ಬಯೋ ಮೆಡಿಕಲ್‌ ಉಪಕರಣದ ಆಸ್ತಿ ಮೌಲ್ಯದಲ್ಲೂ ಹೆಚ್ಚಳ; ಟಿವಿಎಸ್‌ ಕಂಪನಿಗೆ ಮತ್ತಷ್ಟು ಲಾಭ?

ಬೆಂಗಳೂರು; ಬಯೋ ಮೆಡಿಕಲ್‌ ಉಪಕರಣಗಳ ನಿರ್ವಹಣೆಯಲ್ಲಿ ಖಾಸಗಿ ಕಂಪನಿಗೆ ಅಕ್ರಮವಾಗಿ ಲಾಭ ಮಾಡಿಕೊಟ್ಟಿದ್ದ ಅಧಿಕಾರಿಗಳು ಉಪಕರಣಗಳ ಆಸ್ತಿ ಮೌಲ್ಯವನ್ನು ಉದ್ದೇಶಪೂರ್ವಕವಾಗಿ ಹೆಚ್ಚಳ ಮಾಡಿದ್ದರು. ಆದರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಪಂಕಜಕುಮಾರ್‌ ಪಾಂಡೆ ಅವರು ಇದನ್ನು ಪರಿಶೀಲಿಸುವ ಗೋಜಿಗೆ ಹೋಗದೇ ಇದ್ದದ್ದು ಹಲವು ಸಂಶಯಗಳಿಗೆ ಕಾರಣವಾಗಿದೆ.

ಉಪಕರಣಗಳ ನಿರ್ವಹಣೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿದ್ದ ಮೊತ್ತ ಮತ್ತು ಕರಾರಿಗೆ ಸಹಿ ಹಾಕುವಾಗ 47.7 ಕೋಟಿ ಹೆಚ್ಚಳ ಮಾಡಿದ್ದ ಅಧಿಕಾರಿಗಳು ಉಪಕರಣಗಳ ಆಸ್ತಿ ಮೌಲ್ಯದಲ್ಲಿಯೂ ಹೆಚ್ಚಳ ಮಾಡಿ ಕಂಪನಿಗೆ ಮತ್ತಷ್ಟು ಲಾಭ ಮಾಡಿಕೊಟ್ಟಿರುವುದು ಇದೀಗ ಮುನ್ನೆಲೆಗೆ ಬಂದಿದೆ.

ಉಪಕರಣಗಳ 3 ವರ್ಷಗಳ ಉಪಕರಣಗಳ ಆಸ್ತಿ ಮೌಲ್ಯ ನಿರ್ಣಯಿಸುವುದು ಮತ್ತು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿದ್ದ ಬಯೋ ಮೆಡಿಕಲ್‌ ಉಪಕರಣಗಳ ಕರಾರುವಕ್ಕಾದ ಪಟ್ಟಿ ಕ್ರೋಢೀಕರಿಸಿ ಅವುಗಳ ಆಸ್ತಿ ಮೌಲ್ಯ ನಿರ್ಣಯಿಸಿ ಟೆಂಡರ್‌ನಲ್ಲಿ ಬಿಡ್‌ ಮೌಲ್ಯ ನಿಗದಿಪಡಿಸಬೇಕಿದ್ದದ್ದು ನೋಡಲ್‌ ಅಧಿಕಾರಿಯೂ ಆಗಿದ್ದ ಉಪ ನಿರ್ದೇಶಕ ಸ್ವತಂತ್ರ ಬಣಕರ್‌ ಅವರ ಕರ್ತವ್ಯವಾಗಿತ್ತು. ಆದರೆ ಈ ಕರ್ತವ್ಯ ಲೋಪದಿಂದಾಗಿ ಸರ್ಕಾರಕ್ಕೆ 47.7 ಕೋಟಿ ನಷ್ಟ ಮತ್ತು ಅನರ್ಹ ಕಂಪನಿ ಆಯ್ಕೆಗೂ ದಾರಿ ಮಾಡಿಕೊಟ್ಟಿದೆ ಎಂದು ಗೊತ್ತಾಗಿದೆ.

ಆರ್‌ಎಫ್‌ಪಿ ತಯಾರಿ, ಅದರ ದೃಢೀಕರಣ, ಟೆಂಡರ್‌ ಪ್ರೊಕ್ಯೂರ್‌ಮೆಂಟ್‌ ಸಮಿತಿ, ಟೆಂಡರ್‌ ಪರಿಶೀಲನಾ ಮತ್ತು ಟೆಂಡರ್‌ ಅಂಗೀಕಾರ ಸಮಿತಿಯಲ್ಲಿ ಯಾವುದೇ ಟೆಂಡರ್‌ಗೆ ಸಂಬಂಧಿಸಿದಂತೆ ಯಾವುದೇ ಗೊಂದಲ, ಅನುಮಾನಗಳು,ತಪ್ಪು ಮಾಹಿತಿ ಇರದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಬಣಕರ್‌ ಅವರ ಮೇಲೇಯೇ ಇತ್ತು. ಆದರೆ ಕೇವಲ ಆಸ್ತಿ ಮೌಲ್ಯ ನೀಡಿದ್ದ ಬಣಕರ್‌ ಅವರು ಟೆಂಡರ್‌ ಪರಿಶೀಲನಾ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಆ ನಂತರ ಟೆಂಡರ್‌ ಅಂಗೀಕಾರ ಸಮಿತಿ ಸಭೆಗೆ ಚಾಣಾಕ್ಷತೆಯಿಂದ ಗೈರಾದರು ಎಂದು ತಿಳಿದು ಬಂದಿದೆ.

ಬಯೋ ಮೆಡಿಕಲ್‌ ಉಪಕರಣಗಳ 3 ವರ್ಷಗಳ ನಿರ್ವಹಣೆಗೆ ಒಟ್ಟು 53.96 ಕೋಟಿ ಎಂದು ಅಂದಾಜಿಸಲಾಗಿದ್ದರೂ ಟೆಂಡರ್‌ ದಾಖಲಾತಿ ಪುಟ ಸಂಖ್ಯೆ 48ರಲ್ಲಿ ಮೊದಲ ವರ್ಷದ ಆಸ್ತಿ ಮೌಲ್ಯ 137.20 ಕೋಟಿ ಬದಲಾಗಿ 316.83 ಕೋಟಿ ಎಂದು ಮುದ್ರಿಸಲಾಗಿದ್ದನ್ನು ತಿದ್ದುಪಡಿ ಮಾಡಿರಲಿಲ್ಲ. ಇದರಿಂದಲೇ ಮೊದಲ ವರ್ಷದ ಕರಾರು ಮೌಲ್ಯ 9.6 ಕೋಟಿ ಬದಲು 27.56 ಕೋಟಿ ರೂಪಾಯಿಗೇರಿತ್ತು. ಇದರಿಂದ ಸರ್ಕಾರಕ್ಕೆ 14.29 ಕೋಟಿ ನಷ್ಟ ಉಂಟಾಗಿದೆ ಎಂದು ಹೇಳಲಾಗಿದೆ. ಇದಕ್ಕೂ ಬಣಕರ್‌ ಅವರೇ ನೇರ ಹೊಣೆಗಾರರು ಎಂದು ಗೊತ್ತಾಗಿದೆ.

ಬ್ಯಾಂಕ್‌ ಖಾತರಿಗೆ ಧಕ್ಕೆ?

ಟಿವಿಎಸ್‌ ಲಾಜಿಸ್ಟಿಕ್ಸ್‌ ಸರ್ವಿಸ್‌ ಲಿಮಿಟೆಡ್‌, ರಾಷ್ಟ್ರೀಕೃತವಲ್ಲದ ಯೆಸ್‌ ಬ್ಯಾಂಕ್‌ (YES BANK)ನಿಂದ 2019 ಮಾರ್ಚ್‌ 6ರಂದು 3,74,90,885 ರು ಮತ್ತು 2019ರ ಮಾರ್ಚ್‌ 14ರಂದು 5,51,15,409 ರು.ಗಳ ಖಾತರಿ ನೀಡಿತ್ತು. ಇದು ಭಾರತದ ರಾಷ್ಟ್ರೀಕೃತ ಬ್ಯಾಂಕ್‌ ಅಲ್ಲದಿದ್ದರೂ ಖಾತರಿ ಪಡೆದಿರುವುದು ಅನುಮಾನಗಳನ್ನು ಇನ್ನಷ್ಟು ಬಲಪಡಿಸಿದೆ. ಹಾಗೆಯೇ ಟಿವಿಎಸ್‌ ಲಾಜಿಸ್ಟಿಕ್ಸ್‌ ಸರ್ವಿಸ್‌ ಲಿಮಿಟೆಡ್‌ ಯೆಸ್‌ ಬ್ಯಾಂಕ್‌ನಿಂದ ನೀಡಿದ್ದ ಬ್ಯಾಂಕ್‌ ಖಾತರಿಯನ್ನು ಭಾರತದ ಯಾವುದೇ ರಾಷ್ಟ್ರೀಕೃತ ಬ್ಯಾಂಕ್‌ನಿಂದ ಬದಲಾಯಿಸಿ ನೀಡಿಲ್ಲ ಎಂದು ಗೊತ್ತಾಗಿದೆ.

ಯೆಸ್‌ ಬ್ಯಾಂಕ್‌ನ ಖಾತರಿ ಮೇಲೆ ಕರಾರು ಸಹಿ ಮಾಡಲಾಗಿದೆ. ಅಲ್ಲದೆ ಮುಂಗಡ ಮತ್ತು ಪ್ರತಿ ತಿಂಗಳೂ ಹಣ ಪಾವತಿಸಲಾಗುತ್ತಿದೆ ಎಂದು ಗೊತ್ತಾಗಿದೆ. ಇಲಾಖೆಯ ನಿಯಮಗಳಿಗೆ ವಿರುದ್ಧವಾಗಿದ್ದರೂ ಖಾಸಗಿ ಬ್ಯಾಂಕ್‌ನಿಂದ ಖಾತರಿ ಪಡೆದು ಅಕ್ರಮ ಎಸಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಒಂದು ವೇಳೆ ಯೆಸ್‌ ಬ್ಯಾಂಕ್‌ ದಿವಾಳಿ ಆಥವಾ ಇನ್ನಾವುದೋ ಅವ್ಯವಹಾರದಲ್ಲಿ ಸಿಕ್ಕಿ ಹಾಕಿಕೊಂಡಲ್ಲಿ ಸರ್ಕಾರಕ್ಕೆ, ಬ್ಯಾಂಕ್‌ ಖಾತರಿಗೆ ಧಕ್ಕೆ ಆಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

SUPPORT THE FILE

Latest News

Related Posts