ಐಎಎಸ್‌, ಐಪಿಎಸ್‌ ಬಡ್ತಿ ಪ್ರಕರಣ; ಸುಪ್ರೀಂಕೋರ್ಟ್‌ನಿಂದ ತುರ್ತು ನೋಟೀಸ್‌

ಬೆಂಗಳೂರು; 1998, 1999 ಮತ್ತು 2004ನೇ ಸಾಲಿನಲ್ಲಿ ಆಯ್ಕೆಯಾಗಿದ್ದ ಕೆಎಎಸ್‌ ಅಧಿಕಾರಿಗಳಿಗೆ ಹಿಂದಿನ ಸರ್ಕಾರ ನೀಡಿರುವ ಐಎಎಸ್‌, ಐಪಿಎಸ್‌ ಮತ್ತು ಇತರೆ ಬಡ್ತಿ ಮತ್ತು ಇದುವರೆಗೆ ಈ ಅಧಿಕಾರಿಗಳಿಗೆ ನೀಡಿರುವ ಎಲ್ಲಾ ಬಗೆಯ ಆರ್ಥಿಕ ಸೌಲಭ್ಯಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಸಲ್ಲಿಕೆಯಾಗಿದ್ದ ವಿಶೇಷ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಅಂಗೀಕರಿಸಿದೆ.

ಕೆ ಆರ್‌ ಖಲೀಲ್‌ ಅಹ್ಮದ್‌ ಸೇರಿದಂತೆ ಮತ್ತಿತರರು ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಸಂಜಯ್‌ ಕಿಶನ್‌ ಕೌಲ್‌ ಮತ್ತು ನ್ಯಾಯಮೂರ್ತಿ ಸುಂದರೇಶ್‌ ಅವರನ್ನೊಳಗೊಂಡ ವಿಭಾಗೀಯ ಪೀಠವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕೆಪಿಎಸ್‌ಸಿ ಕಾರ್ಯದರ್ಶಿ ಮತ್ತು ಡಿಪಿಎಆರ್‌ ಪ್ರಧಾನ ಕಾರ್ಯದರ್ಶಿಗೆ ತುರ್ತು ನೋಟೀಸ್‌ ಜಾರಿಗೊಳಿಸಿದೆ.

ಐಎಎಸ್‌ ಮತ್ತು ಐಪಿಎಸ್‌ ಹುದ್ದೆಗಳಿಗೆ ಬಡ್ತಿ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 6 ವಾರದ ಗಡುವಿನೊಳಗೆ ತುರ್ತು ನೋಟಿಸ್‌ಗೆ ಉತ್ತರಿಸಬೇಕು ಎಂದು ಸರ್ಕಾರಕ್ಕೆ ಆದೇಶಿಸಿದೆ.

ಕರ್ನಾಟಕ ಲೋಕಸೇವಾ ಆಯೋಗವು ಬಿಡುಗಡೆಗೊಳಿಸಿದ್ದ ಪರಿಷ್ಕೃತ ಪಟ್ಟಿಯಲ್ಲಿ ಉಪ ವಿಭಾಗಾಧಿಕಾರಿ ಹುದ್ದೆ ಕಳೆದುಕೊಂಡವರೂ ಸೇರಿದಂತೆ ಷರತ್ತಿನ ಮೇರೆಗೆ ಬಡ್ತಿ ಪಡೆದಿರುವ ಎಲ್ಲಾ ಐಎಎಸ್‌ ಮತ್ತು ಐಪಿಎಸ್‌ ಅಧಿಕಾರಿಗಳ ವಲಯದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತುರ್ತು ನೋಟೀಸ್‌ ಇದೀಗ ಆತಂಕಕ್ಕೆ ಕಾರಣವಾಗಿದೆ. ಅದರಲ್ಲೂ ತುಂಬಾ ಮುಖ್ಯವಾಗಿ ಕರಿಗೌಡ, ಶಿವಶಂಕರ್‌, ಗೋಪಾಲಕೃಷ್ಣ, ವಸಂತಕುಮಾರ್‌, ಎಚ್‌ ಬಸವರಾಜೇಂದ್ರ, ಕವಿತಾ ಮನ್ನಿಕೇರಿ ಸೇರಿದಂತೆ ಹಾಲಿ 12 ಐಎಎಸ್‌ ಅಧಿಕಾರಿಗಳು ಹಿಂಬಡ್ತಿ ಪಡೆಯುವ ಭೀತಿ ಎದುರಾಗಿದೆ.

ಪ್ರಕರಣದ ಹಿನ್ನೆಲೆ

1998, 1999 ಮತ್ತು 2004ನೇ ಸಾಲಿನಲ್ಲಿ ಗೆಜೆಟೆಡ್‌ ಪ್ರೊಬೇಷನರ್ಸ್‌ಗಳಾಗಿ ಆಯ್ಕೆಯಾಗಿದ್ದವರಲ್ಲಿ ಬಹುತೇಕರು ಅಕ್ರಮ ಫಲಾನುಭವಿಗಳಾಗಿದ್ದರು. ಸಿಐಡಿ ಮತ್ತು ಹೈಕೋರ್ಟ್‌ ರಚಿಸಿದ್ದ ಸತ್ಯ ಶೋಧನಾ ಸಮಿತಿ ನೀಡಿದ್ದ ವರದಿಯಲ್ಲಿ 400ಕ್ಕೂ ಹೆಚ್ಚು ಅಧಿಕಾರಿಗಳು ಅಕ್ರಮ ಫಲಾನುಭವಿಗಳು ಎಂದು ಎರಡೂ ವರದಿಯಲ್ಲಿ ಗುರುತಿಸಲಾಗಿತ್ತು. ಈ ಪ್ರಕರಣದ ಕುರಿತು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎನ್‌ ಕುಮಾರ್‌ ನೇತೃತ್ವದ ಪೀಠವು ಈ ಮೂರೂ ಸಾಲಿನ ಆಯ್ಕೆ ಪಟ್ಟಿಯನ್ನು ಪರಿಷ್ಕರಿಸಲು ಕೆಪಿಎಸ್‌ಸಿಗೆ ಸೂಚಿಸಿತ್ತು.

ಹೈಕೋರ್ಟ್ ನೀಡಿದ್ದ 3ನೇ ನಿರ್ದೇಶನವನ್ನು ಸರ್ಕಾರ ಮತ್ತು ಆಯೋಗವು ಸರಿಯಾಗಿ ಪಾಲನೆ ಮಾಡಿಲ್ಲ ಎಂದು ಬಾಧಿತ ಚನ್ನಪ್ಪ ಮತ್ತಿತರರು ಹೈಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದ್ದರು. ಹೀಗಾಗಿ ಕರ್ನಾಟಕ ಲೋಕಸೇವಾ ಆಯೋಗವು ಪರಿಷ್ಕೃತ ಪಟ್ಟಿಯನ್ನು ಸರಿಪಡಿಸಲಾಗುವುದು ಎಂದು 2020ರ ಡಿಸೆಂಬರ್ 4ರಂದು ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿತ್ತು. ಅದರಂತೆ ಆಯೋಗವು ಅಂತಿಮ ಪರಿಷ್ಕೃತ ಪಟ್ಟಿಯನ್ನು ಹೊರಡಿಸಿತ್ತು.

ಕರ್ನಾಟಕ ಲೋಕಸೇವಾ ಆಯೋಗವು ಹೈಕೋರ್ಟ್ ನಿರ್ದೇಶನದಂತೆ ಪ್ರಕಟಿಸಿರುವ ಅಂತಿಮ ಪರಿಷ್ಕೃತ ಆಯ್ಕೆಪಟ್ಟಿಯಲ್ಲೂ ಲೋಪದೋಷಗಳಿವೆ ಎಂಬ ಆರೋಪ ಕೇಳಿಬಂದಿದೆ. ಲೋಕಸೇವಾ ಆಯೋಗ ಪ್ರಕಟಿಸಿದ್ದ 2014ರ ನವೆಂಬರ್ 11ರಂದು (ವೆಬ್ ಹೋಸ್ಟ್ ಪಟ್ಟಿ)ಯಲ್ಲಿ ಅನೇಕ ಅಧಿಕಾರಿಗಳ ಸ್ಥಾನ ಪಲ್ಲಟಗೊಂಡಿತ್ತು. ಹೈಕೋರ್ಟ್​​​ನ ಎರಡನೇ ನಿರ್ದೇಶನದಂತೆ ಆಯೋಗ ಜನವರಿ 25, 2019ರಂದು ಮತ್ತು 3ನೇ ನಿರ್ದೇಶನದಂತೆ 2019ರ ಆಗಸ್ಟ್ 22ರಂದು ಪರಿಷ್ಕೃತ ಪಟ್ಟಿಯನ್ನು ಪ್ರಕಟಿಸಿತ್ತು.

ಹೈಕೋರ್ಟ್‌ನ ನಿರ್ದೇಶನದಂತೆ ಆಯೋಗವು ಪ್ರಕಟಿಸಿದ್ದ ಈ ಎರಡೂ ಪಟ್ಟಿಗಳಲ್ಲೂ ಕರಿಗೌಡ ಸೇರಿದಂತೆ 8 ಮಂದಿ ಅಧಿಕಾರಿಗಳ ಹುದ್ದೆಗಳನ್ನು 2014ರಲ್ಲಿದ್ದಂತೆಯೇ ಮುಂದುವರೆಸಿತ್ತು. ಒಟ್ಟು 8 ಮಂದಿ ಅಧಿಕಾರಿಗಳು ಅಂತಿಮ ಪರಿಷ್ಕೃತ ಪಟ್ಟಿಯ ಪ್ರಕಾರ ಉಪ ವಿಭಾಗಾಧಿಕಾರಿ ಹುದ್ದೆಯನ್ನು ಕಳೆದುಕೊಂಡಿದ್ದರು.

1998ನೇ ಸಾಲಿನ ಕೆಪಿಎಸ್‌ಸಿ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಅಕ್ರಮವಾಗಿ ನೇಮಕವಾಗಿರುವವರನ್ನು ಆಯ್ಕೆ ಪಟ್ಟಿಯಿಂದ ಹೊರಗಿಟ್ಟು ಹೊಸ ಆಯ್ಕೆ ಪಟ್ಟಿಯಂತೆ ನೇಮಕಾತಿ ಮಾಡಲು ಸೂಚನೆ ನೀಡಿತ್ತು. ಇದನ್ನು ಸುಪ್ರೀಂಕೋರ್ಟ್‌ ಸಹ ಎತ್ತಿ ಹಿಡಿದಿತ್ತು. ತೀರ್ಪು ಜಾರಿ ಮಾಡಲು ಹಿಂದಿನ ಕಾಂಗ್ರೆಸ್‌ ಮತ್ತು ಮೈತ್ರಿ ಸರ್ಕಾರಗಳು ಹಿಂದೇಟು ಹಾಕಿದ್ದವು. ಹೀಗಾಗಿ ಸರ್ಕಾರದ ವಿರುದ್ಧ ನ್ಯಾಯಾಲಯದಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದನ್ನು ಸ್ಮರಿಸಬಹುದು.

ಹೈಕೋರ್ಟ್‌ನ ಏ.24ರ ನಿರ್ದೇಶನದಂತೆ ಸರಕಾರ 115 ಅಧಿಕಾರಿಗಳ ಹಿಂಬಡ್ತಿ ಮುಂಬಡ್ತಿ ಆದೇಶ ಹೊರಡಿಸಬೇಕಿತ್ತು. ಆದರೆ ಸರ್ಕಾರ ಅವರನ್ನು ರಕ್ಷಿಸಲು ಸುಗ್ರೀವಾಜ್ಞೆಯನ್ನು ಜಾರಿಗೊಳಿಸಿತ್ತು. ಸುಗ್ರೀವಾಜ್ಞೆ ಕುರಿತ ಕಡತವನ್ನು ಸರಕಾರ ರಾಜ್ಯಪಾಲರಿಗೆ ಕಳುಹಿಸಿ ಸಹಿ ಹಾಕಲು ಕೋರಿತ್ತು. ಆದರೆ ನ್ಯಾಯಾಲಯದ ಮುಂದೆ ಸರಕಾರ ಆ ವಿಷಯವನ್ನು ಪ್ರಸ್ತಾಪಿಸಿರಲಿಲ್ಲ. ಅಲ್ಲದೆ ಅಕ್ರಮ ಫಲಾನುಭವಿಗಳ ಹಿತರಕ್ಷಣೆ ಕಾಯುವ ಏಕೈಕ ಉದ್ದೇಶದಿಂದ ಹಿಂದಿನ ಸರ್ಕಾರ ಮಂಡಿಸಿದ್ದ ಮಸೂದೆಗೆ ಸದನದ ಅನುಮೋದನೆಯನ್ನೂ ಪಡೆದುಕೊಂಡಿತ್ತು.

the fil favicon

SUPPORT THE FILE

Latest News

Related Posts