ಆಂಟಿಜೆನ್‌ ಕಿಟ್‌ಗೆ ಹೆಚ್ಚುವರಿ ದರ; ಷರತ್ತು ಪೂರೈಸದ ಕಂಪನಿಗಳ ವಿರುದ್ಧ ಕ್ರಮದಲ್ಲೂ ಪಕ್ಷಪಾತ

ಬೆಂಗಳೂರು; ಷರತ್ತಿನ ಪ್ರಕಾರ ನಿಗದಿತ ಅವಧಿಯೊಳಗೆ ವೈದ್ಯಕೀಯ ಪರಿಕರಗಳನ್ನು ಪೂರೈಸದ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವುದರಲ್ಲಿಯೂ ಪಕ್ಷಪಾತ ಅನುಸರಿಸುತ್ತಿರುವ ಕರ್ನಾಟಕ ಸ್ಟೇಟ್‌ ಡ್ರಗ್‌ ಲಾಜಿಸ್ಟಿಕ್‌ ವೇರ್‌ಹೌಸಿಂಗ್‌ ಸೊಸೈಟಿ ಉನ್ನತ ಅಧಿಕಾರಿಗಳು, ಭಾರತ ಸರ್ಕಾರ ನಿಗದಿಪಡಿಸಿರುವ ದರಕ್ಕಿಂತಲೂ ಹೆಚ್ಚಿನ ದರದಲ್ಲಿ ಉಪಕರಣಗಳನ್ನು ಖರೀದಿಸಿರುವ ಪ್ರಕರಣಗಳು ಇದೀಗ ಬಹಿರಂಗವಾಗಿದೆ.

ಖರೀದಿ ಆದೇಶ ಪಡೆದ 3 ದಿನದೊಳಗೆ ಉಪಕರಣಗಳನ್ನು ಪೂರೈಸದ ಹಲವು ಕಂಪನಿಗಳು ಉನ್ನತ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕವಿದ್ದಲ್ಲಿ ಸರಬರಾಜು ಆದೇಶಗಳನ್ನು ರದ್ದುಗೊಳ್ಳದಿರುವ ಪ್ರಕರಣಳು ಬೆಳಕಿಗೆ ಬಂದಿವೆ. ಉನ್ನತ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕವಿರದ ಕಂಪನಿಗಳನ್ನು ಷರತ್ತಿನ ಅವಧಿ ಪೂರ್ಣಗೊಳ್ಳುವ ಮೊದಲೇ ಸರಬರಾಜು ಆದೇಶಗಳನ್ನು ರದ್ದುಗೊಳಿಸುತ್ತಿದೆಯಲ್ಲದೆ, ಕಪ್ಪು ಪಟ್ಟಿಗೆ ಸೇರಿಸುತ್ತಿರುವುದು ತಿಳಿದು ಬಂದಿದೆ.

ಇದಕ್ಕೆ ಹರ್ಯಾಣದ ಎಸ್‌ ಡಿ ಬಯೋ ಸೆನ್ಸರ್‌ ಕಂಪನಿ ಸೇರಿದಂತೆ ಹಲವು ಕಂಪನಿಗಳ ಪ್ರಕರಣಗಳೇ ತಾಜಾ ನಿದರ್ಶನ. ಎಸ್‌ ಡಿ ಬಯೋಸೆನ್ಸರ್‌ ಕಂಪನಿಗೆ 2020ರ ಆಗಸ್ಟ್‌ 10ರಂದು 3 ಲಕ್ಷ ಪ್ರಮಾಣದ ರ್ಯಾಪಿಡ್‌ ಆಂಟಿಜೆನ್‌ ಡಿಟೆಕ್ಷನ್‌ ಕಿಟ್‌ ಸರಬರಾಜು ಮಾಡಲು 14,28,00,000 ಮೊತ್ತಕ್ಕೆ ಆದೇಶ ನೀಡಿರುವುದು ತಿಳಿದು ಬಂದಿದೆ. ಈ ಕಂಪನಿಗೆ ಕಿಟ್‌ವೊಂದಕ್ಕೆ 476 ರು. ದರದಲ್ಲಿ ಆದೇಶ ನೀಡಿ 10 ದಿನಗಳಾದರೂ ಈವರೆವಿಗೂ ಈ ಕಂಪನಿ ಪೂರ್ಣ ಪ್ರಮಾಣದಲ್ಲಿ ಉಪಕರಣಗಳನ್ನು ಸರಬರಾಜು ಮಾಡಿಲ್ಲ ಎಂದು ಗೊತ್ತಾಗಿದೆ.

ಈ ಕಂಪನಿ ಆದೇಶ ಪಡೆದಿದ್ದ 3 ಲಕ್ಷ ಕಿಟ್‌ ಪೈಕಿ ಆಗಸ್ಟ್‌ 14ರಂದು 89,000 ಮತ್ತು 20ರಂದು 90,000 ಸೇರಿ ಒಟ್ಟು 1,79,000 ಉಪಕರಣಗಳಷ್ಟೇ ಸರಬರಾಜು ಮಾಡಿದೆ ಎಂದು ಗೊತ್ತಾಗಿದೆ. ಷರತ್ತಿನ ಪ್ರಕಾರ ಆದೇಶ ಪಡೆದ 3 ದಿನದೊಳಗೆ ಉಪಕರಣಗಳನ್ನು ಸರಬರಾಜು ಮಾಡದೇ ಇದ್ದರೂ ಈವರೆವಿಗೂ ಸರಬರಾಜು ಆದೇಶ ರದ್ದುಗೊಳಿಸಿಲ್ಲ. ಅಲ್ಲದೆ ಕಂಪನಿಯನ್ನು ಕಪ್ಪು ಪಟ್ಟಿಗೂ ಸೇರಿಸಿಲ್ಲ , ಭದ್ರತಾ ಠೇವಣಿ ಹಣವನ್ನೂ ಮುಟ್ಟುಗೋಲು ಹಾಕಿಕೊಂಡಿಲ್ಲ ಎನ್ನಲಾಗಿದೆ.

 

ಹೆಚ್ಚುವರಿ ದರ ಪಾವತಿ?

ರ್ಯಾಪಿಡ್‌ ಆಂಟಿಜೆನ್‌ ಡಿಟೆಕ್ಷನ್‌ ಕಿಟ್‌ವೊಂದಕ್ಕೆ 410 ಮತ್ತು ಜಿಎಸ್‌ಟಿ ಸೇರಿ ಒಟ್ಟು 451 ರು. ನಿಗದಿಪಡಿಸಿದೆ. ಆದರೆ ಹರ್ಯಾಣ ಮೂಲದ ಕಂಪನಿಗೆ ಕಿಟ್‌ವೊಂದಕ್ಕೆ ಒಟ್ಟು 25 ರು. ಹೆಚ್ಚುವರಿ ದರಕ್ಕೆ ಆದೇಶ ನೀಡಿದೆ. ಇದು ಕೇಂದ್ರ ಸರ್ಕಾರದ ಮಾರ್ಗಸೂಚಿ ಉಲ್ಲಂಘನೆ ಎಂದು ಹೇಳಲಾಗಿದೆ.

ಇದಲ್ಲದೆ ತಲಾ ಪಿಪಿಇ ಕಿಟ್‌ವೊಂದಕ್ಕೆ 575 ರು ದರದಲ್ಲಿ ಅಂದಾಜು 45 ಕೋಟಿ ಮೊತ್ತದಲ್ಲಿ 8.5 ಲಕ್ಷ ಕಿಟ್‌ಗಳನ್ನು ಖರೀದಿಸಲು ಒಟ್ಟು 16 ಕಂಪನಿಗಳಿಗೆ 2020ರ ಜುಲೈ 29ರಂದು ಸರಬರಾಜು ಆದೇಶ ನೀಡಿದೆ. ಪೊಟೆನ್ಷಿಯಲ್‌ ಹೆಲ್ತ್‌ ಡೆವಲೆಪ್‌ಮೆಂಟ್‌ ಪ್ರೈವೈಟ್‌ ಲಿಮಿಟೆಡ್‌, ಆರ್‌ಆರ್‌ಕೆ ಗ್ಲೋಬಲ್‌, ಎಕ್ಸಲೆಂಟ್‌ ಮಾರ್ಕೇಟಿಂಗ್‌, ಫ್ಯಾಬ್‌ ಡಿಸ್ಟ್ರಿಬ್ಯೂಟರ್ಸ್‌, ವಿನ್‌ಕು ಗ್ಲೋಬಲ್‌, ಡಿ ಜೆ ಅಪರೇಲ್ಸ್‌, ಎಂ ವಿ ಇನ್ಫ್ರಾ ಸರ್ವಿಸ್‌ ಪ್ರೈ.ಲಿ., ನಾಸಾ ಟೆಕ್ಸ್‌, ಆರಾಧನಾ ಕಾರ್ಪೋರೇಟ್ಸ್‌ ಸೊಲ್ಯೂಷನ್ಸ್‌, ಡಿಜೆಎಸ್‌ ಕ್ಲಾತಿಂಗ್‌, ಶ್ರೀ ಮಾರ್ಕೇಟಿಂಗ್‌, ಅಮೃತಾಂಶು ಫೆಸಿಲಿಟಿ ಮ್ಯಾನೇಜ್‌ಮೆಂಟ್‌, ಅಭಿನವ್‌ ಫ್ಯಾಬ್ರಿಕ್ಸ್‌ ಕರೂರು, ಕಾಪ್‌ ಅಸೋಸಿಯೇಟ್ಸ್‌, ಎಚ್‌ ಅಂಡ್‌ ಝಡ್‌ ಅಪರೇಲ್ಸ್‌, ಪಿಆರ್‌ಒ ಫಿಸಿಯೋ ಹೆಲ್ತ್‌ ಕೇರ್‌ ಪ್ರೈವೈಟ್‌ ಲಿಮಿಟೆಡ್‌ ಕಂಪನಿಗಳು 2020ರ ಜೂನ್‌ 5ರಂದು ಬಿಡ್‌ನಲ್ಲಿ ಭಾಗವಹಿಸಿದ್ದವು.

ಈ ಕಂಪನಿಗಳು ಜುಲೈ 29ರಂದು ಸರಬರಾಜು ಆದೇಶ ಪಡೆದಿದ್ದರೂ ಷರತ್ತಿನ ಪ್ರಕಾರ ಈವರೆವಿಗೂ ಪೂರ್ಣ ಪ್ರಮಾಣದಲ್ಲಿ ಕಿಟ್‌ಗಳನ್ನು ಸರಬರಾಜು ಮಾಡಿಲ್ಲ ಎಂದು ತಿಳಿದು ಬಂದಿದೆ. ಆದರೂ ಕೆಡಿಎಲ್‌ಡಬ್ಲ್ಯೂಎಸ್‌ನ ಉನ್ನತ ಅಧಿಕಾರಿಗಳು ಸರಬರಾಜು ಆದೇಶ ರದ್ದುಗೊಳಿಸಿಲ್ಲ, ಭದ್ರತಾ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಂಡಿಲ್ಲವಲ್ಲದೆ ಕಂಪನಿಗಳನ್ನು ಕಪ್ಪು ಪಟ್ಟಿಗೂ ಸೇರಿಸಿಲ್ಲ ಎಂದು ಗೊತ್ತಾಗಿದೆ.

13.50 ಕೋಟಿ ಮೊತ್ತದಲ್ಲಿ 3 ಲಕ್ಷ ರ‍್ಯಾಪಿಡ್ ಆಟಿಜೆನ್‌ ಕಿಟ್‌ಗಳನ್ನು ಖರೀದಿಸಲು ಆಸ್ಚೋ ಏಜೆನ್ಸಿಗೆ (ಎಲ್‌-1) ನೀಡಿದ್ದ ಆದೇಶವನ್ನು ಕರ್ನಾಟಕ ಸ್ಟೇಟ್‌ ಡ್ರಗ್‌ ಲಾಜಿಸ್ಟಿಕ್‌ ವೇರ್‌ಹೌಸಿಂಗ್‌ ಸೊಸೈಟಿಯು ರದ್ದುಗೊಳಿಸಿದ್ದನ್ನು ಸ್ಮರಿಸಬಹುದು.

ಆಸ್ಚೋ ಏಜೆನ್ಸಿಸ್‌ಗೆ ತಡವಾಗಿ ಆದೇಶದ ಪ್ರತಿಯನ್ನು ನೀಡಿತ್ತು. ಬಳಿಕ ಉಪಕರಣಗಳನ್ನು ನಿಗದಿತ ಅವಧಿಯಲ್ಲಿ ಪೂರೈಕೆ ಮಾಡಿಲ್ಲ ಎಂಬ ಕಾರಣವನ್ನು ಮುಂದೊಡ್ಡಿ ಆದೇಶವನ್ನು ರದ್ದುಗೊಳಿಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಆದರೆ ಏಜೆನ್ಸಿಯು ಅಧಿಕಾರಿಗಳಿಗೆ ಕಮಿಷನ್‌ ನೀಡದಿರುವುದೇ ಆದೇಶ ರದ್ದುಗೊಳ್ಳಲು ಮೂಲ ಕಾರಣ ಎಂದು ಹೇಳಲಾಗುತ್ತಿದೆ. ಅಧಿಕಾರಿಗಳು ಪಕ್ಷಪಾತ ಎಸಗುತ್ತಿರುವುದು ಮತ್ತು ಹೆಚ್ಚುವರಿ ದರದಲ್ಲಿ ಉಪಕರಣಗಳನ್ನು ಖರೀದಿಸುತ್ತಿರುವ ಪ್ರಕರಣಗಳು ಸಾಲುಸಾಲಾಗಿ ಹೊರಬೀಳುತ್ತಿದ್ದರೂ ಆರೋಗ್ಯ ಸಚಿವ ಬಿ ಶ್ರೀರಾಮುಲು ಅವರು ಈವರೆವಿಗೂ ಎಚ್ಚೆತ್ತುಕೊಳ್ಳದಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

SUPPORT THE FILE

Latest News

Related Posts