ಬೆಂಗಳೂರು; ಬೇಲೇಕೇರಿ ಮತ್ತು ಕಾರವಾರ ಬಂದರುಗಳಲ್ಲಿ ಅರಣ್ಯ ಇಲಾಖೆ ವಶಪಡಿಸಿಕೊಂಡಿರುವ ಕಬ್ಬಿಣದ ಅದಿರಿನ ರಾಶಿಯನ್ನು ವಿಲೇ ಮಾಡುವ ಸಂಬಂಧ ಕಾರವಾರ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಹಲವು ಪ್ರಕರಣಗಳು ವಿಚಾರಣೆ ಹಂತದಲ್ಲಿರುವಾಗಲೇ ಆರೋಪಿತ ಕಂಪನಿಗಳು ಅದಿರನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳಲು ಬಿರುಸಿನಿಂದ ಕಸರತ್ತು ನಡೆಸುತ್ತಿವೆ. ಅರಣ್ಯ ಮತ್ತು ಗಣಿ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕೂಡ ತೆರೆಮರೆಯಲ್ಲಿದ್ದುಕೊಂಡೇ ಅದಿರನ್ನು ವಿಲೇ ಮಾಡಲು ಹಾತೊರೆಯುತ್ತಿದ್ದಾರೆ.
ಜಾರಿಯಲ್ಲಿರುವ ಲಾಕ್‌ಡೌನ್ ಸಂದರ್ಭವನ್ನು ಬಳಸಿಕೊಳ್ಳಲು ಮುಂದಾಗಿರುವ ಗಣಿ ಮತ್ತು ಭೂ ವಿಜ್ಞಾನ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಗಣಿ ಉದ್ಯಮಿಗಳ ಪರ ವಕಾಲತ್ತು ಹಾಕಿರುವುದು ತಿಳಿದು ಬಂದಿದೆ. ರಾಜ್‌ಮಹಲ್ ಸಿಲ್ಕ್ ಪ್ರಕರಣದಲ್ಲಿ ಅಧಿಕಾರಿಗಳು ಅದಿರಿನ ರಾಶಿಯನ್ನು ವಿಲೇ ಮಾಡಲು ಅತ್ಯುತ್ಸಾಹ ತೋರುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅರಣ್ಯಾಧಿಕಾರಿಗಳ ಈ ನಡೆ ಹಿಂದೆ ಸಚಿವ ಆನಂದ್‌ಸಿಂಗ್ ಅವರ ಪ್ರಭಾವ ಇದೆ ಎಂದು ತಿಳಿದು ಬಂದಿದೆ.
ನ್ಯಾಯಾಲಯದಲ್ಲಿ ಹಲವು ಪ್ರಕರಣಗಳು ಇದುವರೆಗೂ ಇತ್ಯರ್ಥವಾಗದಿದ್ದರೂ ಅದಿರಿನ ರಾಶಿಯನ್ನು ವಿಲೇ ಮಾಡಲು ಮುಂದಾಗಿರುವ ಅಧಿಕಾರಿಗಳ ನಡೆ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಪ್ರಕರಣಗಳ ಕುರಿತು ನ್ಯಾಯಾಲಯ ಇನ್ನೂ ಅಂತಿಮ ತೀರ್ಪು ಪ್ರಕಟಿಸದಿದ್ದರೂ ಕಂಪನಿಗಳನ್ನು ಷರತ್ತುಗೊಳಪಡಿಸಿ ಇ-ಟೆಂಡರ್ ಮೂಲಕ ಅದಿರು ವಿಲೇ ಮಾಡಲು ಅರಣ್ಯ ಇಲಾಖೆ ಅಧಿಕಾರಿಗಳು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕದ ತಟ್ಟಿದ್ದಾರೆ ಎಂದು ಗೊತ್ತಾಗಿದೆ.
ಬೇಲೇಕೇರಿ ಮತ್ತು ಕಾರವಾರ ಬಂದರುಗಳಲ್ಲಿ ಅರಣ್ಯ ಇಲಾಖೆ ವಶಪಡಿಸಿಕೊಂಡಿರುವ ಕಬ್ಬಿಣದ ಅದಿರಿನ ರಾಶಿಯನ್ನು ವಿಲೇ ಮಾಡುವುದಕ್ಕೆ ಸಂಬಂಧಿಸಿದಂತೆ 2107ರಲ್ಲಿ ಹೈಕೋರ್ಟ್(ರಿಟ್ ಪಿಟಿಷನ್ 103271/2017) ನೀಡಿರುವ ಮಧ್ಯಂತರ ತೀರ್ಪಿನ ನೆರಳಲ್ಲಿ ಉಳಿದ ಕಂಪನಿಗಳು ಅದಿರನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳಲು ಹವಣಿಸಿವೆ. ಇದಕ್ಕೆ ಅರಣ್ಯ ಮತ್ತು ಗಣಿ ಭೂ ವಿಜ್ಞಾನ ಇಲಾಖೆಯ ಕೆಲ ಅಧಿಕಾರಿಗಳು ಕೈಜೋಡಿಸಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್‌ಮಹಲ್ ಸಿಲ್ಕ್ ಪ್ರೈ ಲಿ., ಗೆ ಸೇರಿದ 16,865 ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಕೆಲವು ಷರತ್ತುಗೊಳಪಡಿಸಿ ಮಾನಿಟರಿಂಗ್ ಕಮಿಟಿಯ ಮೇಲ್ವಿಚಾರಣೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮೂಲಕ ಇ-ಟೆಂಡರ್ ಮಾಡಬಹುದು ಎಂದು ಕಾರವಾರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರು ಶಿರಸಿಯ ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ 2020ರ ಮಾರ್ಚ್ 5ರಂದು ಪತ್ರ ಬರೆದಿದ್ದಾರೆ ಎಂದು ಗೊತ್ತಾಗಿದೆ.
ಇದಕ್ಕೆ ಸಂಬಂಧಿಸಿದಂತೆ ವಿಶೇಷ ಸರ್ಕಾರಿ ಅಭಿಯೋಜಕರು 2020ರ ಮಾರ್ಚ್ 5ರಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ತಿಳಿಸಿರುವ ಪ್ರಕರಣ( ಪುಟ 1023-1024)ದ ಅನ್ವಯ ವಿಚಾರಣೆಯು 2020ರ ಫೆ.27ರಂದು ನಡೆದಿದೆಯಾದರೂ ಇದುವರೆಗೂ ಇತ್ಯರ್ಥವಾಗಿಲ್ಲ. ಈ ಹಿನ್ನೆಲೆಯಲ್ಲಿ ಉಚ್ಛ ನ್ಯಾಯಾಲಯ 2017ರ ಜುಲೈ 12ರಂದು ನೀಡಿರುವ ತೀರ್ಪು ಕೂಡ ಮಧ್ಯಂತರ ತೀರ್ಪು ಆಗಿರುತ್ತದೆ.
ವಿಶೇಷ ಸರ್ಕಾರಿ ಅಭಿಯೋಜಕರ ಪತ್ರದಂತೆ ಕ್ರಮ ವಹಿಸುವ ಮುನ್ನವೇ ರಾಜ್‌ಮಹಲ್ ಸಿಲ್ಕ್ ಪ್ರೈವೈಟ್ ಲಿಮಿಟೆಡ್, 2017ರ ಜುಲೈ 17ರಂದು ನೀಡಿರುವ ಮಧ್ಯಂತರ ತೀರ್ಪನ್ನು ಅನುಸರಿಸಿ ಕಬ್ಬಿಣದ ಅದಿರನ್ನು ಸುಪರ್ದಿಗೆ ತೆಗೆದುಕೊಳ್ಳಲು ಹವಣಿಸಿದೆ.
ಇದಕ್ಕೆ ಸಂಬಂಧಿಸಿದ ಸಕ್ಷಮ ಪ್ರಾಧಿಕಾರ ಅಂದರೆ ಸಿಐಡಿಯ ಆರ್ಥಿಕ ಅಪರಾಧಗಳ ವಿಭಾಗ ಮತ್ತು ಕಾರವಾರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆಯೇ ಹಾಗೂ ಮನವಿ ಸಲ್ಲಿಸಿದ್ದರೆ ಯಾವ ಕ್ರಮ ವಹಿಸಲಾಗಿದೆ ಎಂಬ ಮಾಹಿತಿ ಪಡೆಯಲು ಅರಣ್ಯ ಇಲಾಖೆ ಮುಂದಾಗಿದೆ.
ಬೇಲೆಕೇರಿ ಬಂದರಿನಿಂದ ಭಾರಿ ಪ್ರಮಾಣದ ಅದಿರು ನಾಪತ್ತೆಯಾದ ಪ್ರಕರಣದಲ್ಲಿ ಬಂದರು ಸೇವಾ ಕಂಪೆನಿಗಳಾದ ರಾಜ್‌ಮಹಲ್ ಸಿಲ್ಕ್ ಕಂಪನಿ ಸೇರಿದಂತೆ ಅದಾನಿ ಎಂಟರ್‌ಪ್ರೈಸಸ್, ಮಲ್ಲಿಕಾರ್ಜುನ ಶಿಪ್ಪಿಂಗ್, ಸಲಗಾಂವ್ಕರ್ ಮೈನಿಂಗ್ ಇಂಡಸ್ಟ್ರೀಸ್ ಹಾಗೂ ಸರ್ಕಾರದ ಬೊಕ್ಕಸಕ್ಕೆ ಭಾರಿ ನಷ್ಟ ಉಂಟುಮಾಡಿದ್ದವು ಎಂದು ಲೋಕಾಯುಕ್ತ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
ಈ ಕಂಪೆನಿಗಳ ಪರವಾನಗಿ ರದ್ದುಪಡಿಸುವುದರ ಜತೆಗೆ ಅವುಗಳನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಲೋಕಾಯುಕ್ತ ವರದಿಯೂ ಶಿಫಾರಸು ಮಾಡಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ನಾಲ್ಕು ಕಂಪೆನಿಗಳು ಭಾರಿ ಮೊತ್ತದ ಲಂಚವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಧಿಕಾರಿಗಳಿಗೆ ನೀಡಿದ್ದಾರೆ ಎಂದು ಸಮಾಜ ಪರಿವರ್ತನಾ ಸಮುದಾಯದ ಎಸ್ ಆರ್ ಹಿರೇಮಠ್ ಅವರು ಆರೋಪಿಸಿದ್ದರು.
ಅದೇ ರೀತಿ ಈ ಪ್ರಕರಣಗಳಲ್ಲಿ ಆರೋಪಿತ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಲ್ಲ. ಅದಿರು ಕಳ್ಳಸಾಗಣೆಯಲ್ಲಿ ಭಾಗಿಯಾದ ಕಂಪೆನಿಗಳ ಗುತ್ತಿಗೆ ರದ್ದು ಮಾಡಿದ ಸಣ್ಣ ಕೆಲಸವನ್ನು ಬಿಟ್ಟರೆ, ಅವರಿಂದ ಆಗಿರುವ ನಷ್ಟದ ಹಣವನ್ನು ಹಿಂಪಡೆಯಲು ಹಿಂದಿನ ಸರ್ಕಾರ ಪ್ರಯತ್ನ ನಡೆಸಿರಲಿಲ್ಲ.