Bank Information

PARADARSHAK MEDIA FOUNDATION, Account Number: 40107584055, SBI,Mahalalakshmipuram branch IFSC Code : SBIN0017347 Bengaluru

ಯುವರಾಜಸ್ವಾಮಿಗೆ ಕೋಟ್ಯಂತರ ರುಪಾಯಿ ಲಂಚ; ಮೂವರ ವಿರುದ್ಧ ಎಫ್‌ಐಆರ್‌ ದಾಖಲು

ಬೆಂಗಳೂರು; ಸಂಘ ಪರಿವಾರ ಮತ್ತು ಬಿಜೆಪಿಯ ರಾಷ್ಟ್ರೀಯ ಘಟಕದ ಧುರೀಣರ ಸಂಪರ್ಕ ಹೊಂದಿದ್ದ ಯುವರಾಜಸ್ವಾಮಿ ಎಂಬಾತನ ಮೂಲಕ ವಿವಿಧ ಹುದ್ದೆಗಳನ್ನು ಪಡೆದುಕೊಳ್ಳಲು ಕೋಟ್ಯಂತರ ರುಪಾಯಿನ್ನು ಲಂಚದ ರೂಪದಲ್ಲಿ ನೀಡಿದ್ದ ಮೂವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳವು ಎಫ್‌ಐಆರ್‌ ದಾಖಲಿಸಿಕೊಂಡಿದೆ.

ಗೋವಿಂದಯ್ಯ, ಡಾ ಜಿ ನರಸಿಂಹಸ್ವಾಮಿ ಮತ್ತು ಸುಧೀಂದ್ರ ರೆಡ್ಡಿ ಎಂಬುವರು ವಿವಿಧ ಹುದ್ದೆಗಳಿಗಾಗಿ ಯುವರಾಜಸ್ವಾಮಿ ಎಂಬಾತನಿಗೆ ಹಣ ನೀಡಿದ್ದರು. ವಿವಿಧ ಖಾತೆಗಳ ಮೂಲಕ ಹಣವನ್ನು ವರ್ಗಾವಣೆ ಮಾಡಿಸಿಕೊಂಡಿದ್ದ ಯುವರಾಜಸ್ವಾಮಿ ಆ ನಂತರ ಯಾವುದೇ ಹುದ್ದೆಯನ್ನು ಕೊಡಿಸಿರಲಿಲ್ಲ. ಹೀಗಾಗಿ ಹಣ ಕೊಟ್ಟಿದ್ದವರು ಪೊಲೀಸ್‌ ಠಾಣೆಯಲ್ಲಿ ವಂಚನೆ ದೂರನ್ನು ದಾಖಲಿಸಿದ್ದರು. ಈ ಸಂಬಂಧ ಠಾಣೆಗಳಲ್ಲಿ ಯುವರಾಜಸ್ವಾಮಿ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು.

ಪಿ.ಸಿ. ಕಾಯ್ದೆಯ ಕಲಂ 8ರ ಅಡಿಯಲ್ಲಿ ಅಭಿಯೋಜನಾ ಮಂಜೂರಾತಿಯ ಮತ್ತು ಪ್ರಾಥಮಿಕ ವಿಚಾರಣೆಯ ಅವಶ್ಯಕತೆ ಇಲ್ಲದಿದ್ದರೂ ಸಹ ಮೂವರ ವಿರುದ್ಧ ಎಫ್‌ಐಆರ್‌ನ್ನು ದಾಖಲಿಸುವಲ್ಲಿ ಎಸಿಬಿ ಪೊಲೀಸರು ವಿಳಂಬ ಮಾಡಿದ್ದರು.

ಯುವರಾಜಸ್ವಾಮಿ ಎಂಬಾತನಿಗೆ ಈ ಮೂವರು ಲಂಚವನ್ನು ನೀಡಿದ್ದರು ಎಂದು ಆರೋಪಿಸಿದ್ದ ಜನಾಧಿಕಾರ ಸಂಘರ್ಷ ಪರಿಷತ್‌ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಭ್ರಷ್ಟಾಚಾರ ತಡೆ (ತಿದ್ದುಪಡಿ) ಕಾಯ್ದೆ 2018ರ ಕಲಂ 8ರ ಅನ್ವಯ ದೂರು ದಾಖಲಿಸಿತ್ತು. ಈ ದೂರನ್ನಾಧರಿಸಿ ಭ್ರಷ್ಟಾಚಾರ ನಿಗ್ರಹ ದಳವು ಮೂವರ ವಿರುದ್ಧವೂ ಎಫ್‌ಐಆರ್‌ ದಾಖಲಿಸಿದೆ. ಎಫ್‌ಐಆರ್‌ ಪ್ರತಿಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

ಗೋವಿಂದಯ್ಯ ಪ್ರಕರಣದ ವಿವರ

ಆರೋಪಿ ಗೋವಿಂದಯ್ಯ ಅವರು 2021ರ ಜನವರಿ 13ರಂದು ಬೆಂಗಳೂರು ನಗರದ ಜ್ಞಾನಭಾರತಿ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದರು. ಕರ್ನಾಟಕ ಮಿಲ್ಕ್‌ ಫೆಡರೇಷನ್‌ನಲ್ಲಿ ಮಾರುಕಟ್ಟೆ ವ್ಯವಸ್ಥಾಪಕ ಹುದ್ದೆಯನ್ನು ತನ್ನ ಅಳಿಯನಿಗೆ ಕೊಡಿಸಲು 30 ಲಕ್ಷ ರು.ಗಳನ್ನು ಯುವರಾಜಸ್ವಾಮಿಗೆ ನೀಡಿದ್ದರು. ಈ ಸಂಬಂಧ ತನಿಖೆ ಕೈಗೊಂಡಿದ್ದ ತನಿಖಾಧಿಕಾರಿಗಳು 2021ರ ಮಾರ್ಚ್‌ 12ರಂದು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

‘ಗೋವಿಂದಯ್ಯ ಅವರು ಲಂಚದ ಹಣವನ್ನು ಯುವರಾಜಸ್ವಾಮಿ ಅವರಿಗೆ 2019ರಿಂದ ಬ್ಯಾಂಕ್‌ ಖಾತೆ ಮೂಲಕ ಹಾಗೂ ನಗದು ಹಣ ನೀಡುವ ಮೂಲಕ ಕರ್ನಾಟಕ ಮಿಲ್ಕ್‌ ಫೆಡರೇಷನ್‌ನಲ್ಲಿ ಮಾರ್ಕೇಟಿಂಗ್‌ ಮೇನೇಜರ್‌ ಹುದ್ದೆಯನ್ನು ತನ್ನ ಅಳಿಯನಿಗೆ ಕೊಡಿಸುವುದಕ್ಕಾಗಿ ನೀಡಿರುತ್ತಾರೆ. ಹೀಗೆ ಮಾಡುವ ಮುಖೇನ ಗೋವಿಂದಯ್ಯ ಅವರು ಕಲಂ 8, ಪಿಸಿ ಆಕ್ಟ್‌ (ಅಮೆಂಡ್‌ಮೆಂಟ್‌) 2018ರ ಅಡಿಯಲ್ಲಿ ಅಪರಾಧ ಎಸಗಿದ್ದಾರೆ. ಆದ್ದರಿಂದ ಲಂಚ ನೀಡಿರುವ ಗೋವಿಂದಯ್ಯ ಅವರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಬೇಕು,’ ಎಂದು ಜನಾಧಿಕಾರ ಸಂಘರ್ಷ ಪರಿಷತ್‌ ದೂರು ಸಲ್ಲಿಸಿತ್ತು.

 

ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಲು “ಭ್ರಷ್ಟಾಚಾರದ ಅಕ್ರಮ ಬಂಡವಾಳ” ಹೂಡುವ ಜನರು ಸರ್ಕಾರಿ ಕೆಲಸ ಗಿಟ್ಟಿಸಿಕೊಂಡ ನಂತರ ಅಕ್ರಮ ಬಂಡವಾಳದ ಹತ್ತು ಪಟ್ಟನ್ನು ವಾಪಸ್ಸು ಲಂಚದ ಮೂಲಕವೇ ಸಾಮಾನ್ಯ ಜನರಿಂದ ಹಿಂಪಡೆಯುತ್ತಾರೆ. ಈ “ಭ್ರಷ್ಟಾಚಾರದ ಅಕ್ರಮ ಬಂಡವಾಳ”ವನ್ನು ತಡೆಯಬೇಕೆಂದರೆ, ಲಂಚ ಕೊಡುವವರನ್ನು ಭ್ರಷ್ಟಾಚಾರ ನಿಗ್ರಹ (ತಿದ್ದುಪಡಿ) ಕಾಯ್ದೆ, 2018ರ [“ಪಿ.ಸಿ. ಕಾಯ್ದೆ”] ಕಲಂ 8ರ ಪ್ರಕಾರ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿ ಕಾನೂನು ರೀತ್ಯ ಮೊಕದ್ದಮೆಯನ್ನು ಹೂಡಿ ಶಿಕ್ಷಿಸಿದ ಪಕ್ಷದಲ್ಲಿ ಭ್ರಷ್ಟಾಚಾರವನ್ನು ಕೆಲ ಮಟ್ಟಕ್ಕೆ ತಡೆಯಬಹುದು.

ಆದರ್ಶ ಐಯ್ಯರ್‌, ಜನಾಧಿಕಾರ ಸಂಘರ್ಷ ಪರಿಷತ್‌

ಈ ದೂರರ್ಜಿಯನ್ನು ಪರಿಗಣಿಸಿರುವ ಎಸಿಬಿಯು ಆರೋಪಿ ಗೋವಿಂದಯ್ಯ ಅವರ ವಿರುದ್ಧ (ಮೊ.ನಂ 52/2021) ಕಲಂ 8 ಪಿ ಸಿ ಆಕ್ಟ್‌ 1988ರ ರೀತಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.

ನರಸಿಂಹಸ್ವಾಮಿ ಪ್ರಕರಣದ ಹಿನ್ನೆಲೆ

ಅದೇ ರೀತಿ ಡಾ ಜಿ ನರಸಿಂಹಸ್ವಾಮಿ ಜಿ ಎಂಬುವರು ತನ್ನ ಮಗನಿಗೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ (ಎಇಇ) ಹುದ್ದೆ ಕೊಡಿಸಲು ಯುವರಾಜ್‌ ಸ್ವಾಮಿಗೆ 30 ಲಕ್ಷ ರುಗ.ಳನ್ನು ಲಂಚವಾಗಿ ನೀಡಿದ್ದರು ಎಂಬ ದೂರರ್ಜಿಯನ್ನು ಜನಾಧಿಕಾರ ಸಂಘರ್ಷ ಪರಿಷತ್‌ ಸಲ್ಲಿಸಿತ್ತು.

ಡಾ ಜಿ ನರಸಿಂಹಸ್ವಾಮಿ ಅವರು ತನ್ನ ಮಗನಿಗೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಹುದ್ದೆ ಕೊಡಿಸಲು ಯುವರಾಜಸ್ವಾಮಿಗೆ 30 ಲಕ್ಷ ರು.ಗಳನ್ನು ಲಂಚದ ರೂಪದಲ್ಲಿ 2020ರ ಅಕ್ಟೋಬರ್‌ 20ರಂದು ನೀಡಿದ್ದರು. ಈ ಸಂಬಂಧ ಅನ್ನಪೂಣೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದ ಡಾ ಜಿ ನರಸಿಂಹಸ್ವಾಮಿ ಅವರು ಯುವರಾಜಸ್ವಾಮಿ ವಿರುದ್ಧ ದೂರು ನೀಡಿದ್ದರು. ’30 ಲಕ್ಷ ರು.ಗಳನ್ನು ಪಡೆದುಕೊಂಡು ಹುದ್ದೆಯನ್ನು ಕೊಡಿಸದೇ ವಂಚಿಸಿರುತ್ತಾರೆ,’ ಎಂದು ದೂರಿನಲ್ಲಿ ವಿವರಿಸಿದ್ದರು.

ಇದನ್ನಾಧರಿಸಿ ಜನಾಧಿಕಾರ ಸಂಘರ್ಷ ಪರಿಷತ್‌ ಪಿಸಿ ಆಕ್ಟ್‌ 1988ರ ಕಲಂ 8ರ ಅಡಿಯಲ್ಲಿ ಎಸಿಬಿಗೆ ದೂರು ದಾಖಲಿಸಿತ್ತು. ಈ ದೂರನ್ನು ಪರಿಗಣಿಸಿರುವ ಎಸಿಬಿಯು ಡಾ ಜಿ ನರಸಿಂಹಸ್ವಾಮಿ ಅವರ ವಿರುದ್ಧ ಎಫ್‌ಐಆರ್‌ (ಮೊಕದ್ದಮೆ ಸಂಖ್ಯೆ; 53/2021) ದಾಖಲಿಸಿದೆ.

ಕೆಎಸ್‌ಆರ್‌ಟಿಸಿ ಅಧ್ಯಕ್ಷ ಹುದ್ದೆಗೆ 1 ಕೋಟಿ ಲಂಚ

ಇನ್ನು, ಕೆಎಸ್‌ಆರ್‌ಟಿಸಿಯಲ್ಲಿ ಅಧ್ಯಕ್ಷರ ಹುದ್ದೆ ಪಡೆಯುವ ಸಲುವಾಗಿ ಯುವರಾಜಸ್ವಾಮಿಗೆ 1 ಕೋಟಿ ರು.ಗಳನ್ನು ಲಂಚವಾಗಿ ನೀಡಿದ್ದರು. ಈ ಪ್ರಕರಣದಲ್ಲಿಯೂ ಜನಾಧಿಕಾರ ಸಂಘರ್ಷ ಪರಿಷತ್‌ ಸುಧೀಂಧ್ರ ರೆಡ್ಡಿ ಅವರ ವಿರುದ್ಧ ಪಿಸಿ ಆಕ್ಟ್‌ 1988, ಕಲಂ 8ರ ಅಡಿಯಲ್ಲಿ ದೂರು ದಾಖಲಿಸಿತ್ತು. ಈ ದೂರನ್ನಾಧರಿಸಿ ಎಸಿಬಿಯು ಸುಧೀಂದ್ರ ರೆಡ್ಡಿ ಅವರ ವಿರುದ್ಧ ಎಫ್‌ಐಆರ್‌ (ಮೊ.ಸಂಖ್ಯೆ; 51/2021) ದಾಖಲಿಸಿದೆ.

ಯುವರಾಜಸ್ವಾಮಿಗೆ 1 ಕೋಟಿ ರು. ನೀಡಿದ್ದರ ಬಗ್ಗೆ ಸುಧೀಂದ್ರ ರೆಡ್ಡಿ ಅವರು ಬೆಂಗಳೂರು ನಗರದ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ 2020ರ ಡಿಸೆಂಬರ್‌ 14ರಂದು ದೂರು ದಾಖಲಿಸಿದ್ದರು. ಒಂದು ಕೋಟಿ ರು. ಪಲಡೆದುಕೊಂಡು ಹುದ್ದೆ ಕೊಡಿಸದೇ ವಂಚಿಸಿರುತ್ತಾರೆ ಎಂದು ಸೈಬರ್ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಸಲ್ಲಿಸಿಸದ್ದ ದೂರಿನಲ್ಲಿ ವಿವರಿಸಿದ್ದರು. ಇದ್ನನಾಧರಿಸಿ ತನಿಖಾಧಿಕಾರಿಗಳು 2021ರ ಫೆ.8ರಂದು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದನ್ನು ಸ್ಮರಿಸಬಹುದು.

ಲಂಚ ನೀಡಿದವರ ವಿರುದ್ಧ ಎಸಿಬಿಯು ಎಫ್‌ಐಆರ್‌ ದಾಖಲಿಸಿರುವುದು ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ಜನಾಧಿಕಾರ ಸಂಘರ್ಷ ಪರಿಷತ್‌ನ ಗುರುತರವಾದ ಬೆಳವಣಿಗೆಯಾಗಿದೆ. ಲಂಚ ಕೊಡುವವರು ಭ್ರಷ್ಟಾಚಾರದ ಮೂಲ. ಭ್ರಷ್ಟಾಚಾರಕ್ಕೆ ಹಾಗೂ ಭ್ರಷ್ಟರಿಗೆ ಗೌರವ ಕೊಡುವ ಸಮಾಜಕ್ಕಿಂತಲೂ ಭ್ರಷ್ಟಾಚಾರವನ್ನು ಧಿಕ್ಕರಿಸುವ ಸಮಾಜವು ಸಮಾನತೆ, ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಕಾರ್ಯ ನಿರ್ವಹಣೆಯ ಕಡೆ ಸಾಗುವ ಸಮಾಜವಾಗುತ್ತದೆ ಎನ್ನುತ್ತಾರೆ ಜನಾಧಿಕಾರ ಸಂಘರ್ಷ ಪರಿಷತ್‌ನ ಸಹ ಅಧ್ಯಕ್ಷ ಆದರ್ಶ ಐಯ್ಯರ್‌.

ದಂಡ ಪ್ರಕ್ರಿಯೆ ಸಂಹಿತೆಯ ಕಲಂ 39ರ ಪ್ರಕಾರ ಯುವರಾಜ್ ಸ್ವಾಮಿಯ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ಎಲ್ಲಾ ಆರಕ್ಷಕ ಠಾಣೆಯ ಅಧಿಕಾರಿ/ಸಿಬ್ಬಂದಿಗಳು ಲಂಚದ ಹಣ ನೀಡಿ ಅಪರಾಧ ಎಸಗಿರುವ ಸಂಗತಿಯನ್ನು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಮಾಹಿತಿ/ದೂರು ನೀಡಬೇಕಾದ ಹೊಣೆಗಾರಿಕೆಯನ್ನು ಹೊಂದಿರುತ್ತಾರೆ.

ಕಲಂ 39ರ ಕಾನೂನಿನ ನಿರ್ದೇಶನವನ್ನು ಉಲ್ಲಂಘಿಸಿ ಲಂಚ ನೀಡಿರುವವರನ್ನು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಅನುವು ಮಾಡಿಕೊಟ್ಟು ಭಾರತೀಯ ದಂಡ ಸಂಹಿತೆಯ ಕಲಂ 217ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಸಗಿರುತ್ತಾರೆ ಎನ್ನುತ್ತಾರೆ ಪರಿಷತ್‌ನ ಮತ್ತೊಬ್ಬ ಸಹ ಅಧ್ಯಕ್ಷ ಪ್ರಕಾಶ್‌ ಬಾಬು