ಆಕ್ಸಿಜನ್‌ ಕಾನ್ಸ್‌ಟ್ರೇಟರ್‌ ಖರೀದಿಗೆ ತರಾತುರಿಯಲ್ಲಿ ದರಪಟ್ಟಿ ಆಹ್ವಾನ; 135 ಕೋಟಿಯಲ್ಲಿ ಪಾಲೆಷ್ಟು?

ಬೆಂಗಳೂರು; ಆಕ್ಸಿಜನ್ ಕಾನ್ಸಟ್ರೇಟರ್‌ ಉಪಕರಣ ಖರೀದಿ ಸಂಬಂಧ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು ಪೂರ್ವ ನಿರ್ಧರಿತ ಕಂಪನಿಗಳೊಂದಿಗೆ ಶಾಮೀಲಾಗಿದೆ ಎಂಬ ಬಲವಾದ ಆರೋಪ ಕೇಳಿ ಬಂದಿದೆ. ಆಕ್ಸಿಜನ್‌ ಕಾನ್ಸ್‌ಟ್ರೇಟರ್‌ ಉಪಕರಣ ಉತ್ಪಾದನೆ ಮಾಡುವ ದೊಡ್ಡ ಮಟ್ಟದ ಕಂಪನಿಗಳನ್ನು ಬದಿಗಿರಿಸುವ ಭಾಗವಾಗಿಯೇ ದರ ಪಟ್ಟಿ ಆಹ್ವಾನಿಸಿ ಅವ್ಯವಹಾರಕ್ಕೆ ದಾರಿಮಾಡಿಕೊಟ್ಟಿದೆ.!

ಕೋವಿಡ್‌ ದೃಢಪಟ್ಟ ರೋಗಿಗಳಿಗೆ ಆಕ್ಸಿಜನ್‌ ಸಕಾಲದಲ್ಲಿ ದೊರೆಯದ ಕಾರಣ ಸಾವನ್ನಪ್ಪಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ವರದಿಗಳಿದ್ದರೂ ಪೂರ್ವ ಸಿದ್ಧತೆ ಮಾಡಿಕೊಳ್ಳದ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು ಅಂದಾಜು 135 ಕೋಟಿ ಮೌಲ್ಯದ 15,000 ಆಕ್ಸಿಜನ್‌ ಕಾನ್ಸ್‌ಟ್ರೇಟರ್‌ ಉಪಕರಣಗಳ ಖರೀದಿಗೆ ತರಾತುರಿಯಲ್ಲಿ ದರ ಪಟ್ಟಿ ಆಹ್ವಾನಿಸಿದೆ. ಇದು ಮೊದಲೇ ಗೊತ್ತುಪಡಿಸಿಕೊಂಡಿರುವ ಸರಬರಾಜುದಾರರು/ಕಂಪನಿಗಳಿಗೆ ಲಾಭ ಮಾಡಿಕೊಡಲಿದೆ ಎಂಬ ಅರೋಪಕ್ಕೆ ನಿಗಮವು ಗುರಿಯಾಗಿದೆ.

ಆಕ್ಸಿಜನ್‌ ಕಾನ್ಸ್‌ಟ್ರೇಟರ್‌ ಉಪಕರಣದ ಗುಣಮಟ್ಟಕ್ಕೆ ಸಂಬಂಧಿಸಿದಂತೆ ದರಪಟ್ಟಿಯಲ್ಲಿ ನಮೂದಿಸಿರುವ ನಿರ್ದಿಷ್ಟತೆಯು (SPECIFICATIONS) ಆಯ್ದ ಕಂಪನಿಗಳಿಗೆ ಲಾಭ ಮಾಡಿಕೊಡುವ ಸಂಚು ಕೂಡ ಇದರಲ್ಲಿದೆ ಎಂದು ಆರೋಗ್ಯ ಇಲಾಖೆಯ ಉನ್ನತ ಮೂಲಗಳು ‘ದಿ ಫೈಲ್‌’ಗೆ ತಿಳಿಸಿವೆ.

ಆಕ್ಸಿಜನ್‌ ಕಾನ್ಸ್‌ಟ್ರೇಟರ್‌ ಉಪಕರಣದಲ್ಲಿ ಆಕ್ಸಿಜನ್‌ ಗುಣಮಟ್ಟವು ಕನಿಷ್ಠ ಶೇ.90ರಿಂದ 96ರವರೆಗೆ ಇರುತ್ತದೆ. ಆದರೆ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು ಆಹ್ವಾನಿಸಿರುವ ದರಪಟ್ಟಿಯಲ್ಲಿ ಆಕ್ಸಿಜನ್‌ ಗುಣಮಟ್ಟವು ಶೇ. 94ರಷ್ಟು ಎಂದು ನಿರ್ದಿಷ್ಟಪಡಿಸಲಾಗಿದೆ.

ಫಿಲಿಫ್ಸ್‌, ಬಿಪಿಎಲ್‌ ಸೇರಿದಂತೆ ದೊಡ್ಡ ದೊಡ್ಡ ಕಂಪನಿಗಳು ತಯಾರಿಸುವ ಉಪಕರಣಗಳು ಗರಿಷ್ಠ ಶೇ.96ರಷ್ಟು ಆಕ್ಸಿಜನ್‌ ಗುಣಮಟ್ಟವಿರುತ್ತದೆ. ಆದರೆ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು ಶೇ.94 ಮಾತ್ರ ಎಂದು ನಿರ್ದಿಷ್ಟಪಡಿಸಿರುವುದರ ಹಿಂದೆ ಬೇರೆ ಕಂಪನಿಗಳು ದರಪಟ್ಟಿಯಲ್ಲಿ ಭಾಗವಹಿಸಬಾರದು ಎಂಬ ಹುನ್ನಾರವಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎನ್ನುತ್ತಾರೆ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು.

ಇನ್ನು, ದರಪಟ್ಟಿಯಲ್ಲಿ ವಿಧಿಸಿರುವ ಷರತ್ತುಗಳು ಕೂಡ ನಿರ್ದಿಷ್ಟ ಕಂಪನಿಗಳಿಗೆ ಅನುಕೂಲಕರವಾಗಿದೆ. ಖರೀದಿ ಆದೇಶ ನೀಡಿದ 2 ದಿನದ ಒಳಗೆ ಉಪಕರಣಗಳ ಸರಬರಾಜು ಪ್ರಕ್ರಿಯೆ ಆರಂಭಿಸಬೇಕಲ್ಲದೆ 7 ದಿನದೊಳಗೆ 15,000 ಉಪಕರಣಗಳನ್ನು ಸಂಪೂರ್ಣವಾಗಿ ಸರಬರಾಜು ಮಾಡಿರಬೇಕು ಎಂಬ ಷರತ್ತು ವಿಧಿಸಲಾಗಿದೆ.

ಮೊದಲೇ ಗೊತ್ತುಪಡಿಸಿಕೊಂಡಿರುವ ಕಂಪನಿಗಳು ಮಾತ್ರ ಈ ಷರತ್ತನ್ನು ಪಾಲಿಸಬಲ್ಲದು. ಉಳಿದ ಕಂಪನಿಗಳು ಅತ್ಯಲ್ಪ ಅವಧಿಯಲ್ಲಿ ಉಪಕರಣಗಳನ್ನು ಪೂರೈಸಲಾರವು. ಹೀಗಾಗಿ ದರಪಟ್ಟಿಯಿಂದ ಇಂತಹ ಕಂಪನಿಗಳನ್ನು ದೂರವಿರಿಸಲಾಗಿದೆ ಎಂದು ಗೊತ್ತಾಗಿದೆ.

 

ಅದೇ ರೀತಿ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು ವೈದ್ಯಕೀಯ ಸಲಕರಣೆಗಳ ಖರೀದಿ ಸಂಬಂಧ ಆಹ್ವಾನಿಸಿರುವ ದರಪಟ್ಟಿಯಲ್ಲಿಯೂ ಪಾರದರ್ಶಕತೆಯನ್ನು ಕಾಯ್ದುಕೊಂಡಿಲ್ಲ. ನೆರೆಯ ರಾಜ್ಯಗಳ ವೈದ್ಯಕೀಯ ಸರಬರಾಜು ನಿಗಮಗಳು ವೈದ್ಯಕೀಯ ಸಲಕರಣೆಗಳ ಖರೀದಿ ಪ್ರಕ್ರಿಯೆಯನ್ನು ಪಾರದರ್ಶಕವಾಗಿರಿಸುತ್ತವೆ.

ಆಂಧ್ರ, ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್‌, ಕೇರಳ, ತಮಿಳುನಾಡು, ಒಡಿಶಾ ಮತ್ತು ಮಹಾರಾಷ್ಟ್ರ ರಾಜ್ಯ ಸರ್ಕಾರಗಳ ವೈದ್ಯಕೀಯ ಸರಬರಾಜು ನಿಗಮಗಳು ಆಹ್ವಾನಿಸುವ ಟೆಂಡರ್‌ ಮತ್ತು ದರಪಟ್ಟಿಗಳಲ್ಲಿನ ಎಲ್ಲಾ ವಿವರಗಳನ್ನು ನಿಗಮಗಳ ಅಧಿಕೃತ ವೆಬ್‌ಸೈಟ್‌ನಲ್ಲಿರುತ್ತವೆ.

ಉಪಕರಣ ಮತ್ತು ಔಷಧಗಳ ವಿವರ, ಅದರ ಗುಣಮಟ್ಟ, ದರ ಮತ್ತು ಕಂಪನಿವಾರು ವಿವರಗಳನ್ನು ಸಾರ್ವಜನಿಕವಾಗಿ ಲಭ್ಯವಾಗಿರಿಸುತ್ತವೆ. ಕೆಲ ರಾಜ್ಯಗಳ ನಿಗಮಗಳು ಕಂಪನಿಗಳಿಗೆ ನೀಡಿರುವ ಖರೀದಿ ಆದೇಶಗಳನ್ನು ಸಾರ್ವಜನಿಕವಾಗಿ ಲಭ್ಯವಾಗಿರಿಸುತ್ತವೆ. ಟೆಂಡರ್‌ನಲ್ಲಿ ಬಿಡ್‌ ಕಂಪನಿಗಳ ಪೈಕಿ ಯಾವ ಕಂಪನಿ ಆಯ್ಕೆಯಾಗಿದೆ ಅಥವಾ ಆಯ್ಕೆ ಮಾಡಲಾಗಿದೆ ಮತ್ತು ತಿರಸ್ಕೃತಗೊಂಡಿದ್ದರೆ ಅದಕ್ಕೆ ಸಕಾರಣಗಳನ್ನೂ ವೆಬ್‌ಸೈಟ್‌ನಲ್ಲಿ ವಿವರಗಳನ್ನು ನಮೂದಿಸಲಾಗಿರುತ್ತೆ. ಹಾಗೆಯೇ ಎಲ್ಲಾ ಬಿಡ್‌ದಾರರ ವಿವರಗಳನ್ನೂ ಬಹಿರಂಗಪಡಿಸಿರುತ್ತೆ.

ಆದರೆ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು ಈ ವಿಚಾರದಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಂಡಿಲ್ಲ. ಉಪಕರಣ ಮತ್ತು ಔಷಧಗಳಿಗೆ ಸಂಬಂಧಿಸಿದಂತೆ ಹಾಗೂ ಕಂಪನಿಗಳು ನಮೂದಿಸಿರುವ ದರಪಟ್ಟಿ, ಆಯ್ಕೆಯಾಗಿರುವ ಕಂಪನಿಗಳು ತಿರಸ್ಕೃತಗೊಂಡಿದ್ದರೆ ಅದೇ ರೀತಿ ದರಪಟ್ಟಿ ರದ್ದುಗೊಂಡಲ್ಲಿ ಅದಕ್ಕೆ ಕಾರಣಗಳನ್ನೂ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಮತ್ತು ಸಾರ್ವಜನಿಕವಾಗಿ ಬಹಿರಂಗಪಡಿಸುತ್ತಿಲ್ಲ. ಅಲ್ಲದೆ ಕಂಪನಿಗಳು ಮಾಹಿತಿ ಕೇಳಿ ಇ-ಮೈಲ್‌ ಕಳಿಸಿದರೂ ನಿಗಮದ ಅಧಿಕಾರಿಗಳು ಸಕಾಲಕ್ಕೆ ಪ್ರತಿಸ್ಪಂದಿಸುತ್ತಿಲ್ಲ ಎಂಬ ಅರೋಪಗಳೂ ಇವೆ. ನಿಗಮದ ಈ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಕೋವಿಡ್‌ ಮೊದಲ ಅಲೆಯಲ್ಲಿಯೂ ಕರ್ನಾಟಕ ಡ್ರಗ್ಸ್‌ ಲಾಜಿಸ್ಟಿಕ್ಸ್‌ ಸೊಸೈಟಿಯು ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ದೊಡ್ಡಮಟ್ಟದಲ್ಲಿ ಭ್ರಷ್ಟಾಚಾರ ನಡೆಸಿತ್ತು. ಆದರೆ ಡಾ ಸಿ  ಎನ್‌ ಅಶ್ವಥ್‌ನಾರಾಯಣ್‌, ಡಾ  ಕೆ ಸುಧಾಕರ್‌ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇದನ್ನು ಅಲ್ಲಗಳೆದಿದ್ದರು. ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯೂ ಈ ಹಗರಣದ ಕುರಿತು ಚರ್ಚಿಸಿತ್ತು. ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿನ ಅಕ್ರಮಗಳ ಕುರಿತು ‘ದಿ ಫೈಲ್‌’ 50 ಸರಣಿ ವರದಿಗಳನ್ನು ಪ್ರಕಟಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts