ಹಣಕ್ಕೆ ಬೇಡಿಕೆ; ಎಸಿಬಿ ಮೆಟ್ಟಿಲೇರಿದ ಸಚಿವ ಅಶೋಕ್‌ ಆಪ್ತ ಸಹಾಯಕ ಗಂಗಾಧರ್‌ ಪ್ರಕರಣ

ಬೆಂಗಳೂರು; ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು ಎಂಬ ಆರೋಪಕ್ಕೆ ಒಳಗಾಗಿರುವ ಸಚಿವ ಆರ್‌ ಅಶೋಕ್‌ ಅವರ ಆಪ್ತ ಸಹಾಯಕ ಗಂಗಾಧರ್‌ ಅವರ ವಿರುದ್ಧ ಶೃಂಗೇರಿ ಪಟ್ಟಣ ಪೊಲೀಸರು ಎಫ್‌ಐಆರ್‌ ದಾಖಲಿಸಿರುವ ಬೆನ್ನಲ್ಲೇ ಸಬ್‌ ರಿಜಿಸ್ಟ್ರಾರ್‌ ಚೆಲುವರಾಜು ಅವರು ಭ್ರಷ್ಟಾಚಾರ ನಿಗ್ರಹ ದಳಕ್ಕೂ ದೂರು ದಾಖಲಿಸಿದ್ದಾರೆ.

ಶೃಂಗೇರಿ ಠಾಣೆಯಲ್ಲಿ ಈಗಾಗಲೇ ಐಪಿಸಿ 506ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಗಂಗಾಧರ್‌ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನ್ನು ಎಸಿಬಿ ಠಾಣೆಗೆ ವರ್ಗಾಯಿಸಿಕೊಳ್ಳಬೇಕು ಎಂದು ಚೆಲುವರಾಜು ಅವರು ದೂರಿನಲ್ಲಿ ಕೋರಿದ್ದಾರೆ.

‘ಎಫ್‌ಐಆರ್‌ನಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ನಮೂದಿಸಿರುವ ಅಪರಾಧ ಕೃತ್ಯ ಹಾಗೂ ಐಪಿಸಿ ಅಡಿಯಲ್ಲಿ ನಮೂದಿಸಿರುವ ಅಪರಾಧ ಕೃತ್ಯವನ್ನು ಸೇರ್ಪಡಿಸಿ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಕೋರಿರುವುದು ತಿಳಿದು ಬಂದಿದೆ. ಎಸಿಬಿಗೆ ಸಲ್ಲಿಸಿರುವ ದೂರಿನ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಶೃಂಗೇರಿ ಪಟ್ಟಣದ ಸಬ್‌ ರಿಜಿಸ್ಟ್ರಾರ್‌ ಚೆಲುವರಾಜು ಅವರು ಸಚಿವ ಆರ್‌ ಅಶೋಕ್‌ ಅವರ ಆಪ್ತ ಸಹಾಯಕ ಗಂಗಾಧರ್‌ ಅವರ ವಿರುದ್ಧ ಹಣಕ್ಕಾಗಿ ಬೇಡಿಕೆ ಇಟ್ಟಿರುವ ಬಗ್ಗೆ ದೂರು ಸಲ್ಲಿಸಿದ್ದರು. 72 ಗಂಟೆಗಳಾದರೂ ಕ್ರಮ ಕೈಗೊಳ್ಳದ ಶೃಂಗೇರಿ ಪೊಲೀಸರು ಎಫ್‌ಐಆರ್‌ ದಾಖಲಿಸಲು ಮೀನಮೇಷ ಎಣಿಸುತ್ತಿದ್ದರು. ಈ ಕುರಿತು ‘ದಿ ಫೈಲ್‌’ ವರದಿ ಪ್ರಕಟಿಸಿತ್ತು. ವರದಿ ಪ್ರಕಟವಾದ ಬೆನ್ನಲ್ಲೆ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದನ್ನು ಸ್ಮರಿಸಬಹುದು.

ಪ್ರಕರಣದ ಹಿನ್ನೆಲೆ

ಶೃಂಗೇರಿಯ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಅಕ್ಷರ ಮಿತ್ರ ಕಾರ್ಯಕ್ರಮದಲ್ಲಿ ಸಚಿವ ಆರ್‌ ಅಶೋಕ್‌ ಅವರು ಭಾಗವಹಿಸಿದ್ದರು. 2021ರ ಜನವರಿ 21ರಂದು ಕಂದಾಯ ಸಚಿವರ ಪ್ರವಾಸ ವೇಳಾಪಟ್ಟಿಯನ್ನು ಉಪ ನೋಂದಣಾಧಿಕಾರಿ ಎಚ್‌ ಎಸ್‌ ಚೆಲುವರಾಜು ಅವರ ಖಾಸಗಿ ಮೊಬೈಲ್‌ ನಂಬರ್‌ 9741114815ಗೆ ಸಂದೇಶ ಕಳಿಸಲಾಗಿತ್ತು. ಆದರೆ ಸಂದೇಶ ಕಳಿಸಿದವ ಇವರಿಗೆ ಪರಿಚಯವಿರಲಿಲ್ಲ. ಇದಾಗಿ 3 ದಿನದ ನಂತರ 2021ರ ಜನವರಿ 24ರಂದು ಸಚಿವ ಆರ್‌ ಅಶೋಕ್‌ ಅವರ ಆಪ್ತ ಸಹಾಯಕ ಎಂದು ಪರಿಚಯಿಸಿಕೊಂಡ ಗಂಗಾಧರ್‌ ಎಂಬ ವ್ಯಕ್ತಿಯು ತಮ್ಮನ್ನು ಮತ್ತು ಸಚಿವ ಅಶೋಕ್‌ ಅವರನ್ನು ಭೇಟಿ ಆಗಬೇಕು ಎಂದು ಸೂಚಿಸಿದ್ದರು ಎಂದು ಠಾಣೆಗೆ ಸಲ್ಲಿಸಿರುವ ದೂರಿನಲ್ಲಿ ಆರೋಪಿಸಿದ್ದಾರೆ.

2021ರ ಜನವರಿ 24ರಂದು ಸಚಿವ ಆರ್‌ ಅಶೋಕ್‌ ಅವರನ್ನು ಭೇಟಿಯಾಗಲು ಶರಂಗೇರಿಯ ಆದಿಚುಂಚನಗಿರಿ ಸಮುದಾಯ ಭವನಕ್ಕೆ ತೆರಳಿದ್ದ ವೇಳೆಯಲ್ಲಿ ಗಂಗಾಧರ ಎಂಬಾತ ತನಗೆ ಹಣ ನೀಡಬೇಕು ಎಂದು ಬೇಡಿಕೆ ಇಟ್ಟರು ಎಂದು ದೂರಿದ್ದಾರೆ. ಈ ಬಗ್ಗೆ ನನಗೆ ಯಾರಿಗೂ ಈ ರೀತಿ ಹಣ ನೀಡುವ ಅಥವಾ ಯಾರಿಂದಲೂ ಹಣ ಪಡೆಯುವ ಅಭ್ಯಾಸ ನನಗೆ ಇಲ್ಲ ಎಂದು ಸ್ಥಳದಲ್ಲಿಯೇ ತಿಳಿಸಿ ಆತನ ಬೇಡಿಕೆಯನ್ನು ತಿರಸ್ಕರಿಸಿದ್ದೆ ಎಂದು ವಿವರಿಸಿದ್ದಾರೆ.

ಅದೇ ದಿನ ಗಂಗಾಧರ್‌ (ದೂರವಾಣಿ ಸಂಖ್ಯೆ ; 7760666222) 8-30ರ ಸಮಯದಲ್ಲಿ ತನ್ನ ಮೊಬೈಲ್‌ನಿಂದ ವಾಟ್ಸಾಪ್‌ ಧ್ವನಿ ಕರೆ ಮಾಡಿದ್ದ ಎಂದು ದೂರಿನಲ್ಲಿ ಹೇಳಿರುವ ಚೆಲುವರಾಜು ಅವರು ಗಂಗಾಧರ್‌ ಎಂಬುವರು ಸರ್ಕಾರಿ ಅಧಿಕಾರಿಯನ್ನು ಅಕ್ರಮ ಹಣಕ್ಕಾಗಿ ಬಳಸಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ಚೆಲುವರಾಜು ಅವರು ಆರೋಪಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts