ಬೆಂಗಳೂರು; ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವ ಆನೇಕಲ್ ಯೋಜನಾ ಪ್ರಾಧಿಕಾರ, ಬೆಂಗಳೂರು ಮೈಸೂರು ಇನ್ಫ್ರಾಸ್ಟಕ್ಚರ್ ಕಾರಿಡಾರ್ ಪ್ರದೇಶ, ಚನ್ನಪಟ್ಟಣ ಮತ್ತು ನೆಲಮಂಗಲ ಯೋಜನಾ ಪ್ರಾಧಿಕಾರಗಳಿಗೆ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯ 4 ವರ್ಷಗಳಲ್ಲಿ 182 ಕೋಟಿ ರೂಪಾಯಿ ನಷ್ಟವುಂಟಾಗಿದೆ.
ಬಡಾವಣೆ ನಕ್ಷೆಗಳಿಗೆ ಅನುಮೋದನೆ ನೀಡುವಾಗ ನಿಯಮ ಉಲ್ಲಂಘಿಸಿರುವುದಲ್ಲದೆ ನಿಗದಿಪಡಿಸಿದ್ದ ಅಭಿವೃದ್ಧಿ ಶುಲ್ಕಕ್ಕಿಂತಲೂ ಕಡಿಮೆ ವಸೂಲು ಮಾಡಿರುವುದೇ ಕೋಟ್ಯಂತರ ರೂಪಾಯಿ ನಷ್ಟಕ್ಕೆ ಮೂಲ ಕಾರಣ. ಮೂರು ಪ್ರಾಧಿಕಾರಗಳ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧಕರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಈ ವರದಿಗಳ ಪ್ರತಿಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ವರದಿಯಲ್ಲಿ ಉಲ್ಲೇಖಿಸಿರುವಂತೆ ನಷ್ಟಕ್ಕೆ ಕಾರಣರಾದ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಲೀ, ರಿಯಲ್ ಎಸ್ಟೇಟ್, ಡೆವಲಪರ್ಸ್, ಬಡಾವಣೆ ಮಾಲೀಕರ ವಿರುದ್ಧ ಈವರೆವಿಗೂ ಈಗಿನ ಬಿಜೆಪಿ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಕಡಿಮೆ ಉತ್ತಮತೆ ಶುಲ್ಕ ವಸೂಲು ಮಾಡಿರುವ ಯೋಜನಾ ಪ್ರಾಧಿಕಾರಿಗಳು ರಿಯಲ್ ಎಸ್ಟೇಟ್ ಕಂಪನಿಗಳಿಗೆ ಆರ್ಥಿಕವಾಗಿ ಅನುಕೂಲ ಮಾಡಿಕೊಟ್ಟಿದೆ. ಇದರ ಹಿಂದೆ ಯೋಜನಾ ಪ್ರಾಧಿಕಾರದ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ಇದೆ.
ರಿಯಲ್ ಎಸ್ಟೇಟ್ ಕಂಪನಿಗಳು, ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ಉದ್ಯಮಿಗಳು, ರಾಜಕಾರಣಿಗಳು ಹೇಳಿದಂತೆ ಯೋಜನಾ ಕುಣಿಯುತ್ತಿರುವುದರಿಂದಲೇ ಆನೇಕಲ್,ಬಿಎಂಐಸಿಪಿಎ, ಚನ್ನಪಟ್ಟಣ ಯೋಜನಾ ಪ್ರಾಧಿಕಾರಗಳು ಕೋಟ್ಯಂತರ ರುಪಾಯಿ ನಷ್ಟವನ್ನು ಅನುಭವಿಸಿವೆ.
ಆನೇಕಲ್ ಯೋಜನಾ ಪ್ರಾಧಿಕಾರ 2016-17ನೇ ಸಾಲಿನ ಒಂದೇ ವರ್ಷದಲ್ಲಿ 136.27 ಕೋಟಿ ರು.ನಷ್ಟಕ್ಕೀಡಾಗಿದೆ. ಚನ್ನಪಟ್ಟಣ ಯೋಜನಾ ಪ್ರಾಧಿಕಾರ 2017-18ರ ಸಾಲಿನಲ್ಲಿ 74.58 ಲಕ್ಷ ರು., ಬೆಂಗಳೂರು ಮೈಸೂರು ಇನ್ಫ್ರಾಸ್ಟಕ್ಚರ್ ಕಾರಿಡಾರ್ ಪ್ರದೇಶ ಯೋಜನಾ ಪ್ರಾಧಿಕಾರವು ಇದೇ ಸಾಲಿನಲ್ಲಿ 30.87 ಕೋಟಿ ರು.ನಷ್ಟವನ್ನು ಅನುಭವಿಸಿರುವುದು ಲೆಕ್ಕ ಪರಿಶೋಧನೆ ವರದಿಯಿಂದ ತಿಳಿದು ಬಂದಿದೆ.
ಯೋಜನಾ ಪ್ರಾಧಿಕಾರಗಳ ಬಂಡವಾಳವನ್ನು ತೆರೆದಿಟ್ಟಿರುವ ಲೆಕ್ಕ ಪರಿಶೋಧನೆ ವರದಿಗಳು ರಾಜಕೀಯ ಹಿನ್ನೆಲೆ ಮತ್ತು ಪ್ರಭಾವಿಗಳ ಒಡೆತನದಲ್ಲಿರುವ ರಿಯಲ್ ಎಸ್ಟೇಟ್, ಡೆವಲಪರ್ಸ್‌ಗಳ ಮುಖವಾಡವನ್ನು ಅನಾವರಣಗೊಳಿಸಿವೆ.
ಆನೇಕಲ್ ಯೋಜನಾ ಪ್ರಾಧಿಕಾರ ವ್ಯಾಪ್ತಿಯಲ್ಲಿ ಬೃಹತ್ ಬಡಾವಣೆಗಳನ್ನು ನಿರ್ಮಿಸಿರುವ ವಿಧಾನಪರಿಷತ್ ಸದಸ್ಯ ಹಾಗೂ ಚಿತ್ರ ನಿರ್ಮಾಪಕ ಸಿ ಆರ್ ಮನೋಹರ್, ಎಸ್ ಆರ್ ಡೆವಲಪರ್ಸ್, ಡಿ ಎಲ್ ಎಫ್ ಹೋಮ್ಸ್ ಪ್ರೈವೈಟ್ ಲಿಮಿಟೆಡ್, ಇನ್ನರ್ ಅರ್ಬನ್ ಇನ್ಫ್ರಾಸ್ಟಕ್ಚರ್ಸ್ ಪ್ರೈ ಲಿ., ಫೈನ್ ರಿಯಾಲಿಟಿ, ಗೋಲ್ಡನ್ ಇನ್ಪ್ರಾ, ನಂಬಿಯಾರ್ ಬಿಲ್ಡರ್ಸ್ ಪ್ರೈ ಲಿ., ಆರ್ ಕೆ ವಿ ಡೆವಲಪರ್ಸ್, ಪೆನೆನ್ ಸುಲಾ ಇನ್ಫ್ರಾ ಡೆವಲಪರ್ಸ್, ಬೃಂದಾ ಪ್ರಾಪರ್ಟಿಸ್, ಎನ್‌ವಿಟಿ ಲೈಫ್‌ಸ್ಟೈಲ್ ಪ್ರಾಜೆಕ್ಟ್ಸ್, ಅರಟಕುಲಮ್ ಡೆವಲಪರ್ಸ್, ನಿರ್ಮಾಣ್ ಶೆಲ್ಟರ್ಸ್, ಸಿಪಾನಿ ಪ್ರಾಪರ್ಟಿಸ್, ಕೆ ಚೆನ್ನಾರೆಡ್ಡಿ, ಗೋಲ್ಡನ್ ಗೇಟ್ ಪ್ರಾಪರ್ಟಿಸ್, ಕಟಾರಿಯಾ ಬಿಲ್ಡ್‌ಟೆಕ್ ಪ್ರೈವೈಟ್ ಲಿಮಿಟೆಡ್‌ಗಳಿಂದ ನಿಗದಿಪಡಿಸಿರುವ ಅಭಿವೃದ್ಧಿ ಶುಲ್ಕದಲ್ಲಿ ಕಡಿಮೆ ವಸೂಲಿ ಮಾಡಿರುವುದು ವರದಿಯಿಂದ ಗೊತ್ತಾಗಿದೆ.
ಪ್ರಾಧಿಕಾರ ವ್ಯಾಪ್ತಿಯಲ್ಲಿ ಒಟ್ಟು 80 ಮಂದಿ ಹೊಂದಿರುವ 361 ಎಕರೆ 99 ಗುಂಟೆ ವಿಸ್ತೀರ್ಣದ ಭೂಮಿಗೆ ಕಡಿಮೆ ಶುಲ್ಕವನ್ನು ವಿಧಿಸಿರುವುದು ಲೆಕ್ಕಪರಿಶೋಧನೆ ವರದಿಯಿಂದ ಗೊತ್ತಾಗಿದೆ.
ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಪರಿವರ್ತಿತ ಭೂಮಿಯಲ್ಲಿ ಅಭಿವೃದ್ಧಿದಾರರಿಂದ ಬಡಾವಣೆ ಅಭಿವೃದ್ಧಿಗೊಳಿಸಲು ತಗಲುವ ವಾಸ್ತವಿಕ ವೆಚ್ಚದ ವಿವರಗಳನ್ನು ಪಡೆಯದೇ ಬಡಾವಣೆ ನಕ್ಷೆಗೆ ಅನುಮೋದನೆ ನೀಡಲಾಗುತ್ತಿದೆ. ಅಲ್ಲದೆ, 1997ರ ನವೆಂಬರ್ 27ರಂದು ಅಂದಿನ ಸರ್ಕಾರ ಹೊರಡಿಸಿದ್ದ ಸುತ್ತೋಲೆ ದರಗಳನ್ನೇ ಈಗಲೂ ವಿಧಿಸುತ್ತಿದೆ. ಇದು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನೆ ಕಾಯ್ದೆಯ ನಿಯಮಾವಳಿಯನ್ನು ಸಂಪೂರ್ಣವಾಗಿ ಉಲ್ಲಂಘಿಸಿರುವುದು ವರದಿಯಿಂದ ತಿಳಿದು ಬಂದಿದೆ.
ಕಳೆದ 19 ವರ್ಷಗಳಿಂದಲೂ ಹಳೆಯ ದರಗಳನ್ನೇ ಮುಂದುವರೆಸಿಕೊಂಡು ಬರುತ್ತಿರುವ ಆನೇಕಲ್, ಬಿಎಂಐಸಿಪಿಎ, ಚನ್ನಪಟ್ಟಣ ಮತ್ತು ನೆಲಮಂಗಲ ಯೋಜನಾ ಪ್ರಾಧಿಕಾರ, ಭೂಮಿಯ ಮೌಲ್ಯವರ್ಧನೆಗೆ ಅನುಗುಣವಾಗಿ ಆಯಾ ವರ್ಷದ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿಯನ್ನು ಅನುಸರಿಸಿ ಶುಲ್ಕವನ್ನು ಪರಿಷ್ಕರಿಸಿಕೊಂಡಿಲ್ಲ. ಇದು ಇಲ್ಲಿನ ಅಧಿಕಾರಿಗಳ ಕರ್ತವ್ಯಲೋಪಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಆಯಾ ವರ್ಷದಾಂದಾಜು ಮಾರುಕಟ್ಟೆ ಮೌಲ್ಯ ಮಾರ್ಗಸೂಚಿಯನ್ನು ಅನುಸರಿಸಿ ಭೂಮಿ/ಕಟ್ಟಡಗಳ ಮೌಲ್ಯ ನಿರ್ಧರಣೆ ಮಾಡಿ ಲೆಕ್ಕಾಚಾರ ಮಾಡಬೇಕಿತ್ತು. ಅಲ್ಲದೆ, ಉತ್ತಮತೆ ಶುಲ್ಕವನ್ನು ವಸೂಲು ಮಾಡಿಕೊಂಡು ಮಾಸ್ಟರ್ ಪ್ಲಾನ್ 2021ರಲ್ಲಿ ನಿಗದಿಪಡಿಸಿದ್ದ ಗುರಿಗಳನ್ನು ಕ್ರಮವಹಿಸಬೇಕಿತ್ತು. ಆದರೆ ಕಡಿಮೆ ಶುಲ್ಕವನ್ನು ವಸೂಲು ಮಾಡಿಕೊಂಡಿರುವ ಯೋಜನಾ ಪ್ರಾಧಿಕಾರ ಸಂಸ್ಥೆಗೆ 136 ಕೋಟಿ ರು.ನಷ್ಟಕ್ಕೆ ಕಾರಣವಾಗಿದೆ.
ಅದೇ ರೀತಿ 2016-17ನೇ ಸಾಲಿನಲ್ಲಿ ಆನೇಕಲ್ ಯೋಜನಾ ಪ್ರಾಧಿಕಾರ ಅನುಮೋದಿಸಿರುವ ಬಡಾವಣೆಗಳಲ್ಲಿ ಗರಿಷ್ಠ 5 ವರ್ಷ ಪೂರ್ಣಗೊಂಡಿದ್ದರೂ ಬಡಾವಣೆಗಳನ್ನು ಅಭಿವೃದ್ಧಿಪಡಿಸಿಲ್ಲ. ಹಾಗೆಯೇ ವಿನ್ಯಾಸವನ್ನು ಅಭಿವೃದ್ಧಿಪಡಿಸಿ ನಿವೇಶನಗಳನ್ನು ಸಂಪೂರ್ಣವಾಗಿ ಬಿಡುಗಡೆ ಮಾಡಿಸಿಕೊಳ್ಳುವಲ್ಲಿ ಯೋಜನಾ ಪ್ರಾಧಿಕಾರ ಮುಂದಾಗಿಲ್ಲ.
ಯೋಜನಾ ಪ್ರಾಧಿಕಾರದಿಂದ ಅನುಮೋದನೆಗೊಂಡಿರುವ ವಿವಿಧ ಬಡಾವಣೆಗಳ ವಿವರಗಳು ಹಾಗೂ ಅನುಮೋದಿತ ಬಡಾವಣೆಗಳಲ್ಲಿ ನಾಗರಿಕ ಸೌಲಭ್ಯಗಳಿಗಾಗಿ ಮೀಸಲಿಟ್ಟಿರುವ ನಿವೇಶನಗಳನ್ನು ಲೆಕ್ಕ ಪರಿಶೋಧನೆಗೆ ಒಳಪಡಿಸದಿರುವ ವಿಚಾರ ವರದಿಯಿಂದ ಗೊತ್ತಾಗಿದೆ.
ಇನ್ನು, ಆನೇಕಲ್ ಯೋಜನಾ ಪ್ರಾಧಿಕಾರ ತನ್ನ ಆಯವ್ಯಯಕ್ಕೆ ಸರ್ಕಾರದಿಂದ ಅನುಮೋದನೆ ಪಡೆದಿಲ್ಲ. ಪ್ರಾಧಿಕಾರದ ಜಮಾ ಮತ್ತು ಖರ್ಚಗಳ ಅಂಕಿ ಅಂಶಗಳನ್ನು ಗಮನಿಸಿದಾಗ ಆದಾಯಕ್ಕಿಂತ ವೆಚ್ಚವೇ ಹೆಚ್ಚಾಗಿರುವುದು ಕಂಡು ಬಂದಿದೆಯಲ್ಲದೆ, ಯಾವ ಮಾನದಂಡದ ಮೇಲೆ ಆಯವ್ಯಯ ಸಿದ್ಧಪಡಿಸಲಾಗಿದೆ ಎಂಬ ವಿವರವೂ ತಿಳಿದು ಬಂದಿಲ್ಲ ಎಂದು ಲೆಕ್ಕ ಪರಿಶೋಧಕರು ವರದಿಯಲ್ಲಿ ತಿಳಿಸಿದ್ದಾರೆ.
2016-17ನೇ ಸಾಲಿನಲ್ಲಿ ಪ್ರಾಧಿಕಾರ ಎಷ್ಟು ಬಡಾವಣೆಗಳನ್ನು ಅನುಮೋದಿಸಿದೆ, ಭದ್ರತಾ ಠೇವಣಿಗಳನ್ನು ಮರು ಪಾವತಿಸಿರುವುದೆಷ್ಟು, ನಕ್ಷೆಗಳಿಗೆ ವಿರುದ್ಧವಾಗಿ ಎಷ್ಟು ಕಟ್ಟಡಗಳನ್ನು ನಿರ್ಮಿಸಲಾಗಿದೆ, 2 ವರ್ಷಗಳ ಅವಧಿಯಲ್ಲಿ ಎಷ್ಟು ಕಟ್ಟಡಗಳನ್ನು ಪೂರ್ಣಗೊಳಿಸಲಾಗಿದೆ ಎಂಬ ವಿವರವಾದ ಮಾಹಿತಿಗಳನ್ನು ಲೆಕ್ಕ ಪರಿಶೋಧನೆಗೆ ಒದಗಿಸದಿರುವುದು ವರದಿಯಿಂದ ಗೊತ್ತಾಗಿದೆ.