೋಟಿ ರು.ಗಳ ದುರುಪಯೋಗವಾಗಿದೆ. ಅದೇ ರೀತಿ 2009-10ನೇ ಸಾಲಿನಿಂದ 2014-15ನೇ ಸಾಲಿನವರೆಗಿನ ಲೆಕ್ಕ ಪರಿಶೋಧನೆ ಪ್ರಕಾರ 1054.00 ಲಕ್ಷ ರು.ಗಳು ದುರುಪಯೋಗವಾಗಿದೆ.

ಶಿವಮೊಗ್ಗ ಕೇಂದ್ರ ಸಹಕಾರ ಬ್ಯಾಂಕ್‌ನ ನಗರ ಶಾಖೆಯಲ್ಲಿ ಆಭರಣಗಳ ಸಾಲ ವಿತರಣೆಯಲ್ಲಿ 62,77,63,560 ರು.ಗಳ ಅವ್ಯವಹಾರ ಹಾಗೂ ಶಿವಮೊಗ್ಗ ನಗರ ಶಾಖೆಯಲ್ಲಿ 1,79,29,235.58 ರು.ಗಳ ಮೊತ್ತದ ನಗದು ಶಿಲ್ಕು ಕೊರತೆಯೂ ಎದುರಾಗಿದೆ. ಹಾಗೆಯೇ ನಗರ ಶಾಖೆಯಲ್ಲಿ ವಶಪಡಿಸಿಕೊಂಡಿದ್ದ ಅಭರಣಗಳನ್ನು ನ್ಯಾಯಾಲಯದ ಅನಮತಿಯಂತೆ 546 ಪ್ರಕರಣಗಳಲ್ಲಿ ಬಂಗಾರದ ಆಭರಣಗಳನ್ನು ಹರಾಜು ಮಾಡಲಾಗಿದೆಯಲ್ಲದೆ ಇದರಿಂದ 3,16,04,000 ರು.ಗಳಷ್ಟೇ ಜಮಾ ಆಗಿದೆ. ಆದರೆ ಇನ್ನೂ 56,93,76,780 ರು.ಗಳು ವಸೂಲಿ ಆಗಬೇಕಿದೆ.

ಶಿವಮೊಗ್ಗ ಡಿಸಿಸಿ ಬ್ಯಾಂಕ್‌ನಲ್ಲಿ ನಡೆದಿರುವ ಬಹುಕೋಟಿ ರು.ಹಗರಣದ ಗಂಭೀರತೆಯನ್ನೂ ಅರಿಯದ ಆಡಳಿತ ಮಂಡಳಿ ಬೇಜವಾಬ್ದಾರಿಯಿಂದ ವರ್ತಿಸುತ್ತಲೇ ಇದೆ. ಈ ಪ್ರಕರಣದ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮಕೈಗೊಂಡಿರುವ ಬಗ್ಗೆ ವರದಿ ಸಲ್ಲಿಸಬೇಕು ಎಂದು ಸಹಕಾರ ಸಂಘಗಳ ನಿಬಂಧಕರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಲವು ಬಾರಿ ನೆನಪೋಲೆಗಳನ್ನು ಬರೆದಿದ್ದರೂ ಇದುವರೆಗೂ ಯಾವ ಕ್ರಮವನ್ನೂ ಕೈಗೊಂಡಿಲ್ಲ.

ಡಿಸಿಸಿ ಬ್ಯಾಂಕ್‌ಗಳಲ್ಲಿ ನಡೆದಿರುವ ಭ್ರಷ್ಟಾಚಾರ ಪ್ರಕರಣಗಳ ಕುರಿತು ಈಗಿನ ಬಿಜೆಪಿ ಸರ್ಕಾರವೂ ಯಾವುದೇ ಕ್ರಮ ಕೈಗೊಂಡಿಲ್ಲ. ಸಹಕಾರ ಸಚಿವ ಎಸ್‌ ಟಿ ಸೋಮಶೇಖರ್‌ ಅವರು ಸಹ ಡಿಸಿಸಿ ಬ್ಯಾಂಕ್‌ಗಳನಲ್ಲಿನ ಅಕ್ರಮಗಳ ಕುರಿತು ಉನ್ನತ ಮಟ್ಟದ ತನಿಖೆಗೆ ಸಹಮತಿ ನೀಡುವುದರಲ್ಲಿಯೂ ವಿಳಂಬ ಧೋರಣೆ ಪ್ರದರ್ಶಿಸಿದ್ದಾರೆ.

ರೈತರು, ಠೇವಣಿದಾರರ ಹಿತ ಕಾಪಾಡಬೇಕಿದ್ದ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳ ಆಡಳಿತ ಮಂಡಳಿ ನಿರ್ದೇಶಕರು, ಅಧಿಕಾರಿ ವರ್ಗ ಸ್ವಂತ ಕಲ್ಯಾಣದಲ್ಲಿ ತೊಡಗಿವೆ. ಬಹುಕೋಟಿ ರುಪಾಯಿಗಳ ಅವ್ಯವಹಾರ, ಭ್ರಷ್ಟಾಚಾರದಿಂದ ಡಿಸಿಸಿ ಬ್ಯಾಂಕ್‌ಗಳು ಮಕಾಡೆ ಮಲಗಿವೆ.

ಆಡಳಿತ ಮಂಡಳಿಗಳ ದುರಾಡಳಿತ ಮತ್ತು ಆರ್ಥಿಕ ಅಶಿಸ್ತಿನ ಪರಮಾವಧಿಯಿಂದಾಗಿ ರೈತರಿಗೆ ಸಾಲವೂ ವಿತರಣೆಯಾಗುತ್ತಿಲ್ಲ. ಸಾಲ ಮನ್ನಾ ಯೋಜನೆಯ ಲಾಭವೂ ಸಿಗುತ್ತಿಲ್ಲ. ಅಂಕೆ ಇಲ್ಲದಂತೆ ನಡೆಯುತ್ತಿರುವ ಅವ್ಯವಹಾರ ಪ್ರಕರಣಗಳಿಗೆ ಕೊನೆ ಹಾಡದಿದ್ದರೆ ಡಿಸಿಸಿ ಬ್ಯಾಂಕ್‌ಗಳಷ್ಟೇ ಅಲ್ಲ, ರೈತರು, ಠೇವಣಿದಾರರು ಬೀದಿಗೆ ಬರುವ ದಿನಗಳು ದೂರವಿಲ್ಲ.

SUPPORT THE FILE

Latest News

Related Posts