ಬೆಂಗಳೂರು; ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಖರೀದಿ, ಸಿಬ್ಬಂದಿ ನೇಮಕ ಮತ್ತು ಇತರೆ ಕಾಮಗಾರಿಗಳಲ್ಲಿ ನಡೆದಿದ್ದ ಒಟ್ಟು 18.00 ಕೋಟಿ ರು. ಮೊತ್ತದ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಬ್ರಿಮ್ಸ್ ಮುಖ್ಯ ಆಡಳಿತಾಧಿಕಾರಿ ಆನಂದಸಾಗರ ರೆಡ್ಡಿ ಸೇರಿದಂತೆ ಒಟ್ಟು 10 ಮಂದಿ ವಿರುದ್ಧ ಜಂಟಿ ಇಲಾಖೆ ವಿಚಾರಣೆ ನಡೆಸಲು ಸರ್ಕಾರ ವಿಚಾರಣಾಧಿಕಾರಿಯನ್ನು ನೇಮಿಸಿದೆ.
ಈ ಸಂಬಂಧ 2021ರ ಜನವರಿ 5ರಂದು ವೈದ್ಯಕೀಯ ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿದೆ. ಸಂಸ್ಥೆಯ ನಿರ್ದೇಶಕ ಡಾ ಚನ್ನಣ್ಣ ಸಿ ಸೇರಿದಂತೆ ಒಟ್ಟು 10 ಮಂದಿ ಅಧಿಕಾರಿ ಸಿಬ್ಬಂದಿ ವಿರುದ್ಧ ವಿಚಾರಣೆಗೆ ಹಿಂದೆಯೇ ಮಂಜೂರಾತಿ ದೊರೆತಿತ್ತಾದರೂ ವಿಚಾರಣಾಧಿಕಾರಿ ನೇಮಿಸುವ ಪ್ರಕ್ರಿಯೆಯಲ್ಲಿ ವಿಳಂಬವಾಗಿತ್ತು. ಇದರಿಂದಾಗಿ ಎಸಿಬಿ ತನಿಖೆಗೆ ಅಡ್ಡಿಯಾಗಿತ್ತು.
ಬ್ರಿಮ್ಸ್ ಸಂಸ್ಥೆಯಲ್ಲಿ ಸಿಬ್ಬಂದಿ ನೇಮಕಾತಿ, ವೇತನ ಪಾವತಿ, ಮುಂಬಡ್ತಿ, ಉಪಕರಣ ಮತ್ತು ಹಾಗೂ ಔಷಧ ಖರೀದಿಯಲ್ಲಿ ಕೋಟ್ಯಂತರ ರುಪಾಯಿ ಅಕ್ರಮ ನಡೆದಿತ್ತು. ಈ ಕುರಿತು ತನಿಖೆ ನಡೆಸಲು ಬೀದರ್ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು 7 ವರ್ಷಗಳ ಹಿಂದೆಯೇ ಸರ್ಕಾರಕ್ಕೆ ಪತ್ರ ಬರೆದಿದ್ದರು. ಅಂದಿನ ವೈದ್ಯಕೀಯ ಶಿಕ್ಷಣ ಸಚಿವರು ವಿಚಾರಣೆಗೆ ಅನುಮತಿ ನೀಡಿರಲಿಲ್ಲ. ಡಾ ಕೆ ಸುಧಾಕರ್ ವೈದ್ಯಕೀಯ ಶಿಕ್ಷಣ ಸಚಿವರಾದ ನಂತರ ಅಧಿಕಾರಿಗಳ ವಿರುದ್ಧ ವಿಚಾರಣೆಗೆ ಅನುಮತಿ ದೊರೆತಿದೆಯಲ್ಲದೆ ಇಲಾಖೆ ವಿಚಾರಣೆಗೆ ಆದೇಶವೂ ಹೊರಬಿದ್ದಿದೆ.
ಪ್ರಕರಣ ಕುರಿತು ತನಿಖೆ ನಡೆಸಿದ್ದ ತನಿಖಾ ತಂಡವು 2014ರ ಜನವರಿ 13ರಂದು ವರದಿ ಸಲ್ಲಿಸಿತ್ತು. ಡಾ ಬಿ ಒ ಹನುಮಂತಪ್ಪ ಸೇರಿದಂತೆ ಹಲವರ ವಿರುದ್ಧದ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿದ್ದರಿಂದ ಇಲಾಖೆ ವಿಚಾರಣೆ ನಡಸಲು ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ವಿಚಾರಣಾಧಿಕಾರಿ ವಿ ಪಿ ಜಹಗೀರ್‌ದಾರ್ ಅವರು ವಿಚಾರಣೆ ಪ್ರಾರಂಭಿಸಲು ವಿಳಂಬ ಮಾಡಿದ್ದರು. ಹೀಗಾಗಿ ನಿವೃತ್ತ ಜಿಲ್ಲಾ ನ್ಯಾಯಾಧೀಶ ಎನ್ ವೈ ಕುಂಬಾರ್ ಅವರನ್ನು 2017ರಲ್ಲಿ ವಿಚಾರಣಾಧಿಕಾರಿಯನ್ನಾಗಿ ನೇಮಿಸಲಾಗಿತ್ತು. ಇವರೂ ಸಹ ವಿಚಾರಣೆ ನಡೆಸಿರಲಿಲ್ಲ.
ಹೀಗಾಗಿ 3 ವರ್ಷಗಳವರೆಗೆ ವಿಚಾರಣಾಧಿಕಾರಿಯನ್ನೂ ಸರ್ಕಾರ ನೇಮಿಸಿರಲಿಲ್ಲ. 2020ರ ಜುಲೈ 24ರಂದು ಪ್ರಕರಣ ಸಂಬಂಧ ನಿವೃತ್ತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಂಗಪ್ಪ ಹುಚ್ಚಪ್ಪ ಮಿಟ್ಟಲಕೋಡ್ ಅವರನ್ನು ವಿಚಾರಣಾಧಿಕಾರಿಯನ್ನಾಗಿ ನೇಮಿಸಲಾಗಿತ್ತು.
ಇದಲ್ಲದೆ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿನ ಖರೀದಿ ಪ್ರಕ್ರಿಯೆಯಲ್ಲಿ ಕೆಟಿಪಿಪಿ ನಿಯಮಗಳನ್ನು ಉಲ್ಲಂಘಿಸಲಾಗಿತ್ತು. ಸಿಬ್ಬಂದಿ ನೇಮಕಾತಿಯಲ್ಲಿ ಹಾಗೂ ಇತರೆ ಕಾಮಗಾರಿಗಳಲ್ಲಿ ನಿರ್ದೇಶಕರು, ವೈದ್ಯಕೀಯ ಅಧೀಕ್ಷಕರು, ಪ್ರಥಮದರ್ಜೆ ಸಹಾಯಕ ಪ್ರಕಾಶ ಮಾಳಗೆ, ಬಾಬು ಕೋಟಿ, ನಿವೃತ್ತ ಅಧೀಕ್ಷಕ ಮಾಚಿ ಕಲ್ಲಪ್ಪ ಅವರ ವಿರುದ್ಧದ ಆರೋಪಗಳ ಕುರಿತು ತನಿಖೆ ನಡೆಸಲು ಸರ್ಕಾರವು ತ್ರಿ ಸದಸ್ಯ ಸಮಿತಿಯನ್ನು ನೇಮಿಸಿತ್ತು.
ತನಿಖಾಧಿಕಾರಿಗಳು ಸಲ್ಲಿಸಿದ್ದ ವರದಿಯನ್ನಾಧರಿಸಿ ಪ್ರಕರಣವನ್ನು ಎಸಿಬಿಗೆ ಹಸ್ತಾಂತರಿಸಲಾಗಿತ್ತು. ಹಿಂದಿನ ನಿರ್ದೇಶಕ ಡಾ ಸಿ ಚನ್ನಣ್ಣ ಸೇರಿದಂತೆ ಒಟ್ಟು 10 ಮಂದಿ ವಿರುದ್ಧದ ಆರೋಪಗಳ ಕುರಿತು ಭ್ರಷ್ಟಾಚಾರ ಪ್ರತಿಬಂಧ ಕಾಯ್ದೆ 1988ರ ಕಲಂ 13(1)(ಡಿ) ಅಡಿಯಲ್ಲಿ ಎಸಿಬಿ ಮೊಕದ್ದಮೆ ದಾಖಲಿಸಲು ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಆರೋಪಿತರ ಪೈಕಿ ಕೆಲವರು ಸರ್ಕಾರದ ಆದೇಶವನ್ನು ಹೈಕೊರ್ಟ್‌ನಲ್ಲಿ ಪ್ರಶ್ನಿಸಿದ್ದರಲ್ಲದೆ ತಡೆಯಾಜ್ಞೆಯನ್ನೂ ತಂದಿದ್ದರು.