ಹಿಂದುಳಿದ ವರ್ಗ ಸೇರಿ 8 ಇಲಾಖೆಗಳಿಗೆ ಬಿಡಿಗಾಸಿಲ್ಲ; ಇದೇನಾ ಬಿಜೆಪಿ ಸಾಧನಾ ಪರ್ವ?

ಬೆಂಗಳೂರು; ಸವಾಲುಗಳ ಮೀರಿದ ಸಾಧನಾ ಪರ್ವ ಎಂದು ಹೆಮ್ಮೆಯಿಂದ ಬೀಗುತ್ತಿರುವ ರಾಜ್ಯ ಬಿಜೆಪಿ ಸರ್ಕಾರವು ಕಳೆದ 2 ವರ್ಷಗಳಲ್ಲಿನ ಬಜೆಟ್‌ನಲ್ಲಿ ಘೋಷಿಸಿದ್ದ ಒಟ್ಟು ಅನುದಾನಕ್ಕೆ ಎದುರಾಗಿ ಮಾಡಿರುವ ವೆಚ್ಚವು ನಿರೀಕ್ಷಿತ ಗುರಿಯನ್ನು ಮುಟ್ಟಿಲ್ಲ! ಹಿಂದುಳಿದ ವರ್ಗಗಳ ಕಲ್ಯಾಣ ಸೇರಿದಂತೆ ಒಟ್ಟು 8 ಇಲಾಖೆಗಳಿಗೆ ಆಯವ್ಯಯ ಅಂದಾಜಿನಲ್ಲಿ ಅನುದಾನವಿದ್ದರೂ ಜುಲೈ ಅಂತ್ಯದವರೆಗೆ ನಯಾ ಪೈಸೆಯನ್ನೂ ಬಿಡುಗಡೆ ಮಾಡಿಲ್ಲ.

2021-22ನೇ ಸಾಲಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ)ವು ಜುಲೈ 2021ರ ಅಂತ್ಯಕ್ಕೆ ಸಾಧಿಸಿರುವ ಕುರಿತಂತೆ ನಡೆದಿರುವ ಪ್ರಗತಿ ಸಭೆಯು ಆಡಳಿತ ವೈಖರಿ ಕುರಿತು ಕನ್ನಡಿ ಹಿಡಿದಿದೆ. ಸಭೆಯಲ್ಲಿ ಮಂಡಿಸಲಾಗಿದ್ದ ಒಟ್ಟಾರೆ ಪ್ರಗತಿಯ ವಿವರಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ.

2020-21ನೇ ಸಾಲಿನ ಜುಲೈ ಅಂತ್ಯಕ್ಕೆ ಒಟ್ಟು ಅನುದಾನಕ್ಕೆ ಎದುರಾಗಿ ಶೇಕಡ 16.67 ವೆಚ್ಚ ಮಾಡಿದ್ದರೆ 2021ರ ಜುಲೈ ಅಂತ್ಯಕ್ಕೆ ಶೇ. 20.96ರಷ್ಟು ಮಾತ್ರ ವೆಚ್ಚ ಮಾಡಿದೆ. ಈ ಎರಡೂ ಸಾಲಿಗೆ ಸಂಬಂಧಿಸಿದಂತೆ ಜುಲೈ ಅಂತ್ಯದಲ್ಲಿ ಮಾಡಿರುವ ಒಟ್ಟಾರೆ ವೆಚ್ಚದಲ್ಲಿ ಕೇವಲ ಶೇ.4ರಷ್ಟು ಮಾತ್ರ ಏರಿಕೆ ಕಂಡಿರುವುದು ಪ್ರಗತಿ ವಿವರದಿಂದ ತಿಳಿದು ಬಂದಿದೆ.

2020-21ನೇ ಸಾಲಿನಲ್ಲಿ 2,06,508.52 ಕೋಟಿ ರು.ವಾರ್ಷಿಕ ಅನುದಾನ ಮತ್ತು ಪ್ರಾಥಮಿಕ ಶಿಲ್ಕು 13,325.7 ಕೋಟಿ ಸೇರಿ ಒಟ್ಟು 2,19,834.1 ಕೋಟಿ ರು. ಒಟ್ಟು ಅನುದಾನ ಲಭ್ಯವಿತ್ತು. 2020 ಜುಲೈ ಅಂತ್ಯಕ್ಕೆ ಒಟ್ಟು ಅನುದಾನಕ್ಕೆ ಎದುರಾಗಿ ಶೇ.16.67ರಷ್ಟು ವೆಚ್ಚವಾಗಿತ್ತು. 2021-22ನೇ ಸಾಲಿನಲ್ಲಿ ವಾರ್ಷಿಕ ಅನುದಾನ ಮತ್ತು ಪ್ರಾಥಮಿಕ ಶಿಲ್ಕು ಸೇರಿ ಒಟ್ಟು 2,19,799.91 ಕೋಟಿ ರು. ಒಟ್ಟು ಅನುದಾನ ಲಭ್ಯವಿತ್ತು. 2021ರ ಜುಲೈ ಅಂತ್ಯಕ್ಕೆ ಒಟ್ಟು ಅನುದಾನಕ್ಕೆ ಎದುರಾಗಿ ಶೇ.20.96ರಷ್ಟು ವೆಚ್ಚ ಮಾಡಿದೆ.

ವಿಶೇಷ ಅಭಿವೃದ್ಧಿ ಯೋಜನೆಯಡಿ ಒಟ್ಟು 16 ಇಲಾಖೆಗಳಿಗೆ 2021-22ರ ಆಯವ್ಯಯದಲ್ಲಿ 2,966.16 ಕೋಟಿ ಮತ್ತು ಪ್ರಾಥಮಿಕ ಶಿಲ್ಕು 98.59 ಕೋಟಿ ಸೇರಿ ಒಟ್ಟು 3,064.75 ಕೋಟಿ ರು. ಅನುದಾನ ಲಭ್ಯವಿತ್ತು. ಜೂನ್‌ ಮತ್ತು ಜುಲೈ ತಿಂಗಳಿಗೆ ಒಟ್ಟು 404.1 ಕೋಟಿ ರು. ಆರ್ಥಿಕ ಗುರಿ ನಿಗದಿಪಡಿಸಿತ್ತು. ಜೂನ್‌ ಮತ್ತು ಜುಲೈ ತಿಂಗಳಲ್ಲಿ ಒಟ್ಟು 402.22 ಕೋಟಿ ರು. ವೆಚ್ಚ ಮಾಡಿದೆ. ಇದು ಒಟ್ಟು ಅನುದಾನಕ್ಕೆ ಎದುರಾಗಿ ಶೇ.13.12ರಷ್ಟೇ ಪ್ರಗತಿ ಸಾಧಿಸಿದಂತಾಗಿದೆ. ಲಭ್ಯವಿರುವ ಅನುದಾನಕ್ಕೆ (ಬಿಡುಗಡೆ ಮತ್ತು ಪ್ರಾಥಮಿಕ ಶಿಲ್ಕು) ಶೇ. 54.73ರಷ್ಟು ಪ್ರಗತಿ ಸಾಧಿಸಿರುವುದು ಗೊತ್ತಾಗಿದೆ.

ತೋಟಗಾರಿಕೆ, ಸಾರಿಗೆ, ಮೂಲಭೂತ ಸೌಕರ್ಯ, ಹಿಂದುಳಿದ ವರ್ಗಗಳ ಕಲ್ಯಾಣ, ಮಹಿಳಾ ಮಕ್ಕಳ ಕಲ್ಯಾಣ, ಪ್ರಾಥಮಿಕ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಇಂಧನ ಇಲಾಖೆಗಳಿಗೆ ವಿಶೇಷ ಅಭಿವೃದ್ಧಿ ಯೋಜನೆಯಡಿ ಆರ್ಥಿಕ ಗುರಿ ನಿಗದಿಪಡಿಸಿ ಒಟ್ಟು 384.83 ಕೋಟಿ ರು. ಆಯವ್ಯಯದಲ್ಲಿ ಅಂದಾಜಿಸಲಾಗಿತ್ತು. ಆದರೆ ಜುಲೈ ಅಂತ್ಯದವರೆಗೂ ಇದೇ ಯೋಜನೆಯಡಿ 8 ಇಲಾಖೆಗಳಿಗೆ ಬಿಡಿಗಾಸನ್ನೂ ಕೊಟ್ಟಿಲ್ಲ. ಹೀಗಾಗಿ 8 ಇಲಾಖೆಗಳು ಈ ಯೋಜನೆಯಡಿಯಲ್ಲಿ ಶೂನ್ಯ ಸಂಪಾದಿಸಿರುವುದು ತಿಳಿದು ಬಂದಿದೆ.

ಇನ್ನು ಪರಿಶಿಷ್ಟ ಜಾತಿ ಉಪ ಯೋಜನೆಯಡಿ ವಿವಿಧ ಇಲಾಖೆಗಳಿಗೆ ಒದಗಿಸಿದ್ದ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಬಿಡುಗಡೆ ಮಾಡಿಲ್ಲ. 33 ಇಲಾಖೆಗಳಿಗೆ ಒಟ್ಟು 19,115.69 ಕೋಟಿ ರು. ಅನುದಾನ ಕಲ್ಪಿಸಿತ್ತಾದರೂ ಈ ಪೈಕಿ ಜುಲೈ ಅಂತ್ಯದವರೆಗೆ ಒಟ್ಟು 4,503.34 ಕೋಟಿ ರು ಮಾತ್ರ ಬಿಡುಗಡೆ ಮಾಡಿದೆ. ಇನ್ನೂ 14,612.35 ಕೋಟಿ ರು. ಬಿಡುಗಡೆಗೆ ಬಾಕಿ ಇದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಎಸ್‌ಸಿಎಸ್‌ಪಿ ಯೋಜನೆಯಡಿ 51.88 ಕೋಟಿ ರು ಅನುದಾನ ಪೈಕಿ ಜುಲೈ ಅಂತ್ಯಕ್ಕೆ 18.59 ಕೋಟಿ ರು. ಬಿಡುಗಡೆ ಮಾಡಿದೆ. ಪ್ರಾಥಮಿಕ ಶಿಕ್ಷಣ ಇಲಾಖೆಯಲ್ಲಿ 822.81 ಕೋಟಿ ರು ಪೈಕಿ 140.66 ಕೋಟಿ ರು., ಲೋಕೋಪಯೋಗಿ ಇಲಾಖೆಯಲ್ಲಿ 687.05 ಕೋಟಿ ರು.ನಲ್ಲಿ 92.70 ಕೋಟಿ, ಸಣ್ಣ ನೀರಾವರಿಯಲ್ಲಿ 251.54 ಕೋಟಿಯಲ್ಲಿ 86.50 ಕೋಟಿ, ಸಹಕಾರ ಇಲಾಖೆಯಲ್ಲಿ 71.36 ಕೋಟಿಯಲ್ಲಿ 13.10 ಕೋಟಿ, ಉನ್ನತ ಶಿಕ್ಷಣದಲ್ಲಿ 100.85 ಕೋಟಿಯಲ್ಲಿ 37.76 ಕೋಟಿ, ಆರೋಗ್ಯ ಇಲಾಖೆಯಲ್ಲಿ 834.44 ಕೋಟಿಯಲ್ಲಿ 165.75 ಕೋಟಿ, ಕೃಷಿ ಇಲಾಖೆಯಲ್ಲಿ 596.21 ಕೋಟಿಯಲ್ಲಿ 52.88 ಕೋಟಿ ಬಿಡುಗಡೆ ಮಾಡಿದೆ.

ಇಂಧನ ಇಲಾಖೆಯಲ್ಲಿ 1,636.28 ಕೋಟಿಯಲ್ಲಿ 406.56 ಕೋಟಿ, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ 2,354.59 ಕೋಟಿಯಲ್ಲಿ 114.03 ಕೋಟಿ, ಜಲ ಸಂಪನ್ಮೂಲ ಇಲಾಖೆಯಲ್ಲಿ 1,017.93 ಕೋಟಿಯಲ್ಲಿ 290.75 ಕೋಟಿ ರು. ಬಿಡುಗಡೆ ಮಾಡಿರುವುದು ಗೊತ್ತಾಗಿದೆ.

ಗಿರಿಜನ ಉಪ ಯೋಜನೆಯಡಿ ಒಟ್ಟು 8,067.51 ಕೋಟಿಯಲ್ಲಿ ಜುಲೈ ಅಂತ್ಯಕ್ಕೆ 1,834.6 ಕೋಟಿ ರು. ಮಾತ್ರ ಬಿಡುಗಡೆ ಮಾಡಿದೆ. 6,232.91 ಕೋಟಿ ರು. ಬಿಡುಗಡೆಗೆ ಬಾಕಿ ಇರುವುದು ಕೆಡಿಪಿ ದಾಖಲೆಯಿಂದ ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts