ಎಲ್‌ಇಡಿ ಹಗರಣ; ವಾರ್ಷಿಕ ವಿದ್ಯುತ್‌ ಬಿಲ್‌ ಇಲ್ಲದಿದ್ದರೂ 240 ಕೋಟಿ ಎಂದು ಸುಳ್ಳು ಮಾಹಿತಿ?

ಬೆಂಗಳೂರು; ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ದೀಪಗಳ ನಿರ್ವಹಣೆ ಮತ್ತು ಬಿಲ್‌ಗಳ ವಿವರ ಇಲ್ಲದೆಯೇ ವಾರ್ಷಿಕ ಬಿಲ್‌ ಪಾವತಿ ಮೊತ್ತ 240 ಕೋಟಿ ಎಂದು ಘೋಷಿಸಿದ್ದ ಅಧಿಕಾರಿಗಳು ಟೆಂಡರ್‌ನಲ್ಲಿ ಸುಳ್ಳು ಮಾಹಿತಿ ನೀಡಿರುವ ಪ್ರಕರಣ ಇದೀಗ ಹೊರಬಿದ್ದಿದೆ.

ಶೇ.85.50ರಷ್ಟು ಖಾತರಿ ವಿದ್ಯುತ್‌ ಉಳಿತಾಯವಾಗುವ ಬಗ್ಗೆ ಯಾವುದೇ ಪುರಾವೆಗಳಿಲ್ಲದೆಯೇ ಟೆಂಡರ್‌ ಅನುಮೋದಿಸಿದ್ದರ ಬೆನ್ನಲ್ಲೇ ಬಿಲ್‌ಗಳ ವಿವರ ಇಲ್ಲದಿರುವುದು ಮತ್ತು ಸುಳ್ಳು ಮಾಹಿತಿ ನೀಡಿರುವುದು ಮುನ್ನೆಲೆಗೆ ಬಂದಿದೆ.

ಪಾಲಿಕೆ ವ್ಯಾಪ್ತಿಯ ಬೀದಿ ದೀಪಗಳಲ್ಲಿ ಎಲ್‌ ಇ ಡಿ ಅಳವಡಿಸುವ ವಿಷಯಕ್ಕೆ ಸಂಬಂಧಿಸಿದಂತೆ ಮೇಯರ್‌ ಗೌತಮ್‌ ಕುಮಾರ್‌ ಅವರು 2020ರ ಜೂನ್‌ 18ರಂದು ನಡೆಸಿದ್ದ ಸಭೆಯಲ್ಲಿ ಎಲ್‌ ಇ ಡಿ ಅಳವಡಿಸುವ ಹಿಂದಿನ ಹಲವು ರಹಸ್ಯಗಳು ಬಹಿರಂಗವಾಗಿವೆ. ಸಭೆಯ ನಡವಳಿ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ವಾರ್ಷಿಕ ವಿದ್ಯುತ್‌ ಬಿಲ್‌ನ ವಿವರ ಇಲ್ಲದೆಯೇ ಟೆಂಡರ್‌ ಮೊತ್ತವನ್ನು 240 ಕೋಟಿ ರು. ಎಂದು ನಿಗದಿಪಡಿಸಿದ್ದು ಮತ್ತು ಬಿಲ್‌ಗಳ ವಿವರ ಇಲ್ಲದೆಯೇ ಮೊತ್ತ ನಿಗದಿಪಡಿಸಿದ್ದ ಅಧಿಕಾರಿಗಳು ಟೆಂಡರ್‌ನಲ್ಲಿ ಸುಳ್ಳು ಮಾಹಿತಿ ನೀಡಿದ್ದರೇ ಎಂಬ ಅನುಮಾನವೂ ವ್ಯಕ್ತವಾಗಿದೆ.

ಸುಮಾರು 4,85,000 ಸಾಂಪ್ರದಾಯಕ ಬೀದಿ ದೀಪಗಳ ಬದಲಿಗೆ ಎಲ್‌ ಇ ಡಿ ದೀಪಗಳನ್ನು ಅಳವಡಿಸಲು ಮುಂದಾಗಿರುವ ಪಾಲಿಕೆಯ ಅಧಿಕಾರಿಗಳ ಬಳಿ ಅಷ್ಟು ಸಂಖ್ಯೆಯಲ್ಲಿರುವ ಬೀದಿ ದೀಪಗಳ ವಿವರಗಳೂ ಲಭ್ಯವಿರಲಿಲ್ಲ ಎಂಬ ಸಂಗತಿಯನ್ನು ನಡವಳಿ ಹೊರಗೆಡವಿದೆ.

‘ಟೆಂಡರ್‌ ಪ್ರಕ್ರಿಯೆ ಕೈಗೊಂಡಿದ್ದ ಐ ಎಫ್‌ ಸಿ ಸಂಸ್ಥೆಯವರು ವಾಸ್ತವ ಅಂಕಿ ಅಂಶಗಳಾದ 4,85,000 ಸಂಖ್ಯೆಯ ಸಾಂಪ್ರದಾಯಕ ಬೀದಿ ದೀಪಗಳು, ವಿದ್ಯುತ್‌ ಬಿಲ್‌ ಪಾವತಿಯ ದೃಢೀಕೃತ ದಾಖಲಾತಿಗಳನ್ನು ಪರಿಗಣಿಸದೆಯೇ ಟೆಂಡರ್‌ ದಸ್ತಾವೇಜನ್ನು ಸಿದ್ಧಪಡಿಸಿ ಟೆಂಡರ್‌ನಲ್ಲಿ ತಪ್ಪು ಅಂಕಿ ಅಂಶಗಳನ್ನು ನಮೂದಿಸಿ ದಸ್ತಾವೇಜನ್ನು ಅಂತಿಮಗೊಳಿಸಲಾಗಿದೆ. ಹೀಗಾಗಿ ಐಎಫ್‌ಸಿ ಸಂಸ್ಥೆಯನ್ನು ಏಕೆ ಕಪ್ಪು ಪಟ್ಟಿಗೆ ಸೇರಿಸಬಾರದು. ಈ ಬಗ್ಗೆ ವರದಿ ನೀಡಬೇಕು,’ ಎಂದು ಸಭೆ ಅಧ್ಯಕ್ಷತೆ ವಹಿಸಿದ್ದ ಮೇಯರ್‌ ಗೌತಮ್‌ ಕುಮಾರ್‌ ಅವರು ಅಧಿಕಾರಿಗಳಿಗೆ ಸೂಚಿಸಿದ್ದರು.

ಯೋಜನೆ ಅನುಷ್ಠಾನ ಸಂಬಂಧ ಎಸ್ಕೋ ಸಂಸ್ಥೆಗೆ ಕಾರ್ಯಾದೇಶ ನೀಡಿ 15 ತಿಂಗಳು ಕಳೆದಿದ್ದರೂ ಒಕ್ಕೂಟ ಸಂಸ್ಥೆಗಳ ಕರಾರು ಅಂತಿಮಗೊಂಡಿರಲಿಲ್ಲ. ಅಲ್ಲದೆ ಲೆಟರ್‌ ಆಫ್‌ ಅಕ್ಸೆಪ್ಟೆನ್ಸ್‌ ಎಸ್ಕೋ ಒಕ್ಕೂಟದ ಮಧ್ಯೆ ಆಗದ ಕಾರಣ ಕಾಮಗಾರಿ ಅನುಷ್ಠಾನ ವಿಳಂಬವಾಗಿತ್ತು. ಆದರೆ ಅಧಿಕಾರಿಗಳು ಈ ಸಂಬಂಧ ಯಾವುದೇ ಕ್ರಮ ವಹಿಸಿರಲಿಲ್ಲ ಎಂಬುದು ನಡವಳಿಯಿಂದ ತಿಳಿದು ಬಂದಿದೆ.

‘ಟೆಂಡರ್‌ ಅನುಮೋದನೆಗೆ ಪ್ರಮುಖ ಅಂಶವಾಗಿರುವ ಶೇ.85.50ರ ಖಾತರಿ ವಿದ್ಯುತ್‌ ಉಳಿತಾಯದ ಬಗ್ಗೆ ದಾಖಲಾತಿ ಇಲ್ಲದೆಯೇ ಯಾವ ಆಧಾರದ ಮೇಲೆ ಗುತ್ತಿಗೆ ಅಂತಿಮಗೊಳಿಸಲಾಗಿದೆ ಅಲ್ಲದೆ ದೇಶದ ಇತರೆ ನಗರಗಳಾದ ಪುಣೆ, ನವದೆಹಲಿಯಲ್ಲಿ ಖಾತರಿ ವಿದ್ಯುತ್‌ ಉಳಿತಾಯದ ಪ್ರಮಾಣವು ಶೇ.60ರಿಂದ 70 ಇದೆ. ಎಸ್ಕೋ ಸಂಸ್ಥೆಯು ಶೇ.85.50ರ ಖಾತರಿ ವಿದ್ಯುತ್‌ ಉಳಿತಾಯ ಮಾಡಿರುವ ಅನುಭವ ಪತ್ರವನ್ನು ನೀಡಬೇಕು ಇಲ್ಲವಾದಲ್ಲಿ ಈ ಬಗ್ಗೆ ಕೂಡಲೇ ಅಗತ್ಯ ಕ್ರಮ ವಹಿಸಲಾಗುವುದು,’ ಎಂದು ಸಭೆಯಲ್ಲಿ ಸೂಚಿಸಿರುವುದು ಗೊತ್ತಾಗಿದೆ.

ಬಾರಾಮತಿ, ಪುಣೆಯಲ್ಲಿ ಕಚೇರಿ ಹೊಂದಿದೆ ಎಂದು ಹೇಳಿದ್ದ ಸಮುದ್ರ ಎಲೆಕ್ಟ್ರಾನಿಕ್‌ ಸಿಸ್ಟಮ್‌ ಪ್ರೈ ಲಿಮಿಟೆಡ್‌ ಸ್ಥಳೀಯ ಕಚೇರಿ ಮತ್ತು ಅದಕ್ಕೆ ಅಗತ್ಯ ಸಿಬ್ಬಂದಿ ನೇಮಿಸಿಲ್ಲ ಎಂಬ ಅಂಶವು ನಡವಳಿಯಿಂದ ಗೊತ್ತಾಗಿದೆ. ಈ ಕುರಿತು ಸಂಸ್ಥೆಯಿಂದ ಸಮಜಾಯಿಷಿ ಪಡೆಯಬೇಕು ಮತ್ತು ಕಾನೂನುರೀತಿ ಕ್ರಮ ವಹಿಸಬೇಕು ಎಂದು ಮೇಯರ್ ಸಭೆಯಲ್ಲಿ ಸೂಚಿಸಿದ್ದರು ಎಂಬುದು ನಡವಳಿಯಿಂದ ತಿಳಿದು ಬಂದಿದೆ.

ಖಾಸಗಿ ಸಹಭಾಗಿತ್ವದಡಿಯಲ್ಲಿ ಎಲ್‌ ಇ ಡಿ ಲೈಟಿಂಗ್‌ ಅಳವಡಿಸುವ ಸಂಬಂಧ ಟೆಂಡರ್‌ ಒಕ್ಕೂಟ ಸಂಸ್ಥೆಗಳೊಂದಿಗೆ ಸಂಬಂಧವೇ ಇಲ್ಲದ ಖಾಸಗಿ ಕಂಪನಿ ಸೀಮನ್ಸ್‌ಗೆ ಪಾಲಿಕೆಯ ಪೂರ್ವಾನುಮತಿ ಇಲ್ಲದೆಯೇ ಜಂಟಿ ಸಮೀಕ್ಷೆಗೆ ಅವಕಾಶ ನೀಡಿದ್ದ ಪ್ರಕರಣವನ್ನು ಮೇಯರ್‌ ಹೊರಗೆಡವಿದ್ದನ್ನು ಸ್ಮರಿಸಬಹುದು.

ಶೇ.85.50ರಷ್ಟು ಖಾತರಿ ವಿದ್ಯುತ್‌ ಉಳಿತಾಯವಾಗುವ ಬಗ್ಗೆ ಯಾವುದೇ ಪುರಾವೆಗಳಿಲ್ಲದೆಯೇ ಟೆಂಡರ್‌ ಅನುಮೋದಿಸಿದ್ದನ್ನು ಖುದ್ದು ಬಹಿರಂಗಪಡಿಸಿದ್ದ ಮೇಯರ್‌, ಕಂಪನಿ ನೀಡಿದ್ದ ಪತ್ರವು ಸರ್ಕಾರ ಮತ್ತು ಸರ್ಕಾರಿ ಸ್ವಾಮ್ಯದ ಪತ್ರವಾಗಿರಲಿಲ್ಲ ಎಂಬುದನ್ನು ಹೊರಗೆಡವಿದ್ದರು.

‘ಬಿಬಿಎಂಪಿಯಲ್ಲಿ ಸರಿಯಾದ ಲೆಕ್ಕಪತ್ರಗಳೇ ಇಲ್ಲ. ಈ ಹಿಂದೆ ಹಲವು ನೂರು ಬಾಬತ್ತುಗಳಿಗೆ ಸರಿಯಾದ ಲೆಕ್ಕಪತ್ರಗಳೇ ಇಲ್ಲ. ಈ ಹಿಂದೆ ಬಿಬಿಎಂಪಿ ಹಣಕಾಸಿನ ನಿರ್ವಹಣೆಗೆ ಹಲವು ನೂರಾರು ಖಾತೆಗಳಿದ್ದವು. ಯಾವ ದುಡ್ಡು ಯಾವ ಬಾಬತ್ತಿಗೆ ಹೋಗುತ್ತಿದೆ ಎಂಬುದೇ ಗೋಜಲುಗಳಿಂದ ಕೂಡಿದೆ. ಬಿಬಿಎಂಪಿಯ ಹಣದ ವಹಿವಾಟಿಯೇ ಅವ್ಯವಹಾರದಿಂದ ಕೂಡಿದೆ. ಬಿಲ್‌ ಮಾಹಿತಿ ಅಧಿಕಾರಿಗಳ ಬಳಿ ಇಲ್ಲದಿರುವುದು ಇದನ್ನು ದೃಢೀಕರಿಸುತ್ತಿದೆ. ಬಿಬಿಎಂಪಿ ಹಣ ವಹಿವಾಟನ್ನು ವಿಶೇಷ ಲೆಕ್ಕಪರಿಶೋಧಕರಿಂದ ಪರಿಶೋಧನೆ ನಡೆಸಿ ಒಂದು ಖಾತೆಯ ಅಡಿಯಲ್ಲಿ ಎಲ್ಲವನ್ನೂ ತರಬೇಕು,

                                                  ರವಿಕೃಷ್ಣಾರೆಡ್ಡಿ, ಕರ್ನಾಟಕ ರಾಷ್ಟ್ರಸಮಿತಿ

ಕಾಮಗಾರಿ ಅನುಷ್ಠಾನ ಸಂಸ್ಥೆಯಾಗಿರುವ ಸಮುದ್ರ ಎಲಕ್ಟ್ರಾನಿಕ್‌ ಸಿಸ್ಟಂ ಪ್ರೈ ಲಿ. ನ ಎಲ್‌ ಇ ಡಿ ಉತ್ಪಾದನಾ ಘಟಕ, ಅದರ ಸಾಮರ್ಥ್ಯ, ಕಾರ್ಖಾನೆ ಸ್ಥಳವನ್ನು ಪರಿಶೀಲನೆ ಮಾಡಿರಲಿಲ್ಲ ಎಂಬುದನ್ನೂ ಪತ್ತೆ ಹಚ್ಚಿದ್ದರು.

SUPPORT THE FILE

Latest News

Related Posts