Bank Information

PARADARSHAK MEDIA FOUNDATION, Account Number: 40107584055, SBI,Mahalalakshmipuram branch IFSC Code : SBIN0017347 Bengaluru

ದುಬಾರಿ ದರದಲ್ಲಿ ಮಾಸ್ಕ್‌ ಖರೀದಿ; ಲೋಕಾಯುಕ್ತರಿಂದ ವಿಚಾರಣೆ ಆರಂಭ

ಬೆಂಗಳೂರು; ಕರ್ನಾಟಕ ಸ್ಟೇಟ್‌ ಡ್ರಗ್‌ ಲಾಜಿಸ್ಟಿಕ್‌ ವೇರ್‌ಹೌಸಿಂಗ್‌ ಸೊಸೈಟಿಯು ಆರ್ಥಿಕ ಇಲಾಖೆ 4 (ಜಿ) ಅಡಿ ವಿನಾಯಿತಿಯಡಿ ಹೊರಡಿಸಿದ್ದ ಅಧಿಸೂಚನೆಯನ್ನು ಉಲ್ಲಂಘಿಸಿ ಮಾಸ್ಕ್‌ ಸೇರಿದಂತೆ ವೈದ್ಯಕೀಯ ಸಲಕರಣೆಗಳನ್ನು ದುಬಾರಿ ದರದಲ್ಲಿ ಖರೀದಿಸಿದ್ದ ಪ್ರಕರಣಗಳನ್ನು ಲೋಕಾಯುಕ್ತ ಸಂಸ್ಥೆ ವಿಚಾರಣೆಗೆ ಕೈಗೆತ್ತಿಕೊಂಡಿದೆ.

ಅಥಣಿ ಮೂಲದ ಸಾಮಾಜಿಕ ಕಾರ್ಯಕರ್ತ ಹಾಗೂ ವಕೀಲ ಭೀಮನಗೌಡ ಪರಗೊಂಡ ಎಂಬುವರು ದಾಖಲೆ ಸಮೇತ ಸೆ. 4 ರಂದು ಸಲ್ಲಿಸಿದ್ದ ದೂರನ್ನು ಲೋಕಾಯುಕ್ತರು 2020ರ ಸೆ. 23 ರಂದು ವಿಚಾರಣಾಧಿಕಾರಿ (11)ಗೆ ವರ್ಗಾಯಿಸಿದ್ದಾರೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್‌, ಆರೋಗ್ಯ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌, ಕಾರ್ಯದರ್ಶಿ ಪಂಕಜಕುಮಾರ್‌ ಪಾಂಡೆ ಮತ್ತು ಕೆಎಸ್‌ಡಿಎಲ್‌ಡಬ್ಲ್ಯೂಎಸ್‌ನ ಹೆಚ್ಚುವರಿ ನಿರ್ದೇಶಕಿ ಐಎಎಸ್‌ ಅಧಿಕಾರಿ ಮಂಜುಶ್ರೀ ಸೇರಿದಂತೆ ಇನ್ನಿತರೆ ಅಧಿಕಾರಿಗಳನ್ನು ದೂರಿನಲ್ಲಿ ಪ್ರತಿವಾದಿಗಳನ್ನಾಗಿಸಲಾಗಿದೆ. ಈ ಪ್ರಕರಣದ ಕುರಿತು ‘ದಿ ಫೈಲ್‌’ ಆಗಸ್ಟ್‌ 27ರಂದು ದಾಖಲೆ ಸಮೇತ ವರದಿ ಪ್ರಕಟಿಸಿದ್ದನ್ನು ಸ್ಮರಿಸಬಹುದು.

ಒಟ್ಟು 35.18 ಕೋಟಿ ಮೊತ್ತಕ್ಕೆ 4(ಜಿ) ವಿನಾಯಿತಿ ಪಡೆದಿದ್ದ ಕೆಎಸ್‌ಡಿಎಲ್‌ಡಬ್ಲ್ಯೂಎಸ್‌, ಪಿಪಿಇ ಕಿಟ್‌, ಎನ್‌-95 ಮಾಸ್ಕ್‌ಗಳ ಖರೀದಿಸಲು ಮಾರ್ಚ್‌ 9, 14, 20ರಂದು ಒಟ್ಟು 11.66 ಕೋಟಿ ರು.ಗೆ ಮೂರು ಕಂಪನಿಗಳಿಗೆ ಸರಬರಾಜು ಆದೇಶ ನೀಡಿತ್ತು.

ಆರ್ಥಿಕ ಇಲಾಖೆ ಹೊರಡಿಸಿದ್ದ ಅಧಿಸೂಚನೆ ಪ್ರಕಾರ ಕೆಎಸ್‌ಡಿಎಲ್‌ಡಬ್ಲ್ಯೂಎಸ್‌, ಕಡಿಮೆ ದರ ನೀಡುವ ಸರಬರಾಜುದಾರರಿಂದ ಔಷಧ, ಉಪಕರಣಗಳನ್ನು ಖರೀದಿಸದೇ ದುಬಾರಿ ದರ ನೀಡಿರುವ ಸರಬರಾಜುದಾರರಿಂದ ಖರೀದಿಸಿದೆ. ಹೀಗಾಗಿ ಸರ್ಕಾರಕ್ಕೆ ಅಂದಾಜು 9.04 ಕೋಟಿ ರು. ನಷ್ಟವಾಗಿದೆ ಎಂಬ ಬಲವಾದ ಆರೋಪ ಕೇಳಿ ಬಂದಿತ್ತು.

ಪ್ಲಾಸ್ಟಿ ಸರ್ಜಿ ಇಂಡಸ್ಟ್ರಿಸ್‌ನಿಂದ ಎನ್‌-95 ಮಾಸ್ಕ್‌ವೊಂದಕ್ಕೆ 147 (ಜಿಎಸ್‌ಟಿ ಸೇರಿದಂತೆ) ದರದಲ್ಲಿ 1,50,000 ಪ್ರಮಾಣದ ಎನ್‌-95 ಮಾಸ್ಕ್‌ಗಳು ಮತ್ತು ಪಿಪಿಇ ಕಿಟ್‌ವೊಂದಕ್ಕೆ 330.40 (ಜಿಎಸ್‌ಟಿ ಸೇರಿ) 1,50,000 ಪ್ರಮಾಣದಲ್ಲಿ ಪಿಪಿಇ ಕಿಟ್‌ಗಳನ್ನು ಒಟ್ಟು 7.16 ಕೋಟಿ ರು. ಮೊತ್ತದಲ್ಲಿ ಖರೀದಿಸಲು ಮಾರ್ಚ್‌ 9ರಂದು ಆದೇಶ ಹೊರಡಿಸಿತ್ತು. ಈ ಆದೇಶದಲ್ಲಿ ಆರ್ಥಿಕ ಇಲಾಖೆ ಹೊರಡಿಸಿದ್ದ 4(ಜಿ) ವಿನಾಯಿತಿ ಆದೇಶವನ್ನು (ಸಂಖ್ಯೆ;ಆಇ;183/ವೆಚ್ಚ/12/2020) ಉಲ್ಲೇಖಿಸಿತ್ತು.

ಅದೇ ರೀತಿ 1.56 ಕೋಟಿ ಮೊತ್ತದಲ್ಲಿ 1,00,000.00 ಪ್ರಮಾಣದ ಎನ್‌-95 ಮಾಸ್ಕ್‌ಗಳ ಖರೀದಿಗೆ ಸಾಫ್ಟ್‌ವೇರ್‌ ಕಂಪನಿ ಎಟೆಕ್‌ ಟ್ರಾನ್‌ಗೆ 2020ರ ಮಾರ್ಚ್‌ 20ರಂದು ಆದೇಶ ನೀಡಿತ್ತು. ಇದರಲ್ಲಿ ಆರ್ಥಿಕ ಇಲಾಖೆ ವಿನಾಯಿತಿ ನೀಡಿ 2020ರ ಮಾರ್ಚ್‌ 12ರಂದು ಹೊರಡಿಸಿದ್ದ ಅಧಿಸೂಚನೆಯನ್ನೂ (ಸಂಖ್ಯೆ; ಆಇ 127 ವೆಚ್ಚ-12/2020) ಉಲ್ಲೇಖಿಸಲಾಗಿತ್ತು.

ಹಾಗೆಯೇ ಇದೇ ಅಧಿಸೂಚನೆಯನ್ನು ಉಲ್ಲೇಖಿಸಿ 2.94 ಕೋಟಿ ರು. ಮೊತ್ತದಲ್ಲಿ 2,00,000.00 ಪ್ರಮಾಣದ ಎನ್‌-95 ಮಾಸ್ಕ್‌ಗಳನ್ನು ಖರೀದಿಗೆ 2020ರ ಮಾರ್ಚ್‌ 14ರಂದು ಮೆಡಿ ಅರ್ಥ್ ಲೈಫ್‌ಕೇರ್‌ ಪ್ರೈವೈಟ್‌ ಲಿಮಿಟೆಡ್‌ಗೆ ಆದೇಶ ಹೊರಡಿಸಿತ್ತು.

ಅಲ್ಲದೆ 3 ಕಂಪನಿಗಳಿಗೂ ಒಂದೊಂದು ದರದಲ್ಲಿ ಸರಬರಾಜು ಆದೇಶ ನೀಡಿತ್ತು. ಎನ್‌-95 ಮಾಸ್ಕ್‌ ಗೆ 147 ದರದಲ್ಲಿ ಪ್ಲಾಸ್ಟಿ ಸರ್ಜಿ ಇಂಡಸ್ಟ್ರೀಸ್‌ಗೆ ಆದೇಶ ನೀಡಿರುವ ಅಧಿಕಾರಿಗಳು, ಎಟೆಕ್‌ ಟ್ರಾನ್‌ಗೆ 156.80 ರು.ದರ ಮತ್ತು ಮೆಡಿಅರ್ಥ್ ಲೈಫ್‌ಕೇರ್‌ ಪ್ರೈ ಲಿ.,ಗೆ 147 ರು. ದರವನ್ನು ನಮೂದಿಸಿತ್ತು.

ಮಾರ್ಚ್‌ 9, 14, 20ರಂದು ಹೊರಡಿಸಿದ್ದ ಸರಬರಾಜು ಆದೇಶದಲ್ಲಿ ನಮೂದಿಸಿರುವ ದರಗಳು ನೈಜ ದರಕ್ಕಿಂತಲೂ ಹೆಚ್ಚಿಗೆ ಇತ್ತು. ಮಾರ್ಚ್‌ ತಿಂಗಳಲ್ಲಿ ಎನ್‌-95 ಮಾಸ್ಕ್‌ಗೆ 70 ರು., ಪಿಪಿಇ ಕಿಟ್‌ಗೆ 200 ರು. ದರವಿತ್ತು. 4(ಜಿ) ವಿನಾಯಿತಿ ನೀಡಿ ಆರ್ಥಿಕ ಇಲಾಖೆ ಹೊರಡಿಸಿದ್ದ ಅಧಿಸೂಚನೆ ಪ್ರಕಾರ ಕಡಿಮೆ ದರ ನೀಡುವ ಸರಬರಾಜುದಾರರಿಂದ ಖರೀದಿಸಿದ್ದರೆ ಅಂದಾಜು 9.04 ಕೋಟಿ ರು.ಗಳನ್ನು ಉಳಿಸಬಹುದಾಗಿತ್ತು ಎಂಬುದು ಮೇಲ್ನೋಟಕ್ಕೆ ಕಂಡು ಬಂದಿತ್ತು.

ಕಡಿಮೆ ದರ ನೀಡುವ ಸರಬರಾಜುದಾರರಿಂದ ಕೆಎಸ್‌ಡಿಎಲ್‌ಡಬ್ಲ್ಯೂಎಸ್‌ ಮೂಲಕ ಅವಶ್ಯಕ ಔಷಧ ಮತ್ತು ಉಪಕರಣಗಳನ್ನು 13,35,29,180 ಮತ್ತು 21,83,20,440 ರು. ಸೇರಿದಂತೆ 35.18 ಕೋಟಿ ರು. ವೆಚ್ಚದಲ್ಲಿ ನೇರವಾಗಿ ಸಂಗ್ರಹಣೆ ಮಾಡಿಕೊಳ್ಳಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1999ರ ಕಲಂ 4(ಜಿ) ಅಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ (ಸಂಖ್ಯೆ;ಆಇ;183/ವೆಚ್ಚ/12/2020-ಸಂಖ್ಯೆ; ಆಇ 127 ವೆಚ್ಚ-12/2020) ವಿನಾಯಿತಿ ನೀಡಿದ್ದನ್ನು ಸ್ಮರಿಸಬಹುದು.

ಉಪಕರಣ ಮತ್ತು ಔಷಧ ಸಾಮಗ್ರಿಗಳನ್ನು ಕಡಿಮೆ ದರ ಮತ್ತು ಸಮಂಜಸ ದರದಲ್ಲಿ ಖರೀದಿಸುವ ಸಲುವಾಗಿ ಆರ್ಥಿಕ ಇಲಾಖೆ 4(ಜಿ) ವಿನಾಯಿತಿ ನೀಡಿ 2020ರ ಮಾರ್ಚ್‌ 9 ಮತ್ತು 12ರಂದು ಪ್ರತ್ಯೇಕವಾಗಿ ಅಧಿಸೂಚನೆ ಹೊರಡಿಸಿತ್ತು.


Leave a Reply

Your email address will not be published.