ಕನಿಷ್ಠ ಬೆಂಬಲ ಬೆಲೆ ಯೋಜನೆ; ಏಜೆನ್ಸಿ ಅಧಿಕಾರಿಗಳ ಲೋಪಕ್ಕೆ 63 ಕೋಟಿ ನಷ್ಟ

ಬೆಂಗಳೂರು; ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಮೆಕ್ಕೆಜೋಳ, ಭತ್ತ, ರಾಗಿ ಮತ್ತು ಜೋಳ ಖರೀದಿಸಿದ್ದ ಕರ್ನಾಟಕ ರಾಜ್ಯ ಉಗ್ರಾಣ ನಿಗಮ ಸೇರಿದಂತೆ ಒಟ್ಟು 3 ಖರೀದಿ ಏಜೆನ್ಸಿಗಳ ಅಧಿಕಾರಿ, ನೌಕರರ ಲೋಪದಿಂದಾಗಿ 63 ಕೋಟಿ ರು. ನಷ್ಟ ಸಂಭವಿಸಿರುವುದು ಬಹಿರಂಗವಾಗಿದೆ.

ಈ ಕುರಿತು ಕರ್ನಾಟಕ ರಾಜ್ಯ ಉಗ್ರಾಣ ನಿಗಮವು ಸಹಕಾರ ಇಲಾಖೆಯ ಇತ್ತೀಚೆಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರದಲ್ಲಿ ವಿವರಿಸಿದೆ. ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

2004-05ನೇ ಸಾಲಿನಿಂದ 2015-16ನೇ ಸಾಲಿನವರೆಗೆ ಭತ್ತ ಸರಕನ್ನು ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಖರೀದಿಸಿದ ಸಂಗ್ರಹಣಾ ನಷ್ಟಕ್ಕೆ ಕಾರಣರಾದ ಅಧಿಕಾರಿ, ನೌಕರರ ವಿರುದ್ಧ ಕಠಿಣ ಕ್ರಮ ಕೈಗೊಂಡಿಲ್ಲ ಎಂಬುದು ಪತ್ರದಿಂದ ತಿಳಿದು ಬಂದಿದೆ. ಸಹಕಾರ ಸಚಿವ ಎಸ್‌ ಟಿ ಸೋಮಶೇಖರ್‌ ಅವರು ಸಹ ಈ ಪ್ರಕರಣದ ಬಗ್ಗೆ ಆಸಕ್ತಿ ವಹಿಸಿಲ್ಲ ಎಂದು ಗೊತ್ತಾಗಿದೆ.

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ 2004-05ನೇ ಸಾಲಿನಿಂದ 2015-16ನೇ ಸಾಲಿನವರೆಗೆ ಕರ್ನಾಟಕ ರಾಜ್ಯ ಉಗ್ರಾಣ ನಿಗಮವು ಖರೀದಿಸಿ ದಾಸ್ತಾನು ಮಾಡಲಾದ, ಬಿಡುಗಡೆ ಮಾಡಲಾದ ಸರಕಿನಲ್ಲಿ ಕೇಂದ್ರ ಸರ್ಕಾರವು ನಿಗದಿಪಡಿಸಿದ್ದ ಡ್ರೈಯೇಜ್‌ ಪ್ರಮಾಣಕ್ಕಿಂತ ಹೆಚ್ಚಿನ ಸರಕಿನ ನಷ್ಟ ಸಂಭವಿಸಿದೆ. ಇದು 17,09,58,530 ರು. ಎಂದು ಉಗ್ರಾಣ ನಿಗಮ ಅಂದಾಜಿಸಿದೆ.

ಅದೇ ರೀತಿ 2004-05ನೇ ಸಾಲಿನಿಂದ 2014-15ನೇ ಸಾಲಿನವರೆಗೆ ಕರ್ನಾಟಕ ರಾಜ್ಯ ಉಗ್ರಾಣ ನಿಗಮ ಹೊರತುಪಡಿಸಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ನಾಫೆಡ್‌ರವರು ಖರೀದಿಸಿ ರಾಜ್ಯ ಉಗ್ರಾಣಗಳಲ್ಲಿ ದಾಸ್ತಾನು ಮಾಡಲಾದ, ಬಿಡುಗಡೆ ಮಾಡಲಾದ ಸರಕಿನಲ್ಲಿಯೂ ಒಟ್ಟು 4,35,37,295 ರು.ನಷ್ಟ ಸಂಭವಿಸಿರುವುದು ಪತ್ರದಿಂದ ಗೊತ್ತಾಗಿದೆ.

ಹಾಗೆಯೇ 2004-05ನೇ ಸಾಲಿನಿಂದ 2009-10ರವರೆಗೆ ಕೇಂದ್ರ ಸರ್ಕಾರ ಅಂತಿಮ ಪಟ್ಟಿ ದರ ನೀಡಿದ್ದು, ಅದರ ಪ್ರಕಾರ ಕ್ಲೈಂ ಮಾಡಲಾದ ವಾಸ್ತವಿಕ ವೆಚ್ಚ ಮತ್ತು ಅಂತಿಮ ಕಾಸ್ಟಿಂಗ್‌ ಶೀಟ್‌ ಪ್ರಕಾರ ದರಗಳ ಪ್ರಕಾರ ಡ್ರೈಯೇಜ್‌ ನಷ್ಟ ಹೊರತುಪಡಿಸಿ ಒಟ್ಟು 42,04,55,186 ರು. ವ್ಯತ್ಯಾಸ ಕಂಡು ಬಂದಿದೆ. 2013-14ರಿಂದ 2015-16ನೇ ಸಾಲಿನ ಅಂತಿಮ ಕಾಸ್ಟಿಂಗ್‌ ಶೀಟ್‌ ಇನ್ನು ಹೊರಡಿಸದಿರುವುದು ತಿಳಿದು ಬಂದಿದೆ.

ಶಿವಮೊಗ್ಗ, ದಾವಣಗೆರೆ, ಹಾವೇರಿ, ಧಾರವಾಡ, ಕೊಪ್ಪಳ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಮೆಕ್ಕಜೋಳ, ಭತ್ತ,ರಾಗಿ, ಜೋಳವನ್ನು ಮೂರು ನಿಗಮಗಳು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ಖರೀದಿಸಿದ್ದವು.

2016-17ನೇ ಸಾಲಿನಲ್ಲಿ ಯಾವುದೇ ಖರೀದಿ ಪ್ರಕ್ರಿಯೆ ನಡೆದಿಲ್ಲ. 2017-18ನೇ ಸಾಲಿನಲ್ಲಿ ಕೇವಲ ರಾಗಿ ಖರೀದಿ ಪ್ರಕ್ರಿಯೆ ನಡೆದಿದೆ. 2018-19 ಮತ್ತು 2019-20ನೇ ಸಾಲಿನಲ್ಲಿ ಭತ್ತವನ್ನು ಮಿಲ್‌ ಪಾಯಿಂಟ್‌ ಖರೀದಿ ಪ್ರಕ್ರಿಯೆಯಡಿ ಅಕ್ಕಿ ಗಿರಣಿ ಮಾಲೀಕರ ಸುಪರ್ದಿಯಲ್ಲಿ ನಿರ್ವಹಿಸಿರುವುದು ಪತ್ರದಿಂದ ಗೊತ್ತಾಗಿದೆ.

SUPPORT THE FILE

Latest News

Related Posts