ಹುಲಿಗಳ ಜೀವನದ ಕುರಿತು ಅಧ್ಯಯನವೇ ನಡೆದಿಲ್ಲ; ಸದನವನ್ನು ದಾರಿತಪ್ಪಿಸಿದರೇ ಕತ್ತಿ?

ಬೆಂಗಳೂರು; ರಾಜ್ಯದಲ್ಲಿ ಹುಲಿಗಳ ಜೀವನದ ಬಗ್ಗೆ ಯಾವುದೇ ಅಧ್ಯಯನ ನಡೆಸಿಲ್ಲ ಎಂದು ಅರಣ್ಯ ಪಡೆ ಮುಖ್ಯಸ್ಥರೂ ಆಗಿರುವ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನೀಡಿದ್ದ ಉತ್ತರವನ್ನು ಪರಿಶೀಲಿಸದೆಯೇ ಅರಣ್ಯ ಸಚಿವ ಉಮೇಶ್‌ ಕತ್ತಿ ಅವರು ಸದನವನ್ನು ದಾರಿತಪ್ಪಿಸಿದ್ದಾರೆ!

ವಿಧಾನ ಪರಿಷತ್‌ನಲ್ಲಿ ಬಿ ಕೆ ಹರಿಪ್ರಸಾದ್‌ ಅವರು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಸೆ.13ರಂದು ಉತ್ತರಿಸಿರುವ ಅರಣ್ಯ ಸಚಿವ ಉಮೇಶ್‌ ಕತ್ತಿ ಅವರು ಹುಲಿಗಳ ಜೀವನ ವಿಧಾನದ ಬಗ್ಗೆ ಯಾವುದೇ ಅಧ್ಯಯನ ನಡೆಸಿಲ್ಲ ಎಂದು ಉತ್ತರಿಸಿದ್ದಾರೆ.

ಆದರೆ 2021ರ ಮಾರ್ಚ್‌ 15ರಂದು ಪರಿಷತ್‌ ಸದಸ್ಯ ಲೆಹರ್‌ಸಿಂಗ್‌ ಸಿರೋಯಾ ಅವರು ಕೇಳಿದ್ದ ಇದೇ ಪ್ರಶ್ನೆಗೆ ಉತ್ತರಿಸಿದ್ದ ಹಿಂದಿನ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರು ಹುಲಿಗಳ ಜೀವನ ವಿಧಾನದ ಕುರಿತು ಅಧ್ಯಯನ ನಡೆದಿದೆ ಎಂದು ಉತ್ತರಿಸಿದ್ದರು.

ಆದರೀಗ ಹುಲಿಗಳ ಜೀವನ ವಿಧಾನದ ಕುರಿತು ಯಾವುದೇ ಅಧ್ಯಯನ ನಡೆಸಿರುವುದಿಲ್ಲ ಎಂದು ಅರಣ್ಯಪಡೆ ಮುಖ್ಯಸ್ಥರು ಒದಗಿಸಿದ್ದ ಮಾಹಿತಿಯನ್ನು ಪರಿಶೀಲಿಸದೆಯೇ ಸಚಿವ ಉಮೇಶ್‌ ಕತ್ತಿ ಅವರು ಉತ್ತರವನ್ನು ಸದನಕ್ಕೆ ಮಂಡಿಸಿದ್ದಾರೆ. ಉಲ್ಲಾಸ್‌ ಕಾರಂತ ಸೇರಿದಂತೆ ಹಲವರು ಹುಲಿಗಳ ಜೀವನ ಕುರಿತು ಅಧ್ಯಯನ ನಡೆಸಿದ್ದಾರೆ. ಆದರೂ ಹುಲಿಗಳ ಜೀವನ ಕುರಿತು ಯಾವುದೆ ಅಧ್ಯಯನ ನಡೆದೇ ಇಲ್ಲ ಎಂದು ನೀಡಿರುವ ಉತ್ತರವೇ ತಪ್ಪಿನಿಂದ ಕೂಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

2021ರ ಮಾರ್ಚ್‌ನಲ್ಲಿ ನೀಡಿದ್ದ ಉತ್ತರದಲ್ಲೇನಿತ್ತು?

ಜಾರ್ಜ್ ಶೆಲ್ಲರ್‌ ಎಂಬುವರು ಮಧ್ಯ ಪ್ರದೇಶದ ಕಾನ್ಹ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಗಳ ಕುರಿತು ಅಧ್ಯಯನ ನಡೆಸಿ ಡೀರ್‌ ಅಂಡ್‌ ಟೈಗರ್‌ ಎನ್ನುವ ಕೃತಿ ಪ್ರಕಟಿಸಿದ್ದರು. ಇದು ಹುಲಿಗಳ ಕುರಿತು ತಿಳಿದುಕೊಳ್ಳಲು ಸಹಕಾರಿಯಾಘಿದೆ. Smithsonian, USA ಸಂಸ್ಥೆಯು ನೇಪಾಳದ Chitwan National Parkನಲ್ಲಿ ನಡೆಸಿರುವ ಅಧ್ಯಯನವು ಎಲ್ಲಾ ಹುಲಿಗಳ ಸಂರಕ್ಷಿತ ಪ್ರದೇಶಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿಗೆ ಮಾರ್ಗಸೂಚಿಯಾಗಿದೆ.

ಇದಲ್ಲದೆ ಕರ್ನಾಟಕ ಅರಣ್ಯ ಇಲಾಖೆಯು ಕ್ಯಾಮರಾ ಟ್ರ್ಯಾಪ್‌ನಿಂದ ಮಾಹಿತಿ ಕಲೆಹಾಕಿ ಹುಲಿಗಳ ಆರೋಗ್ಯ ಸ್ಥಿತಿ, ನಡವಳಿಕೆ ಮತ್ತು ವಯಸ್ಸನ್ನು ಕೂಡಾ ಪತ್ತೆ ಹಚ್ಚಲಾಗುತ್ತಿದೆ. ಇದಕ್ಕಾಗಿ ವಿಶೇಷವಾಗಿ ಟೈಗರ್ ಸೆಲ್‌ನ್ನು ಕೇಂದ್ರ ಕಚೇರಿಯಲ್ಲಿ ತೆರೆಯಲಾಗಿದೆ. ಕರ್ನಾಟಕ ಅರಣ್ಯ ಇಲಾಖೆಯು ಭಾರತೀಯ ವನ್ಯಜೀವಿ ಸಂಸ್ಥೆ, ಡೆಹರಾಡೂನ್‌ ಇವರಿಗೆ ಮಾನವ-ಹುಲಿ-ಸಂಘರ್ಷ ಸೇರಿದಂತೆ ಹುಲಿಗಳ ಕುರಿತು ಸಮಗ್ರ ಅಧ್ಯಯನಕ್ಕಾಗಿ ಅನುಮತಿ ನೀಡಿದೆ.

ಅಲ್ಲದೆ ವನ್ಯಜೀವಿ ಸಂರಕ್ಷಣಾ ಸಂಸ್ಥೆಯು ಕರ್ನಾಟಕ ಅರಣ್ಯ ಇಲಾಖೆಯ ಜತೆ 2 ವರ್ಷದಿಂದ ನಾಗರಹೊಳೆ, ಬಿಆರ್‌ಟಿ, ಕಾಳಿ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಹುಲಿಗಳ ಚಲನವಲನ, ನಡವಳಿಕೆ, ಆಹಾರ ಪದ್ಧತಿ ಕುರಿತು ಅಧ್ಯಯನ ಮಾಡಿ ಹಲವಾರು ವೈಜ್ಞಾನಿಕ ಪ್ರಕಟಣೆಗಳನ್ನು ತಂದಿದೆ ಎಂದು ಮಾರ್ಚ್‌ 15ರಂದು ನಡೆದಿದ್ದ ಅಧಿವೇಶನದಲ್ಲಿ ಇದೇ ಅರಣ್ಯ ಇಲಾಖೆಯು ಉತ್ತರ ನೀಡಿತ್ತು.

ರಾಜ್ಯದಲ್ಲಿ ಕಳೆದ ಮೂರು ವರ್ಷದಲ್ಲಿ 33 ಹುಲಿಗಳು ಸಾವನ್ನಪ್ಪಿವೆ. ಹುಲಿಗಳು ಸಾವೀಗೀಡಾಗುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವು 2ನೇ ಸ್ಥಾನದಲ್ಲಿದೆ. 2018-19ರಲ್ಲಿ 11, 2019-20ರಲ್ಲಿ 10 ಮತ್ತು 2020-21ರಲ್ಲಿ 12 ಹುಲಿಗಳು ಸಾವನ್ನಪ್ಪಿವೆ.

2018-19ರಲ್ಲಿ ಕೊಡಗು ಜಿಲ್ಲೆಯಲ್ಲಿ 07, ಚಾಮರಾಜನಗರದಲ್ಲಿ 01, ಮೈಸೂರಿನಲ್ಲಿ 02, ಚಿಕ್ಕಮಗಳೂರಿನಲ್ಲಿ 01 ಹುಲಿಗಳು ಸಾವನ್ನಪ್ಪಿವೆ. ಅದೇ ರೀತಿ 2019-20ರಲ್ಲಿ ಕೊಡಗಿನಲ್ಲಿ -2, ಚಾಮರಾಜನಗರದಲ್ಲಿ 06, ಮೈಸೂರಿನಲ್ಲಿ 02, 2020-21ರಲ್ಲಿ ಕೊಡಗಿನಲ್ಲಿ 05, ಚಾಮರಾಜನಗರದಲ್ಲಿ 06, ಚಿಕ್ಕಮಗಳೂರಿನಲ್ಲಿ 01 ಸೇರಿದಂತೆ ಒಟ್ಟು 33 ಹುಲಿಗಳು ಸಾವನ್ನಪ್ಪಿರುವುದು ಅರಣ್ಯ ಪಡೆ ಮುಖ್ಯಸ್ಥರು ನೀಡಿರುವ ಉತ್ತರವನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts