ಸಿದ್ದುಗಿಂತಲೂ ಬಿಎಸ್‌ವೈ ಅವಧಿಯಲ್ಲೇ ಶೇ.75ರಷ್ಟು ಬಡ್ಡಿ ಪಾವತಿ; ಸಹಾಯಧನ ವೆಚ್ಚ ಸ್ಥಿರತೆ ಹೆಚ್ಚಳ

ಬೆಂಗಳೂರು; ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ (2015-16) ಪಡೆದಿದ್ದ ವಿವಿಧ ರೂಪದ ಸಾಲಗಳಿಗೆ ಮಾಡುತ್ತಿದ್ದ ಬಡ್ಡಿ ಪಾವತಿ ಮೊತ್ತವು ಬಿಜೆಪಿ ಸರ್ಕಾರದ (2019-20)ರಲ್ಲಿ ಶೇ.75ರಷ್ಟು ಹೆಚ್ಚಾಗಿತ್ತು. ಅದೇ ರೀತಿ ಹಣಕಾಸಿನ ನೆರವಿನ ರೂಪದಲ್ಲಿ ಸಹಾಯಧನಗಳ ವೆಚ್ಚವು ಸ್ಥಿರವಾಗಿ ಹೆಚ್ಚುತ್ತಿದ್ದರೂ ರಾಜ್ಯ ಸರ್ಕಾರ ಗಮನಹರಿಸದಿರುವುದನ್ನು ಸಿಎಜಿಯು ಪತ್ತೆ ಹಚ್ಚಿದೆ.

2015-16ರಲ್ಲಿ 11,343 ಕೋಟಿ ರು. ಬಡ್ಡಿ ಪಾವತಿ ಮಾಡುತ್ತಿದ್ದರೆ 2019-20ರ ಅವಧಿಯಲ್ಲಿ ಬಡ್ಡಿ ಪಾವತಿಯು 19,903 ಕೋಟಿಗೆ ಏರಿತ್ತು. ಕೇವಲ 4 ವರ್ಷಗಳ ಅಂತರದಲ್ಲೇ 8,560 ಕೋಟಿ ರು. ಹೆಚ್ಚಾಗಿತ್ತು. 2018-19ಕ್ಕೆ ಹೋಲಿಸಿದರೆ ಬಡ್ಡಿ ಪಾವತಿಯು ಶೇ. 19.80ಕ್ಕೇರಿತ್ತು ಎಂದು ಸಿಎಜಿ ವರದಿಯು ವಿವರಿಸಿದೆ.

2019-20ರಲ್ಲಿ ಬಡ್ಡಿ ಪಾವತಿಗಳು ಆಂತರಿಕ ಸಾಲದ ಮೇಲಿನ ಒಟ್ಟು 15,085 ಕೋಟಿ, ಸಣ್ಣ ಉಳಿತಾಯ ಭವಿಷ್ಯ ನಿಧಿ ಇತ್ಯಾದಿಗಳ ಮೇಲಿನ ಬಡ್ಡಿ 2,747 ಕೋಟಿ, ಕೇಂದ್ರ ಸರ್ಕಾರದಿಂದ ಸಾಲಗಳು ಮತ್ತು ಮುಂಗಡಗಳ ಮೇಲಿನ ಬಡ್ಡಿ 684 ಕೋಟಿ, ಆಯವ್ಯಯದ ಹೊರಗಿನ ಸಾಲಗಳ ಮೇಲಿನ ಬಡ್ಡಿ 1,384 ಕೋಟಿ ಮತ್ತು ಇತರ ಬಾಧ್ಯತೆಗಳ ಮೇಲಿನ 3 ಕೋಟಿ ಬಡ್ಡಿ ಪಾವತಿಗಳನ್ನು ಒಳಗೊಂಡಿದೆ ಎಂಬುದು ಸಿಎಜಿ ವರದಿಯಿಂದ ತಿಳಿದು ಬಂದಿದೆ.

ಅದೇ ರೀತಿ ಮಾರುಕಟ್ಟೆ ಸಾಲದ ಮೇಲಿನ ಬಡ್ಡಿ ಪಾವತಿಯನ್ನು 2,790 ಕೋಟಿ (ಶೇ.27) ಹೆಚ್ಚಿಸಿದ ಕಾರಣ ಆಂತರಿಕ ಸಾಲದ ಮೇಲಿನ ಬಡ್ಡಿ 2018-19ರಲ್ಲಿ 12,359 ಕೋಟಿಯಿಂದ 2019-20ರಲ್ಲಿ 15,085 ಕೋಟಿ ರು.ಗೇರಿದೆ. ಸಣ್ಣ ಉಳಿತಾಯ, ಭವಿಷ್ಯ ನಿಧಿ ಇತ್ಯಾದಿಗಳ ಮೇಲಿನ ಬಡ್ಡಿ 2018-19ರಲ್ಲಿದ್ದ 2,358 ಕೋಟಿಯಿಂದ 2019-20ರಲ್ಲಿ 2,747 ಕೋಟಿಯಾಗಿ 390 ಕೋಟಿಗೆ ಏರಿದೆ. ಇದು ಮುಖ್ಯವಾಗಿ ರಾಜ್ಯ ಭವಿಷ್ಯ ನಿಧಿ (ಶೇ. 20) ಮತ್ತು ವಿಮೆಯ ಮೇಲಿನ ಬಡ್ಡಿ (ಶೇ.14) ಹೆಚ್ಚಳದಿಂದಾಗಿ ಉಂಟಾಗಿದೆ ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.

2019-20ರ ಬಡ್ಡಿ ಪಾವತಿಗಳಿಗಾಗಿ 14ನೇ ಹಣಕಾಸು ಆಯೋಗವು 17,168 ಕೋಟಿಗಳ ಅಂದಾಜು ಮಾಡಿತ್ತು. ರಾಜ್ಯ ಸರ್ಕಾರವು ತನ್ನ ಆಯವ್ಯಯ ಮತ್ತು ಎಂಟಿಎಫ್‌ಪಿನಲ್ಲಿ ಕ್ರಮವಾಗಿ 19,060 ಕೋಟಿಗಳ ಪ್ರಕ್ಷೇಪಣೆ ಮಾಡಿತ್ತು. ಆದರೆ ವಾಸ್ತವ ಬಡ್ಡಿ ಪಾವತಿಯು 19,903 ಕೋಟಿಗಳಷ್ಟಿತ್ತು ಎಂಬುದು ಸಿಎಜಿ ವರದಿಯಿಂದ ಗೊತ್ತಾಗಿದೆ.

ಅದೇ ರೀತಿ ಕೃಷಿ ಪಂಪ್‌ಸೆಟ್‌ಗಾಗಿ ರೈತರಿಗೆ ಒದಗಿಸಲಾದ ಉಚಿತ ವಿದ್ಯುತ್‌ ಸರಬರಾಜು ಸಹಾಯಧನ, ಆಹಾರ ಸಹಾಯಧನ, ಬೆಳೆ ಸಾಲದ ಮೇಲಿನ ಬಡ್ಡಿ ಸಹಾಯಧನ ಮತ್ತು ಸಾರಿಗೆ ಸಹಾಯಧನಗಳ ವೆಚ್ಚದಲ್ಲಿಯೂ ಏರಿಕೆಯಾಗಿದೆ.

2015-16ರಲ್ಲಿ 3,913 ಕೋಟಿಗಳಷ್ಟಿದ್ದು 2019-20ರಲ್ಲಿ 4,048 ಕೋಟಿಗೆ ಏರಿದೆ. ಬೀಜಗಳ ಪೂರೈಕೆ, ನೇಕಾರರ ಪ್ಯಾಕೇಜ್‌, ಆಶ್ರಯ ಯೋಜನೆ, ಸೂಕ್ಷ್ಮ ಹನಿ ನೀರಾವರಿ, ಕನಿಷ್ಠ ಮೂಲ ಬೆಲೆ ಯೋಜನೆ, ದುರ್ಬಲ ವರ್ಗದವರಿಗೆ ವಸತಿ, ಗ್ರಾಮೀಣ ಭೂ ಹೀನರಿಗೆ ಮನೆ ನಿವೇಶನಗಳು ಇದರಲ್ಲಿ ಸೇರಿವೆ. ಆದರೆ ಸಹಾಯಧನಗಳ ವೆಚ್ಚವು ನಿಜವಾಗಿ ತೋರಿಸಿದ್ದಕ್ಕಿಂತ ಹೆಚ್ಚಾಗಿದೆ.

ನಿಜವಾದ ಸಹಾಯಧನದ ಪಾವತಿಯು 17,534 ಕೋಟಿಗೆ ಬದಲಾಗಿ 21,582 ಕೋಟಿಗಳಾಗುತ್ತದೆ ಎಂದು ಸಿಎಜಿ ವರದಿ ವಿಶ್ಲೇಷಿಸಿದೆ. ‘ಹಣಕಾಸಿನ ನೆರವಿನ ರೂಪದಲ್ಲಿ ಸಹಾಯಧನಗಳ ವೆಚ್ಚವು ಸ್ಥಿರವಾಗಿ ಹೆಚ್ಚುತ್ತಿದೆ. ರಾಜ್ಯ ಸರ್ಕಾರ ಈ ಬಗ್ಗೆ ಹೆಚ್ಚಿನ ಗಮನಹರಿಸಬೇಕು,’ ಎಂದು ಸಿಎಜಿ ಶಿಫಾರಸ್ಸು ಮಾಡಲಾಗಿದೆ.

ವಿದ್ಯಾರ್ಥಿ ವೇತನ, ಪ್ರೋತ್ಸಾಹಕಗಳು, ಗುತ್ತಿಗೆ, ಹೊರಗುತ್ತಿಗೆ ಮತ್ತು ಬಂಡವಾಳ ವೆಚ್ಚಗಳ ಮೂರು ಶೀರ್ಷಿಕೆಗಳಡಿ ಕ್ರಮವಾಗಿ ಶೇ.49, 88 ಮತ್ತು 75ರಷ್ಟು ಬಳಕೆಯಾಗಿದೆ. ವಿದ್ಯಾರ್ಥಿ ವೇತನ ಮತ್ತು ಪ್ರೋತ್ಸಾಹಕಗಳಿಗೆಂದು ಆಯವ್ಯಯದಲ್ಲಿ ನಿಗದಿಪಡಿಸಿದ್ದ 336.94 ಕೋಟಿ ರು. ಪೈಕಿ 165.00 ಕೋಟಿಯಷ್ಟು ಮಾತ್ರ (ಶೇ. 48.97) ವೆಚ್ಚ ಮಾಡಿದ್ದನ್ನು ಸಿಎಜಿ ಹೊರಗೆಡವಿತ್ತು.

ಮಹಿಳಾ ಆಯವ್ಯಯದಲ್ಲಿ ಹಂಚಿಕೆ ಮಾಡಿದ್ದ ಹಣವನ್ನು ಮಹಿಳೆಯರ ಸಬಲೀಕರಣಕ್ಕಾಗಿ ವೆಚ್ಚ ಮಾಡದೆಯೇ ಜಾಹೀರಾತು, ಕೋವಿಡ್‌ ಬಾಬ್ತುಗಳಿಗಾಗಿ ವೆಚ್ಚ ಮಾಡಲಾಗಿತ್ತು ಎಂಬುದನ್ನು ಭಾರತದ ಲೆಕ್ಕನಿಯಂತ್ರಕರು ಮತ್ತುಮಹಾಲೆಕ್ಕಪರಿಶೋಧಕರ ವರದಿಯು ಹೊರಗೆಡವಿದೆ.

ಅಧಿಕ ಪ್ರಮಾಣದಲ್ಲಿ ನಗದು ಶಿಲ್ಕು ಹೊಂದಿದ್ದರೂ ಹಲವು ಸಂದರ್ಭಗಳಲ್ಲಿ ಮಾರುಕಟ್ಟೆಯಿಂದ ಹೆಚ್ಚಿನ ಬಡ್ಡಿ ದರದಲ್ಲಿ ಸಾಲ ಪಡೆದಿದೆ. 2019-20ರಲ್ಲೇ ಸರಾಸರಿ ಶೇ. 6.38 ದರದಲ್ಲಿ 19,903 ಕೋಟಿ ರು. ಬಡ್ಡಿ ಪಾವತಿಸಿತ್ತು.

ಹದಿನಾಲ್ಕನೇ ಹಣಕಾಸು ಆಯೋಗ ಶಿಫಾರಸ್ಸು ಮಾಡಿದ್ದ ಸೇವಾ ತೆರಿಗೆಯ ನಿವ್ವಳ ಆದಾಯ ಐಜಿಎಸ್‌ಟಿ ಮತ್ತು ಸೇವಾ ತೆರಿಗೆಗಳಲ್ಲಿ ರಾಜ್ಯಕ್ಕೆ ಯಾವುದೇ ಹಂಚಿಕೆಯಾಗಿಲ್ಲ ಎಂಬ ಅಂಶವನ್ನು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ ವರದಿ ಬಹಿರಂಗಗೊಳಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts