2.05 ಲಕ್ಷ ವಲಸಿಗರ ಪ್ರಯಾಣಕ್ಕೆ ಪೂರ್ವ ಸಿದ್ಧತೆ ನಡೆಸದ ಸರ್ಕಾರ ವಿಫಲವಾಯಿತೇ?

ಬೆಂಗಳೂರು; ಹೊರರಾಜ್ಯದ ವಲಸಿಗ ಕಾರ್ಮಿಕರನ್ನು ಅವರ ಸ್ವಂತ ಸ್ಥಳಗಳಿಗೆ ಕಳಿಸಲು ರಾಜ್ಯ ಸರ್ಕಾರ ಇನ್ನೂ ತಿಣುಕಾಡುತ್ತಲೇ ಇದೆ. ವಿಶೇಷ ರೈಲುಗಳ ಸಂಚಾರಕ್ಕೆ ಕ್ರಮ ಕೈಗೊಂಡಿದ್ದರೂ ವಲಸಿಗ ಕಾರ್ಮಿಕರನ್ನು ನಿಭಾಯಿಸುವಲ್ಲಿ ಸರ್ಕಾರ ಮತ್ತೆ ಮತ್ತೆ ವಿಫಲವಾಗುತ್ತಲೇ ಇದೆ. ಪೂರ್ವ ಸಿದ್ಧತೆ ನಡೆಸದಿರುವುದೇ ಇದಕ್ಕೆ ಮೂಲ ಕಾರಣ.


ಸ್ವಂತ ಸ್ಥಳಗಳಿಗೆ ತೆರಳುವ ಉದ್ದೇಶದಿಂದ ಸೇವಾ ಸಿಂಧುವಿನಲ್ಲಿ 2.05 ಲಕ್ಷ ಸಂಖ್ಯೆಯಲ್ಲಿ ವಲಸಿಗರು ನೋಂದಾಯಿಸಿಕೊಂಡಿದ್ದಾರೆ. ಆದರೆ 14 ವಿಶೇಷ ರೈಲುಗಳಷ್ಟೇ ಕಾರ್ಯಾಚರಣೆಗಿಳಿದಿದೆ. ಒಂದೊಂದು ರೈಲಿನಲ್ಲಿ ಗರಿಷ್ಠ 1,200 ಮಂದಿಗಷ್ಟೇ ಅವಕಾಶ ಕಲ್ಪಿಸಿದೆ. ಹೀಗಾಗಿ 2.05 ಲಕ್ಷ ಸಂಖ್ಯೆಯಲ್ಲಿ ನೋಂದಾಯಿಸಿಕೊಂಡಿರುವ ವಲಸಿಗರು ತಮ್ಮ ಸ್ವಂತ ಸ್ಥಳಗಳಿಗೆ ತೆರಳಲು ಇನ್ನೂ ಹಲವು ದಿನಗಳು ಕಾಲ ಕಾಯಲೇಬೇಕು.


ಪಶ್ಚಿಮ ಬಂಗಾಳ, ರಾಜಸ್ಥಾನ ಮತ್ತು ಒಡಿಶಾ ಸರ್ಕಾರದ ಅನುಮತಿ ನೀಡಿದರೂ ಅಂದಾಜು 1.87 ಲಕ್ಷ ಸಂಖ್ಯೆಯಲ್ಲಿರುವ ವಲಸಿಗ ಕಾರ್ಮಿಕರು ಸದ್ಯಕ್ಕೆ ತಮ್ಮ ಸ್ವಂತ ಸ್ಥಳಗಳಿಗೆ ತೆರಳುವುದು ಸದ್ಯಕ್ಕೆ ದೂರದ ಮಾತು. ವಲಸಿಗರ ಪ್ರಯಾಣದ ಉಸ್ತುವಾರಿಯನ್ನು ಸದ್ಯಕ್ಕೆ ಪೊಲೀಸ್‌ ಇಲಾಖೆ ನಿಭಾಯಿಸುತ್ತಿದೆ.


ಹೀಗಾಗಿ ವಲಸಿಗರನ್ನು ಕಳಿಸುವ ಬಗ್ಗೆ ಯಾವುದೇ ಕಾಲಮಿತಿ ನಿಗದಿಗೊಳಿಸಿಲ್ಲ. ನೋಂದಾಯಿಸಿಕೊಂಡಿರುವ ಕಾರ್ಮಿಕರನ್ನು ಪೊಲೀಸ್‌ ಇಲಾಖೆಯೇ ನೇರವಾಗಿ ಸಂಪರ್ಕಿಸಿ ಸ್ವಂತ ಸ್ಥಳಗಳಿಗೆ ತೆರಳಲು ಕ್ರಮ ವಹಿಸುತ್ತಿದೆ ಎಂದು ಕಾರ್ಮಿಕ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.


ರೈಲು ಸಂಚಾರವನ್ನು ಇದ್ದಕ್ಕಿದ್ದಂತೆ ರದ್ದುಗೊಳಿಸಿದ್ದರಿಂದಾಗಿ ವಲಸಿಗರು ಕರ್ನಾಟಕ ಸರ್ಕಾರದ ಮೇಲಿನ ವಿಶ್ವಾಸವನ್ನು ಕಳೆದುಕೊಂಡ ವಲಸಿಗರು, ಪ್ರಯಾಣದ ಅರ್ಜಿಗಳು ಅಂಗೀಕಾರ ಕೊಂಡಿದ್ದರೂ ಕಾಲ್ನಡಿಗೆಯಲ್ಲೇ ತೆರಳಿದ್ದಾರೆ. ಈ ಮಧ್ಯೆ ಸೇವಾ ಸಿಂಧು ಆಪ್‌ ಕೂಡ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ನೋಂದಾಯಿಸಿಕೊಳ್ಳಬೇಕಿದ್ದ ವಲಸಿಗರು ನಿರಾಶರಾಗಿದ್ದಾರೆ.


ಡಾಬಾವೊಂದರಲ್ಲಿ ಕ್ಲೀನರ್‌ ಆಗಿರುವ ವಿಕಾಸ್‌ ಕುಮಾರ್‌ ಯಾದವ್‌ ಎಂಬುವರು ಉತ್ತರ ಪ್ರದೇಶದ ಅಲಹಾಬಾದ್‌ಗೆ ಕಾಲ್ನಡಿಗೆಯಲ್ಲಿ ತೆರಳುವುದನ್ನು ಬಿಟ್ಟರೇ ಬೇರೆ ಯಾವ ಮಾರ್ಗವೂ ಇಲ್ಲ ಎನ್ನುತ್ತಾರೆ. ರೈಲು ಸೇವೆ ಯಾವಾಗ ಪುನರಾರಂಭಗೊಳ್ಳುತ್ತದೋ. ಹೀಗಾಗಿ ನನಗೆ ಬೇರೆ ಯಾವ ಮಾರ್ಗವೂ ಇಲ್ಲ. 1,700 ಕಿ ಮೀ.ಗಳ ದೂರದಲ್ಲಿರುವ ಊರನ್ನು ತಲುಪಲು 20-25 ದಿನಗಳು ಬೇಕಾಗಬಹುದು. ಮಧ್ಯದಲ್ಲಿ ಲಾರಿಗಳು ಸಿಕ್ಕರೆ ತಲುಪಬಹುದು. ಅಷ್ಟೊತ್ತಿಗೆ ನನಗೂ ಸಾಕಾಗಿರುತ್ತೆ, ಎನ್ನುತ್ತಾರೆ ವಿಕಾಸ್‌ಕುಮಾರ್ ಯಾದವ್‌.


ಮಾರ್ಬಲ್‌ ಉದ್ಯಮದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಬ್ಬರದು ಮತ್ತೊಂದು ಕಥೆ. 1,650 ಕಿ ಮೀ ದೂರವಿರುವ ರಾಜಸ್ಥಾನದ ಉದಯಪುರಕ್ಕೆ ತೆರಳಬೇಕಿದ್ದ ಈ ಕಾರ್ಮಿಕರನ್ನು ದುಡಿಸಿಕೊಂಡ ಮಾಲೀಕರು ಮೇ 7 ಪೂರ್ಣಗೊಂಡಿದ್ದರೂ 4 ತಿಂಗಳ ವೇತನವನ್ನೇ ನೀಡಿಲ್ಲ. ‘ಕೈಯಲ್ಲಿರುವ ಅಲ್ಪಸ್ವಲ್ಪ ಹಣವನ್ನು ದಾರಿ ಮಧ್ಯೆ ಬಳಸಿಕೊಂಡು ಊರು ತಲುಪಲು ನಿರ್ಧರಿಸಿದ್ದೇವೆ,’ ಎನ್ನುತ್ತಾರೆ ರಾಜಸ್ಥಾನದ ಮಾಂಗಿಲಾಲ್‌.


ಈ ಬೆಳವಣಿಗೆ ನಡುವೆ ವಲಸಿಗ ಕಾರ್ಮಿಕರ ಪ್ರಯಾಣದ ವಿಚಾರದಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಮಧ್ಯ ಪ್ರವೇಶಿಸಿರುವ ಕರ್ನಾಟಕ ಹೈಕೋರ್ಟ್‌ ವಲಸಿಗರ ಪ್ರಯಾಣಕ್ಕೆ ತಕ್ಷಣವೇ ನೀತಿ ರೂಪಿಸಬೇಕು ಎಂದು ಕರ್ನಾಟಕ ಮತ್ತು ನೆರೆಯ ರಾಜ್ಯಗಳಿಗೆ ಸೂಚಿಸಿದೆ. ಬೆಂಗಳೂರಿನಲ್ಲಿರುವ ವಿವಿಧ ನಿಲ್ದಾಣಗಳಿಂದ ವಿಶೇಷ ರೈಲುಗಳ ಸಂಚಾರಕ್ಕೆ ಅವಕಾಶ ಮಾಡಿಕೊಡುವ ಬಗ್ಗೆಯೂ ಹೈಕೋರ್ಟ್‌ ಸಲಹೆ ನೀಡಿದೆ.


ಅಲ್ಲದೆ, ಕಟ್ಟಡ ನಿರ್ಮಾಣ ಕಂಪನಿ ಮತ್ತು ಬಿಲ್ಡರ್‌ಗಳು ವಲಸಿಗ ಕಾರ್ಮಿಕರನ್ನು ಯಾವುದೇ ತರಹದಲ್ಲಿಯೂ ಶೋಷಣೆ ನಡೆಸದಂತೆ ಎಚ್ಚರಿಕೆ ವಹಿಸಬೇಕು ಎಂದು ಸರ್ಕಾರದ ಗಮನ ಸೆಳೆದಿರುವ ಹೈಕೋರ್ಟ್‌ ಪ್ರಕರಣದ ವಿಚಾರಣೆಯನ್ನು ಮೇ 12ಕ್ಕೆ ಮುಂದೂಡಿದೆ.


ಈ ಪ್ರಕರಣದಲ್ಲಿ ಮಧ್ಯಂತರ ಅರ್ಜಿ ಹಾಕಿರುವ ಎಐಸಿಸಿಟಿಯು ಸಂಘಟನೆ, ವಿಶೇಷ ರೈಲುಗಳ ಸಂಚಾರವನ್ನು ರದ್ದುಗೊಳಿಸಿರುವ ಸರ್ಕಾರದ ನಿರ್ಧಾರದ ಹಿಂದೆ ರಿಯಲ್‌ ಎಸ್ಟೇಟ್‌ ಕಂಪನಿಗಳ ಪ್ರಭಾವವಿದೆ ಎಂದು ವಾದಿಸಿದೆ. ವಲಸಿಗ ಕಾರ್ಮಿಕರು ತಮ್ಮ ಸ್ವಂತ ಸ್ಥಳಗಳಿಗೆ ಸುರಕ್ಷಿತವಾಗಿ ತೆರಳಲು ಅವಕಾಶ ಮಾಡಿಕೊಡಲು ರಾಜ್ಯ ಸರ್ಕಾರಕ್ಕೆ ಸೂಚಿಸಬೇಕು ಎಂದು ಅರ್ಜಿಯಲ್ಲಿ ಕೋರಿದೆ.

the fil favicon

SUPPORT THE FILE

Latest News

Related Posts