Bank Information

PARADARSHAK MEDIA FOUNDATION, Account Number: 40107584055, SBI,Mahalalakshmipuram branch IFSC Code : SBIN0017347 Bengaluru

ಅಮಾನತಾಗಿರುವ ಎಪಿಪಿಗಳ ಬೆನ್ನಿಗೆ ನಿಂತ ಅಧಿಕಾರಿಗಳ ಸಂಘ ಪ್ರಭಾವ ಬೀರಲಿದೆಯೇ?

ಬೆಂಗಳೂರು; ಮೌಲ್ಯಮಾಪಕರು ನೈಜವಾಗಿ ನೀಡಿದ್ದ ಅಂಕಗಳಿಗೆ ಬದಲಾಗಿ ಹೆಚ್ಚುವರಿ ಅಂಕಗಳನ್ನು ನೀಡಿ ಅಂಕಗಳನ್ನು ತಿದ್ದಿರುವುದು ಸೇರಿದಂತೆ ವಿವಿಧ ಗಂಭೀರ ಸ್ವರೂಪದ ಅಕ್ರಮಗಳ ಆರೋಪಿಗಳಾಗಿರುವ 60 ಸಹಾಯಕ ಪಬ್ಲಿಕ್‌ ಪ್ರಾಸಿಕ್ಯೂಟರ್‌ಗಳ ಪರವಾಗಿ ಕರ್ನಾಟಕ ರಾಜ್ಯ ಅಭಿಯೋಜನಾಧಿಕಾರಿಗಳ ಸಂಘ ವಕಾಲತ್ತು ವಹಿಸಿದೆ.


60 ಎಪಿಪಿಗಳ ಅಮಾನತು ಆದೇಶ ಹೊರಬಿದ್ದು ಇನ್ನೂ 2 ತಿಂಗಳು ಪೂರ್ಣಗೊಂಡಿಲ್ಲ. ಇದರ ಬೆನ್ನಲ್ಲೇ ಅಭಿಯೋಜನಾ ಅಧಿಕಾರಿಗಳ ಸಂಘ ಸರ್ಕಾರಕ್ಕೆ ಪತ್ರ ಬರೆದಿರುವುದು ವಕೀಲರ ಸಮೂಹದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿದೆ.
ಈ ಕುರಿತು ಮುಖ್ಯಮಂತ್ರಿ, ಗೃಹ ಸಚಿವರು, ಒಳಾಡಳಿತ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಅಭಿಯೋಗ, ಸರ್ಕಾರಿ ವ್ಯಾಜ್ಯಗಳ ಇಲಾಖೆ ನಿರ್ದೇಶಕರಿಗೆ ಸಂಘದ ಅಧ್ಯಕ್ಷ ಎಸ್‌ ಬಿ ಹಾವೇರಿ ಅವರು 2020ರ ಮೇ 13ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

‘ರಾಜ್ಯದ ವಿವಿಧೆಡೆ ಅಭಿಯೋಜಕರ ಕೊರತೆ ಸಾಕಷ್ಟಿದೆ. ಈ ಹಂತದಲ್ಲಿ ಅವರನ್ನು ನಿಲಂಬನೆಯಲ್ಲಿ ಇರಿಸಿರುವ ಪ್ರಯುಕ್ತ ಸರ್ಕಾರದ ಖಜಾನೆಗೆ ಹೆಚ್ಚಿನ ಭಾರ ಬೀಳುವುದಲ್ಲದೆ ನ್ಯಾಯಾಲಯದ ಕಾರ್ಯಕಲಾಪಗಳಿಗೆ ತೊಂದರೆ ಉಂಟಾಗುತ್ತದೆ. ಹೀಗಾಗಿ ವಿಚಾರಣೆಯನ್ನು ಬಾಕಿ ಇರಿಸಿ ಪ್ರಕರಣದಲ್ಲಿ ವಿಚಾರಣೆ ಮುಕ್ತಾಯವಾಗುವವರೆಗೂ ಸರ್ಕಾರ ಮಾಡಿರುವ ನಿಲಂಬನೆ ಆದೇಶವನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ಅಭಿಯೋಜಕರ ಕುಟುಂಬದ ಹಿತದೃಷ್ಟಿಯಿಂದ ತೆರವುಗೊಳಿಸಬೇಕು,’ ಎಂದು ಮನವಿ ಮಾಡಿದ್ದಾರೆ.

ಇದಲ್ಲದೆ ‘ಪ್ರಸ್ತುತ ಅವರನ್ನು ನಿಲಂಬನೆಯಲ್ಲಿ ಇರಿಸಿರುವುದರಿಂದ ಅವರ ವೈಯಕ್ತಿಕ ಬದುಕಿಗೆ ಹಾನಿಯಾಗಿರುವುದಲ್ಲದೆ ಸಾರ್ವಜನಿಕರು ನೋಡುವ ದೃಷ್ಟಿಕೋನ ಬದಲಾಗಿ 60 ಮಂದಿ ಅಧಿಕಾರಿಗಳು ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ,’ ಎಂದು ಈ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಿದ್ದಾರೆ.


ಕರ್ನಾಟಕ ರಾಜ್ಯ ಅಭಿಯೋಜನಾಧಿಕಾರಿಗಳ ಸಂಘ ಬರೆದಿರುವ ಪತ್ರಕ್ಕೆ ವಕೀಲರ ಸಮೂಹದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಗಂಭೀರ ಸ್ವರೂಪದ ಅಕ್ರಮಗಳಲ್ಲಿ ಭಾಗಿ ಆಗಿರುವುದು ಲೋಕಾಯುಕ್ತ ಪೊಲೀಸರ ತನಿಖೆಯಿಂದ ದೃಢಪಟ್ಟಿದೆ. ಆರೋಪಿಗಳ ವಿರುದ್ಧ ನ್ಯಾಯಾಲಯದಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಕೆಯಾಗಿದೆ.


ಇದನ್ನಾಧರಿಸಿ ಒಳಾಡಳಿತ ಇಲಾಖೆಯೂ ‘ಅಕ್ರಮದಲ್ಲಿ ಭಾಗಿ ಆಗಿದ್ದ ಎಲ್ಲಾ ಆರೋಪಿತರ ವಿರುದ್ಧದ ಆರೋಪಗಳು ಮೇಲ್ನೋಟಕ್ಕೆ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧದ ಆರೋಪಗಳನ್ನು ಸಮರ್ಥಿಸುವ ಮೇಲ್ನೋಟದ ಸಾಕ್ಷ್ಯಗಳು ಇದೆ ಎಂಬುದನ್ನು ಮನದಟ್ಟಾಗಿರುವುದರಿಂದ ಇವರನ್ನು ಸೇವೆಯಲ್ಲಿ ಮುಂದುವರೆಸುವುದು ಸಮಂಜಸವಲ್ಲವೆಂದು ಸರ್ಕಾರವು ಭಾವಿಸಿದೆ,’ ಎಂದು 2020ರ ಮಾರ್ಚ್‌ 20ರಂದು ಒಳಾಡಳಿತ ಇಲಾಖೆ ಹೊರಡಿಸಿದ್ದ ಆದೇಶದಲ್ಲಿ ಉಲ್ಲೇಖಿಸಿತ್ತು.


2014ರಲ್ಲಿ 197 ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳ ನೇಮಕದಲ್ಲಿ ನಡೆದಿದೆ ಎನ್ನಲಾದ ಅಕ್ರಮದಲ್ಲಿ ದೋಷಾರೋಪ ಪಟ್ಟಿಯಲ್ಲಿ ಹೆಸರಿಸಲಾಗಿರುವ 61 ಎಪಿಪಿಗಳನ್ನು ಒಮ್ಮೆಲೆ ರಾಜ್ಯ ಸರ್ಕಾರ ಅಮಾನುತಗೊಳಿಸಿತ್ತು.
ಉತ್ತರಪತ್ರಿಕೆಗಳಲ್ಲಿ ಮೌಲ್ಯಮಾಪಕರು ನೈಜವಾಗಿ ನೀಡಿದ್ದ ಅಂಕಗಳಿಗೆ ಬದಲಾಗಿ ಹೆಚ್ಚುವರಿ ಅಂಕಗಳನ್ನು ನೀಡಿ ಅಂಕಗಳನ್ನು ತಿದ್ದುವ ಮೂಲಕ ಹಾಗೂ ಮೌಲ್ಯಮಾಪಕರು ಮೌಲ್ಯಮಾಪನ ಮಾಡದೇ ಇದ್ದರೂ ಕೆಲವು ಉತ್ತರಪತ್ರಿಕೆಗಳಲ್ಲಿ ಅಭ್ಯರ್ಥಿಗಳಿಂದ ಬದಲಿ ಉತ್ತರಗಳನ್ನು ಬರೆಯಿಸಿ ನಕಲು ಮೌಲ್ಯಮಾಪನ ಸೇರಿದಂತೆ ಇನ್ನಿತರೆ ಅಕ್ರಮಗಳು ನಡೆದಿದ್ದವು.


ನ್ಯಾಯಾಂಗ ಇಲಾಖೆ ನಾಲ್ಕು ವರ್ಷಗಳ ಹಿಂದೆ 191 ಎಪಿಪಿ ಮತ್ತು ಎಜಿಪಿಗಳ ನೇಮಕಕ್ಕೆ ಪರೀಕ್ಷೆ ನಡೆಸಿತ್ತು. ‍ ಪರೀಕ್ಷೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ ಎಂಬ ದೂರುಗಳು ಕೇಳಿ ಬಂದಿತ್ತು. ಈ ಸಂಬಂಧ ತೀರ್ಥಹಳ್ಳಿಯ ವಕೀಲ ಎಚ್.ಟಿ.ರವಿ ಅವರು ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಅರ್ಜಿದಾರರ ಪರ ಮತ್ತೊಬ್ಬ ವಕೀಲ ರವೀಂದ್ರ ಅವರು ವಾದಿಸಿದ್ದರು.


ಅಮಾನತಾದವರ ಹೆಸರಿನ ಪಟ್ಟಿ


ಮಧುಗಿರಿ ನ್ಯಾಯಾಲಯದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರಾಗಿ ಕಾರ್ಯನಿರ್ವಹಿಸುತ್ತಿರುವ ಮಹ್ಮದ್‌ ಅಜ್ಮಲ್‌ ಪಾಶ, ದೊಡ್ಡಬಳ್ಳಾಪುರ ನ್ಯಾಯಾಲಯದ ಸಿ ಜೆ ಸುಬ್ರಹ್ಮಣ್ಯ, ಶ್ರೀರಂಗಪಟ್ಟಣ ನ್ಯಾಯಾಲಯದ ಶಿವನಂಜಪ್ಪ, ಧಾರವಾಡ ನ್ಯಾಯಾಲಯದ ಗೀತಾ ಸಿದ್ದರಾಮಪ್ಪ ಅಸೂಟಿ, ಕನಕಪುರ ನ್ಯಾಯಾಲಯದ ತ್ರಿಶೂಲ ಸುಭಾಷ್‌ ಚಂದ್ರ ಜೈನ್‌, ಶಿಡ್ಲಘಟ್ಟ ನ್ಯಾಯಾಲಯದ ಕುಮುದಿನಿ, ಹಾಸನ ನ್ಯಾಯಾಲಯದ ಮಾಯಣ್ಣಗೌಡ, ಚಿತ್ರದುರ್ಗ ನ್ಯಾಯಾಲಯದ ವೀರೇಂದ್ರಪಾಟೀಲ್‌ ಬಿ, ದೇವನಹಳ್ಳಿಯ ಎ ಟಿ ರೂಪಾ, ಕುಂದಾಪುರ ನ್ಯಾಯಾಲಯದ ಸುಮಂಗಲಾ ಚಂದ್ರಶೇಖರ ನಾಯ್ಕ, ಹುಬ್ಬಳ್ಳಿ ನ್ಯಾಯಾಲಯದ ರವೀಂದ್ರಸಾ, ಮಂಗಳೂರು ನ್ಯಾಯಾಲಯದ ಚೇತನ್‌ ತುಕಾರಾಮ ನಾಯ್ಕ, ಚಿಕ್ಕಬಳ್ಳಾಪುರ ನ್ಯಾಯಾಲಯದ ಗುರುಸ್ವಾಮಿ, ಚಿತ್ತಾಪುರ ನ್ಯಾಯಾಲಯದ ಸಾಹೇಬಗೌಡ, ಆನೇಕಲ್‌ ನ್ಯಾಯಾಲಯದ ಎಸ್‌ ಎನ್‌ ವೆಂಕಟೇಶ್‌, ಚಳ್ಳಕೆರೆ ನ್ಯಾಯಾಲಯದ ಎನ್‌ ಕುಮಾರ್‌, ಹುಣಸೂರು ನ್ಯಾಯಾಲಯದ ರೇಖಾ, ಚನ್ನರಾಯಪಟ್ಟಣದ ಬಿ ವಿ ಜ್ಞಾನಮೂರ್ತಿ, ಹರೀಶ್‌, ಹೊಸಕೋಟೆ ನ್ಯಾಯಾಲಯದ ಎಂ ಎಲ್‌ ಚಂದ್ರಾರೆಡ್ಡಿ, ಸಿ ಹೃಷಿಕೇಶ, ಮಾಲೂರು ನ್ಯಾಯಾಲಯದ ರೂಪ, ತುಮಕೂರು ನ್ಯಾಯಾಲಯದ ಕೆ ಎಂ ರಘು, ಮಾಗಡಿ ನ್ಯಾಯಾಲಯದ ಎಚ್‌ ಆರ್‌ ಯಶೋಧ, ಬೆಂಗಳೂರು 6ನೇ ಮೆಟ್ರೋಪಾಲಿಟಿನ್‌ ನ್ಯಾಯಾಲಯದ ಪುಷ್ಪಾವತಿ, ಅಥಣಿ ನ್ಯಾಯಾಲಯದ ಬಸಲಿಂಗಪ್ಪಾ ಬಾಳಗೊಂಡ ಬೋರ್‌ಗಲ್‌, ಮೂಡಲಗಿ ನ್ಯಾಯಾಲಯದ ಶಿಲ್ಪಾ ಜೋಷಿ, ಬೀಳಗಿ ನ್ಯಾಯಾಲಯದ ಸರೋಜಿನಿ ವೀರಪ್ಪ ಬಟಕುರ್ಕಿ, ಬಂಗಾರಪೇಟೆ ನ್ಯಾಯಾಲಯದ ಮೊಹಮದ್‌ ಖಾಜಾ, ರಾಮನಗರ ನ್ಯಾಯಾಲಯದ ಎಂ ಕೆ ವಿಜಯಕುಮಾರ್‌, ಮೈಸೂರು ನ್ಯಾಯಾಲಯದ ಎಚ್‌ ಸಿ ರವೀಂದ್ರ, ತಿಪಟೂರು ನ್ಯಾಯಾಲಯದ ಶಿವಮ್ಮ, ಅರಕಲಗೂಡು ನ್ಯಾಯಾಲಯದ ಎಸ್‌ ಎನ್‌ ಮಮತ, ಶಿವಮೊಗ್ಗ ನ್ಯಾಯಾಲಯದ ಧೀರೇಂದ್ರ, ಬೆಳಗಾವಿ ನ್ಯಾಯಾಲಯದ ಧನಪಾಲ್‌ ದೇವಪ್ಪ ಹಾರೋಗೇರಿ, ಹುಬ್ಬಳ್ಳಿ ನ್ಯಾಯಾಲಯದ ವಿನಾಯಕ ಎಸ್‌ ಪಾಟೀಲ್‌, ಬದಾಮಿ ನ್ಯಾಯಾಲಯದ ಸಂಗನಗೌಡ ಪ.ನಾಯಕ, ಚನ್ನಪಟ್ಟಣ ನ್ಯಾಯಾಲಯದ ಎಲ್‌ ರೂಪ, ಬೆಂಗಳೂರು 4ನೇ ಮೆಟ್ರೋಪಾಲಿಟಿನ್‌ ನ್ಯಾಯಾಲಯದ ಟಿ ಎಂ ವಿಮಲ, ಗುಂಡ್ಲುಪೇಟೆ ನ್ಯಾಯಾಲಯದ ಎ ಎನ್‌ ರಾಜಣ್ಣ, ಗುಬ್ಬಿ ನ್ಯಾಯಾಲಯದ ಟಿ ರಾಖಿ, ಶಿಕಾರಿಪುರ ನ್ಯಾಯಾಲಯದ ದಾದಾಪೀರ್‌ ಶಬ್ಬೀರ್‌ ಅಹ್ಮದ್‌, ಕಲಬುರಗಿ ನ್ಯಾಯಾಲಯದ ಛಾಯಾದೇವಿ, ನಾಗಮಂಗಲ ನ್ಯಾಯಾಲಯದ ಜ್ಞಾನೇಂದ್ರ, ಚಿಂತಾಮಣಿ ನ್ಯಾಯಾಲಯದ ವೇಣುಕುಮಾರ್‌, ಕೊರಟಗೆರೆ ನ್ಯಾಯಾಲಯದ ಶೇಖ್‌ ಮಹಮದ್‌, ಗಂಗಾವತಿ ನ್ಯಾಯಾಲಯದ ವಿಜಯಚಂದ್ರ ಪ್ರಭು ಬಿ, ಜಮಖಂಡಿ ನ್ಯಾಯಾಲಯದ ಭರತ್‌ ಬುಜಬಲಿ ಶಿರಹಟ್ಟಿ, ಬಂಗಾರಪೇಟೆ ನ್ಯಾಯಾಲಯದ ಶ್ರೀನಿವಾಸ ಎಂ, ಚಳ್ಳಕೆರೆ ನ್ಯಾಯಾಲಯದ ಲಿಂಗೇಶ್ವರ ಜೆ, ಮಧುಗಿರಿ ನ್ಯಾಯಾಲಯದ ಮೋಹನ ಬಿ, ದೊಡ್ಡಬಳ್ಳಾಪುರ ನ್ಯಾಯಾಲಯದ ಕೆ ಆರ್‌ ನಾಗಭೂಷಣ, ಬೀಳಗಿ ನ್ಯಾಯಾಲಯದ ವಿಜಯಲಕ್ಷ್ಮಿ ಅಥರ್ಗ, ಆನೇಕಲ್‌ ನ್ಯಾಯಾಲಯದ ವೈ ಎಸ್‌ ಮೋಹನ್‌, ಕನಕಪುರ ನ್ಯಾಯಾಲಯದ ಬಿ ನಾರಾಯಣಸ್ವಾಮಿ, ಬೈಲಹೊಂಗಲ ನ್ಯಾಯಾಲಯದ ರಂಜನಾ ಸುರೇಶ್‌ ಪಾಟೀಲ್‌ ಅವರು ಅಮಾನತುಗೊಂಡ ಎಪಿಪಿಗಳಾಗಿದ್ದಾರೆ.


ಈ ಅಕ್ರಮಗಳನ್ನು ಪತ್ತೆ ಹಚ್ಚಿದ್ದ ತೀರ್ಥಹಳ್ಳಿ ಮೂಲದ ಎಚ್‌ ಟಿ ರವಿ 23ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯಕ್ಕೆ ದಾಖಲೆಗಳ ಸಮೇತ ದೂರು ಸಲ್ಲಿಸಿದ್ದರು. ಈ ದೂರನ್ನಾಧರಿಸಿ ಹೆಚ್ಚಿನ ತನಿಖೆ ನಡೆಸಲು ಲೋಕಾಯುಕ್ತ ಸಂಸ್ಥೆಗೆ ಸೆಷನ್ಸ್‌ ನ್ಯಾಯಾಲಯ ಸೂಚಿಸಿತ್ತು. ಅದರಂತೆ ಲೋಕಾಯುಕ್ತ ಡಿವೈಎಸ್ಪಿ ವೆಂಕಟಸ್ವಾಮಿ ನೇತೃತ್ವದ ತಂಡ ತನಿಖೆ ನಡೆಸಿತ್ತಲ್ಲದೆ ಅಕ್ರಮಗಳನ್ನು ದಾಖಲೆಗಳ ಮೂಲಕ ದೃಢಪಡಿಸಿತ್ತು.


ಆದರೆ ಆರೋಪಿಗಳ ವಿರುದ್ಧ ಹಿಂದಿನ ಕಾಂಗ್ರೆಸ್‌ ಮತ್ತು ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿಕೂಟ ಸರ್ಕಾರ ಯಾವುದೇ ಕ್ರಮವನ್ನು ಕೈಗೊಂಡಿರಲಿಲ್ಲ. ಬದಲಿಗೆ ಆ ಎಲ್ಲಾ ಆರೋಪಿಗಳ ರಕ್ಷಣೆಗೆ ನಿಂತಿತ್ತು. ಆ ಸಂದರ್ಭದಲ್ಲಿ ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್. ಹಿರೇಮಠ ಮತ್ತು ಸುಧಾ ಕಟ್ವಾ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಮುಖ್ಯ ನ್ಯಾಯಮೂರ್ತಿ ಅಭಯ್‌.ಎಸ್. ಓಕಾ ಮತ್ತು ನ್ಯಾಯಮೂರ್ತಿ ಎಚ್.ಟಿ.ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಇದರ ವಿಚಾರಣೆ ನಡೆಸಿತ್ತು.

Share:

1 Comment

  • P.narasappa., May 14, 2020 @ 1:37 pm Reply

    When this highly educated people are excused of their proved guilty the confidence of people over the administration of justice will loose system is corrupted in all corner of society how can such apps protect the law of justice let them appears one more exam remove them from service in the interest of justice what about the failed candidates life and their family.?

Leave a Reply

Your email address will not be published. Required fields are marked *