ಇನ್ಸ್‌ಪೆಕ್ಟರ್‌ ವಿರುದ್ಧ ಅಭಿಯೋಜನಾ ಪ್ರಸ್ತಾವನೆ ತಿರಸ್ಕೃತ; ಒಳ ವ್ಯವಹಾರ?

ಬೆಂಗಳೂರು; ಭ್ರಷ್ಟಾಚಾರ ನಿರ್ಮೂಲನಾ ಕಾಯ್ದೆ 1988ರ ಅಡಿಯಲ್ಲಿ ಗಂಭೀರವಾದ ಅಪರಾಧ ಎಸಗಿರುವ ಆರೋಪ ದೃಢಪಟ್ಟಿದ್ದರೂ ಆರೋಪಿ ಪೊಲೀಸ್‌ ಅಧಿಕಾರಿ ಜೆ ಲಕ್ಷ್ಮಣ್‌ ವಿರುದ್ಧ ಅಭಿಯೋಜನಾ ಮಂಜೂರಾತಿ ಪ್ರಸ್ತಾವನೆಯನ್ನು ಒಳಾಡಳಿತ ಇಲಾಖೆ ತಿರಸ್ಕರಿಸಿದೆ.


15 ವರ್ಷದ ಹಿಂದಿನ ಲೋಕಾಯುಕ್ತ ಪ್ರಕರಣದಲ್ಲಿ ಮೈಸೂರು ಜಿಲ್ಲಾ ಸೆಷನ್ಸ್‌ ನ್ಯಾಯಾಲಯ ನೀಡಿದ್ದ ತೀರ್ಪಿನ ನೆರಳಲ್ಲಿ ಆರೋಪಿ ಪೊಲೀಸ್‌ ಅಧಿಕಾರಿ ವಿರುದ್ಧ ಅಭಿಯೋಜನಾ ಮಂಜೂರಾತಿ ನೀಡಲು ನಿರಾಕರಿಸಿರುವ ಒಳಾಡಳಿತ ಇಲಾಖೆ, ಎಸಿಬಿ ಅಧಿಕಾರಿಗಳ ಪ್ರಸ್ತಾವನೆಯನ್ನು ತಳ್ಳಿ ಹಾಕಿ 2020ರ ಏಪ್ರಿಲ್‌ 4ರಂದು ಆದೇಶ ಹೊರಡಿಸಿದೆ.


ಇದಕ್ಕೆ ಒಳಾಡಳಿತ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಅನುಮೋದಿಸಿದ್ದಾರೆ ಎಂದು ಗೊತ್ತಾಗಿದೆ. ಈ ಆದೇಶದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

‘ಈ ಪ್ರಕರಣದಲ್ಲಿ ಒಟ್ಟಾರೆಯಾಗಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಹುದ್ದೆಯು ಕ್ಲಾಸ್‌ -2 ಪತ್ರಾಂಕಿತ ಹುದ್ದೆಯಾಗಿರುವುದರಿಂದ ಡಿಜಿ ಮತ್ತು ಐಜಿಪಿ ಅವರು ಅಭಿಯೋಜನಾ ಮಂಜೂರಾತಿ ನೀಡಲು ಸಕ್ಷಮ ಪ್ರಾಧಿಕಾರವಲ್ಲ. ಸರ್ಕಾರವೇ ಮಂಜೂರಾತಿ ನೀಡಬೇಕಾಗಿರುತ್ತದೆಂದು ಅಭಿಪ್ರಾಯಪಟ್ಟಿರುವುದು ನ್ಯಾಯಾಲಯದ ಆದೇಶದ ಭಾಗವಾಗಿರುವುದರಿಂದ ಸರ್ಕಾರವೇ ಸಕ್ಷಮ ಪ್ರಾಧಿಕಾರವೆಂಬುದು ಜಾರಿಯಲ್ಲಿರುತ್ತದೆ,’ ಎಂದು ಒಳಾಡಳಿತ ಇಲಾಖೆ ಅಭಿಪ್ರಾಯ ನೀಡಿದೆ.

ಸದ್ಯ ಬೆಂಗಳೂರು ನಗರದ ಥಣಿಸಂದ್ರದಲ್ಲಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜೆ ಲಕ್ಷ್ಮಣ ಎಂಬುವರು ಬಳ್ಳಾರಿ ಸಂಚಾರಿ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದ ಪ್ರಕರಣದಲ್ಲಿ ಭಾಗಿ ಅಗಿದ್ದರು ಎಂದು ಎಸಿಬಿ ಪೊಲೀಸರು ತನಿಖೆ ವೇಳೆಯಲ್ಲಿ ಸಾಬೀತುಪಡಿಸಿದ್ದರು.


ಇವರ ವಿರುದ್ಧ ಎಸಿಬಿ ಅಧಿಕಾರಿಗಳು ಅಂತಿಮ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರಲ್ಲದೆ, ಕಲಂ 7, 13(1)(ಡಿ) ಸಹ ಕಲಂಕ 13(2)ರ ಭ್ರಷ್ಟಾಚಾರ ನಿರ್ಮೂಲನಾ ಕಾಯ್ದೆ ಅಡಿಯಲ್ಲಿ ಗಂಭೀರವಾದ ಅಪರಾಧ ಎಸಗಿರುವುದನ್ನು ತನಿಖೆ ವೇಳೆಯಲ್ಲಿ ದೃಢಪಟ್ಟಿತ್ತು.

ಹಣಕ್ಕಾಗಿ ಬೇಡಿಕೆ ಇಟ್ಟಿರುವುದು ಹಾಗೂ ಹಣವನ್ನು ಖುದ್ದು ಸ್ವೀಕರಿಸಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವುದಿಲ್ಲ ಎಂಬ ಕಾರಣ ನೀಡಿರುವ ಒಳಾಡಳಿತ ಇಲಾಖೆ, ಆರೋಪಿ ಪೊಲೀಸ್‌ ಅಧಿಕಾರಿ ವಿರುದ್ಧ ಎಸಿಬಿ ನಡೆಸಿದ್ದ ಅಂತಿಮ ತನಿಖಾ ವರದಿಯನ್ನೇ ಕಸದ ಬುಟ್ಟಿಗೆ ತಳ್ಳಿದೆ. ಒಳಾಡಳಿತ ಇಲಾಖೆಯ ಈ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ.


ಪ್ರಕರಣದ ವಿವರ


ಲಾರಿ ಚಾಲಕ ಪರಮೇಶ್ವರ ವಾಗ್ಮೋಡೆ ಎಂಬುವರು (ಎಂ ಎಚ್‌ 09, ಸಿಎ 0132)ರ ಲಾರಿಯಲ್ಲಿ ಫ್ಯಾಬ್ರಿಕೇಷನ್‌ ಸಂಬಂಧಿಸಿದ ಪರಿಕರಗಳನ್ನು ಲಾರಿಯಲ್ಲಿ ತುಂಬಿಸಿಕೊಂಡು ಆಂಧ್ರ ಪ್ರದೇಶದ ಚಿತ್ತೂರಿಗೆ 2018ರ ಫೆ.21ರಂದು ಹೋಗುತ್ತಿದ್ದ ಸಂದರ್ಭದಲ್ಲಿ ಬಳ್ಳಾರಿಯ ರಾಯಲ್‌ ಸರ್ಕಲ್‌ ಬಳಿ ಮೂವರು ಸಂಚಾರಿ ಪೊಲೀಸರು ಲಾರಿಯನ್ನು ನಿಲ್ಲಿಸಿದ್ದರು.


ಈ ವೇಳೆ ಸಿವಿಲ್‌ ಡ್ರೆಸ್‌ನಲ್ಲಿದ್ದ ಮೂವರು ಪೊಲೀಸರು ಲಾರಿ ಮಾಲೀಕರ ಹತ್ತಿರ ಮಾತನಾಡಿ 8,000 ರು. ಹಣ ಕೇಳುತ್ತಿದ್ದಾರೆ. ಅದರಲ್ಲಿ 1,000 ರು. ನೀನು ಇಟ್ಟುಕೋ ತನಗೆ 1,000 ರು. ಕೊಡು ಎಂದು ಲಂಚಕ್ಕಾಗಿ ಬೇಡಿಕೆ ಇಟ್ಟ ಸಂಭಾಷಣೆಯನ್ನು ಪರಮೇಶ್ವರ ವಾಗ್ಮೋಡೆ ಧ್ವನಿ ಮುದ್ರಣ ಮಾಡಿಕೊಂಡು ಎಸಿಬಿಗೆ ದೂರು ಸಲ್ಲಿಸಿದ್ದರು.


ಗಾಡಿ ಕೃಷ್ಣಪ್ಪ(ಸಿಪಿಸಿ 303) ಎಂಬುವರು ಕೀ ಮತ್ತು ದಾಖಲಾತಿಗಳನ್ನು ನೀಡಲು 6,700 ರು.ಲಂಚ ಹಣವನ್ನು ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದರು. ಈ ಲಂಚ ಪ್ರಕರಣದಲ್ಲಿ ಬಳ್ಳಾರಿ ಸಂಚಾರಿ ಠಾಣೆಯ ಜೆ ಲಕ್ಷ್ಮಣ ಅವರು ಭಾಗಿಯಾಗಿದ್ದಾರೆ ಎಂದು ಎಸಿಬಿ ಅಧಿಕಾರಿಗಳು ವಿಚಾರಣೆ ವೇಳೆಯಲ್ಲಿ ಸಾಬೀತು ಮಾಡಿದ್ದರು. ಆರೋಪಿ ಪೊಲೀಸ್‌ ಗಾಡಿಕೃಷ್ಣಪ್ಪ ಎಂಬುವರು ಈ ಕುರಿತು ನೀಡಿದ್ದ ಸ್ವ ಇಚ್ಛಾ ಹೇಳಿಕೆಯಲ್ಲಿಯೂ ಜೆ ಲಕ್ಷ್ಮಣ್‌ ಅವರ ಪಾತ್ರ ಇತ್ತು ಎಂಬುದು ಒಳಾಡಳಿತ ಇಲಾಖೆಯ ನಡವಳಿಯಿಂದ ತಿಳಿದು ಬಂದಿದೆ.


ಅಭಿಯೋಜನೆಗೆ ಮಂಜೂರಾತಿ ನೀಡುವ ಸಂಬಂಧ ಒಳಾಡಳಿತ ಇಲಾಖೆ, ಮಾಜಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಎ ಮಂಜುನಾಥ್‌ ಅವರ ವಿರುದ್ಧದ ಲೋಕಾಯುಕ್ತ ಪ್ರಕರಣದಲ್ಲಿ ಮೈಸೂರು ಜಿಲ್ಲಾ ಸೆಷನ್ಸ್‌ ನ್ಯಾಯಾಲಯ ನೀಡಿದ್ದ ತೀರ್ಪನ್ನು (ಎಸ್‌ ಸಿ ಸಂ; 22/2005) ಉಲ್ಲೇಖಿಸಿ ಜೆ ಲಕ್ಷ್ಮಣ್‌ ಅವರ ವಿರುದ್ಧ ಅಭಿಯೋಜನಾ ಮಂಜೂರಾತಿಯನ್ನು ತಿರಸ್ಕರಿಸಿರುವುದು ನಡವಳಿಯಿಂದ ಗೊತ್ತಾಗಿದೆ.


ಲೋಕಾಯುಕ್ತ ಪ್ರಕರಣವೊಂದರಲ್ಲಿ ಇನ್ಸ್‌ಪೆಕ್ಟರ್‌ ಮಟ್ಟದ ಅಧಿಕಾರಿಗೆ ಅಭಿಯೋಜನಾ ಮಂಜೂರಾತಿ ನೀಡಿದ ಡಿಜಿ ಮತ್ತು ಐಜಿಪಿ ಅವರ ಕ್ರಮ ನ್ಯಾಯಯುತವಾಗಿದೆ ಎಂದು 2014ರ ಫೆ.21ರಂದೇ (ಒಇ/101/ಪೊಸಿಪ/2014) ಸರ್ಕಾರ ಪತ್ರ ಬರೆದಿತ್ತು. ಆದರೆ ಒಳಾಡಳಿತ ಇಲಾಖೆ ಎಸಿಬಿ ಪ್ರಕರಣದಲ್ಲಿ ಅದಕ್ಕೆ ಬದ್ಧವಾಗದೇ ಕ್ರಿಮಿನಲ್‌ ಅಪೀಲು 1137/2010ರ ಪ್ರಕರಣದಲ್ಲಿ ಉಚ್ಛ ನ್ಯಾಯಾಲಯ ಸರ್ಕಾರ ಮಾತ್ರ ಸಕ್ಷಮ ಪ್ರಾಧಿಕಾರ ಎಂದು ನೀಡಿದ್ದ ತೀರ್ಪನ್ನು ಆಧರಿಸಿ ಅಭಿಯೋಜನಾ ಮಂಜೂರಾತಿ ತಿರಸ್ಕರಿಸಿರುವುದು ನಡವಳಿಯಿಂದ ತಿಳಿದು ಬಂದಿದೆ.


ಇದನ್ನು ಮುಂದಿಟ್ಟುಕೊಂಡಿರುವ ಒಳಾಡಳಿತ ಇಲಾಖೆ, ಜೆ ಲಕ್ಷ್ಮಣ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ ಪ್ರಕರಣದಲ್ಲಿ ಅಭಿಯೋಜನೆಗೊಳಪಡಿಸಲು ಪೊಲೀಸ್‌ ಪ್ರಧಾನ ಕಚೇರಿಯಿಂದ ಮಂಜೂರಾತಿ ಆದೇಶ ನೀಡುವುದು ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಅಭಿಪ್ರಾಯಪಟ್ಟಿದೆ.

the fil favicon

SUPPORT THE FILE

Latest News

Related Posts