ಬೆಂಗಳೂರು; ಕೊರೊನಾ ಸೋಂಕು ಹರಡುತ್ತಿದ್ದ ಸಂದರ್ಭದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ವಿಮಾನ ನಿಲ್ದಾಣಗಳಿಗೆ ಬಂದಿಳಿದಿರುವ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಗೂ ತಪಾಸಣೆಗೊಳಪಡಿಸಿದವರ ಸಂಖ್ಯೆಗೂ ವ್ಯತ್ಯಾಸ ಇದೆ ಎನ್ನುವ ಆತಂಕದ ಸಂಗತಿ ಇದೀಗ ಹೊರಬಿದ್ದಿದೆ.
ವಿದೇಶದಿಂದ ಭಾರತಕ್ಕೆ ಬಂದವರ ಸಂಖ್ಯೆಗೂ ತಪಾಸಣೆಗೊಳಗಾದವರ ಸಂಖ್ಯೆಗೂ ಭಾರೀ ವ್ಯತ್ಯಾಸವಿದೆ ಎಂದು ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಜನವರಿ 2020 ರಿಂದ ಮಾರ್ಚ್ 23ರವರೆಗೆ ಕರ್ನಾಟಕಕ್ಕೆ ಬಂದಿಳಿದ ಒಟ್ಟು ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಗೂ ತಪಾಸಣೆಗೊಳಪಟ್ಟಿರುವ ಸಂಖ್ಯೆಗೂ ವ್ಯತ್ಯಾಸ ಇರುವ ವಿಚಾರ ಮುನ್ನೆಲೆಗೆ ಬಂದಿದೆ.
ತಪಾಸಣೆಗೊಳಪಡಿಸಿದವರ ಸಂಖ್ಯೆಯಲ್ಲಿ ಕಂಡು ಬಂದಿರುವ ವ್ಯತ್ಯಾಸಗಳು, ಕೊರೊನಾ ಸೋಂಕು ಹರಡುವಿಕೆಯನ್ನು ತಡೆಯುವಲ್ಲಿ ಆರಂಭಿಕ ಹಂತದಲ್ಲೇ ಕರ್ನಾಟಕ ಸರ್ಕಾರ ಮುಗ್ಗುರಿಸಿ ಬಿದ್ದಿತ್ತು ಎಂದು ಕೇಳಿ ಬಂದಿದ್ದ ಆರೋಪಗಳಿಗೆ ಇನ್ನಷ್ಟು ಪುಷ್ಠಿ ಒದಗಿಸಿದೆ.
ಅಂತಾರಾಷ್ಟ್ರೀಯ ಹಿನ್ನೆಲೆಯ ಪ್ರಯಾಣಿಕರ ಮೇಲಿನ ಕಣ್ಗಾವಲನ್ನು ಬಿಗಿಗೊಳಿಸದಿರುವುದು ಮತ್ತು ಎಲ್ಲರನ್ನೂ ತಪಾಸಣೆಗೊಳಪಡಿಸದಿರುವುದೇ ಸೋಂಕಿತರ ಸಂಖ್ಯೆ ಕ್ರಮೇಣ ಹೆಚ್ಚಲು ಮೂಲ ಕಾರಣ ಎನ್ನಲಾಗಿದೆ.
ಇದಷ್ಟೇ ಅಲ್ಲ, ಕೇಂದ್ರ ಸಂಪುಟ ಕಾರ್ಯದರ್ಶಿ ರಾಜ್ಯ ಸರ್ಕಾರವನ್ನು ಎಚ್ಚರಿಸಿದ ನಂತರವೂ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅಂತಾರಾಷ್ಟ್ರೀಯ ಹಿನ್ನೆಲೆಯ ಪ್ರಯಾಣಿಕರ ಸಂಖ್ಯೆಗೂ ತಪಾಸಣೆಗೊಳಪಡಿಸಿರುವ ಸಂಖ್ಯೆಯಲ್ಲಿಯೂ ವ್ಯತ್ಯಾಸ ಕಂಡು ಬಂದಿರುವುದು ಅಧಿಕಾರಿಗಳ ಉಡಾಫೆ ಧೋರಣೆಗೆ ಹಿಡಿದ ಕೈಗನ್ನಡಿಯಾಗಿದೆ.
ಕೇವಲ ಬೆಂಗಳೂರು ಮಾತ್ರವಲ್ಲ, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ ವಿಮಾನ ನಿಲ್ದಾಣಗಳಿಗೆ ಬಂದಿಳಿದಿರುವ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಗೂ ಅವರ ಮೇಲ್ವಿಚಾರಣೆ ಮತ್ತು ತಪಾಸಣೆಗೊಳಪಟ್ಟವರ ಸಂಖ್ಯೆಯಲ್ಲಿ ವ್ಯತ್ಯಾಸವಿದೆ ಎಂಬುದು ಗೊತ್ತಾಗಿದೆ.
2020ರ ಜನವರಿ 20ರಿಂದ ಮಾರ್ಚ್ 23ರವರೆಗೆ ವಿವಿಧ ರಾಷ್ಟ್ರಗಳಿಂದ ಬೆಂಗಳೂರಿಗೆ 1.20 ಲಕ್ಷ ಮಂದಿ ಅಂತಾರಾಷ್ಟ್ರೀಯ ಪ್ರಯಾಣಿಕರು ಬಂದಿಳಿದಿದ್ದರೆ ಈ ಪೈಕಿ ಅಂದಾಜು 37,000 ಮಂದಿಯನ್ನಷ್ಟೇ ಹೋಮ್ ಕ್ವಾರಂಟೈನ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಇದರ ಪ್ರಕಾರ ಇನ್ನೂ 90,000 ಸಂಖ್ಯೆಯ ಅಂತಾರಾಷ್ಟ್ರೀಯ ಪ್ರಯಾಣಿಕರು ತಪಾಸಣೆಯಿಂದ ಹೊರಗುಳಿದಿದ್ದಾರೆಯೇ ಎಂಬ ಪ್ರಶ್ನೆ ಸಹಜವಾಗಿಯೇ ಕೇಳಿ ಬಂದಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾರ್ಚ್ 31ರ ಅಂತ್ಯಕ್ಕೆ ಬಿಡುಗಡೆಗೊಳಿಸಿರುವ ಪ್ರಕಾರ 1,28,315 ಮಂದಿ ಹೊರದೇಶದ ಪ್ರಯಾಣಿಕರನ್ನು ತಪಾಸಣೆಗೊಳಪಡಿಸಿದೆ. ಈ ಪೈಕಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿರುವ ಒಟ್ಟು ಅಂತಾರಾಷ್ಟ್ರೀಯ ಪ್ರಯಾಣಿಕರ 89,963 ಸಂಖ್ಯೆ ಪೈಕಿ 10,773 ಮಂದಿಯನ್ನಷ್ಟೇ ತಪಾಸಣೆಗೊಳಪಡಿಸಿರುವುದು ಗೊತ್ತಾಗಿದೆ.
ಇನ್ನುಳಿದ 79,190 ಅಂತಾರಾಷ್ಟ್ರೀಯ ಪ್ರಯಾಣಿಕರು ತಪಾಸಣೆಯಿಂದ ಹೊರಗುಳಿದಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳೂ ಸ್ಪಷ್ಟಪಡಿಸದಿರುವುದು ಅನುಮಾನಗಳಿಗೆ ಇನ್ನಷ್ಟು ಪುಷ್ಠಿ ನೀಡುತ್ತಿದೆ.
ವಿದೇಶದಿಂದ ಭಾರತಕ್ಕೆ ಬಂದವರ ಸಂಖ್ಯೆಗೂ, ಹೀಗೆ ತಪಾಸಣೆಗೊಳಗಾದವರ ಸಂಖ್ಯೆಗೂ ಭಾರೀ ವ್ಯತ್ಯಾಸವಿದೆ ಎಂಬ ಅಂಶವನ್ನು ಹೊರಗೆಡವಿದ್ದ ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ, ತಪಾಸಣೆ ಮಾಡುವ ಮತ್ತು ಕಣ್ಗಾವಲಿನ ವ್ಯವಸ್ಥೆಯನ್ನು ಇನ್ನಷ್ಟು ಕಠಿಣಗೊಳಿಸಬೇಕು ಎಂದಿದ್ದರು.
ಒಂದು ವೇಳೆ ಯಾರಾದರೂ ತಪಾಸಣೆಯಿಂದ ಹೊರಗುಳಿದಿದ್ದಾರೆಂದು ಕಂಡು ಬಂದಲ್ಲಿ ಅವರನ್ನು ಪತ್ತೆ ಮಾಡಬೇಕು. ಒಂದು ವೇಳೆ ಇಂತಹ ಒಂದೇ ಒಂದು ಪ್ರಕರಣ ತಪಾಸಣೆ ವ್ಯಾಪ್ತಿಯಿಂದ ಹೊರಗೆ ಉಳಿದರೂ ಇಷ್ಟೂ ದಿವಸ ಕೈಗೊಂಡಿರುವ ಕ್ರಮಗಳು ವಿಫಲಗೊಳಿಸಬಲ್ಲದು ಎಂದು ಆತಂಕ ಹೊರಹಾಕಿದ್ದರು.
ಜನವರಿ ಮೊದಲ ವಾರಕ್ಕೆಲ್ಲ ಕೊರೊನಾ ವೈರಸ್ ಜಾಗತಿಕವಾಗಿ ಬಹಳ ಕಂಟಕಕಾರಿ ಆಗಲಿದೆ ಎನ್ನುವುದು ಸೂಚ್ಯವಾಗಿ ಗೋಚರಿಸಿತ್ತು. ಅಲ್ಲದೆ, ಫೆಬ್ರುವರಿ ಮಧ್ಯಭಾಗದ ಹೊತ್ತಿಗಾಗಲೇ ಖಚಿತಗೊಂಡಿತ್ತು. ಅದೇ ಸಂದರ್ಭದಲ್ಲಿ ಕೇರಳ ರಾಜ್ಯವೂ ಕೊರೊನಾ ವೈರಸ್ ಸೋಂಕನ್ನು ರಾಜ್ಯ ವಿಪತ್ತು ಎಂದ ಘೋಷಿಸಿತ್ತು. ಆದರೆ ಕರ್ನಾಟಕ ಸರ್ಕಾರ ಮಾತ್ರ ಎಚ್ಚೆತ್ತುಕೊಂಡಿರಲಿಲ್ಲ.
‘ಭಾರತ ಸರ್ಕಾರ ಮತ್ತು ಕರ್ನಾಟಕವೂ ಸೇರಿದಂತೆ ಹಲವು ರಾಜ್ಯ ಸರ್ಕಾರಗಳು ಈ ವಿಚಾರವಾಗಿ ಮಾರ್ಚ್ 2ನೇ ವಾರದ ತನಕ ಉಡಾಫೆ ಧೋರಣೆ ತಳೆದಿದ್ದವು. ಈ ಹಿನ್ನೆಲೆಯಲ್ಲಿ ಕೊರೊನಾ ವೈರಸ್ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕೆಲವು ಪ್ರಾಥಮಿಕ ಸಿದ್ಧತೆ ಮಾಡಲೇ ಇಲ್ಲ. ಇಂತಹ ನಿರ್ಲಕ್ಷ್ಯದಿಂದಾಗಿಯೇ ಕೆಲವೇ ಭೌಗೋಳಿಕ ಸ್ಥಳಗಳಿಗೆ ಸೀಮಿತ ಮಾಡಬಹುದಾಗಿದ್ದ ಲಾಕ್‌ಡೌನ್‌ನ್ನು ಇಡೀ ದೇಶವ್ಯಾಪಿ ವಿಸ್ತರಿಸುವಂತಹ ದುರದೃಷ್ಟಕರ ಪರಿಸ್ಥಿತಿ ಉದ್ಭವಿಸಿದೆ,’ ಎನ್ನುತ್ತಾರೆ ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ.