ವಿಲೇವಾರಿಗೆ ಬಾಕಿ ಇವೆ 1.69 ಲಕ್ಷ ಕಡತಗಳು; ಕುಂತಲ್ಲೇ ಕುಳಿತಿದೆ ಮೈಗಳ್ಳರ ಸರ್ಕಾರ!

ಬೆಂಗಳೂರು; ಹದಿನೈದು ದಿನದೊಳಗೆ ಬಾಕಿ ಇರುವ ಎಲ್ಲಾ ಬಗೆಯ ಕಡತಗಳನ್ನೂ ವಿಲೇವಾರಿ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚುರುಕು ಮುಟ್ಟಿಸಿ ತಿಂಗಳಾದರೂ 41 ಆಡಳಿತ ಇಲಾಖೆಗಳಲ್ಲಿ 1.69 ಲಕ್ಷ ಕಡತಗಳು ಬಾಕಿ ಉಳಿದಿರುವುದು ಇದೀಗ ಬಹಿರಂಗವಾಗಿದೆ.

ಪ್ರಮಾಣ ವಚನ ಸ್ವೀಕರಿಸಿದ ಕೆಲ ಹೊತ್ತಿನಲ್ಲೇ ‘ಚಲ್ತಾ ಹೇ’ ಎಂಬ ಚಾಳಿಯನ್ನು ಅಧಿಕಾರಿಗಳು ಬಿಟ್ಟುಬಿಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೈಗಳ್ಳ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದ್ದರು. 80, 076 ಕಡತಗಳು ವಿಲೇವಾರಿಯಾಗದೇ ಬಾಕಿ ಉಳಿದಿರುವುದನ್ನು ನೋಡಿದರೆ ಅಧಿಕಾರಿಗಳು ಇನ್ನೂ ಜಡತ್ವದಿಂದ ಹೊರಬಂದಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ.

2021ರ ಆಗಸ್ಟ್‌ 31ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ಕಡತ ವಿಲೇವಾರಿ ಕುರಿತು ಚರ್ಚೆಯಾಗಿತ್ತು. ಕಡತಗಳಿಗೆ ಸಂಬಂಧಿಸಿದಂತೆ ಇಲಾಖೆ ಮುಖ್ಯಸ್ಥರು ಸಲ್ಲಿಸಿದ್ದ ಮಾಹಿತಿ ಮತ್ತು ಅಂಕಿ ಅಂಶಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ.

ವಿಶೇಷವೆಂದರೆ ಬಸವರಾಜ ಬೊಮ್ಮಾಯಿ ಅವರು ಗೃಹ ಸಚಿವರಾಗಿದ್ದ ಅವಧಿಯಲ್ಲಿಯೇ ಒಳಾಡಳಿತ ಇಲಾಖೆಯಲ್ಲಿ ಜುಲೈ 2021ರಿಂದ ಆಗಸ್ಟ್‌ 23ರವರೆಗೆ ಒಟ್ಟು 10,866 ಕಡತಗಳು ಬಾಕಿ ಇವೆ. ಇದರಲ್ಲಿ 30 ದಿನ ಮೀರಿದರೂ ಯಾವುದೇ ಕ್ರಮ ಕೈಗೊಳ್ಳದ ಕಡತಗಳ ಸಂಖ್ಯೆ 7,745ರಷ್ಟಿವೆ.

ಅದೇ ರೀತಿ ಡಾ ಅಶ್ವಥ್‌ನಾರಾಯಣ್‌ ಅವರು ನಿರ್ವಹಿಸಿದ್ದ ಉನ್ನತ ಶಿಕ್ಷಣ ಇಲಾಖೆಯಲ್ಲಿ ಜುಲೈ 1ರಿಂದ ಆಗಸ್ಟ್‌ 23ರವರೆಗೆ 2,108 ಕಡತಗಳು ಬಾಕಿ ಇವೆ. ಆದರೆ ಕೆಲವು ಮಾಧ್ಯಮಗಳು ಅಶ್ವಥ್‌ನಾರಾಯಣ್‌ ಅವರು ಇಲಾಖೆಯಿಂದ ನಿರ್ಗಮಿಸುವ ಮುನ್ನ ಒಂದೇ ಒಂದು ಕಡತಗಳು ಬಾಕಿ ಇರಲಿಲ್ಲ ಎಂಬ ಸುದ್ದಿಯನ್ನು ಪ್ರಕಟಿಸಿದ್ದನ್ನು ಸ್ಮರಿಸಬಹುದು.

ಬಾಕಿ ಇರುವ 1.60 ಲಕ್ಷ ಕಡತಗಳ ಪೈಕಿ ಇ-ಆಫೀಸ್‌ನಲ್ಲಿ 31,077 ಕಡತಗಳು ಬಾಕಿ ವಿಲೇವಾರಿಯಾಗದೇ ಬಾಕಿ ಉಳಿದುಕೊಂಡಿವೆ. 2021ರ ಜುಲೈ 1ರಿಂದ ಆಗಸ್ಟ್‌ 23ರವರೆಗೆ ಕಡತ ಬಾಕಿ ಉಳಿಸಿಕೊಂಡಿರುವ ಇಲಾಖೆಗಳ ಪೈಕಿ ನಗರಾಭಿವೃದ್ಧಿ ಇಲಾಖೆ ಮುಂದಿದೆ. ಈ ಇಲಾಖೆಯಲ್ಲಿ 11,250, ಕಂದಾಯ ಇಲಾಖೆಯಲ್ಲಿ 9,314, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದಲ್ಲಿ 7,689, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ 5,446, ಜಲಸಂಪನ್ಮೂಲ ಇಲಾಖೆಯಲ್ಲಿ 5,490 ಕಡತಗಳು ಬಾಕಿ ಉಳಿದಿರುವುದು ದಾಖಲೆಯಿಂದ ತಿಳಿದು ಬಂದಿದೆ.

ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 2,736, ಅರಣ್ಯ ಮತ್ತು ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯಲ್ಲಿ 4,152, ಆರೋಗ್ಯ ಮತ್ತುಕುಟುಂಬ ಕಲ್ಯಾಣದಲ್ಲಿ 3,733, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯಲ್ಲಿ 3,462, ಸಣ್ಣ ನೀರಾವರಿಯಲ್ಲಿ 1,251, ಲೋಕೋಪಯೋಗಿ ಇಲಾಖೆಯಲ್ಲಿ 2,016, ಆರ್ಥಿಕ ಇಲಾಖೆಯಲ್ಲಿ 1,510, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯಲ್ಲಿ 2,960 ಕಡತಗಳು ಬಾಕಿ ಇವೆ.

ಅದೇ ರೀತಿ 30 ದಿನ ಮೀರಿ ಯಾವುದೇ ಕ್ರಮ ಆಗದೇ ಇರುವ ಕಡತಗಳ ಸಂಖ್ಯೆ ಒಟ್ಟು 89, 318 ರಷ್ಟಿದೆ. ಇದರಲ್ಲಿ 39,974 ಕಡಗಳು ಇ-ಆಫೀಸ್‌ನಲ್ಲೇ ಬಾಕಿ ಇವೆ. ಈ ವಿಭಾಗದಲ್ಲಿ ಕಂದಾಯ ಇಲಾಖೆಯು ಎಲ್ಲ ಇಲಾಖೆಗಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿವೆ. ಈ ಇಲಾಖೆಯಲ್ಲಿ 11,061 ಕಡತಗಳು 30 ದಿನ ಮೀರಿದರೂ ಯಾವುದೇ ಕ್ರಮ ಕೈಗೊಂಡಿಲ್ಲ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ 7,765, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದಲ್ಲಿ 7,531, ಒಳಾಡಳಿತ ಇಲಾಖೆಯಲ್ಲಿ 7,745, ನಗರಾಭಿವೃದ್ಧಿ ಇಲಾಖೆಯಲ್ಲಿ 6,944 ಕಡತಗಳು 30 ದಿನ ಮೀರಿದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಗೊತ್ತಾಗಿದೆ. ಒಟ್ಟಾರೆ ಜುಲೈ 2021ರಿಂದ ಆಗಸ್ಟ್‌ 23ರವರೆಗೆ 1.69,394 ಕಡತಗಳು ಬಾಕಿ ಉಳಿದಿವೆ.

ಕಡತಗಳ ವಿಲೇವಾರಿಗೆ ಅಧೀನ ಕಾರ್ಯದರ್ಶಿ ಅಥವಾ ಉಪಕಾರ್ಯದರ್ಶಿಗಳನ್ನು ಕಡತ ವಿಲೇವಾರಿ ನೋಡೆಲ್ ಅಧಿಕಾರಿಯನ್ನಾಗಿ ನೇಮಿಸಲು ಮುಂದಾಗಿದೆ. ನೋಡೆಲ್ ಅಧಿಕಾರಿಗಳು ಕಾನೂನು ಇಲಾಖೆ ಸಂಯೋಜನೆ ಮಾಡಿ ಎರಡು ತಿಂಗಳೊಳಗೆ ಕಡತ ವಿಲೇವಾರಿ ಮಾಡಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts