1.50 ಕೋಟಿ ಲಂಚದ ಆರೋಪ; ಸಚಿವ ಗೋಪಾಲಯ್ಯ ವಿರುದ್ಧ ಎಸಿಬಿಗೆ ದೂರು

ಬೆಂಗಳೂರು; ಅಬಕಾರಿ ಇಲಾಖೆಯ ಜಿಲ್ಲೆ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಜಂಟಿ ಆಯುಕ್ತರುಗಳಿಂದ ಹಣ ವಸೂಲಿಗೆ ನಿರ್ದೇಶಿಸಿದ್ದಾರೆ ಎಂದು ಇಲಾಖೆಯ ಅಧಿಕಾರಿಗಳಿಬ್ಬರ ನಡುವೆ ನಡೆದಿದೆ ಎನ್ನಲಾಗಿರುವ ಸಂಭಾಷಣೆಯ ಆಡಿಯೋ ಬಹಿರಂಗವಾದ ಬೆನ್ನಲ್ಲೇ ಅಬಕಾರಿ ಇಲಾಖೆ ಸಚಿವ ಕೆ ಗೋಪಾಲಯ್ಯ ಅವರ ವಿರುದ್ಧ ಕರ್ನಾಟಕ ರಾಷ್ಟ್ರಸಮಿತಿಯು ಭ್ರಷ್ಟಾಚಾರ ನಿಗ್ರಹ ದಳದಲ್ಲಿ ದೂರು ದಾಖಲಿಸಿದೆ.

ಕೆಆರ್‌ಎಸ್‌ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ಅವರ ಸೂಚನೆ ಮೇರೆಗೆ ಪಕ್ಷದ ರಾಜ್ಯ ಕಾರ್ಯದರ್ಶಿ ಮತ್ತು ಬೆಂಗಳೂರು ಘಟಕವು ಎಸಿಬಿಯಲ್ಲಿ ದೂರು ದಾಖಲಿಸಿದೆ. ಅಧಿಕಾರಿಗಳಿಂದ 5 ಲಕ್ಷ ರು. ವಸೂಲು ಮಾಡಿರುವ ಬಗ್ಗೆ ಅಧಿಕಾರಿಗಳಿಬ್ಬರು ನಡುವಿನ ಸಂಭಾಷಣೆಯ ಆಡಿಯೋ ಆಧರಿಸಿ ‘ದಿ ಫೈಲ್‌’ ವರದಿಯಲ್ಲಿ ಉಲ್ಲೇಖಿಸಿದ್ದ ಅಧಿಕಾರಿಗಳ ಹೆಸರುಗಳನ್ನು ಕರ್ನಾಟಕ ರಾಷ್ಟ್ರಸಮಿತಿಯು ಸಲ್ಲಿಸಿರುವ ದೂರಿನಲ್ಲಿ ಪ್ರಸ್ತಾಪಿಸಲಾಗಿದೆ.

‘ಸಂಭಾಷಣೆಯನ್ನು ಗಮನಿಸಿದಾಗ ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿರುವುದು ಕಂಡು ಬಂದಿರುತ್ತದೆ. ಪ್ರಕರಣವನ್ನು ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಸಂಬಂಧಪಟ್ಟ ಅಧಿಕಾರಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಅಬಕಾರಿ ಮಂತ್ರಿಗಳಿಗೆ ಹಣ ನೀಡಬೇಕು ಎಂದು ಹೇಳಿ ನಡೆಸುತ್ತಿರುವ ಹಣ ಸಂಗ್ರಹಣೆ ಮತ್ತು ಹಣ ವರ್ಗಾವಣೆ ಜಾಡನ್ನು ಹಿಡಿದು ಅಪರಾಧಿಗಳಿಗೆ ಕಾನೂನು ರೀತಿ ಶಿಕ್ಷೆ ವಿಧಿಸಬೇಕು,’ ಎಂದು ದೂರಿನಲ್ಲಿ ಕೆಆರ್‌ಎಸ್‌ ಪಕ್ಷವು ಹೇಳಿದೆ.

ಅಬಕಾರಿ ಮಂತ್ರಿಗೆ ತಿಂಗಳಿಗೆ ಒಂದೂವರೆ ಕೋಟಿಗೂ ಹೆಚ್ಚು ಲಂಚವನ್ನು ಇಲಾಖೆ ಅಧಿಕಾರಿಗಳು ನೀಡಬೇಕು ಎಂಬ ಆರೋಪ ಗಂಭೀರವಾದದ್ದಾಗಿದೆ. ಈ ಎಲ್ಲಾ ಆರೋಪಗಳ ವಿಚಾರವಾಗಿ ತನಿಖೆ ನಡೆಸಬೇಕು ಎಂದೂ ದೂರಿನಲ್ಲಿ ಒತ್ತಾಯಿಸಲಾಗಿದೆ.

ಅಬಕಾರಿ ಸಚಿವರಿಗೆ 5ಲಕ್ಷ ರುಪಾಯಿ ಮಾಮೂಲಿ ಕೊಡಬೇಕು ಎನ್ನುವ ಅಬಕಾರಿ ಅಧಿಕಾರಿಗಳಿಬ್ಬರ ನಡುವೆ ನಡೆದಿದೆ ಎನ್ನಲಾಗಿರುವ ಸಂಭಾಷಣೆಯ ಆಡಿಯೋ ಸಂಚಲನ ಮೂಡಿಸಿದ್ದರೂ ಸಚಿವ ಕೆ ಗೋಪಾಲಯ್ಯ ಅವರು ಈವರೆವಿಗೂ ತುಟಿ ಬಿಚ್ಚಿಲ್ಲ. ಪ್ರಕರಣ ಸಂಬಂಧ ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಿ ಕೈ ತೊಳೆದುಕೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿತ್ತು.

ಪ್ರಕರಣದ ವಿವರ

ಅಬಕಾರಿ ಇಲಾಖೆಯ ಅಧಿಕಾರಿಗಳಿಬ್ಬರ ಮಧ್ಯೆ ನಡೆದಿದೆ ಎನ್ನಲಾಗಿರುವ 10 ನಿಮಿಷದ ಸಂಭಾಷಣೆಯ ತುಣುಕಿನಲ್ಲಿ ಕೊಪ್ಪಳ ಜಿಲ್ಲೆಯಿಂದ 5 ಲಕ್ಷ ಸಂಗ್ರಹಿಸಿ ಕೊಡಲು ಸೂಚಿಸಿದ್ದಾರೆ ಎಂಬ ಅಂಶ ಪ್ರಸ್ತಾಪವಾಗಿದೆ. ಅಲ್ಲದೆ ಮಂಜುನಾಥ್‌, ನಾಗರಾಜಪ್ಪ, ರಮೇಶ್‌, ಶಿವಪ್ರಸಾದ್‌ ಸೇರಿದಂತೆ ಹಲವು ಜಿಲ್ಲೆಗಳ ಅಧಿಕಾರಿಗಳ ಹೆಸರು ಪ್ರಸ್ತಾಪವಾಗಿದೆಯಲ್ಲದೆ ಕೊಪ್ಪಳ ಜಿಲ್ಲೆಯ ಇಕ್ಬಾಲ್‌ ಅನ್ಸಾರಿ ಎಂಬುವರ ಹೆಸರು ಪ್ರಸ್ತಾಪವಾಗಿರುವುದು ಚರ್ಚೆಗೆ ಗ್ರಾಸವಾಗಿತ್ತು.

ಸಚಿವರ ಮನೆಯಲ್ಲೇ ನಡೆದಿತ್ತು ಸಭೆ?

ಅಬಕಾರಿ ಸಚಿವ ಕೆ ಗೋಪಾಲಯ್ಯ ಅವರ ಮನೆಯಲ್ಲಿ ಅಬಕಾರಿ ಜಿಲ್ಲಾ ಅಧಿಕಾರಿಗಳು, ಜಂಟಿ ಆಯುಕ್ತರುಗಳ ಸಭೆ ನಡೆದಿತ್ತು ಎಂಬುದು ಮಹಿಳಾ ಅಧಿಕಾರಿಯೊಬ್ಬರ ಆಡಿಯೋ ತುಣುಕಿನಿಂದ ಗೊತ್ತಾಗಿದೆ. ಸಚಿವರ ಮನೆಯಲ್ಲಿ ಸಭೆ ನಡೆಯುವ ಮುನ್ನ ವಿಕಾಸಸೌಧದಲ್ಲಿ ಅಬಕಾರಿ ಇಲಾಖೆಯ ಜಂಟಿ ಆಯುಕ್ತರು, ಅಬಕಾರಿ ನಿರೀಕ್ಷಕರ ಸಭೆ ನಡೆದಿತ್ತು. ಈ ಸಭೆಯಲ್ಲಿ ಸಚಿವ ಗೋಪಾಲಯ್ಯ ಅವರು ಕೆಲ ಜಿಲ್ಲೆಗಳ ಅಬಕಾರಿ ನಿರೀಕ್ಷಕರ ಕಾರ್ಯವೈಖರಿಯನ್ನು ಮೆಚ್ಚಿ ಪ್ರಶಂಸಿದ್ದರು. ಅದೇ ದಿನ ಸಂಜೆ ಸಚಿವರ ಮನೆಯಲ್ಲಿ ಆಯ್ದ ಜಂಟಿ ಆಯುಕ್ತರು ಮತ್ತು ಅಬಕಾರಿ ನಿರೀಕ್ಷಕರ ಸಭೆ ನಡೆದಿತ್ತು. ಈ ಸಭೆಯಲ್ಲಿ ಮಂಜುನಾಥ್‌, ಕುಮಾರ್‌, ನಾಗರಾಜಪ್ಪ ಎಂಬ ಅಧಿಕಾರಿಗಳು ಹಾಜರಾಗಿದ್ದರು ಎಂಬುದು ಆಡಿಯೋ ತುಣುಕಿನಿಂದ ತಿಳಿದು ಬಂದಿತ್ತು.

ಹಣ ವಸೂಲಿಗೆ ಸಚಿವ ಗೋಪಾಲಯ್ಯ ನಿವಾಸದಲ್ಲಿ ನಡೆದಿತ್ತೇ ಸಭೆ?; ಆಡಿಯೋ ಬಹಿರಂಗ

‘ರಮೇಶ್‌ ಬಗ್ಗೆ ಸಾಹೇಬ್ರು ಬಹಳ ಹುಷಾರಾಗಿದಾರೆ. ಕೆಟ್ಟದಾಗಿದಾರೆ. ನಾನು ಓಪನ್‌ ಆಗಿ ಹೇಳ್ದೆ. ಕೊಡೋಕೆ ರೆಡಿ ಇದ್ರು. ಒಪ್ಪಿದ್ರು. ಬೇರೆಯವರು ಹೆಂಗೆ ಮಾಡ್ತಾರೆ ಹಂಗೆ ಮಾಡೋಣ ಅಂದ್ರು. ಡಿಸಿ ಮೂರು ಜನ್ರ ಮೇಲೆ ಸಿಟ್ಟಾಗಿದಾರೆ. ರಮೇಶ್‌ ಮೇಲಂತೂ ಸಖತ್‌ ಸಿಟ್ಟಾಗಿದಾರೆ. ದಾವಣಗೆರೆ ಡಿಸಿ ಶಿವಪ್ರಸಾದ್‌ ಇದ್ರು. ಸುಮತಿ ರೆಡಿ ಇದ್ರು. ರಮೇಶ್‌ ದಾರಿ ತಪ್ಪಿಸುತ್ತಿದ್ದಾರೆ,’ ಎಂದು ಸಂಭಾಷಿಸಿರುವುದು ಆಡಿಯೋ ತುಣುಕಿನಿಂದ ಗೊತ್ತಾಗಿತ್ತು.

‘ಗ್ರೀನ್‌ ಸಿಗ್ನಲ್‌ ಕೊಟ್ರೆ ತಂದ್‌ ಕೊಡ್ತೀನಿ’

‘ನಾನೇನು ಮಾಡ್ಲಿ. ಗಂಗಾವತಿ ಇನ್‌ಫಂಕ್ಷನ್‌ ಆಗಿದೆ. ವರದಿ ಕೊಡಿ. ಅಮೌಂಟ್‌ ಕಲೆಕ್ಟ್‌ ಆಗಿದೆಯೇ’ ಎಂದು ಮಹಿಳಾ ಅಧಿಕಾರಿಯ ಪ್ರಶ್ನೆಗೆ ಮತ್ತೊಬ್ಬ ಅಧಿಕಾರಿಯು ‘ ನಾಳೆನೇ ತಂದ್‌ ಕೊಡ್ತೀನಿ. ಗ್ರೀನ್‌ ಸಿಗ್ನಲ್‌ ಕೊಟ್ಟರೆ,’ ಎಂದು ಉತ್ತರಿಸಿದ್ದಾರೆ. ಹಾಗೆಯೇ ‘ ಇಕ್ಬಾಲ್‌ ಅನ್ಸಾರಿ ಅವರು ಒಂದ್‌ ರೂಪಾಯಿನೂ ಕೊಟ್ಟಿಲ್ಲ ಅವ್ರು.,’ ಎಂದು ಮಹಿಳಾ ಅಧಿಕಾರಿ ಹೇಳಿದ್ದಾರೆ. ಆನಂತರ ‘ಮೇಡಂ ತಾವು ಗ್ರೀನ್‌ ಸಿಗ್ನಲ್‌ ಕೊಟ್ಟರೆ ಕಲೆಕ್ಟ್‌ ಮಾಡ್ತೀನಿ,’ ಎಂದು ಉತ್ತರಿಸಿರುವುದು ತಿಳಿದು ಬಂದಿದೆ.

ಮಿನಿಸ್ಟರ್‌ದು ಏನ್‌ ಮಾಡಿದ್ರಿ?

ಕೊಪ್ಪಳ ಜಿಲ್ಲೆಯ ಪ್ರತಿ ತಾಲೂಕಿನಲ್ಲಿರುವ ಮದ್ಯದ ಅಂಗಡಿಗಳಿಂದ ಹಣ ಸಂಗ್ರಹ ಮಾಡಿಕೊಡಬೇಕು ಎಂಬ ವಿಚಾರವೂ ಆಡಿಯೋ ತುಣುಕಿನಲ್ಲಿ ಪ್ರಸ್ತಾಪವಾಗಿದೆ. ‘ಮಿನಿಸ್ಟರ್‌ದು ಏನ್‌ ಮಾಡಿದ್ರಿ… ನೀವು ಶಾಪ್‌ಗಳಿಂದ ಆ ಮೇಲೆ ಕಲೆಕ್ಷನ್‌ ಮಾಡ್ರಿ. ನೀವು ಕೈಯಿಂದ ಕೊಟ್ಟು ಶಾಪ್‌ನೋರ ಹತ್ರ ಆ ಮೇಲೆ ಕೇಳ್ರಿ. ಬೆಳಗಾಂ, ಗುಲ್ಬರ್ಗಾದವರು ಬಂದಿದ್ರು. ಅವರನ್ನು ಕೇಳಿ. ನೀವು ಅವರು ಟಾರ್ಗೇಟ್‌ ಆಗ್ತೀರಿ. ನಾನೇನು ಕೊಟ್ಟು ಕೈ ತೊಳ್ಕೋತ್ತೀನಿ, ಆ ಮೇಲೆ ನಿಮ್‌ ಸ್ಟೋರಿಗಳು ಹೊರಗ್‌ ಬರ್ತಾವೆ. ನಾನೇನು ಮಾಡಕ್ಕಾಗಲ್ಲ,’ಎಂದು ಮಹಿಳಾ ಅಧಿಕಾರಿ ಮಾತನಾಡಿರುವುದು ಆಡಿಯೋ ತುಣುಕಿನಿಂದ ಗೊತ್ತಾಗಿದೆ.

the fil favicon

SUPPORT THE FILE

Latest News

Related Posts