ಬೆಂಗಳೂರು; ಕಳೆದ 4 ವಾರಗಳಿಂದಲೂ ರಾಷ್ಟ್ರವ್ಯಾಪಿ ಲಾಕ್‌ಡೌನ್ ಮುಂದುವರೆಯುತ್ತಿರುವ ಕಾರಣ ಹಸಿವಿನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದವರಿಗೆ ಪಡಿತರ ವಿತರಣೆ ಆಗುತ್ತಿದೆಯಾದರೂ ಪಡಿತರ ಚೀಟಿ ಹೊಂದದೇ ಇರುವವರಿಗೆ ಪಡಿತರ ವಿತರಣೆ ಮಾಡಬೇಕೆಂದು ಈವರೆವಿಗೂ ಕರ್ನಾಟಕ ಸರ್ಕಾರ ಯಾವುದೇ ನಿರ್ದೇಶನ ಹೊರಡಿಸಿಲ್ಲ.
ಪಡಿತರ ಚೀಟಿ ಹೊಂದದೇ ಇರುವವರಿಗೂ ಸಾರ್ವಜನಿಕ ಪಡಿತರ ವ್ಯವಸ್ಥೆ ಮೂಲಕ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭರವಸೆ ನೀಡಿ ಹಲವು ದಿನಗಳಾದರೂ ಅನುಷ್ಠಾನಕ್ಕೆ ಬಂದಿಲ್ಲ.
ಪಡಿತರ ಚೀಟಿ ಹೊಂದದೇ ಇರುವವರಿಗೆ ಪಡಿತರ ನೀಡಬೇಕೇ ಬೇಡವೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ ನ್ಯಾಯಬೆಲೆ ಅಂಗಡಿಗಳ ಮಾಲೀಕರು ಪಡಿತರ ವಿತರಿಸುತ್ತಿಲ್ಲ ಎಂದು ತಿಳಿದು ಬಂದಿದೆ.
ಎಪಿಎಲ್, ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿ ಇಲ್ಲದಿದ್ದರೂ ಆಧಾರ್, ಚುನಾವಣಾ ಆಯೋಗ ನೀಡಿರುವ ಗುರುತಿನ ಚೀಟಿ ಸೇರಿದಂತೆ ಇನ್ನಿತರೆ ಗುರುತಿನ ಪತ್ರಗಳ ಆಧಾರದ ಮೇಲೆ ಪಡಿತರ ವಿತರಣೆ ಮಾಡಬಹುದು. ಲಾಕ್‌ಡೌನ್ ಪರಿಸ್ಥಿತಿ ಇರುವ ಕಾರಣ ಇದನ್ನು ವಿಶೇಷ ಸಂದರ್ಭವೆಂದು ಪರಿಗಣಿಸಿ ಪಡಿತರ ಚೀಟಿ ಹೊಂದದೇ ಇರುವವರಿಗೂ ಪಡಿತರ ವಿತರಣೆ ಮಾಡಬಹುದು ಎಂಬ ಅಭಿಪ್ರಾಯಗಳು ಸಾರ್ವಜನಿಕವಾಗಿ ವ್ಯಕ್ತವಾಗಿವೆ.
‘ದಿ ಫೈಲ್’ ಜತೆ ಮಾತನಾಡಿದ ಪಡಿತರ ಅಂಗಡಿಗಳ ಮಾಲೀಕರ ಸಂಘದ ರಾಜ್ಯಾಧ್ಯಕ್ಷ ಕೃಷ್ಣಪ್ಪ ಅವರು ‘ ಯಾವ ಕಾರ್ಡ್ ಇಲ್ಲದಿದ್ದರೂ ಆಧಾರ ಕಾರ್ಡ್ ಆಧರಿಸಿ ಪಡಿತರ ನೀಡಬಹುದು. ಆದರೆ ಈ ಬಗ್ಗೆ ಸರ್ಕಾರದಿಂದ ಯಾವುದೇ ನಿರ್ದೇಶನ ಹೊರಬಿದ್ದಿಲ್ಲ. ಅಂತರಜಿಲ್ಲಾ ಮತ್ತು ಅಂತರ್‌ರಾಜ್ ವಲಸಿಗರಲ್ಲಿ ಬಹುತೇಕರು ಯಾವುದೇ ಪಡಿತರ ಚೀಟಿಯನ್ನೂ ಹೊಂದಿಲ್ಲ. ಉಳಿದಂತೆ ರಾಜ್ಯದೊಳಗೆ ಪಡಿತರ ಚೀಟಿ ಇಲ್ಲದೇ ಇರುವವರ ಸಂಖ್ಯೆ ಕಡಿಮೆ ಇದೆ,’ ಎಂದು ಮಾಹಿತಿ ನೀಡಿದರು.
ಪಡಿತರ ಚೀಟಿ ಹೊಂದಿಲ್ಲ ಎಂಬುದನ್ನು ಪತ್ತೆ ಹಚ್ಚುವುದು ಮತ್ತು ಅವರಿಗೆ ಪಡಿತರ ವಿತರಿಸುವ ಕಾರ್ಯ ಸವಾಲಿನಿಂದ ಕೂಡಿವೆ. ಒಂದು ಸ್ಥಳದಲ್ಲಿ ಪಡಿತರ ಪಡೆದು ಮತ್ತೊಂದು ಸ್ಥಳದಲ್ಲಿ ಪಡಿತರ ಪಡೆಯುವ ಸಾಧ್ಯತೆಗಳೂ ಇವೆ. ಇದು ಸರ್ಕಾರಕ್ಕೆ ಮತ್ತೊಂದು ರೀತಿಯ ನಷ್ಟಕ್ಕೆ ಕಾರಣವಾಗಲಿದೆ ಎಂಬ ಅಭಿಪ್ರಾಯಗಳು ಅಧಿಕಾರಿಗಳ ವಲಯದಲ್ಲಿ ವ್ಯಕ್ತವಾಗಿವೆ.
ಕೂಲಿ ಅರಸಿ ಬೆಂಗಳೂರು ನಗರಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ವಲಸಿಗರು ಬಂದಿದ್ದಾರೆ. ಕೂಲಿ ಕೆಲಸಕ್ಕಾಗಿ ಬೆಂಗಳೂರು ನಗರ ಸೇರಿದಂತೆ ವಿವಿಧ ಪ್ರದೇಶಗಳಿಗೆ ವಲಸೆ ಹೋಗುತ್ತಿರುತ್ತಾರೆ. ಹೀಗಾಗಿ ಇವರ ಬಳಿ ಯಾವುದೇ ರೀತಿಯ ಪಡಿತರ ಚೀಟಿ ಇರುವುದಿಲ್ಲ. ಪಡಿತರ ಚೀಟಿ ಇಲ್ಲವೆಂದ ಮಾತ್ರಕ್ಕೆ ಇವರಿಗೆ ಪಡಿತರ ನೀಡಬಾರದು ಎಂದೇನಿಲ್ಲ.
ಪಡಿತರ ಚೀಟಿ ಇಲ್ಲದವರಿಗೆ ಪಡಿತರ ನೀಡಲು ಬೇರೆ ಮಾರ್ಗಗಳಿವೆ. ಲಾಕ್‌ಡೌನ್ ಸಂದರ್ಭದಲ್ಲಿ ಅಂತರಾಷ್ಟ್ರೀಯ ಸ್ಥಳಗಳಿಂದ ಬಂದಿರುವವರ ಕೈಗೆ ಶಾಯಿ ಹಾಕಿರುವ ಮಾದರಿಯಲ್ಲಿಯೇ ಪಡಿತರ ಚೀಟಿ ಹೊಂದದೇ ಇರುವ ನಾಗರಿಕರ ಕೈಗೆ ಶಾಯಿ ಹಾಕಬಹುದು. ಇಂತಹ ನಾಗರಿಕರಿಗೆ ಪಡಿತರ ನೀಡಲು ಅವಕಾಶವಿದೆ. ಇದು ಸಾಧ್ಯವಾದಲ್ಲಿ ಪಡಿತರ ದುರ್ಬಳಕೆ ಆಗುವು ಸಾಧ್ಯತೆಯೂ ಕಡಿಮೆ ಎಂದು ಕೆಲ ಸಂಘ ಸಂಸ್ಥೆಗಳು ವಾದವನ್ನು ಮುಂದೊಡ್ಡಿವೆ.
ಇನ್ನು, ಲಾಕ್‌ಡೌನ್‌ನಿಂದಾಗಿ ಹಸಿವಿನಿಂದ ಬಳಲುತ್ತಿರುವ ಮತ್ತು ಪಡಿತರ ಚೀಟಿ ಹೊಂದಿದವರಿಗೂ ಪೂರ್ಣ ಪ್ರಮಾಣದಲ್ಲಿ ಪಡಿತರ ವಿತರಣೆ ಆಗುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ. ‘ಪಡಿತರ ಚೀಟಿ ಹೊಂದಿದ್ದರೂ ಕಳೆದ ಒಂದು ತಿಂಗಳಿನಿಂದ ಯಾವುದೇ ಪಡಿತರವೂ ನನಗೆ ದೊರೆತಿಲ್ಲ.,’ ಎಂದು ಚಾಮರಾಜಪೇಟೆಯ ಪೌರ ಕಾರ್ಮಿಕರೊಬ್ಬರು ಹೇಳುತ್ತಾರೆ.
ಪಡಿತರ ನೀಡುವ ಸಂಬಂಧ ಟೋಕನ್ ನೀಡುವ ವ್ಯವಸ್ಥೆ ಮಾಡಲಾಗಿದೆಯಾದರೂ ಆ ಸ್ಥಳಕ್ಕೇ ತೆರಳಿ ಟೋಕನ್‌ನ್ನು ಸಂಗ್ರಹಿಸಬೇಕು. 2 ವಾರಗಳಾದರೂ ಹಲವರಿಗೆ ಟೋಕನ್ ದೊರೆತಿಲ್ಲ. ಭಾನುವಾರದಂದು ತೆರಳಿದ್ದರೂ ಟೋಕನ್ ದೊರೆಯುತ್ತಿಲ್ಲ. ಟೋಕನ್ ಪಡೆಯಲು ಪದೇ ಪದೇ ಬಹು ದೂರ ಕ್ರಮಿಸಬೇಕಾಗಿದೆ. ಹೀಗಾಗಿ ಸಕಾಲದಲ್ಲಿ ಪಡಿತರವೂ ಲಭ್ಯವಾಗುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ.
ಕೆಲ ಪೌರ ಕಾರ್ಮಿಕರಿಗೆ ಸಕಾಲದಲ್ಲಿ ಪಡಿತರ ದೊರೆಯದ ಕಾರಣ ನೆರೆಹೊರೆಯವರಿಂದ ಅಕ್ಕಿ ಸೇರಿದಂತೆ ಇನ್ನಿತರೆ ಪಡಿತರವನ್ನು ಕೇಳಿ ಪಡೆಯುತ್ತಿದ್ದಾರೆ. ಕೋರಮಂಗಲದ ವಿವಿಧ ಭಾಗಗಳಲ್ಲಿರುವ ಕೆಲ ಪೌರ ಕಾರ್ಮಿಕರಿಗೆ 30 ಕೆ ಜಿ ಅಕ್ಕಿ ದೊರೆಯುತ್ತಿದೆಯೇ ವಿನಃ ಗೋಧಿ, ಬೇಳೆ ವಿತರಣೆ ಅಗಿಲ್ಲ ಎಂದು ತಿಳಿದು ಬಂದಿದೆ.
ಆಹಾರ,ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಯೊಬ್ಬರ ಪ್ರಕಾರ ಪಡಿತರ ಪಡೆಯುವುದರಲ್ಲಿ ಕೆಲ ಸಮಸ್ಯೆಗಳಿವೆ. ತಿಂಗಳ ಕೊನೆಯಲ್ಲಿ ಗೋಧಿಯನ್ನು ವಿತರಣೆ ಆರಂಭಿಸಿದ್ದೇವೆ. ಇನ್ನೂ 2 ತಿಂಗಳ ಕಾಲ ಪಡಿತರ ನೀಡಬೇಕು. ಹಂತಹಂತವಾಗಿ ಎಲ್ಲಾ ಪಡಿತರ ವಿತರಿಸಲಾಗುವುದು ಎಂದು ಹೇಳುತ್ತಾರೆ.
ಅದರಲ್ಲೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬೇಳೆ ಮತ್ತು ಗೋಧಿ ವಿತರಣೆಯನ್ನು ನಿಲ್ಲಿಸಲಾಗಿದೆ ಎಂದು ಹೇಳಲಾಗುತ್ತಿದೆ. ಶಿವಾಜಿನಗರ ಸೇರಿದಂತೆ ಕೆಲ ಪಡಿತರ ಅಂಗಡಿಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಿಗದಿತ ಪ್ರಮಾಣಕ್ಕಿಂತ 2 ಕೆ ಜಿ ಕಡಿಮೆ ಅಕ್ಕಿ ವಿತರಿಸಲಾಗುತ್ತಿದೆ.
ಉದಾಹರಣೆಗೆ ಕಳೆದ ತಿಂಗಳಿನಲ್ಲಿ ಒಬ್ಬ ವ್ಯಕ್ತಿಗೆ 7 ಕೆ ಜಿ ಅಕ್ಕಿ ನೀಡಬೇಕಿದ್ದಲ್ಲಿ ಒಂದು ಕುಟುಂಬದಲ್ಲಿ 4 ಮಂದಿ ಇದ್ದರೆ 28 ಕೆ ಜಿ ಸಿಗಬೇಕು. ಅಧರೆ ಫಲಾನುಭವಿಗಳಿಗೆ ಕೇವಲ 20 ಕೆ ಜಿ ಅಕ್ಕಿ ದೊರೆಯುತ್ತಿದೆ. ಅಂದರೆ 8 ಕೆ ಜಿ ಅಕ್ಕಿ ಕಾಳಸಂತೆಕೋರರ ಪಾಲಾಗುತ್ತಿದೆ.
ರಾಜ್ಯದಲ್ಲಿ ಪಡಿತರ ಚೀಟಿಗಾಗಿ 2 ಲಕ್ಷ 61 ಸಾವಿರ ಅರ್ಜಿಗಳು ಬಂದಿವೆ. ಕುಟುಂಬಗಳ ಸಂಖ್ಯೆಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಡ್‌ಗಳಿವೆ. 1.27 ಕೋಟಿ ಸಂಖ್ಯೆಯಲ್ಲಿ ಎಪಿಎಲ್ ಮತ್ತು ಅಂತ್ಯೋದಯ ಕಾರ್ಡ್‌ಗಳಿವೆ. 20.60 ಲಕ್ಷ ಸಂಖ್ಯೆಯಲ್ಲಿ ಎಪಿಎಲ್ ಕಾರ್ಡ್‌ಗಳಿವೆ. ಅಲ್ಲದೆ 4.40 ಕೋಟಿ ಘಟಕಗಳಿವೆ.