ಬೆಂಗಳೂರು; ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡಗಳಲ್ಲಿನ ಸಚಿವರು, ಅಧಿಕಾರಿಗಳ ಕೊಠಡಿ ಮತ್ತು ಕಾರಿಡಾರ್‌ಗಳಲ್ಲಿರುವ ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ ಮತ್ತು ಕಾರಿಡಾರ್‌ಗಳಲ್ಲಿನ ಸ್ವಚ್ಛತೆ ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರರಿಗೆ ಕಳೆದ 8 ತಿಂಗಳಿನಿಂದ ಬಾಕಿ ಮೊತ್ತವನ್ನು ಪಾವತಿಸದೆ ಸರ್ಕಾರ ಬಾಕಿ ಉಳಿಸಿಕೊಂಡಿರುವುದು ಬಹಿರಂಗವಾಗಿದೆ.
ಅಧೀನ ಕಾರ್ಯದರ್ಶಿಗಳು ಮತ್ತು ಶಾಖಾಧಿಕಾರಿಗಳು ಶೌಚಾಲಯಗಳ ನಿರ್ವಹಣೆ ಮಾಡಬೇಕು ಎಂದು ಡಿಪಿಎಆರ್ ಅನಧಿಕೃತ ಟಿಪ್ಪಣಿ ಹೊರಡಿಸಿದ್ದ ಬೆನ್ನಲ್ಲೇ, ಶೌಚಾಲಯಗಳ ನಿರ್ವಹಣೆ ಮಾಡುವ ಗುತ್ತಿಗೆದಾರನಿಗೆ ಬಾಕಿ ಹಣ ಪಾವತಿಸದಿರುವ ವಿಚಾರ ಮುನ್ನೆಲೆಗೆ ಬಂದಿದೆ.
ಹೊರಗುತ್ತಿಗೆ ಪಡೆದಿರುವ ಏಜೆನ್ಸಿಗೆ ಸರ್ಕಾರ ಅಂದಾಜು 60 ಲಕ್ಷ ರು. ಗೂ ಅಧಿಕ ಮೊತ್ತವನ್ನು ಪಾವತಿಸಿಲ್ಲ ಎಂದು ತಿಳಿದು ಬಂದಿದೆ. ಅಲ್ಲದೆ, ಗುತ್ತಿಗೆ ಅವಧಿ 2 ತಿಂಗಳ ಹಿಂದೆಯಷ್ಟೇ ಪೂರ್ಣಗೊಂಡಿದ್ದರೂ ಗುತ್ತಿಗೆ ಅವಧಿಯನ್ನು ಮುಂದುವರೆಸುವ ಬಗ್ಗೆ ಈವರೆವಿಗೂ ಆದೇಶ ಹೊರಡಿಸಿಲ್ಲ.
ಹೊಸದಾಗಿ ಗುತ್ತಿಗೆ ಪಡೆಯಲು ಕರೆದಿದ್ದ ಟೆಂಡರ್‌ನಲ್ಲಿ ಭಾಗವಹಿಸಿದ್ದ ಏಜೆನ್ಸಿಗಳ ಪೈಕಿ ಮೂರು ಏಜೆನ್ಸಿಗಳು ಎಲ್ 1 ಅರ್ಹತೆ ಪಡೆದಿವೆ. ಹೀಗಾಗಿ ಯಾವ ಏಜೆನ್ಸಿಗೆ ಗುತ್ತಿಗೆ ನೀಡಬೇಕು ಎಂಬ ಬಗ್ಗೆ ಡಿಪಿಎಆರ್ ಅಧಿಕಾರಿಗಳು ಗೊಂದಲದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಮರು ಟೆಂಡರ್ ಕರೆದು ಇನ್ನಷ್ಟು ಕಠಿಣ ಷರತ್ತುಗಳನ್ನು ವಿಧಿಸಿ ಒಬ್ಬರನ್ನು ಎಲ್ 1 ಎಂದು ಘೋಷಿಸಬೇಕಿತ್ತು. ಆದರೆ ಅಧಿಕಾರಿಗಳ್ಯಾರು ಇದರ ಬಗ್ಗೆ ಗಮನಹರಿಸಿಲ್ಲ ಎಂದು ತಿಳಿದು ಬಂದಿದೆ.
ಹೀಗಾಗಿ ಹೊರಗುತ್ತಿಗೆ ಪಡೆದಿರುವ ಏಜೆನ್ಸಿಯ ಯಾವ ಸಿಬ್ಬಂದಿಯೂ ಕೆಲಸಕ್ಕೆ ಹಾಜರಾಗಿಲ್ಲ. ಅಲ್ಲದೆ, ಲಾಕ್‌ಡೌನ್ ಜಾರಿಯಲ್ಲಿರುವ ಕಾರಣ ಏಜೆನ್ಸಿ ಕೆಲಸಗಾರರಿಗೆ ಗುರುತಿನ ಪತ್ರ ಮತ್ತು ಕಚೇರಿಗೆ ಆಗಮಿಸಲು ಪಾಸ್ ಕೂಡ ನೀಡಿಲ್ಲ ಎಂದು ತಿಳಿದು ಬಂದಿದೆ.
ಹೊರಗುತ್ತಿಗೆ ಏಜೆನ್ಸಿ ಸ್ವಚ್ಛತಾ ನೌಕರರು ಆಗಮಿಸದ ಕಾರಣ ಅವರು ಮಾಡುವ ಕೆಲಸ ಅಧೀನ ಕಾರ್ಯದರ್ಶಿ ಮತ್ತು ಶಾಖಾಧಿಕಾರಿಗಳ ಹೆಗಲಿಗೆ ಬಿದ್ದಿದೆ. ಮತ್ತೊಂದು ಸಂಗತಿ ಎಂದರೆ ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡಗಳಲ್ಲಿನ ಸಾರ್ವಜನಿಕ ಶೌಚಾಲಯಗಳ ಸ್ವಚ್ಛತಾ ಕಾರ್ಯಗಳನ್ನು ನಿರ್ವಹಿಸುವ ಹೊರಗುತ್ತಿಗೆ ಸಿಬ್ಬಂದಿ ಪೈಕಿ ಬಹುತೇಕರು ಪಾದರಾಯನಪುರ ನಿವಾಸಿಗಳು ಎನ್ನಲಾಗಿದೆ. ಪಾದರಾಯನಪುರ ಸೀಲ್‌ಡೌನ್ ಆಗಿರುವ ಕಾರಣ ಸ್ವಚ್ಛತಾ ಸಿಬ್ಬಂದಿಗೆ ಯಾವುದೇ ಪಾಸ್ ನೀಡಲಾಗಿಲ್ಲ ಎಂದು ಗೊತ್ತಾಗಿದೆ.
ಮತ್ತೊಂದು ವಿಶೇಷವೆಂದರೆ ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳಲ್ಲಿನ ಶೌಚಾಲಯ ಮತ್ತು ಕಾರಿಡಾರ್‌ಗಳ ಸ್ವಚ್ಛತಾ ಕೆಲಸಗಳನ್ನು ನಿರ್ವಹಿಸಲು ಹೊರಗುತ್ತಿಗೆ ಪಡೆದಿರುವ ಏಜೆನ್ಸಿಯ ವಾರ್ಷಿಕ ವಹಿವಾಟೇ 30ರಿಂದ 40 ಕೋಟಿ ರು. ಇದೆ. ವಿಧಾನಸೌಧದಲ್ಲಿ ಗುತ್ತಿಗೆ ನಿರ್ವಹಿಸುತ್ತಿರುವ ಏಜೆನ್ಸಿ ಯಾವುದೇ ಸೇವಾ ಶುಲ್ಕ ಪಡೆಯುತ್ತಿಲ್ಲ.
ಇಲ್ಲಿ ಗುತ್ತಿಗೆ ಪಡೆದು ಕಾರ್ಯನಿರ್ವಹಿಸುವುದೇ ಒಂದು ಪ್ರತಿಷ್ಠೆಯ ವಿಷಯ. ಹೀಗಾಗಿ 30ರಿಂದ 40 ಕೋಟಿ ವಾರ್ಷಿಕ ವಹಿವಾಟು ಇದ್ದರೂ ಶಕ್ತಿ ಸೌಧದಲ್ಲಿ ಗುತ್ತಿಗೆ ಪಡೆಯಲು ಪೈಪೋಟಿ ಇರುತ್ತೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಶಕ್ತಿ ಸೌಧದಲ್ಲಿ ಪಡೆದಿರುವ ಗುತ್ತಿಗೆಯನ್ನು ಟ್ರಂಪ್ ಕಾರ್ಡ್ ತರಹ ಬಳಸಿಕೊಳ್ಳುತ್ತಿರುವ ಏಜೆನ್ಸಿಗಳು, ಕಾರ್ಪೋರೇಟ್ ಸಂಸ್ಥೆಗಳಲ್ಲಿಯೂ ಗುತ್ತಿಗೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ.