Bank Information

PARADARSHAK MEDIA FOUNDATION, Account Number: 40107584055, SBI,Mahalalakshmipuram branch IFSC Code : SBIN0017347 Bengaluru

ಲೋಕಾಯುಕ್ತರ ಆಸ್ತಿವಿವರ; ಕಾಯ್ದೆ ತಿದ್ದುಪಡಿ ಹೊಣೆಗಾರಿಕೆ ಸಿಎಂ ಹೆಗಲಿಗೆ ವರ್ಗಾವಣೆ

ಬೆಂಗಳೂರು; ಲೋಕಾಯುಕ್ತದಲ್ಲಿ ಕಾರ್ಯನಿರ್ವಹಿಸುತ್ತಿರುವ ಲೋಕಾಯುಕ್ತರು ಮತ್ತು ಉಪ ಲೋಕಾಯುಕ್ತರು ಆಸ್ತಿ ಮತ್ತು ದಾಯಿತ್ವ ಪಟ್ಟಿಯನ್ನು ಸಲ್ಲಿಸುವ ಸಂಬಂಧ ಲೋಕಾಯುಕ್ತ ಕಾಯ್ದೆ ತಿದ್ದುಪಡಿ ಹೊಣೆಗಾರಿಕೆಯಿಂದ ನುಣುಚಿಕೊಂಡಿರುವ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಹೆಗಲಿಗೆ ವರ್ಗಾಯಿಸಿದೆ.

ಲೋಕಾಯುಕ್ತರು ಮತ್ತು ಉಪ ಲೋಕಾಯುಕ್ತರು ಆಸ್ತಿ ಮತ್ತು ದಾಯಿತ್ವ ಪಟ್ಟಿ ಸಲ್ಲಿಸುವ ಸಂಬಂಧ ವಿಧಾನಪರಿಷತ್‌ನ ಮಾಜಿ ಸದಸ್ಯ ರಮೇಶ್‌ ಬಾಬು ಅವರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರು. ಈ ಮನವಿ ಅಧರಿಸಿ ಕ್ರಮ ಕೈಗೊಳ್ಳಬೇಕಿದ್ದ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯು ಮನವಿಯನ್ನು ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಗೆ ವರ್ಗಾಯಿಸಿ ಕೈತೊಳೆದುಕೊಂಡಿದೆ.

‘ಲೋಕಾಯುಕ್ತರು ಮತ್ತು ಉಪ ಲೋಕಾಯುಕ್ತರು ಸಾರ್ವಜನಿಕ ಹಿತದೃಷ್ಟಿಯಿಂದ ತಮ್ಮ ಆಸ್ತಿ ಮತ್ತು ದಾಯಿತ್ವ ಪಟ್ಟಿಯನ್ನು ಪ್ರಕಟಿಸುವ ಸಂಬಂಧ ಲೋಕಾಯುಕ್ತ ಕಾಯ್ದೆಗೆ ಸೂಕ್ತ ತಿದ್ದುಪಡಿ ತರುವ ಸಂಬಂಧದ ವಿಷಯವು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಸಂಬಂಧಿಸಿದೆ. ಹೀಗಾಗಿ ಮುಂದಿನ ಕ್ರಮ ಕೈಗೊಳ್ಳಬೇಕು,’ ಎಂದು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು ನಿರ್ದೇಶಿಸಿ 2021ರ ಆಗಸ್ಟ್‌ 5ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಕರ್ನಾಟಕ ಲೋಕಾಯುಕ್ತ ಕಾಯ್ದೆ ಕಲಂ 22ರಲ್ಲಿ ಲೋಕಾಯುಕ್ತರು ಆಸ್ತಿ ವಿವರ ಸಲ್ಲಿಸುವ ಸಂಬಂಧ ಏನನ್ನೂ ಹೇಳಿಲ್ಲ ಎಂಬುದನ್ನೇ ಮುಂದಿರಿಸಿಕೊಂಡು ಹಾಲಿ ಲೋಕಾಯುಕ್ತರು ಆಸ್ತಿ ವಿವರ ಸಲ್ಲಿಸಿರಲಿಲ್ಲ. ಲೋಕಾಯುಕ್ತರು ಸಹ ಪ್ರತಿ ವರ್ಷ ಆಸ್ತಿ ಮತ್ತು ದಾಯಿತ್ವ(ಸಾಲಸೋಲ ಕೊಡಬೇಕಾದ ಬಾಧ‍್ಯತೆ) ಪಟ್ಟಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂಬ ನಿಟ್ಟಿನಲ್ಲಿ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಇದೀಗ ವಿಧಾನಪರಿಷತ್‌ ಮಾಜಿ ಸದಸ್ಯ ರಮೇಶ್‌ಬಾಬು ಅವರು ಕಾನೂನು, ಸಂಸದೀಯ ಇಲಾಖೆಯ ಮೆಟ್ಟಿಲೇರಿದ್ದರು.

ವಿಶೇಷವೆಂದರೆ ರಮೇಶ್‌ಬಾಬು ಅವರು ಮನವಿ ಸಲ್ಲಿಸಿದ್ದ ಸಂದರ್ಭದಲ್ಲಿ ಬಸವರಾಜ ಬೊಮ್ಮಾಯಿ ಅವರು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದರು. ಇದೀಗ ಬಸವರಾಜ ಬೊಮ್ಮಾಯಿ ಅವರೇ ಮುಖ್ಯಮಂತ್ರಿಯಾಗಿದ್ದಾರೆ. ಅಲ್ಲದೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಮುಖ್ಯಮಂತ್ರಿಯ ಕಾರ್ಯವ್ಯಾಪ್ತಿಯಲ್ಲೇ ಬರಲಿದೆ. ಇದೀಗ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯೂ ಸಿಆಸುಇ ಇಲಾಖೆಗೆ ರಮೇಶ್‌ಬಾಬು ಅವರ ಮನವಿಯನ್ನು ವರ್ಗಾವಣೆ ಮಾಡಿರುವ ಕಾರಣ ಕಾರಣ ಲೋಕಾಯುಕ್ತರು ಮತ್ತು ಉಪ ಲೋಕಾಯುಕ್ತರೂ ಆಸ್ತಿದಾಯಿತ್ವ ಪಟ್ಟಿ ಸಲ್ಲಿಸುವುದಕ್ಕೆ ಸಂಬಂಧಿಸಿದಂತೆ ಕಾಯ್ದೆ ತಿದ್ದುಪಡಿಗೆ ಕ್ರಮ ಕೈಗೊಳ್ಳುವ ಹೊಣೆಗಾರಿಕೆಯೂ ಅವರ ಹೆಗಲಿಗೆ ಹೊರೆಸಿದಂತಾಗಿದೆ.

ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತ ಪ್ರತಿ ವರ್ಷ ತಮ್ಮ ಆಸ್ತಿ ವಿವರ ನೀಡುವಂತೆ ಸಾರ್ವಜನಿಕ ಹಿತಾಸಕ್ತಿ ಮತ್ತು ನೈತಿಕ ಹೊಣೆ ಹಿನ್ನೆಲೆಯಲ್ಲಿ ಲೋಕಾಯುಕ್ತ ಕಾಯಿದೆಗೆ ಅವಶ್ಯಕ ತಿದ್ದುಪಡಿ ತರಲು ಮಾನ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಿಗೆ ಪತ್ರ ಬರೆಯಲಾಗಿತ್ತು. ಈ ಪತ್ರದ ಮೇಲೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಾಸನ ರಚನೆ ಇಲಾಖೆ ಸಿಬ್ಬಂದಿ ಹಾಗೂ ಆಡಳಿತ ಇಲಾಖೆಗೆ ರವಾನಿಸಿದೆ. ಅಂದಿನ ಕಾನೂನು ಸಂಸದೀಯ ವ್ಯವಹಾರಗಳ ಸಚಿವರಾದ ಬಸವರಾಜ ಬೊಮ್ಮಾಯಿ ಇಂದು ತಾವೇ ರಾಜ್ಯದ ಮುಖ್ಯಮಂತ್ರಿ ಆಗಿದ್ದು, ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ಇಲಾಖೆ ಅವರ ಅಡಿಯಲ್ಲಿ ಬರುವುದರಿಂದ ಸೂಕ್ತ ಆದೇಶ ಹೊರಡಿಸಿ ಸಾರ್ವಜನಿಕ ದೃಷ್ಟಿಯಿಂದ ಲೋಕಾಯುಕ್ತ ಕಾಯಿದೆಗೆ ಬರುವ ಅಧಿವೇಶನದಲ್ಲಿ ತಿದ್ದುಪಡಿ ತರಬೇಕು.

ರಮೇಶ್‌ ಬಾಬು, ವಿಧಾನಪರಿಷತ್‌ ಮಾಜಿ ಸದಸ್ಯ

‘ಲೋಕಾಯುಕ್ತದ ಪ್ರಮುಖರು ಆಸ್ತಿ ವಿವರ ನೀಡದೇ ಇರುವುದು ತಪ್ಪು ಸಂಪ್ರದಾಯಕ್ಕೆ ಕಾರಣವಾಗಿದ್ದು, ಲೋಕಾಯುಕ್ತ ಕಾಯ್ದೆ ತಿದ್ದುಪಡಿ ಅನಿವಾರ್ಯವಾಗಿರುತ್ತದೆ. ಲೋಕಾಯುಕ್ತ ಪ್ರಮುಖರೇ ಆಸ್ತಿ ವಿವರಗಳನ್ನು ಪ್ರತಿ ವರ್ಷ ಬಹಿರಂಗ ಮಾಡದೇ ಹೋದರೆ ಸಾರ್ವಜನಿಕವಾಗಿ ತಪ್ಪು ಸಂದೇಶಕ್ಕೆ ಕಾರಣವಾಗುತ್ತದೆ. ಹೀಗಾಗಿ ಸಂಸದೀಯ ಮತ್ತು ಕಾನೂನು ಇಲಾಖೆಯ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿ ಕರ್ನಾಟಕ ಲೋಕಾಯುಕ್ತ ಕಾಯಿದೆಗೆ ಸೂಕ್ತ ತಿದ್ದುಪಡಿ ಮಾಡಿ ಲೋಕಾಯುಕ್ತದಲ್ಲಿ ಕಾರ್ಯನಿರ್ವಹಿಸುವ ಲೋಕಾಯುಕ್ತರು ಮತ್ತು ಉಪ ಲೋಕಾಯುಕ್ತರು ಸಾರ್ವಜನಿಕ ಹಿತದೃಷ್ಟಿಯಿಂದ ಪ್ರತೀ ವರ್ಷ ತಮ್ಮ ಆಸ್ತಿ ಮತ್ತು ದಾಯಿತ್ವ ಪಟ್ಟಿಯನ್ನು ಪ್ರಕಟಿಸಲು ಕ್ರಮಕೈಗೊಳ್ಳಬೇಕು,’ ಎಂದು ಮುಖ್ಯಮಂತ್ರಿ ಬರೆದ ಪತ್ರದಲ್ಲಿ ಕೋರಿದ್ದರು.

ಮುಖ್ಯಮಂತ್ರಿಯೂ ಸೇರಿದಂತೆ ವಿಧಾನಸಭೆ, ವಿಧಾನಪರಿಷತ್‌, ಮಹಾನಗರಪಾಲಿಕೆ, ಜಿಲ್ಲಾ ಪಂಚಾಯ್ತಿ ಸದಸ್ಯರು, ರಾಜ್ಯ ಸರ್ಕಾರದ ಸೇವೆಯಲ್ಲಿರುವ ಡಿ ಗ್ರೂಪ್‌ ನೌಕರರೂ ಆಯಾ ವರ್ಷದ ಆಸ್ತಿ ಮತ್ತು ದಾಯಿತ್ವ(ಸಾಲಸೋಲ ಕೊಡಬೇಕಾದ ಬಾಧ‍್ಯತೆ) ಪಟ್ಟಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಆಜ್ಞೆ ಹೊರಡಿಸುವ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಪಿ ವಿಶ್ವನಾಥ ಶೆಟ್ಟಿ ಅವರು  ತಮ್ಮ ಆಸ್ತಿ ಮತ್ತು ದಾಯಿತ್ವ ಪಟ್ಟಿಯನ್ನು ಹಲವು ವರ್ಷಗಳಿಂದಲೂ ಸಲ್ಲಿಸುತ್ತಿಲ್ಲ. ಈ ಬಗ್ಗೆ ‘ದಿ ಫೈಲ್‌’ ವರದಿ ಪ್ರಕಟಿಸಿದ್ದನ್ನು ಸ್ಮರಿಸಬಹುದು.

ಆಸ್ತಿದಾಯಿತ್ವ ಪಟ್ಟಿಯನ್ನು ಸಲ್ಲಿಸದಿರಲು ಕಾರಣವೇನು?

ಲೋಕಾಯುಕ್ತ ವಿಶ್ವನಾಥ ಶೆಟ್ಟಿ ಅವರು ಸ್ಥಿರ ಮತ್ತು ಚರಾಸ್ತಿಗಳ ವಿವರಗಳನ್ನು ಸಲ್ಲಿಸಲು ಹಿಂದೇಟು ಹಾಕಿದ್ದರು. ‘ ಕರ್ನಾಟಕ ಲೋಕಾಯುಕ್ತ ಕಾಯ್ದೆ ಕಲಂ 22ರಲ್ಲಿ ಸಾರ್ವಜನಿಕರು/ಚುನಾಯಿತ ಪ್ರತಿನಿಧಿಗಳು ಮಾತ್ರ ಲೋಕಾಯುಕ್ತ ಸಂಸ್ಥೆಗೆ ಪ್ರತಿ ವರ್ಷ ಆಸ್ತಿಮತ್ತು ದಾಯಿತ್ವ ಪಟ್ಟಿಯನ್ನು ಸಲ್ಲಿಸಬೇಕಾಗಿರುತ್ತದೆ ಎಂದು ತಿಳಿಸುತ್ತದೆ. ಈ ಕಾಯ್ದೆ ಅಥವಾ ಯಾವುದೇ ಕಾಯ್ದೆಯ ಅಡಿಯಲ್ಲಿ ಗೌರವಾನ್ವಿತ ಲೋಕಾಯುಕ್ತರು/ಉಪ ಲೋಕಾಯುಕ್ತರು ಆಸ್ತಿ ವಿವರಗಳನ್ನು ಸಲ್ಲಿಸಬೇಕು ಎಂದು ಹೇಳಿರುವುದಿಲ್ಲ,’ ಎಂದು ಮಾಹಿತಿ ಹಕ್ಕಿನ ಅಡಿಯಲ್ಲಿ ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದರು.

ಮುಖ್ಯಮಂತ್ರಿಯೂ ಸೇರಿದಂತೆ ವಿಧಾನಸಭೆ, ವಿಧಾನಪರಿಷತ್‌, ಮಹಾನಗರಪಾಲಿಕೆ, ಜಿಲ್ಲಾ ಪಂಚಾಯ್ತಿ ಸದಸ್ಯರು, ರಾಜ್ಯ ಸರ್ಕಾರದ ಸೇವೆಯಲ್ಲಿರುವ ಡಿ ಗ್ರೂಪ್‌ ನೌಕರರೂ ಆಯಾ ವರ್ಷದ ಆಸ್ತಿ ಮತ್ತು ದಾಯಿತ್ವ(ಸಾಲಸೋಲ ಕೊಡಬೇಕಾದ ಬಾಧ‍್ಯತೆ) ಪಟ್ಟಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಆಜ್ಞೆ ಹೊರಡಿಸುವ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಪಿ ವಿಶ್ವನಾಥ ಶೆಟ್ಟಿ ಅವರು  ತಮ್ಮ ಆಸ್ತಿ ಮತ್ತು ದಾಯಿತ್ವ ಪಟ್ಟಿಯನ್ನು ಹಲವು ವರ್ಷಗಳಿಂದಲೂ ಸಲ್ಲಿಸದಿದ್ದಕ್ಕೆ ಸಾರ್ವಜನಿಕರು ಮತ್ತು ಸಾಮಾಜಿಕ ಹೋರಾಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದರು.

ಕಾನೂನಿನಲ್ಲಿ ಹೇಳಿಲ್ಲ ಎಂಬ ತಾಂತ್ರಿಕ ಆಂಶವನ್ನೇ ಮುಂದಿರಿಸಿಕೊಂಡಿರುವ ವಿಶ್ವನಾಥ ಶೆಟ್ಟಿ ಅವರು ಲೋಕಾಯುಕ್ತರಾಗಿ ಅಧಿಕಾರ ವಹಿಸಿಕೊಂಡು ವರ್ಷದಿಂದಲೂ ಈವರೆವಿಗೂ ಆಸ್ತಿ ವಿವರ ಸಲ್ಲಿಸುವುದರಿಂದ ತಪ್ಪಿಸಿಕೊಳ್ಳುತ್ತಲೇ ಇದ್ದಾರೆ. ಆಸ್ತಿ ವಿವರಗಳನ್ನು ಬಹಿರಂಗಪಡಿಸುವ ಧೈರ್ಯ ಮತ್ತು ಬದ್ಧತೆಯನ್ನೂ ಪ್ರದರ್ಶಿಸಿಲ್ಲ. ಸ್ವಾಯತ್ತ ಸಂಸ್ಥೆಯಾಗಿರುವ ಲೋಕಾಯುಕ್ತದ ಘನತೆ ಕಾಪಾಡಬೇಕಿದ್ದವರೇ ಆಸ್ತಿ ವಿವರ ಸಲ್ಲಿಸುವುದರಿಂದ ನುಣುಚಿಕೊಳ್ಳುತ್ತಿರುವುದೇಕೆ ಎಂಬ ಪ್ರಶ್ನೆಗಳು ಕೇಳಿ ಬಂದಿದ್ದವು.

ಕಾಯ್ದೆಯಲ್ಲೇನಿದೆ?

ಕರ್ನಾಟಕ ಲೋಕಾಯುಕ್ತ ಅಧಿನಿಯಮ 1984 ರ ಕಲಂ 22ರಲ್ಲಿ ‘ಸಾರ್ವಜನಿಕ ನೌಕರರು ಸ್ವತ್ತಿನ ಹೇಳಿಕೆಯನ್ನು ಒಪ್ಪಿಸುವ ಸಂಬಂಧ ಸ್ಪಷ್ಟಪಡಿಸಿದೆ. ಸರ್ಕಾರಿ ನೌಕರರನ್ನುಳಿದು 7ನೇ ಪ್ರಕರಣದ(1)ನೇ ಉಪ ಪ್ರಕರಣದಲ್ಲಿ ಉಲ್ಲೇಖಿಸಿದ ಪ್ರತಿಯೊಬ್ಬ ಸಾರ್ವಜನಿಕ ನೌಕರನು ಈ ಅಧಿನಿಯಮ ಪ್ರಾರಂಭವಾದ ತರುವಾಯ 3 ತಿಂಗಳೊಳಗೆ ಮತ್ತು ಆ ತರುವಾಯ ಪ್ರತಿ ವರ್ಷ ಜೂನ್‌30ರೊಳಗೆ (ತನ್ನ ಆಸ್ತಿಗಳ ಮತ್ತು ಹೊಣೆಗಾರಿಕೆ) ತನ್ನ ಕುಟುಂಬದ ಸದಸ್ಯರುಗಳ ಆಸ್ತಿಗಳ ಮತ್ತು ಹೊಣೆಗಾರಿಕೆಗಳ ಹೇಳಿಕೆಯನ್ನು ನಿಗದಿತ ನಮೂನೆಯಲ್ಲಿ ಲೋಕಾಯುಕ್ತರಿಗೆ ಸಲ್ಲಿಸತಕ್ಕದ್ದು,’ ಎಂದು ಹೇಳಿದೆ.

ಸ್ವಾಯತ್ತ ಸಂಸ್ಥೆಯ ಅಧಿಕಾರ ಸ್ವೀಕರಿಸಿರುವ ಲೋಕಾಯುಕ್ತರು, ಉಪ ಲೋಕಾಯುಕ್ತರು ಆಸ್ತಿ ವಿವರಗಳನ್ನು ಜಾಲತಾಣದಲ್ಲಿ ಪ್ರಕಟಿಸಿ ಪ್ರಾಮಾಣಿಕತೆಯನ್ನು ಸಾರ್ವಜನಿಕವಾಗಿ ಪ್ರಕಟಿಸುವ ಮೂಲಕ ಅವರು ತಮ್ಮ ಜವಾಬ್ದಾರಿಯನ್ನು ತೋರಬೇಕಿತ್ತು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.


Leave a Reply

Your email address will not be published.