ಕೊರೊನಾ ; ಎರಡೇ ವಾರದಲ್ಲಿ ಉದ್ಯೋಗ ಕಳೆದುಕೊಂಡವರ ಸಂಖ್ಯೆ 5 ಕೋಟಿ

ಬೆಂಗಳೂರು; ಇಡೀ ಜಗತ್ತನ್ನೇ ತಲ್ಲಣಿಸಿರುವ ಕೊರೊನಾ ವೈರಸ್‌,  ಭಾರತದ ಉದ್ಯೋಗ ಮಾರುಕಟ್ಟೆಗೆ ತೀವ್ರತರವಾದ ಹೊಡೆತ ಕೊಟ್ಟಿದೆ. ನೋಟು ಅಮಾನ್ಯೀಕರಣ ಕೊಟ್ಟಿದ್ದ ಹೊಡೆತದಿಂದ ಚೇತರಿಸಿಕೊಳ್ಳುತ್ತಿರುವ ಹೊತ್ತಿನಲ್ಲೇ  ದೇಶದ ಉದ್ಯೋಗ ಮಾರುಕಟ್ಟೆಯ ಬುನಾದಿಯೇ ಅಲ್ಲಾಡಿಸಿದೆ. 

2020ರ ಏಪ್ರಿಲ್‌ 8ರ ಅಂತ್ಯಕ್ಕೆ ಭಾರತದಲ್ಲಿ ಶೇ.11.6ರಷ್ಟು ನಿರುದ್ಯೋಗ ಪ್ರಮಾಣವಿದ್ದರೆ, ನಗರ ಪ್ರದೇಶಗಳಲ್ಲಿ ಶೇ. 12.06, ಗ್ರಾಮೀಣ ಭಾಗದಲ್ಲಿ ಶೇ.11.2ರಷ್ಟಿದೆ. ನಿರುದ್ಯೋಗ ಏರಿಕೆಯಾಗಿರುವ ರಾಜ್ಯಗಳ ಪಟ್ಟಿಯಲ್ಲಿ 12ನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ ಶೇ.3.5ರಷ್ಟಿದೆ. ಅದೇ ರೀತಿ ಬಿಹಾರ್‌ನಲ್ಲಿ ಶೇ 15.4, ದೆಹಲಿಯಲ್ಲಿ ಶೇ.17, ಹರಿಯಾಣದಲ್ಲಿ ಶೇ.25, ಸಿಕ್ಕಿಂನಲ್ಲಿ ಶೇ.23ರಷ್ಟಿದೆ.  

ಈ ಅಂಕಿ ಅಂಶಗಳ ಮೇಲೆ ಕಣ್ಣಾಡಿಸಿದರೆ ಉದ್ಯೋಗ  ಮಾರುಕಟ್ಟೆಯ ಪ್ರಪಾತಕ್ಕೆ ತಳ್ಳಲ್ಪಟ್ಟಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಕೇವಲ ಎರಡೇ ಎರಡು ವಾರಗಳಲ್ಲಿ ಉದ್ಯೋಗ ಕಳೆದುಕೊಂಡಿರುವ ಸಂಖ್ಯೆ ಮತ್ತು ಉದ್ಯೋಗ ಮಾರುಕಟ್ಟೆಯಿಂದ ಶೇ.8ರಷ್ಟು ಮಂದಿ ಹೊರಗಿರುವುದು ಆರ್ಥಿಕತೆಗೆ ಪಾರ್ಶ್ವವಾಯು ಬಡಿಸಿದೆ. 

ಉದ್ಯೋಗ ಮಾರುಕಟ್ಟೆ ಮೇಲೆ ಕೊರೊನಾ ವೈರಸ್‌ ದೂರಗಾಮಿ ಪರಿಣಾಮಗಳ ಕುರಿತು ಸೆಂಟರ್‌  ಫಾರ್‌ ಮಾನಿಟರಿಂಗ್‌ ಇಂಡಿಯನ್‌ ಎಕಾನಮಿ ನಡೆಸಿರುವ ಸಮೀಕ್ಷೆ ಪ್ರಕಾರ ನಿರುದ್ಯೋಗ ದರವು ಹೆಚ್ಚಿದೆ.  ಕಳೆದ  2  ವಾರಗಳಲ್ಲೇ  ಕನಿಷ್ಠ 5 ಕೋಟಿ ಭಾರತೀಯರು ಉದ್ಯೋಗ ಕಳೆದುಕೊಂಡಿದ್ದಾರೆ ಎಂಬ ಆಘಾತಕಾರಿ ಸುದ್ದಿಯನ್ನೂ ಸಮೀಕ್ಷೆ  ಹೊರಗೆಡವಿದೆ. 

2020ರ ಏಪ್ರಿಲ್‌ 6ರ ಸಂಜೆ  ಬಿಡುಗಡೆ ಮಾಡಿದ್ದ ಸಾಪ್ತಾಹಿಕ ನಿರುದ್ಯೋಗ ದರದ ಪ್ರಕಾರ ಶೇ.8ರಷ್ಟು ಇದ್ದದ್ದು ಈಗ  ಶೇ.23ಕ್ಕೇರಿದೆ. ಲಾಕ್‌ಡೌನ್‌ ಘೋಷಣೆ ನಂತರ ಪ್ರತಿಶತ 15ರಷ್ಟು ಏರಿಕೆಯಾಗಿದೆ. 

ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಉದ್ಯೋಗ ನಷ್ಟವಾಗಿರುವುದು ಕೂಡ ಜಾಗತಿಕ ವಿದ್ಯಮಾನ ಎಂಬಂತಾಗಿದೆ. ಆದರೆ ಭಾರತದಲ್ಲಿ  ಕಳೆದ 2 ವಾರಗಳಲ್ಲಿ 5 ಕೋಟಿ ಸಂಖ್ಯೆಯಲ್ಲಿ  ಉದ್ಯೋಗ ಕಳೆದುಕೊಂಡಿರುವುದು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ.  

ಸಮೀಕ್ಷೆಯ ಒಂದು ಅಂದಾಜಿನ ಪ್ರಕಾರ ಸಾರ್ವಜನಿಕ ಆಡಳಿತ, ಸಂವಹನ, ಆರೋಗ್ಯ ಸೇವೆಗಳು, ಮಾಧ್ಯಮ, ವಿದ್ಯುತ್, ಆಹಾರ ಮತ್ತು ಡೈರಿಗಳನ್ನು ಒಳಗೊಂಡಿರುವ ಕೆಲವೇ ಅಗತ್ಯ ಸೇವೆಗಳು ಕಾರ್ಯನಿರ್ವಹಿಸುತ್ತಿದೆಯಷ್ಟೇ. ಆದರೆ  ಆರ್ಥಿಕತೆಯ ಮೂರನೇ ಎರಡರಷ್ಟು ಭಾಗ ಸ್ಥಗಿತಗೊಂಡಿರುವುದು ಮುಂದಿನ ದಿನಗಳ ಕರಾಳತೆಯನ್ನು ತೆರೆದಿಟ್ಟಿದೆ.  

ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ  ಸುಮಾರು ಒಂದು 1 ಕೋಟಿ ಕಾರ್ಮಿಕರು ನಿರುದ್ಯೋಗ ಸವಲತ್ತುಗಳಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಭಾರತದಲ್ಲಿ ಎರಡು ವಾರಗಳಲ್ಲಿ  ಉದ್ಯೋಗ ಕಳೆದುಕೊಂಡಿರುವ 5 ಕೋಟಿ ಜನರೂ ನಿರುದ್ಯೋಗ ಭತ್ಯೆಗೆ ಅರ್ಜಿ ಸಲ್ಲಿಸುವ ದಿನಗಳು ಬಹಳ ದೂರವೇನೂ ಇಲ್ಲ. 

ಭಾರತದಲ್ಲಿ ಶೇಕಡಾ 25 ಕ್ಕಿಂತಲೂ ಹೆಚ್ಚು ಜನರು ಇನ್ನೂ ಬಡತನ ರೇಖೆಗಿಂತ ಕೆಳಗಿದ್ದಾರೆ. ಅಂದರೆ ಬಡತನ ರೇಖೆ ಮತ್ತು ಬಡತನ ರೇಖೆಗಿಂತಲೂ ಕೆಳಗಿರುವವರು ಒಪ್ಪೊತ್ತಿನ ಊಟಕ್ಕೂ ಪರದಾಡುವಂತಾಗಲಿದೆ. 

ಸಿಐಐ ಪ್ರಕಾರ ಪ್ರವಾಸೋದ್ಯಮ ಮತ್ತು ಆತಿಥ್ಯ ಉದ್ಯಮದಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಬೀದಿಗೆ ಬರಲಿದ್ದಾರೆ. 2020 ರ ಅಕ್ಟೋಬರ್‌ ನಂತರವೇನಾದರೂ ಇದೇ ಪರಿಸ್ಥಿತಿ ಮುಂದುವರೆದರೆ ಬಹುಶಃ 20 ದಶಲಕ್ಷಕ್ಕೂ ಹೆಚ್ಚಿನ ಉದ್ಯೋಗಗಳು ನಷ್ಟವಾಗಬಹುದು ಎಂದು ಅಂದಾಜಿಸಿದೆ. ಅದರಲ್ಲೂ ಸಣ್ಣ,ಮಧ್ಯಮ ಕೈಗಾರಿಕೆಗಳನ್ನೇ ನೆಚ್ಚಿಕೊಂಡಿರುವ ಉದ್ಯೋಗಿಗಳ ಸ್ಥಿತಿ ಶೋಚನೀಯ ಮಟ್ಟಕ್ಕೆ  ಹೋಗಲಿದೆ. 

ಇನ್ನೊಂದೆಡೆ ಕೊರೊನಾ ವೈರಸ್‌ ಹರಡುವ ಮುನ್ನ ತುಸು ಲಾಭದಲ್ಲಿದ್ದ  ಕೈಗಾರಿಕೆಗಳು, ಉದ್ಯಮಪತಿಗಳು ತಮ್ಮ  ಉದ್ಯೋಗಿಗಳಿಗೆ ಹಣ ಪಾವತಿಸದೆಯೇ ಕೈ ಎತ್ತಿದ್ದಾರೆ. 

Your generous support will help us remain independent and work without fear.

Latest News

Related Posts