ಉದ್ಧಟತನ; ಅಕ್ರಮ ನಡೆದಿಲ್ಲವೆಂದು ವಾಸ್ತವಾಂಶಗಳ ಮರೆಮಾಚಿದರೇ ಪರಿಷತ್‌ ಕಾರ್ಯದರ್ಶಿ?

ಬೆಂಗಳೂರು; ಪರಿಷತ್‌ನಲ್ಲಿ ನಡೆದಿದೆ ಎನ್ನಲಾಗಿರುವ ಹಲವು ಅಕ್ರಮಗಳಿಗೆ ಸಂಬಂಧಿಸಿದಂತೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಬರೆದಿದ್ದ ಪತ್ರ ಮತ್ತು ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡದ ಕಾರ್ಯದರ್ಶಿ ಮಹಾಲಕ್ಷ್ಮಿ ಅವರು ಉದ್ಧಟತನದ ವರ್ತನೆ ತೋರಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದಾರೆ. ಅಲ್ಲದೆ ವಾಸ್ತವಾಂಶಗಳನ್ನು ಮರೆಮಾಚಿ ಯಾವ ಅಕ್ರಮವೂ ನಡೆದಿಲ್ಲ ಎಂದು ಬಿಂಬಿಸುವಂತಹ ವರದಿ ನೀಡಿ ಕೈತೊಳೆದುಕೊಂಡಿದ್ದಾರೆ!

ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮಗಳ ಉಲ್ಲಂಘನೆ ಮಾಡಿರುವ ಬಗ್ಗೆ ಸ್ಪಷ್ಟವಾಗಿ ಬಸವರಾಜ ಹೊರಟ್ಟಿ ಅವರು 2021ರ ಆಗಸ್ಟ್‌ 10ರಂದು ಬರೆದಿದ್ದ ಪತ್ರಕ್ಕೆ ಮಹಾಲಕ್ಷ್ಮಿ ಅವರು 2021ರ ಆಗಸ್ಟ್‌ 13ರಂದು ಉತ್ತರಿಸಿದ್ದಾರೆ. ಆದರೆ ಈ ಉತ್ತರವೂ ಅಸಮರ್ಪಕವಾಗಿದೆ ಎಂದು ಗೊತ್ತಾಗಿದೆ.

ಹೊರಟ್ಟಿ ಅವರು ಕೇಳಿರುವ ಪ್ರತಿ ಪ್ರಶ್ನೆಗೂ ಹಾರಿಕೆ ಉತ್ತರ ನೀಡಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಮಹಾಲಕ್ಷ್ಮಿ ಅವರು ‘ಎಲ್ಲಾ ಕಡತಗಳು ಮತ್ತು ದಾಖಲೆಗಳು ತಮ್ಮ ಬಳಿಯೇ ಇವೆ’ ಎಂದು ಉತ್ತರಿಸಿ ನುಣುಚಿಕೊಂಡಿದ್ದಾರೆ. ಅವ್ಯವಹಾರ, ಅಕ್ರಮ ಸೇರಿದಂತೆ ಇನ್ನಿತರೆ ಪ್ರಕರಣಗಳ ಸಂಬಂಧ ಪ್ರತಿ ಕಡತಗಳೂ ಆಡಳಿತ ಮುಖ್ಯಸ್ಥರಾದ ಕಾರ್ಯದರ್ಶಿಗಳ ಬಳಿಯೇ ಇರುತ್ತವೆ. ಆದರೂ ಕಾರ್ಯದರ್ಶಿ ಮಹಾಲಕ್ಷ್ಮಿ ಅವರು ತಮ್ಮ ಬಳಿ ಯಾವ ಕಡತಗಳೂ ಇಲ್ಲ, ಎಲ್ಲವೂ ತಮ್ಮ ಬಳಿಯೇ ಇವೆ. ಅವುಗಳನ್ನು ಪರಾಮರ್ಶಿಸಬಹುದು ಎಂದು ಹೇಳುವ ಮೂಲಕ ಉದ್ಧಟತನ ಮೆರೆದಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದಾರೆ.

ಹಲವು ಪ್ರಕರಣಗಳ ಕುರಿತು ಸಭಾಪತಿ ಹೊರಟ್ಟಿ ಅವರು ವರದಿ ಕೇಳಿದ್ದರೇ ಕೇವಲ ದಾಖಲೆಗಳನ್ನು ಸಲ್ಲಿಸಿರುವ ಕಾರ್ಯದರ್ಶಿ ನಡೆ ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ. ’48 ಲಕ್ಷ ರು. ನಷ್ಟ ಮತ್ತು ಸ್ವಜನ ಪಕ್ಷಪಾತ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳೊಂದಿಗೆ ಕಡತವನ್ನು ಸಲ್ಲಿಸಲಾಗಿರುತ್ತದೆ. ಹಾಗೂ ತಾವು 2021ರ ಜುಲೈ 22ರ ಟಿಪ್ಪಣಿಯನ್ನು 2021ರ ಜುಲೈ 23ರಂದು ಸ್ವೀಕೃತವಾಗಿದ್ದನ್ನು ಆ ದಿನವೇ ಈ-ಮೈಲ್‌ ಮೂಲಕ ತಮಗೆ ಮಾಹಿತಿಯನ್ನು ನೀಡಿರುತ್ತೇನೆ. ಹಾಗೂ 2021ರ ಜುಲೈ 24ರಂದು ನಾಲ್ಕನೇ ಶನಿವಾರ ಶಾಸಕರ ಭವನದ ಕಚೇರಿಗೆ ಬಂದು ಖುದ್ದಾಗಿ ದಾಖಲೆಗಳನ್ನು ಸಲ್ಲಿಸಿರುತ್ತೇನೆ. ನಾನು ಸಲ್ಲಿಸಿರುವ ದಾಖಲೆಗಳು ಕಡತದಲ್ಲಿ ಲಭ್ಯವಿದ್ದು ತಾವು ಪರಾಮರ್ಶಿಸಬಹುದಾಗಿದೆ,’ ಎಂದು ಉತ್ತರಿಸಿರುವುದು ಕಾರ್ಯದರ್ಶಿಯ ಪತ್ರದಿಂದ ತಿಳಿದು ಬಂದಿದೆ.

ಹಳಿ ತಪ್ಪಿದ ಆಡಳಿತ; ಸಭಾಪತಿ ಆದೇಶಗಳ ಪಾಲಿಸದೇ ಅಗೌರವ ತೋರಿದ ಕಾರ್ಯದರ್ಶಿ

ಆರ್ಥಿಕ ನೀತಿ ಸಂಹಿತೆ ಉಲ್ಲಂಘನೆ ಕುರಿತಂತೆ ಉತ್ತರ ನೀಡಿರುವ ಕಾರ್ಯದರ್ಶಿ ಮಹಾಲಕ್ಷ್ಮಿ ಅವರು ‘ಸಭಾಪತಿ ಅವರ ಅನುಮೋದನೆಯೊಂದಿಗೆ ಹೊರಗುತ್ತಿಗೆ ಆಧಾರದ ಮೇಲೆ ಕಿಯೋನಿಕ್ಸ್‌ ಸಂಸ್ಥೆಯಿಂದ ನೇಮಕ ಮಾಡಿಕೊಳ್ಳಲಾಗಿತ್ತು. ತಮ್ಮ ಅನುಮೋದನೆ ಪಡೆದು ಆರ್ಥಿಕ ಇಲಾಖೆಗೆ ಪತ್ರ ಬರೆಯಲಾಗಿದೆ. ಈ ಸಂಬಂಧದ ಕಡತವು (ಕಡತ ಸಂಖ್ಯೆ; ಕವಿಪ/1/12/ಅಇಮಾ/2020) ತಮ್ಮ ಕಚೇರಿಯಲ್ಲಿದೆ. ಇದನ್ನು ಹಿಂದಿರುಗಿಸಿದ್ದಲ್ಲಿ ಸಂಪೂರ್ಣ ಮಾಹಿತಿ ನೀಡುತ್ತೇನೆ,’ ಎಂದು ಉತ್ತರಿಸಿದ್ದಾರೆ.

ಪರಿಷತ್‌ನ ನೌಕರರು ಎರಡು ಸರ್ಕಾರಿ ಸ್ವಾಮ್ಯದ ವಸತಿ ಗೃಹಗಳನ್ನು ಪಡೆದಿರುವುದಕ್ಕೆ ಸಂಬಂಧಿಸಿದಂತೆ ಅನುಪಾಲನ ವರದಿ ನೀಡದಿರುವುದಕ್ಕೆ ಉತ್ತರಿಸಿರುವ ‘ವಿಳಂಬಕ್ಕೆ ಸೂಕ್ತ ವಿವರಣೆಯೊಂದಿಗೆ ಕೂಡಲೇ ಕಡತವನ್ನು ಸಲ್ಲಿಸಲು ಆಧೀನ ಕಾರ್ಯದರ್ಶಿಗೆ ಸೂಚಿಸಿರುತ್ತೇನೆ,’ ಎಂದು ಉತ್ತರಿಸಿರುವುದು ಪತ್ರದಿಂದ ಗೊತ್ತಾಗಿದೆ.

ಚರ್ಚಾ ಸಂಪಾದಕರ ಹುದ್ದೆಯಿಂದ ಮುಖ್ಯ ಚರ್ಚಾ ಸಂಪಾದಕರ ಹುದ್ದೆಗೆ ಪದನ್ನೋತಿ ನೀಡುವ ಸಂಬಂಧ ಕಡತವನ್ನು ಪರಿಶೀಲಿಸಿ ವರದಿ ಸಲ್ಲಿಸಲು 3 ದಿನಗಳ ಕಾಲಾವಕಾಶ ನೀಡಲು ಕೋರಿರುವುದು ತಿಳಿದು ಬಂದಿದೆ.

ಧರ್ಮೇಗೌಡರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸದನ ಸಮಿತಿಯು ನೀಡಿರುವ ಮಧ್ಯಂತರ ವರದಿಯು ಸದನಕ್ಕೆ ಸೀಮಿತವಾಗಿರುತ್ತದೆ. ಆದರೂ ಕಡತವನ್ನು ಪುನಃ ಸಲ್ಲಿಸಲಾಗುತ್ತದೆ ಎಂದು ಉತ್ತರಿಸಿದ್ದಾರೆ.

the fil favicon

SUPPORT THE FILE

Latest News

Related Posts