ಬೆಂಗಳೂರು; ಪ್ರಾಯೋಗಿಕವಾಗಿ ಇ-ವಿಧಾನ ಮಂಡಲ ಯೋಜನೆಯನ್ನು ಅನುಷ್ಠಾನಗೊಳಿಸದೆಯೇ ನೇರವಾಗಿ ಯೋಜನೆಯನ್ನು ಅನುಷ್ಠಾನಗೊಳಿಸಲು ಮುಂದಾಗಿರುವ ವಿಧಾನಸಭೆ ಸಚಿವಾಲಯವು ಆರ್ಥಿಕ ಸಂಕಷ್ಟದ ಹೊತ್ತಿನಲ್ಲೇ ಕೋಟ್ಯಂತರ ರುಪಾಯಿ ದುಂದುವೆಚ್ಚ ಮಾಡಲು ಮುಂದಾಗಿದೆ.
ಈ ಯೋಜನೆ ಅನುಷ್ಠಾನಕ್ಕೆ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಮ್ಮತಿ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ ಯೋಜನೆ ಹೊಣೆಗಾರಿಕೆಯನ್ನು ಕಿಯೋನಿಕ್ಸ್‌ಗೆ ವಹಿಸಲಾಗಿದೆ ಎಂದು ಗೊತ್ತಾಗಿದೆ. ಯೋಜನೆ ಸಂಬಂಧ ಡಿಪಿಆರ್ ‘ದಿ ಫೈಲ್’ಗೆ ಲಭ್ಯವಾಗಿದೆ.
ಕಳೆದ 4 ವರ್ಷದ ಹಿಂದೆ 60.84 ಕೋಟಿ ರು. ಅಂದಾಜು ವೆಚ್ಚದಲ್ಲಿ ಇದೇ ಯೋಜನೆಯನ್ನು ಸಿದ್ಧಪಡಿಸಿದ್ದ ವಿಧಾನಸಭೆ ಸಚಿವಾಲಯ ಇದೀಗ ಅದೇ ಯೋಜನೆಯ ವೆಚ್ಚವನ್ನು 253 ಕೋಟಿ ರು.ಗೆ ಹೆಚ್ಚಳ ಮಾಡಿದೆ. ಸಚಿವಾಲಯದ ಈ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಕೋವಿಡ್‌ನಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ಹೊತ್ತಿನಲ್ಲಿ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದಕ್ಕೆ ರಾಜ್ಯ ಸರ್ಕಾರ ನಿರ್ಬಂಧಿಸಿದೆ. ಆದರೂ ವಿಧಾನಸಭೆ ಸಚಿವಾಲಯವು 253 ಕೋಟಿ ರು.ವೆಚ್ಚದಲ್ಲಿ ಇ-ವಿಧಾನಮಂಡಲ್ ಯೋಜನೆ ಅನುಷ್ಠಾನಗೊಳಿಸಲು ಮುಂದಾಗಿದೆ. ಅಲ್ಲದೆ ಇ-ವಿಧಾನಮಂಡಲ ಯೋಜನೆ ಕುರಿತು ಶಾಸಕರಿಗೆ ಯಾವುದೇ ಪ್ರಾಥಮಿಕ ತರಬೇತಿಯನ್ನೂ ನೀಡಿಲ್ಲ. ಇ-ಆಫೀಸ್ ತಂತ್ರಾಂಶವನ್ನು ಸಚಿವಾಲಯದ ಅಧಿಕಾರಿಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಬಳಸುತ್ತಿಲ್ಲ. ಹೀಗಿರುವಾಗ ಇ-ವಿಧಾನಮಂಡಲ ಯೋಜನೆ ಅನುಷ್ಠಾನಗೊಳಿಸಲು ನಡೆಸುತ್ತಿರುವ ತರಾತುರಿಯ ಹಿಂದೆ ‘ಕಮಿಷನ್ ವ್ಯವಹಾರ’ ವೂ ನಡೆದಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಕಾಗದ ರಹಿತ ವಿಧಾನಮಂಡಲ ವಹಿವಾಟು/ಕಲಾಪ ವ್ಯವಸ್ಥೆ ಮಾಡುವುದು ಮತ್ತು ಕಾಗದಕ್ಕಾಗಿ ವ್ಯಯ ಮಾಡುತ್ತಿರುವ ಸರ್ಕಾರದ ಹಣವನ್ನು ಉಳಿತಾಯ ಮಾಡುವ ಉದ್ದೇಶ ಹೊಂದಿರುವ ಈ ಯೋಜನೆಗೆ ಕೇಂದ್ರ ಸರ್ಕಾರವೇ ಶೇ. 60ರಷ್ಟು ನೀಡುವ ಹಣವನ್ನು ಒದಗಿಸಲಿದೆ. ಆರಂಭಿಕ ಹಂತದಲ್ಲಿ ಕೇಂದ್ರದ ಅನುದಾನವನ್ನು ಬಳಸಿಕೊಳ್ಳುತ್ತಿಲ್ಲ ಎಂದು ತಿಳಿದು ಬಂದಿದೆ. ಪ್ರಾಯೋಗಿಕ ಹಂತದಲ್ಲಿ ಯಶಸ್ಸನ್ನಾಧರಿಸಿ ಯೋಜನೆಯನ್ನು ವಿಸ್ತರಿಸಬೇಕಿದ್ದ ಸಚಿವಾಲಯವು ಅನಗತ್ಯವಾಗಿ ವೆಚ್ಚ ಮಾಡುತ್ತಿರುವುದು ದುಂದುವೆಚ್ಚಕ್ಕೆ ದಾರಿಮಾಡಿಕೊಡಲಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಯೋಜನೆ ಅನುಷ್ಠಾನದ ಮೊದಲ ಹಂತದಲ್ಲಿ ಸಾಫ್ಟ್‌ವೇರ್‌ಗೆ 39.20 ಕೋಟಿ, ಹಾರ್ಡ್‌ವೇರ್, ನೆಟ್‌ವರ್ಕಿಂಗ್‌ಗೆ 1,24,26,14,655 ರು ಸೇರಿ ಒಟ್ಟು 1,63,46,87,002 ರು. ವೆಚ್ಚ ಅಂದಾಜಿಸಲಾಗಿದೆ. ಮೊದಲ ಹಂತಕ್ಕೆ ಖರೀದಿಯಾಗುವ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್‌ಗೆ ಜಿ ಎಸ್ ಟಿ 29.42 ಕೋಟಿ ರು ಭರಿಸಬೇಕು. ಅದೇ ರೀತಿ ಯೋಜನೆ ಅನುಷ್ಠಾನದ 2ನೇ ಹಂತದಲ್ಲಿ 63.15 ಲಕ್ಷ ರು., ಸಾಫ್ಟ್‌ವೇರ್‌ಗೆ ಎಂದು ಅಂದಾಜಿಸಿರುವ ವಿಧಾನಸಭೆ ಸಚಿವಾಲಯವು ಹಾರ್ಡ್‌ವೇರ್, ನೆಟ್‌ವರ್ಕಿಂಗ್‌ಗೆ 50.94 ಕೋಟಿ ರು. ಸೇರಿ ಒಟ್ಟು 51,57,50,173 ರು. ಎಂದು ಅಂದಾಜಿಸಿದೆ. 2ನೇ ಹಂತದ ಉಪಕರಣಗಳ ಖರೀದಿಗೆ ಜಿ ಎಸ್ ಟಿ ಶುಲ್ಕ 9,28,35,031 ರು. ಎಂದು ಅಂದಾಜಿಸಿದೆ ಎಂದು ಗೊತ್ತಾಗಿದೆ.
ವಿಧಾನಮಂಡಲವನ್ನು ಕಾಗದ ರಹಿತವನ್ನಾಗಿಸುವ ಸಂಬಂಧ 2014ರಲ್ಲಿ ಉಭಯ ಸದನಗಳ ಅಂದಿನ ಪೀಠಾಧ್ಯಕ್ಷರು ಅಧ್ಯಯನ ಸಮಿತಿ ರಚಿಸಿದ್ದರು. ಈ ಸಮಿತಿಯು ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಿ ಈ ಸಂಬಂಧ ವರದಿಯನ್ನು ನೀಡಿತ್ತು. ಈ ಮಧ್ಯೆ ಬಜೆಟ್ ಪೂರ್ವದಲ್ಲಿ ಸುಮಾರು 66.00 ಕೋಟಿ ರು.ಗಳ ಅಂದಾಜು ಪಟ್ಟಿಯನ್ನು ನೀಡಿತ್ತು.