ಬೆಂಗಳೂರು; ಕೊರೊನಾ ವೈರಸ್‌ನ್ನು ತಡೆಗಟ್ಟುವ ಹೆಸರಿನಲ್ಲಿ ಕರ್ನಾಟಕ ಡ್ರಗ್ಸ್ ಅಂಡ್ ಲಾಜಿಸ್ಟಿಕ್ಸ್ ಸಂಸ್ಥೆಯು ದುಪ್ಪಟ್ಟು ದರದಲ್ಲಿ ಸ್ಯಾನಿಟೈಸರ್‌ನ್ನು ಖರೀದಿಸಿ ಅಕ್ರಮವೆಸಗಿದೆ ಎಂಬ ಆರೋಪಕ್ಕೆ ಗುರಿಯಾಗಿದೆ. ಪಿಪಿಇ ಕಿಟ್ ಮತ್ತು ವೆಂಟಿಲೇಟರ್ಸ್ ಖರೀದಿಯಲ್ಲಿ ಅವ್ಯವಹಾರಗಳು ನಡೆದಿವೆ ಎಂಬ ಆರೋಪಗಳು ಕೇಳಿ ಬಂದ ಬೆನ್ನಲ್ಲೇ ಸ್ಯಾನಿಟೈಸರ್ ಖರೀದಿ ಪ್ರಕರಣವೂ ಮುನ್ನೆಲೆಗೆ ಬಂದಿದೆ.
ಭಾರೀ ಮೊತ್ತದ ಕಮಿಷನ್ ಪಡೆದಿರುವ ಆರೋಪಕ್ಕೆ ಗುರಿಯಾಗಿರುವ ಸಂಸ್ಥೆಯ ಇಬ್ಬರು ಅಧಿಕಾರಿಗಳು, ನಿರ್ದಿಷ್ಟ ಐವರು ಸರಬರಾಜುದಾರರಿಂದ 19 ಕೋಟಿ ರು.ಮೊತ್ತದಲ್ಲಿ ಸ್ಯಾನಿಟೈಸರ್ ಖರೀದಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಪ್ರಕರಣದಲ್ಲಿ ಸರ್ಕಾರದ ಬೊಕ್ಕಸಕ್ಕೆ ಅಂದಾಜು 11.89 ಕೋಟಿ ರುಪಾಯಿ ನಷ್ಟವುಂಟಾಗಿದೆ ಎಂದು ಲಭ್ಯವಿರುವ ದಾಖಲೆಯಿಂದ ಗೊತ್ತಾಗಿದೆ.
ಮೂಲ ದರ ಗುತ್ತಿಗೆ ಒಪ್ಪಂದದ ಪ್ರಕಾರ ಸ್ಯಾನಿಟೈಸರ್ ಸರಬರಾಜು ಮಾಡದ ಗುತ್ತಿಗೆದಾರ ಕಂಪನಿಗೆ ಅತ್ಯಲ್ಪ ಅವಧಿಯಲ್ಲೇ 250.00 ರು. ದರಕ್ಕೆ ಖರೀದಿ ಆದೇಶ ನೀಡಲಾಗಿದೆ ಎಂದು ತಿಳಿದು ಬಂದಿದೆ. ಈ ಖರೀದಿ ಪ್ರಕ್ರಿಯೆಯಲ್ಲಿ ಸಂಸ್ಥೆ ಅಧಿಕಾರಿಗಳು, ಭಾರೀ ಮೊತ್ತದಲ್ಲಿ ಕಮಿಷನ್ ಪಡೆದಿದ್ದಾರೆ ಎಂಬ ಬಲವಾದ ಆರೋಪ ಕೇಳಿ ಬಂದಿದೆ. ಆದರೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಈ ಕುರಿತು ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಪ್ರಕರಣ ವಿವರ
ಸ್ಯಾನಿಟೈಸರ್ ಸರಬರಾಜಿಗೆ ಸಂಬಂಧಿಸಿದಂತೆ 2019ರ ಅಕ್ಟೋಬರ್ 19ರಂದು ಕರೆಯಲಾಗಿದ್ದ ಟೆಂಡರ್‌ನಲ್ಲಿ ಭಾಗವಹಿಸಿದ್ದ ಎಸ್ ಎಂ ಫಾರ್ಮಾಸ್ಯುಟಿಕಲ್ಸ್, ಘಟಕವೊಂದಕ್ಕೆ 97.44 ರು. ನಮೂದಿಸಿ ಎಲ್ 1 ಆಗಿತ್ತು. ಅದರಂತೆ 45 ಲಕ್ಷ ರು. ಮೊತ್ತದಲ್ಲಿ 47,000 ಪ್ರಮಾಣದ ಬಾಟಲ್ (ತಲಾ ಬಾಟಲ್ 500 ಎಂ ಎಲ್)ಗಳನ್ನು ಸರಬರಾಜು ಮಾಡಲು 2020ರ ಫೆಬ್ರುವರಿಯಲ್ಲಿ ದರ ಗುತ್ತಿಗೆ ಪ್ರಕಾರ ಖರೀದಿ ಆದೇಶ ಪಡೆದಿತ್ತು ಎಂಬುದು ಟೆಂಡರ್ ದಾಖಲೆಯಿಂದ ತಿಳಿದು ಬಂದಿದೆ.
ದರ ಖರೀದಿ ಗುತ್ತಿಗೆ ಒಪ್ಪಂದ, ಟೆಂಡರ್ ಅವಾರ್ಡ್ ಆದ ದಿನದಿಂದ 15 ತಿಂಗಳವರೆಗೂ ಚಾಲ್ತಿಯಲ್ಲಿರುತ್ತದೆ. ಆದರೆ ಶೇ.50ರಷ್ಟರ ಪ್ರಮಾಣದಲ್ಲಿ ಸರಬರಾಜು ಮಾಡಿದ್ದ ಈ ಕಂಪನಿ, ಇನ್ನುಳಿದ ಶೇ.50ರಷ್ಟನ್ನು ಪೂರೈಸಲು ಸಾಧ್ಯವಿಲ್ಲ ಎಂದು ಸಂಸ್ಥೆಗೆ ಪತ್ರ ಬರೆದಿತ್ತು ಎಂದು ಗೊತ್ತಾಗಿದೆ. ಈ ಮೂಲಕ ಖರೀದಿ/ಟೆಂಡರ್ ಒಪ್ಪಂದವನ್ನು ಉಲ್ಲಂಘಿಸಿತ್ತು ಎಂಬ ಆರೋಪಕ್ಕೆ ಈ ಕಂಪನಿ ಗುರಿಯಾಗಿದೆ.
ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಇದೇ ಕಂಪನಿ ಅತ್ಯಲ್ಪ ಅವಧಿಯಲ್ಲಿ ಯೂನಿಟ್‌ವೊಂದಕ್ಕೆ 250.00 ರು.ಗಳಂತೆ ಒಟ್ಟು 5 ಕೋಟಿ ರು.ಮೊತ್ತದಲ್ಲಿ ಸರಬರಾಜು ಮಾಡಲು ಖರೀದಿ ಆದೇಶ ಪಡೆದಿತ್ತು ಎಂದು ತಿಳಿದು ಬಂದಿದೆ. ಆರಂಭದಲ್ಲೇ ಖರೀದಿ ಒಪ್ಪಂದವನ್ನು ಉಲ್ಲಂಘಿಸಿರುವ ಆರೋಪದ ಮೇರೆಗೆ ಕರ್ನಾಟಕ ಡ್ರಗ್ಸ್ ಅಂಡ್ ಲಾಜಿಸ್ಟಿಕ್ಸ್ ಸಂಸ್ಥೆ ಈ ಕಂಪನಿಯ ಭದ್ರತಾ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಂಡಿಲ್ಲ ಎಂದು ಸಂಸ್ಥೆಯ ವಿಶ್ವಸನೀಯ ಮೂಲಗಳು ‘ದಿ ಫೈಲ್’ಗೆ ತಿಳಿಸಿವೆ.
ಅಲ್ಲದೆ, ‘ಯುನಿಟ್‌ವೊಂದಕ್ಕೆ 99.00 ರು. ನಮೂದಿಸಿ ಟೆಂಡರ್‌ನಲ್ಲಿ ಎಲ್ 2 ಆಗಿದ್ದ ರಮಣ್ ಅಂಡ್ ವೈಲ್ ಪ್ರೈ ಲಿ.,ಗೆ ಸ್ಯಾನಿಟೈಸರ್ ಖರೀದಿ ಆದೇಶ ನೀಡಬೇಕಿತ್ತು. ಅಥವಾ ಸಗಟು ಮಾರಾಟ ವಿತರಕರನ್ನು ಸಂಪರ್ಕಿಸಿದ್ದರೆ ಅಂದಾಜು 158 ರು. ದರದಲ್ಲಿ ಖರೀದಿಸಬಹುದಿತ್ತು,’ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅದೇ ರೀತಿ ಬೆಂಗಳೂರಿನ ಮಹೀಂದ್ರಾ ಲ್ಯಾಬೋರೆಟರಿ( 2.50 ಕೋಟಿ ರು.) ಸುಜಲ್ ಫಾರ್ಮಾ( 2.50 ಕೋಟಿ ರು.) ಹಿಮಾಚಲ ಪ್ರದೇಶದ ಹೆಲ್ತ್ ಬಯೋಟೆಕ್ ಕಂಪನಿ(2.50 ಕೋಟಿ ರು.) ಹೈದರಬಾದ್‌ನ ಆಂಧ್ರಪ್ರದೇಶ ಸೆಂಟ್ರಲ್ ಪ್ರಿಸನ್ ಕಂಪನಿಗೆ (4 ಕೋಟಿ ರು.) 250.00 ರು. ದರದಲ್ಲಿ ಸ್ಯಾನಿಟೈಸರ್ ಖರೀದಿ ಆದೇಶ ನೀಡಿರುವುದು ತಿಳಿದು ಬಂದಿದೆ.
ಲಭ್ಯವಿರುವ ಮಾಹಿತಿ ಪ್ರಕಾರ ಆರಂಭದಲ್ಲಿ ನಮೂದಿಸಿದ್ದ ದರಕ್ಕೂ ಮತ್ತು ನಂತರ ನೀಡಿದ್ದ ಖರೀದಿ ಆದೇಶದ ಮೊತ್ತದಲ್ಲಿ ಒಟ್ಟು 152.56 ರು.ವ್ಯತ್ಯಾಸ ಕಂಡು ಬಂದಿದೆ. ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಸರ್ಕಾರಕ್ಕೆ ಒಟ್ಟು 11,89,85,600 ರು.ಗಳು ನಷ್ಟವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
‘ರಾಜ್ಯದ ಲಕ್ಷಾಂತರ ಕುಟುಂಬಗಳ ಜೀವನೋಪಾಯಗಳೇ ಮೂಲೋತ್ಪಾಟನೆಯಾಗಿ ಸಂಕಷ್ಟದಲ್ಲಿದೆ. ಆದರೆ ಭ್ರಷ್ಟ ಅಧಿಕಾರಿಗಳು ಇಂತಹ ಅಕ್ರಮಗಳನ್ನು ಮಾಡುವುದು ಹೇಯಕರ. ಸರ್ಕಾರ ಕೂಡಲೇ ಈ ಎಲ್ಲಾ ಖರೀದಿ ಆದೇಶಗಳನ್ನು ರದ್ದುಗೊಳಿಸಿ ಈ ಪ್ರಕರಣವನ್ನು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸ್ವಯಂ ಪ್ರೇರಿತವಾಗಿ ವರ್ಗಾಯಿಸಬೇಕು. ಕಾಲಮಿತಿಯೊಳಗೆ ತನಿಖೆ ನಡೆಸಿ ವರದಿ ಪಡೆದು ತಪ್ಪಿತಸ್ಥರಿಗೆ ಶಿಕ್ಷಿಸಬೇಕು. ಇಲ್ಲದಿದ್ದಲ್ಲಿ ಕರ್ನಾಟಕ ರಾಷ್ಟ್ರಸಮಿತಿ ಶೀಘ್ರದಲ್ಲೇ ಎಸಿಬಿಗೆ ದೂರು ದಾಖಲಿಸಲಿದೆ,’ ಎಂದು ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ಅವರು ‘ದಿ ಫೈಲ್’ಗೆ ಪ್ರತಿಕ್ರಿಯಿಸಿದ್ದಾರೆ.