ತನಿಖೆ ವಿಳಂಬ; ಅವಧಿ ಮೀರಿದ ಅಮಾನತು ಪ್ರಕರಣಗಳಲ್ಲಿ ಗೃಹ ಇಲಾಖೆ ಮೇಲುಗೈ

ಬೆಂಗಳೂರು; ಕರ್ತವ್ಯಲೋಪ, ಭ್ರಷ್ಟಾಚಾರ, ಇಲಾಖೆ ವಿಚಾರಣೆ ಮತ್ತಿತರ ಕಾರಣಕ್ಕೆ ಅಮಾನತುಗೊಳಿಸಿರುವ ಅಧಿಕಾರಿ, ನೌಕರರನ್ನು 6 ತಿಂಗಳೊಳಗೆ ವಿಚಾರಣೆ ಪೂರ್ಣಗೊಳಿಸಬೇಕು ಎಂದು ಸರ್ಕಾರ ಹೊರಡಿಸಿದ್ದ ಆದೇಶವನ್ನು ಸಚಿವಾಲಯದಲ್ಲಿರುವ 8 ಇಲಾಖೆಗಳು ಉಲ್ಲಂಘಿಸಿವೆ.

2021ರ ಜನವರಿ 15ರಿಂದ 2021ರ ಫೆ.15ರವರೆಗೆ 8 ಇಲಾಖೆಗಳಲ್ಲಿ 74 ಅಮಾನತು ಪ್ರಕರಣಗಳು 6 ತಿಂಗಳು ಅವಧಿ ಮೀರಿವೆ. ಈ ಪೈಕಿ ಒಳಾಡಳಿತ ಇಲಾಖೆಯಲ್ಲಿಯೇ 61 ಪ್ರಕರಣಗಳು 6 ತಿಂಗಳು ಮೀರಿರುವುದು ದಾಖಲೆಯಿಂದ ತಿಳಿದು ಬಂದಿದೆ.

ಇನ್ನುಳಿದಂತೆ ತೋಟಗಾರಿಕೆ ಮತ್ತು ನಗರಾಭಿವೃದ್ಧಿ ಇಲಾಖೆಯಲ್ಲಿ ತಲಾ 2, ಸಮಾಜ ಕಲ್ಯಾಣ, ಆಹಾರ, ನಾಗರಿಕ ಸರಬರಾಜು, ಲೋಕೋಪಯೋಗಿ, ಪಶು ಸಂಗೋಪನೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ತಲಾ 1 ಪ್ರಕರಣಗಳು 6 ತಿಂಗಳು ಅವಧಿ ಮೀರಿವೆ.
ಭ್ರಷ್ಟಾಚಾರ ಸೇರಿದಂತೆ ಇನ್ನಿತರೆ ಆರೋಪಗಳ ಸಂಬಂಧ ತನಿಖೆ ನಡೆಸುತ್ತಿರುವ ಲೋಕಾಯುಕ್ತ, ಭ್ರಷ್ಟಾಚಾರ ನಿಗ್ರಹ ದಳದ ತನಿಖಾಧಿಕಾರಿಗಳು ನಿಗದಿತ ಅವಧಿಯಲ್ಲಿ ತನಿಖೆ ಪೂರ್ಣಗೊಳಿಸುತ್ತಿಲ್ಲ. ಹೀಗಾಗಿ ಇಲಾಖೆ ಅಮಾನತು ಪ್ರಕರಣಗಳಲ್ಲಿ ಯಾವುದೇ ತೀರ್ಮಾನ ಹೊರಬೀಳದ ಕಾರಣ 6 ತಿಂಗಳು ಅವಧಿ ಮೀರುತ್ತಿವೆ ಎನ್ನಲಾಗಿದೆ.

ಯಾವುದೇ ಆರೋಪದಡಿ ಸರ್ಕಾರಿ ನೌಕರ ಅಮಾನತಿಗೆ ಒಳಗಾದರೆ ಸಂಬಂಧಿಸಿದ ಆರೋಪ ಕುರಿತ ಇಲಾಖೆ ವಿಚಾರಣೆ ಆರು ತಿಂಗಳಲ್ಲಿ ಪೂರ್ಣಗೊಳ್ಳಬೇಕು. ಅಮಾನತು ಅವಧಿ ಆರು ತಿಂಗಳ ಮೇಲೆ ಮುಂದುವರೆಸುವಂತಿಲ್ಲ, ಯಾವುದೇ ಆದೇಶ ನೀಡದಿದ್ದ ಪಕ್ಷದಲ್ಲಿ ಅಮಾನತು ತಾನಾಗಿ ರದ್ದಾಗಲಿದೆ ಎಂದು ಆದೇಶ ಹೊರಡಿಸಿತ್ತು.

ಶಿಸ್ತು ಕ್ರಮಕ್ಕೆ ಸಂಬಂಧಿಸಿದಂತೆ ಸರ್ಕಾರಿ ನೌಕರರನ್ನು ಅಮಾನತಿನಲ್ಲಿ ಇಡುವುದರಿಂದ ಸರ್ಕಾರಕ್ಕೆ ಅನಗತ್ಯ ಆರ್ಥಿಕ ಹೊರೆ ತಪ್ಪಿಸುವ ಸಲುವಾಗಿ ಆದೇಶ ಹೊರಡಿಸಲಾಗಿತ್ತು. ಯಾವುದೇ ಒಂದು ಆರೋಪ ಸಂಬಂಧ ಶಿಸ್ತು ಕ್ರಮಕ್ಕೆ ಆದೇಶ ಹೊರಡಿಸಿ ಐದು ವರ್ಷ ಆದರೂ ವಿಚಾರಣೆ ಮುಗಿಯುತ್ತಿರಲಿಲ್ಲ. ಹೀಗಾಗಿ ಕರ್ನಾಟಕ ನಾಗರಿಕ ಸೇವಾ ನಿಯಮ 1957 ನಿಯಮ10 ಕ್ಕೆ ಕೆಲವು ತಿದ್ದುಪಡಿ ತರಲಾಗಿತ್ತು.

ಅಮಾನತು ಅವಧಿ ಮುಂದುವರೆಸಬೇಕಿದ್ದಲ್ಲಿ ಸಕ್ಷಮ ಪ್ರಾಧಿಕಾರ ಆರು ತಿಂಗಳ ಒಳಗೆ ಅದೇಶಿಸದಿದ್ಧಲ್ಲಿ ಭಾವಿತ ಆದೇಶ ಎಂದು ಪರಿಗಣಿಸಿ ಆರು ತಿಂಗಳ ಮುಗಿದ ಮರು ದಿನವೇ ಅಮಾನತು ಆದೇಶ ರದ್ದಾಗುತ್ತದೆ. ಈ ರೀತಿ ಅಮಾನತು ಆದೇಶ ರದ್ದಾದ ಬಳಿಕ ಸರ್ಕಾರಿ ನೌಕರ ನೇಮಕಾತಿ ಪ್ರಾಧಿಕಾರದಿಂದ ಸ್ಥಳ ನಿಯುಕ್ತಿ ಆದೇಶವನ್ನು ಕೋರಬೇಕು. ಸ್ಥಳ ನಿಯುಕ್ತಿ ಕೋರದೇ ಹೋದರೆ, ಅಮಾನತು ಅವಧಿ ಹೊರತು ಪಡಿಸಿ ಉಳಿದ ಅವಧಿಯನ್ನು ಗೈರು ಹಾಜರಿ ಎಂದು ಪರಿಗಣಿಸಲಾಗುತ್ತದೆ ಎಂದು ಆದೇಶದಲ್ಲಿ ವಿವರಿಸಲಾಗಿತ್ತು.

ಭ್ರಷ್ಟಾಚಾರ, ಲೋಕಾಯುಕ್ತ ಸಂಸ್ಥೆ ದಾಖಲಿಸುವ ಪ್ರಕರಣದಲ್ಲಿ ಅಮಾನತು ಆದರೂ, ಸಂಬಂಧಪಟ್ಟ ತನಿಖಾ ಸಂಸ್ಥೆ ಆರು ತಿಂಗಳ ಒಳಗೆ ಸರ್ಕಾರಿ ನೌಕರನ ಅಮಾನತು ಅವಧಿ ಮುಂದುವರೆಸುವ ಬಗ್ಗೆ ಕೋರಿಕೆ ಸಲ್ಲಿಸಬೇಕು. ಸಲ್ಲಿಸಿದರೆ ಮಾತ್ರ ಅಮಾನತು ಅವಧಿ ವಿಸ್ತರಿಸಲಾಗುತ್ತದೆ. ಸಲ್ಲಿಸದಿದ್ದ ಪಕ್ಷದಲ್ಲಿ ಆರು ತಿಂಗಳ ನಂತರ ಸ್ವಯಂ ಚಾಲಿತವಾಗಿ ಅಮಾನತು ರದ್ದಾಗುತ್ತದೆ. ಸಂದರ್ಭ ಅನುಸಾರ ಆರು ತಿಂಗಳ ಒಳಗೆ ಇಲಾಖೆ ವಿಚಾರಣೆ ಆರಂಭಿಸಿದ್ದಲ್ಲಿ, ದೋಷಾರೋಪಣೆ ಸಲ್ಲಿಸಿದ್ದಲ್ಲಿ ಅಂತಹ ಸಂದರ್ಭದಲ್ಲಿ ಆರು ತಿಂಗಳ ಒಳಗೆ ಸರ್ಕಾರಿ ನೌಕರನನ್ನು ಸೇವೆಗೆ ಪುನರ್ ಅವಕಾಶ ಕೊಡಲು ಸಕ್ಷಮ ಪ್ರಾಧಿಕಾರ ನಿರ್ಧರಿಸುತ್ತದೆ.

the fil favicon

SUPPORT THE FILE

Latest News

Related Posts