ಬೆಂಗಳೂರು; ಪಿಪಿಇ ಕಿಟ್, ಎನ್-95 ಮಾಸ್ಕ್ ಸೇರಿದಂತೆ ವೈದ್ಯಕೀಯ ಉಪಕರಣಗಳನ್ನು ಖರೀದಿಸುವ ಪ್ರಸ್ತಾವನೆಗಳಿಗೆ ತಜ್ಞರ ಅಭಿಪ್ರಾಯ, ತಾಂತ್ರಿಕ ಮಾಹಿತಿ ಮತ್ತು ವಸ್ತು ನಿಷ್ಠ ಶಿಫಾರಸ್ಸ ಮತ್ತು ಇದಕ್ಕೆ ಸೂಕ್ತ ಸಮರ್ಥನೆಗಳಿಲ್ಲದಿದ್ದರೂ 33.00 ಕೋಟಿ ರು. ಮೊತ್ತದ ಪ್ರಸ್ತಾವನೆಗೆ ವೈದ್ಯಕೀಯ ಶಿಕ್ಷಣ ಇಲಾಖೆ ಇದೀಗ ಸಚಿವ ಸಂಪುಟದ ಬಾಗಿಲು ಬಡಿದಿದೆ. ಪ್ರಸ್ತಾವನೆಗಳಿಗೆ ತರಾತುರಿಯಲ್ಲಿ ಘಟನೋತ್ತರ ಅನುಮೋದನೆ ಪಡೆಯಲು ಹೊರಟಿರುವ ಇಲಾಖೆಯ ನಡೆ ಹಲವು ಸಂಶಯಗಳಿಗೆ ಕಾರಣವಾಗಿದೆ.
ವೈದ್ಯಕೀಯ ಮೂಲ ಸೌಕರ್ಯಗಳನ್ನು ಮೇಲ್ದರ್ಜೆಗೇರಿಸುವುದು ಮತ್ತು ಅಗತ್ಯ ವೈದ್ಯಕೀಯ ಪರಿಕರಗಳ ಖರೀದಿ ಹೆಸರಿನಲ್ಲಿ 33.00 ಕೋಟಿ ರು.ಗಳ ಅಂದಾಜು ಮೊತ್ತದ ಪ್ರಸ್ತಾವನೆಗೆ ಘಟನೋತ್ತರ ಅನುಮೋದನೆ ಪಡೆಯಲು ವೈದ್ಯಕೀಯ ಶಿಕ್ಷಣ ಇಲಾಖೆ ಕಡತವನ್ನು ಸಚಿವ ಸಂಪುಟದ ಮುಂದಿರಿಸಿದೆ.
ಇನ್ನು,ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ನಡೆದಿದೆ ಎನ್ನಲಾಗಿರುವ ಗಂಭೀರ ಸ್ವರೂಪದ ಅಕ್ರಮಗಳು ಮತ್ತು ಖರೀದಿಸಲಾಗಿರುವ ಉಪಕರಣಗಳ ಕುರಿತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಲೆಕ್ಕ ಕೇಳಿದ ಬೆನ್ನಲ್ಲೇ ವೈದ್ಯಕೀಯ ಶಿಕ್ಷಣ ಇಲಾಖೆ, ತರಾತುರಿಯಲ್ಲಿ ಘಟನೋತ್ತರ ಅನುಮೋದನೆ ಪಡೆಯಲು ಕಡತವನ್ನು ಸಚಿವ ಸಂಪುಟದ ಮುಂದಿರಿಸಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳು ‘ದಿ ಫೈಲ್’ಗೆ ಲಭ್ಯವಾಗಿದೆ.
ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆ ಅನುದಾನದ ಪೈಕಿ 33.00 ಕೋಟಿ ರು.ಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವೈದ್ಯಕೀಯ ಶಿಕ್ಷಣ ಇಲಾಖೆಗೆ ಬಿಡುಗಡೆ ಮಾಡಿದೆ. ಈ ಅಂದಾಜು ಮೊತ್ತದ ಪ್ರಸ್ತಾವನೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈಗಾಗಲೇ ಅನುಮೋದಿಸಿರುವುದು ಸಚಿವ ಸಂಪುಟದ ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
‘ವಿಶ್ವ ಆರೋಗ್ಯ ಸಂಸ್ಥೆ ಅಂತಾರಾಷ್ಟ್ರೀಯ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಿಸಿದೆ. ಪ್ರಸ್ತುತ ರಾಜ್ಯದಲ್ಲಿ 40,000 ಮಂದಿ ಕೊರೊನಾ ವೈರಸ್‌ನಿಂದ ಬಾಧಿತರಾಗಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಲಿದೆ. ಈ ಸವಾಲನ್ನು ಎದುರಿಸುವ ಸಲುವಾಗಿ ವೈದ್ಯಕೀಯ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸಿದರೆ ಮಾತ್ರ ಸೋಂಕಿತರಿಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದು. ಹೀಗಾಗಿ ಅಗತ್ಯ ಪರಿಕರಗಳನ್ನು ಖರೀದಿಸಲು 33.00 ಕೋಟಿ ರು. ಅಂದಾಜು ಮೊತ್ತ ಪ್ರಸ್ತಾವನೆ ಸಲ್ಲಿಸಲಾಗಿದೆ,’ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಸಮರ್ಥಿಸಿಕೊಂಡಿದೆ.
ಎನ್-95 ಮಾಸ್ಕ್, ಮೂರು ಪದರುಳ್ಳ ಮಾಸ್ಕ್, ಪಿಪಿಇ ಕಿಟ್, ವೆಂಟಿಲೇಟರ್ಸ್, ಔಷಧ ಸಾಮಗ್ರಿಗಳ ಖರೀದಿಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 150 ಕೋಟಿ ರು., ವೈದ್ಯಕೀಯ ಶಿಕ್ಷಣ ಇಲಾಖೆಗೆ 50.00 ಕೋಟಿ ರು.ಗಳನ್ನು ವಿಶೇಷ ಪ್ರಕರಣದಡಿಯಲ್ಲಿ ಆರ್ಥಿಕ ಇಲಾಖೆ ಬಿಡುಗಡೆ ಮಾಡಿರುವುದು ತಿಳಿದು ಬಂದಿದೆ.
10.00 ಲಕ್ಷ ಪ್ರಮಾಣದ ಎನ್-95 ಮಾಸ್ಕ್‌ಗಳನ್ನು ಖರೀದಿಸಲು 2020ರ ಏಪ್ರಿಲ್ 30ರಂದು ಒಟ್ಟು 29.50 ಕೋಟಿ ರು.ಗಳನ್ನು ಸರ್ಕಾರ ಬಿಡುಗಡೆ ಮಾಡಿತ್ತು. ಆದರೆ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ 44,99,46,455 ರು.ಮೊತ್ತದಲ್ಲಿ ಎನ್ -95 ಮಾಸ್ಕ್‌ಗಳನ್ನು ಖರೀದಿಸಲು ಪ್ರಸ್ತಾವನೆ ಸಲ್ಲಿಸಿದ್ದನ್ನು ‘ದಿ ಫೈಲ್’ ಜೂನ್ 24ರಂದೇ ಬಹಿರಂಗಗೊಳಿಸಿದ್ದನ್ನು ಸ್ಮರಿಸಬಹುದು.
ಅದೇ ರೀತಿ 464.81 ಕೋಟಿ ರು.ಮೊತ್ತದಲ್ಲಿ ಸಾಮಗ್ರಿ/ಉಪಕರಣಗಳನ್ನು ಖರೀದಿಸಲು ಪ್ರಸ್ತಾಪಿಸಿದ್ದ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ, ಆ ನಂತರ 815.85 ಕೋಟಿ ರು.ಮೊತ್ತದಲ್ಲಿ ಉಪಕರಣಗಳನ್ನು ಖರೀದಿಸಲು ಪ್ರಸ್ತಾಪಿಸಿತ್ತು. ಆದರೆ ಈ ಮೊತ್ತ ಎರಡು ಪಟ್ಟು ಹೆಚ್ಚಾಗಿರುವುದಕ್ಕೆ ಸೂಕ್ತ ಸಮರ್ಥನೆಯನ್ನೂ ನೀಡಿರಲಿಲ್ಲ.
ಹಾಗೆಯೇ 815.85 ಕೋಟಿ ರು.ವೆಚ್ಚವನ್ನು ಯಾವ ಮೂಲದಿಂದ ಭರಿಸಬಹುದು ಎಂಬ ಬಗ್ಗೆ ತಜ್ಞರ ವರದಿಯೂ ಮಾಹಿತಿ ನೀಡಿರಲಿಲ್ಲ. ಉಪಕರಣಗಳಿಗೆ 183.38 ಕೋಟಿ ರು., ಡಯೋಗ್ನೋಸ್ಟಿಕ್ ಉಪಕರಣಗಳಿಗೆ 118.64 ಕೋಟಿ ರು., ಇನ್ನಿತರೆ ಉಪಕರಣಗಳಿಗೆ 118.64 ಕೋಟಿ ರು., ಮೂಲ ಸೌಕರ್ಯಗಳಿಗೆ 8.52 ಕೋಟಿ ರು., ಅಂಬುಲೆನ್ಸ್‌ಗಳಿಗೆ 8.58 ಕೋಟಿ ರು., ಕನ್ಸೂಮಬೆಲ್ಸ್‌ಗಳಿಗೆ 496.72 ಕೋಟಿ ಸೇರಿ ಒಟ್ಟು 815.85 ಕೋಟಿ ರು.ಎಂದು ಅಂದಾಜು ವೆಚ್ಚದ ಪ್ರಸ್ತಾವನೆ ಸಲ್ಲಿಸಿದ್ದನ್ನು ಸ್ಮರಿಸಬಹುದು.
ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಇದರ ವ್ಯಾಪ್ತಿಯಲ್ಲಿರುವ ಸ್ವಾಯತ್ತ ವೈದ್ಯಕೀಯ ವಿಜ್ಞಾನ ಸಂಸ್ಥೆಗಳು ಮಾಸ್ಕ್, ವೆಂಟಿಲೇಟರ್ಸ್ ಸೇರಿದಂತೆ ಇನ್ನಿತರೆ ವೈದ್ಯಕೀಯ ಪರಿಕರಗಳನ್ನು ದುಪ್ಪಟ್ಟು ದರದಲ್ಲಿ ಖರೀದಿಸಿ ಸರ್ಕಾರದ ಬೊಕ್ಕಸಕ್ಕೆ ಅತೀವ ನಷ್ಟಕ್ಕೆ ಕಾರಣವಾಗಿವೆ ಎಂಬ ಆರೋಪಕ್ಕೆ ಗುರಿಯಾಗಿವೆ. ಖರೀದಿ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮಗಳ ಕುರಿತು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಈಗಾಗಲೇ ಪರಿಶೀಲನೆ ಕಾರ್ಯವನ್ನು ಕೈಗೆತ್ತಿಕೊಂಡಿದೆ.