ಎಟಿಐ ಸಂಸ್ಥೆಯಲ್ಲಿ ಅನುದಾನ ದುರ್ಬಳಕೆ; ಬಳಕೆ ಪ್ರಮಾಣಪತ್ರಗಳಲ್ಲಿ ‘ಸಹಿ’ ಕೈಚಳಕ

ಬೆಂಗಳೂರು; ಭಾರತೀಯ ಆಡಳಿತ ಸೇವೆ ಮತ್ತು ಕರ್ನಾಟಕ ಆಡಳಿತ ಸೇವಾ ವರ್ಗದ ಅಧಿಕಾರಿಗಳಿಗೆ ನಿರಂತರವಾಗಿ ತರಬೇತಿ ನೀಡುತ್ತಿರುವ ಮೈಸೂರಿನ ಆಡಳಿತ ತರಬೇತಿ ಸಂಸ್ಥೆಗೆ ನೀಡುತ್ತಿರುವ ಅನುದಾನವು ದುರ್ಬಳಕೆ ಆಗುತ್ತಿದೆ. ಇಲಾಖೆಗಳ ವಿಶೇಷ ಅನುಮತಿ ಇಲ್ಲದೆಯೇ ಅನುದಾನವನ್ನು ಬಿಡುಗಡೆ ಮಾಡಲಾಗುತ್ತಿದೆ. ಅಲ್ಲದೆ ಬಳಕೆ ಪ್ರಮಾಣ ಪತ್ರಗಳಲ್ಲಿ ಪ್ರತಿ ಬಾರಿಯೂ ಒಬ್ಬೊಬ್ಬರ ಸಹಿ ಕಂಡು ಬರುತ್ತಿರುವುದು ಅನುದಾನ ದುರ್ಬಳಕೆ ಆಗುತ್ತಿದೆ ಎಂದು ಕೇಳಿ ಬರುತ್ತಿರುವ ಆರೋಪಗಳಿಗೆ ಇನ್ನಷ್ಟು ಪುಷ್ಠಿ ನೀಡಿದೆ.

ಮೂಲಸೌಲಭ್ಯ, ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯು ಪಿಪಿಪಿ ಕೋಶವು ಸಾಮಾರ್ಥ್ಯ ಅಭಿವೃದ್ದಿ ತರಬೇತಿಗಳಿಗೆ ಮೈಸೂರಿನ ಆಡಳಿತ ತರಬೇತಿ ಸಂಸ್ಥೆಗೆ ಅನುದಾನ ಬಿಡುಗಡೆ ಮಾಡುತ್ತಿದೆಯಾದರೂ ಈ ಅನುದಾನ ಬಳಕೆ ಕುರಿತು ಸಲ್ಲಿಸುತ್ತಿರುವ ಪ್ರಮಾಣ ಪತ್ರಗಳಲ್ಲಿ ಬೋಧಕ ವಿ ಚೇತನ್‌ ಸಹಿ, ಗೆಜೆಟೆಡ್‌ ಮ್ಯಾನೇಜರ್‌ ಸಹಿ, ಕೆಲವು ಫಾರ್‌ ಡೈರೆಕ್ಟರ್‌ ಜನರಲ್‌ ಸಹಿ ಇದೆ. ಈ ಕುರಿತು ಮಾಹಿತಿ ಕೋರಿದ್ದರೂ ವರ್ಷ ಕಳೆದರೂ ಸಮಂಜಸ ಮಾಹಿತಿ ನೀಡದಿರುವುದು ಗೊತ್ತಾಗಿದೆ.

ಈ ಕುರಿತು 2021ರ ಆಗಸ್ಟ್‌ 12ರಂದು ಆಡಳಿತ ತರಬೇತಿ ಸಂಸ್ಥೆಯ ಜಂಟಿ ಮಹಾನಿರ್ದೇಶಕರಾದ ಐಎಎಸ್‌ ಅಧಿಕಾರಿ ಡಾ ಮಮತಾ ಬಿ ಆರ್‌ ಅವರಿಗೆ ಸಲ್ಮ ಕೆ ಫಾಹಿಮ್‌ ಅವರು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಅನುದಾನ ಬಳಕೆ ಪ್ರಮಾಣ ಪತ್ರಗಳಲ್ಲಿ ಒಬ್ಬೊಬ್ಬರ ಸಹಿ ಇರುವ ಕುರಿತು ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆಯು ಮಾಹಿತಿ ಕೋರಿದ್ದರೂ ಆಡಳಿತ ತರಬೇತಿ ಸಂಸ್ಥೆಯು ಸಮಂಜಸವಾದ ಉತ್ತರವನ್ನು ನೀಡಿಲ್ಲ ಎಂಬುದು ಸಲ್ಮಾ ಕೆ ಫಾಹಿಮ್‌ ಅವರು ಬರೆದಿರುವ ಪತ್ರದಿಂದ ತಿಳಿದು ಬಂದಿದೆ.

‘ಅನುದಾನ ಬಳಕೆ ಪ್ರಮಾಣಪತ್ರಗಳಲ್ಲಿ ಪ್ರತಿ ಬಾರಿಯೂ ಒಬ್ಬೊಬ್ಬರ ಸಹಿ ಕಂಡು ಬರುತ್ತಿದ್ದು ಕೆಲವು ಪತ್ರಗಳು ವಿ ಚೇತನ್‌, ಪಿಪಿಪಿ ಕೋಶ, ಗೆಜೆಟೆಡ್‌ ಮ್ಯಾನೇಜರ್‌ ಅವರ ಸಹಿ, ಕೆಲವು ಫಾರ್‌ ಡೈರೆಕ್ಟರ್‌ ಜನರಲ್‌ ಅವರ ಸಹಿಗಳಿರುತ್ತವೆ. ಈ ಕುರಿತು ಕಚೇರಿಯಿಂದ 2020ರ ನವೆಂಬರ್‌ 26ರಲ್ಲಿ ಮಾಹಿತಿ ಕೋರಿದ್ದರೂ ಸಮಂಜಸ ಉತ್ತರವು ಸ್ವೀಕೃತವಾಗಿಲ್ಲ. ಇದರಲ್ಲಿ ಯಾರ ಸಹಿಯನ್ನು ಅಧಿಕೃತವೆಂದು ಪರಿಗಣಿಸಬೇಕು ಎಂಬುದು ಸ್ಪಷ್ಟವಾಗಿರುವುದಿಲ್ಲ,’ ಎಂದು ಸಲ್ಮಾ ಕೆ ಫಾಹಿಮ್‌ ಅವರು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

ಆಡಳಿತ ತರಬೇತಿ ಸಂಸ್ಥೆಯ ಆಂತರಿಕ ಲೆಕ್ಕ ಪರಿಶೋಧಕರು ನೀಡಿರುವ 2020ರ ಸೆಪ್ಟಂಬರ್‌ 30ರಲ್ಲಿ ಗುರುತಿಸಿರುವ ಆದಾಯದ ವಿವರಗಳು, ಬೋರ್ಡಿಂಗ್‌ ಶುಲ್ಕ, ಇಂಧನ ವೆಚ್ಚ, ಮುದ್ರಣ ಲೇಖನ ಸಾಮಗ್ರಿಗಳು, ಗುತ್ತಿಗೆ ನೌಕರರಿಗೆ ನೀಡಿರುವ ಪ್ರವಾಸ ಭತ್ಯೆ, ವಿ ಚೇತನ್‌ ಎಂಬುವರಿಗೆ ನೀಡಿರುವ ಮುಂಗಡ, ನಾಮಫಲಕ ಖರೀದಿ, ಕಂಪ್ಯೂಟರ್‌ ಸಾಮಗ್ರಿಗಳ ಖರೀದಿಸಲು ಯಾರು ಅನುಮೋದನೆ ನೀಡಿದ್ದಾರೆ ಮತ್ತು ಈ ಪೈಕಿ ಎಷ್ಟು ಪಾವತಿಗೆ ಅರ್ಹವಾಗಿವೆ ಎಂಬುದು ತಿಳಿದು ಬಂದಿಲ್ಲ ಎಂಬ ಅಂಶವು ಪತ್ರದಿಂದ ಗೊತ್ತಾಗಿದೆ.

ತರಬೇತಿಗೆ ಸಂಬಂಧಪಟ್ಟ ಎಟಿಐ ವೆಚ್ಚಗಳನ್ನು ಹೊರತುಪಡಿಸಿ ಬೇರೆಲ್ಲಾ ಸಂಪನ್ಮೂಲ ವ್ಯಕ್ತಿಗಳಿಗೆ ಮಾಡಿರುವ ಪಾವತಿ, ಬೋಧಕ ವರ್ಗ, ಲೇಖನ ಸಾಮಗ್ರಿಗಳ ವೆಚ್ಚ, ಸಂಶೋಧನ ಸಹಾಯಕರಿಗೆ ಭತ್ಯೆ, ಅನಿಮೇಷನ್‌ ವಿಡಿಯೋ ಸಂಬಂಧಿಸಿದಂತೆ ವೆಚ್ಚಗಳ ಮಾಹಿತಿಯನ್ನು ದಿನಾಂಕವಾರು ಇಲಾಖೆಗೆ ನೀಡದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಹಾಗೆಯೇ ತರಬೇತಿಯ ಹೊರತಾಗಿ ಈ ಇಲಾಖೆಯ ವಿಶೇಷ ಅನುಮತಿ ಪಡೆಯದೇ ಬಿಡುಗಡೆ ಮಾಡಲಾದ ಎಲ್ಲಾ ಸಂಶೋಧನೆ ಸಂಬಂಧಿತ ವೆಚ್ಚಗಳನ್ನು ಸಂಬಂಧಪಟ್ಟವರಿಂದ ಹಿಂಪಡೆದಿಲ್ಲ. ಹೀಗಾಗಿ ಇಂತಹ ವೆಚ್ಚವಗಳನ್ನು ಸಂಬಂಧಪಟ್ಟವರಿಂದ ಹಿಂಪಡೆದು ಅದನ್ನು ಪರಿಗಣಿಸಿ 2020-21ನೇ ಸಾಲಿನ ಹಣ ಬಳಕೆ ಪ್ರಮಾಣಪತ್ರವನ್ನು ಉಳಿಕೆ ಹಣದ ವಿವರಗಳ ಸಹಿತ ತುರ್ತಾಗಿ ಒದಗಿಸಬೇಕು ಎಂದು ಮೂಲಸೌಲಭ್ಯ ಇಲಾಖೆಯ ಸರ್ಕಾರದ ಜಂಟಿ ಕಾರ್ಯದರ್ಶಿ ಸಲ್ಮಾ ಕೆ ಫಾಹಿಮ್‌ ಅವರು ಸೂಚಿಸಿರುವುದು ಪತ್ರದಿಂದ ತಿಳಿದು ಬಂದಿದೆ.

ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯು ರಾಜ್ಯ ನಾಗರೀಕ ಸೇವಾ ವೃಂದದ ಪತ್ರಾಂಕಿತ ಅಧಿಕಾರಿಗಳಿಗೆ ವೃತ್ತಿ ಬುನಾದಿ ತರಬೇತಿ ನೀಡುತ್ತಿದೆ. ಕರ್ನಾಟಕ ಕೇಡರ್ ಗೆ ಆಯ್ಕೆಯಾದ ಭಾರತೀಯ ಆಡಳಿತ ಸೇವೆ ಮತ್ತು ಭಾರತೀಯ ಅನ್ಯ ಸೇವಾ ವೃಂದದ ಅಧಿಕಾರಿಗಳಿಗೆ ಸಾಮಾನ್ಯ ಬುನಾದಿ ತರಬೇತಿ ಹಾಗೂ ಹಿರಿಯ ಅಧಿಕಾರಿಗಳಿಗೆ ಪುನರ್ ಮನನ ತರಬೇತಿಯನ್ನೂ ನೀಡುತ್ತಿದೆ.

ಆಡಳಿತದ ಪರಿಣಾಮಕಾರಿ ಕಾರ್ಯನಿರ್ವಹಣೆಗೆ ಪೂರಕವಾದ ತರಬೇತಿ ಮಾತ್ರವಲ್ಲದೆ ಲಿಂಗ ಸಮಸ್ಯೆ, ಹಣಕಾಸು ನಿರ್ವಹಣೆ, ಕಾನೂನು ಸಮಸ್ಯೆಗಳು, ಗಣಕಯಂತ್ರ ಬಳಕೆಯೂ ಸೇರಿದಂತೆ ಹಲವು ರೀತಿಯ ತರಬೇತಿಗಳನ್ನು ಏರ್ಪಡಿಸುತ್ತಿದೆ. ಆಡಳಿತ ತರಬೇತಿ ಸಂಸ್ಥೆಯು ಮುಖ್ಯವಾಗಿ ಗುಂಪು ‘ಎ’ ಮತ್ತು ‘ಬಿ’ ವೃಂದದ ಅಧಿಕಾರಿಗಳಿಗೆ ತರಬೇತಿ ಏರ್ಪಡಿಸುತ್ತಿದೆಯಲ್ಲದೆ ನಿರ್ದೇಶನಾಲಯದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 29 ಜಿಲ್ಲಾ ತರಬೇತಿ ಸಂಸ್ಥೆಗಳ ಮೂಲಕ ಆಯಾಯ ಜಿಲ್ಲೆಯ ಗ್ರೂಪ್ ‘ಸಿ’ ಮತ್ತು ‘ಡಿ’ ವೃಂದದ ಸಿಬ್ಬಂದಿ ವರ್ಗದವರಿಗೆ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ.

the fil favicon

SUPPORT THE FILE

Latest News

Related Posts